ಅಕ್ರಮ ಮರಳುಗಾರಿಕೆ ತಡೆಗೆ ಪ್ರಯತ್ನ: ನೂತನ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್
Team Udayavani, Jan 2, 2021, 8:42 AM IST
ನೂತನ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ವಿಕಾಸ್ ಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದರು.
ಮಂಗಳೂರು: ಸಾರ್ವಜನಿಕರ ಸಕ್ರಿಯ ಸಹಭಾಗಿತ್ವದೊಂದಿಗೆ ಉತ್ತಮ ಸೇವೆ ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ನೂತನ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.
ಶುಕ್ರವಾರ ಸಂಜೆ ನಿರ್ಗಮಿತ ಆಯುಕ್ತ ವಿಕಾಸ್ ಕುಮಾರ್ ಅವರಿಂದ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮಂಗಳೂರು ಸುಶಿಕ್ಷಿತ, ಪ್ರಜ್ಞಾವಂತ ನಾಗರಿಕರನ್ನು ಹೊಂದಿರುವ ನಗರ. ಸಾರ್ವಜನಿಕರು ಸಮವಸ್ತ್ರ ಇಲ್ಲದ ಪೊಲೀಸರಂತೆ ಕೆಲಸ ಮಾಡಿ ಸಹಕರಿಸಿದರೆ ಅಪರಾಧ ರಹಿತ ಸಮಾಜ ನಿರ್ಮಾಣ ಸಾಧ್ಯ. ಸಿಬಂದಿ ಕೊರತೆಯಿದ್ದರೂ ಇರುವವರು ಸಮರ್ಥವಾಗಿ ಕೆಲಸ ಮಾಡಿದರೆ ಉತ್ತಮ ಸೇವೆ ಸಾಧ್ಯ’ ಎಂದರು.
ಅಪರಾಧ ಚಟುವಟಿಕೆಗೆ ಕಡಿವಾಣ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಆಯುಕ್ತರು, “ನಗರದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿದ ಘಟನೆ ಗಮನಕ್ಕೆ ಬಂದಿದೆ. ಇಂತಹ ಕೃತ್ಯಗಳಿಗೆ ಕಠಿಣ ಕ್ರಮ ಅನಿವಾರ್ಯ. ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸ ಮಾಡುವಾಗ ಪೊಲೀಸರು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ. ಸರ ಅಪಹರಣ, ಕಳ್ಳತನ ಮೊದಲಾದ ಕೃತ್ಯಗಳನ್ನು ತಡೆಗಟ್ಟಲು ಈಗಾಗಲೇ ಪೊಲೀಸರು ಪ್ರಯತ್ನಿಸಿದ್ದಾರೆ. ಅಕ್ರಮ ಮರಳುಗಾರಿಕೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆ ನಿಯಂತ್ರಿ ಸಲಾಗುವುದು. ಪೊಲೀಸ್ ಪೋನ್-ಇನ್ ಪುನರ್ ಆರಂಭಿಸಲು ಸಿದ್ಧ’ ಎಂದು ತಿಳಿಸಿದರು.
ಸಾಮಾಜಿಕ ಮಾಧ್ಯಮ ದುರುಪಯೋಗ : ಕ್ರಮ
ಸಾಮಾಜಿಕ ಮಾಧ್ಯಮ ದುರುಪಯೋಗ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಂಚಾರ ಸಮಸ್ಯೆಗೂ ಪರಿಹಾರ ಹುಡುಕುವುದಲ್ಲದೇ, ಗಾಂಜಾ ಮತ್ತಿತರ ಮಾದಕ ವ್ಯಸನ ಸೇರಿದಂತೆ ವಿದ್ಯಾರ್ಥಿ ಸಮುದಾಯದ ಸಮಸ್ಯೆಗಳನ್ನು ಬಗೆಹರಿಸ ಲಾಗುವುದು. “112 ತುರ್ತು ಸಹಾಯವಾಣಿ’ ಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಾಗಿ ತಿಳಿಸಿದರು. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್ ಎ. ಗಾಂವ್ಕರ್, ಸಿಎಆರ್ ಡಿಸಿಪಿ ಚೆನ್ನವೀರಪ್ಪ ಹಡಪದ್ ಉಪಸ್ಥಿತರಿದ್ದರು.
ತುಳು ಕಲಿಯುವಾಸೆ
ಮಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಮಂಗಳೂರಿನೊಂದಿಗೆ ಹಿಂದಿನಿಂದಲೂ ಸಂಬಂಧ ಹೊಂದಿದ್ದು, ಇಲ್ಲಿಗೆ ಆಯುಕ್ತನಾಗುವ ಅವಕಾಶ ಸಿಕ್ಕಿರುವುದು ಹೆಮ್ಮೆ ತಂದಿದೆ. ತುಳು ಭಾಷೆ ಕಲಿಯುವ ಆಸೆ ಇದೆ. ಆ ಪ್ರಯತ್ನವಾಗಿ 10 ವರ್ಷಗಳ ಹಿಂದೆ ಒಂದು ತುಳು ಸಿನೆಮಾ ನೋಡಿದ್ದೆ ಎಂದರು ಆಯುಕ್ತರು.
ಬೀಟ್ ಬಲವರ್ಧನೆ
ಮಂಗಳೂರಿನಲ್ಲಿ ಪ್ರಸ್ತುತ ಇರುವ ಬೀಟ್ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಕೊರೊನಾ ನಿಯಂತ್ರಣಕ್ಕೆ ಪೊಲೀಸರು ತೊಡಗಿಸಿಕೊಂಡ ಕಾರಣ ಬೀಟ್ ವ್ಯವಸ್ಥೆ ಪರಿಣಾಮಕಾರಿಯಾಗಿ ಅನುಷ್ಠಾನ ಆಗದಿರಬಹುದು. ಅದನ್ನು ಬಲಗೊಳಿಸುವೆ.
ಎನ್. ಶಶಿಕುಮಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.