ಪಚ್ಚನಾಡಿ: “ಕಟ್ಟಡ ಭಗ್ನಾವಶೇಷ ಸಂಸ್ಕರಣೆ ಘಟಕ’
ಷರತ್ತಿನ ಮೇರೆಗೆ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಅವಕಾಶ ದೊರಕಿದೆ.
Team Udayavani, Feb 3, 2023, 10:21 AM IST
ಮಹಾನಗರ: ಮಂಗಳೂರು ಮಹಾನಗರ ಪಾಲಿಕೆಗೆ ತಲೆನೋವಾಗಿ ಪರಿಣಮಿಸಿರುವ ಕಟ್ಟಡ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ಪರಿಹಾರದ ದಾರಿಯೊಂದನ್ನು ಕಂಡುಕೊಳ್ಳಲಾಗಿದ್ದು, ಈ ಕಾರ್ಯಕ್ಕಾಗಿ ಪಚ್ಚನಾಡಿ ಯಲ್ಲಿರುವ ಪ್ರಸಕ್ತ ತ್ಯಾಜ್ಯ ನಿರ್ವಹಣ ಘಟಕದ ಸಮೀಪದ ಸುಮಾರು 10 ಎಕರೆ ಭೂಮಿಯನ್ನು ಈ ಕಾರ್ಯಕ್ಕಾಗಿ ಖರೀದಿಸಲು ಪಾಲಿಕೆ ಮುಂದಾಗಿದೆ. ಪಾಲಿಕೆಯು ಸ್ವಾಧೀನ ಪಡಿಸಿ ಕೊಳ್ಳಲು ಮುಂದಾಗಿರುವ ಜಾಗ ದಲ್ಲಿ ಭೂ ಭರ್ತಿ ಮಾಡದೆಯೇ ಸಂಸ್ಕರಣೆಯ ಮೂಲಕ ಕಟ್ಟಡ ತ್ಯಾಜ್ಯ ನಿರ್ವಹಣೆಯ ಜತೆಗೆ ಮರುಬಳಕೆಯ ಉದ್ದೇಶದೊಂದಿಗೆ “ಕಟ್ಟಡ ಭಗ್ನಾವಶೇಷ ಸಂಸ್ಕರಣೆ ಘಟಕ’ವನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ.
ನಗರ ವ್ಯಾಪ್ತಿಯಲ್ಲಿ ಕಟ್ಟಡ ತ್ಯಾಜ್ಯ ನಿರ್ವಹಣೆ ಪಾಲಿಕೆಗೆ ಭಾರೀ ಸಮಸ್ಯೆಯಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ನಡೆದ ಹಲವಾರು ನಿರ್ಮಾಣ ಕಾಮಗಾರಿಗಳ ಕಟ್ಟಡ ತ್ಯಾಜ್ಯವನ್ನು ನಗರದ ಜೀವನದಿಗಳಾದ ಫಲ್ಗುಣಿ, ನೇತ್ರಾವತಿಯ ದಂಡೆಗಳಲ್ಲಿ ಅಕ್ರಮ ವಾಗಿ ಕಟ್ಟಡ ತ್ಯಾಜ್ಯ ಸುರಿದು ನದಿ ನೀರನ್ನು ಮಲಿನಗೊಳಿಸಲಾಗುತ್ತಿರುವ ಬಗ್ಗೆ ಹೈಕೋರ್ಟ್ ಈ ಹಿಂದೆ ಕೆಲವು ಸಮಯ ಕಾಮಗಾರಿ ಗಳಿಗೆ ತಡೆ ಯನ್ನೂ ನೀಡಿತ್ತು. ಬಳಿಕ ಕಟ್ಟಡ ತ್ಯಾಜ್ಯ ಸಂಸ್ಕರಣೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಷರತ್ತಿನ ಮೇರೆಗೆ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಅವಕಾಶ ದೊರಕಿದೆ.
ಜಾಗ ಗುರುತಿಸುವಿಕೆ
ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಟ್ಟಡ ತ್ಯಾಜ್ಯ ನಿರ್ವಹಣೆಗಾಗಿ ಸಂಸ್ಕರಣೆ ಘಟಕ ಸ್ಥಾಪಿಸಲು ಕನಿಷ್ಠ ಐದು ಎಕರೆ ಜಾಗದ ಅಗತ್ಯ ಪಾಲಿಕೆಗಿದೆ. ಆದರೆ ಪಾಲಿಕೆಯ ಅಧೀನದಲ್ಲಿ ಸದ್ಯ ಅಂತಹ ಭೂಮಿ ಇಲ್ಲದಿರುವ ಕಾರಣ ಈಗಾಗಲೇ ಪಚ್ಚನಾಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಘನ ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ತಾಗಿಕೊಂಡಿರುವ ಕುಡುಪು ಗ್ರಾಮ ಸರ್ವೆ ನಂ. 57ರಲ್ಲಿನ 10 ಎಕರೆ 8 ಸೆಂಟ್ಸ್ ಖಾಸಗಿ ಮಾಲಕತ್ವದ ಜಾಗವನ್ನು ಪಾಲಿಕೆ ಗುರುಸಿತ್ತು.
ಟಿಡಿಆರ್ ಮೂಲಕ ಜಾಗವನ್ನು ಪಾಲಿಕೆಗೆ ನೀಡಲು ಮೌಖಿಕ ಒಪ್ಪಿಗೆ ದೊರಕಿತ್ತು. ಈ ಬಗ್ಗೆ 2016ರ ಸೆಪ್ಟಂಬರ್‌ನಲ್ಲಿ ನಡೆದ ಮನಪಾ ಸಭೆಯಲ್ಲಿ ಈ ಬಗ್ಗೆ ನಿರ್ಣಯಿಸಲಾಗಿತ್ತು. ಅದಕ್ಕಾಗಿ ಜಿಲ್ಲಾಧಿಕಾರಿ ಅವರ ದರ ನಿರ್ಧಾರದ ಸಮಿತಿಯು ಆ ಆಸ್ತಿಗೆ 8 ಕೋಟಿ ರೂ.ಗಳನ್ನು ನಿಗದಿಪಡಿಸಿತ್ತು. ಪಾಲಿಕೆಯಿಂದ ಅಷ್ಟು ಹಣ ಹೊಂದಿಸಲು ಅಸಾಧ್ಯವಾದ ಕಾರಣ 2019ರ ನವೆಂಬರ್‌ನಲ್ಲಿ ಸರಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದ್ದು, ಆದರೆ ಸರಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ.
ಈ ಘಟಕ ಸಾರ್ವ ಜನಿಕ ಉದ್ದೇಶ ವನ್ನು ಹೊಂದಿರುವುದರಿಂದ ಟಿಡಿಆರ್ ನೀಡಲು ಕಾಯಿದೆಯಲ್ಲಿ ಅವಕಾಶ ವಿರುವುದರಿಂದ ಮನಪಾ ಈ
ಬಗ್ಗೆ ಪ್ರಕ್ರಿಯೆಗೆ ಮುಂದಾಗಿದೆ. ಗುರುತಿಸಲಾಗಿರುವ ಜಮೀನು ಕೃಷಿ ವಲಯದಲ್ಲಿದ್ದರೂ ಜಮೀನು ಖಾಲಿ ಇದ್ದು, ಬೆರಳೆಣಿಕೆಯ ತೆಂಗಿನ ಮರಗಳಿವೆ. ಮನಪಾದ ಘನತ್ಯಾಜ್ಯ ಘಟಕದ ಜಮೀನಿಗೆ ಹೊಂದಿಕೊಂಡಿದೆ, 6 ಮೀಟರ್ ಅಗಲದ ಸಂಪರ್ಕ ರಸ್ತೆಯನ್ನು ಹೊಂದಿದೆ. ಭವಿಷ್ಯದಲ್ಲಿ ಈಗಿರುವ ಘಟಕವನ್ನು ವಿಸ್ತರಿಸಲು ಕೂಡ ಈ ಜಮೀನು ಸೂಕ್ತ ಎಂಬುದು ಮನಪಾ ಚಿಂತನೆ.
ವಿಪಕ್ಷ ಆಕ್ಷೇಪ
2016ರಲ್ಲಿ ಈ ಪ್ರಸ್ತಾವನೆ ಮಾಡಲಾಗಿತ್ತು. ಆದರೆ ಅಂದಿನ ಜಿಲ್ಲಾಧಿಕಾರಿ ಇದನ್ನು ನಿರಾಕರಿಸಿದ್ದರು. ತಜ್ಞರ ಸಮಿತಿ ಕೂಡ ವಿರೋಧ ವ್ಯಕ್ತಪಡಿಸಿತ್ತು. ಮತ್ತೊಮ್ಮೆ ಪಚ್ಚನಾಡಿಯನ್ನು ಡಂಪಿಂಗ್ ಯಾರ್ಡ್ ಮಾಡುವುದು ಸರಿಯಲ್ಲ ಎಂದು ಈ ತೀರ್ಮಾನಕ್ಕೆ ಮನಪಾ ವಿಪಕ್ಷವಾದ ಕಾಂಗ್ರೆಸ್ ಸದಸ್ಯರಿಂದ ಆಕ್ಷೇಪ ವ್ಯಕ್ತವಾಗಿದೆ.
*ಸತ್ಯಾ ಕೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.