ನಗರದ ಚಿಲಿಂಬಿಯಲ್ಲಿ ನಳನಳಿಸುತ್ತಿದೆ ಭತ್ತದ ಗದ್ದೆ!
1.20 ಎಕ್ರೆ ಗದ್ದೆಯಲ್ಲಿ ಭತ್ತದ ಕೃಷಿ; ಫ್ರಾನ್ಸಿಸ್ ಸಲ್ಡಾನ್ಹರ ಕೃಷಿ ಕಾಯಕ
Team Udayavani, Sep 8, 2020, 4:34 AM IST
ಮಹಾನಗರ: ಗ್ರಾಮೀಣ ಪ್ರದೇಶಗಳಲ್ಲಿ ಭತ್ತದ ಗದ್ದೆಗಳು ಮರೆಯಾಗಿ ಕಟ್ಟಡ, ವಾಣಿಜ್ಯ ಚಟುವಟಿಕೆಗಳಿಗಾಗಿ ಮಗ್ಗುಲು ಬದಲಾ ಯಿಸುತ್ತಿರುವ ಕಾಲದಲ್ಲಿ, ಮಂಗಳೂರು ನಗರದಲ್ಲಿ ಭೂಮಿಗೆ ಚಿನ್ನದಂತಹ ಮೌಲ್ಯ ಇದ್ದರೂ 1.20 ಎಕ್ರೆಯ ಗದ್ದೆ ಯನ್ನು ಮಾರಾಟ ಮಾಡದೆ, ಪ್ರತೀ ವರ್ಷವೂ ಭತ್ತದ ಕೃಷಿ ಕಾಯಕ ಮಾಡುವ ಅಪ್ಪಟ ಕೃಷಿಕರೊಬ್ಬರು ನಗರದ ಲೇಡಿಹಿಲ್ ಸಮೀಪದ ಚಿಲಿಂಬಿಯಲ್ಲಿದ್ದಾರೆ!
ಕರ್ನಾಟಕ ಸರಕಾರಿ ವಿಮಾ ಇಲಾ ಖೆಯ ಮಂಗಳೂರು ಅಧೀಕ್ಷಕರಾಗಿ ನಿವೃತ್ತರಾಗಿರುವ ಫ್ರಾನ್ಸಿಸ್ ಸಲ್ಡಾನ್ಹಾ ಅವರು 30 ವರ್ಷಗಳಿಂದಲೂ ಚಿಲಿಂ ಬಿಯ ಮಲರಾಯ ದೇವಸ್ಥಾನ ರಸ್ತೆಯ ಸನಿಹದಲ್ಲಿ ಭತ್ತದ ಕೃಷಿ ಮಾಡುತ್ತಾ ನಗರ ಮಧ್ಯೆ ಗಮನಸೆಳೆಯುತ್ತಿದ್ದಾರೆ.
1.20 ಎಕ್ರೆಯಲ್ಲಿ ಒಟ್ಟು ಐದು ಗದ್ದೆ ಗಳಿವೆ. ಇವುಗಳಲ್ಲಿ ಹಲವು ವರ್ಷಗಳಿಂದ ಭತ್ತದ ಕೃಷಿ ಮಾಡಲಾಗುತ್ತಿದೆ. 10 ವರ್ಷಗಳ ಹಿಂದೆ ಫ್ರಾನ್ಸಿಸ್ ಅವರ ಚಿಲಿಂಬಿಯ ಮನೆಯಲ್ಲಿ ಒಂದು ಜತೆ ಕೋಣಗಳನ್ನೂ ಸಾಕಲಾಗುತ್ತಿತ್ತು. ಅವುಗಳ ಸಹಾಯದಿಂದಲೇ ಉಳು ಮೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಕೋಣ ಸಾಕುವುದು ಕಷ್ಟ-ಸಾಧ್ಯವಾದ್ದ ರಿಂದ ಬಜಪೆಯಿಂದ ಟಿಲ್ಲರ್ ತರಿಸಿ ಬೇಸಾಯ ನಡೆಸಲಾಗುತ್ತಿದೆ. ಇದರಂತೆ ಈ ಬಾರಿ ಜೂನ್ 15ರ ಸುಮಾರಿಗೆ ಉಳುಮೆ ಮಾಡಲಾಗಿದೆ. 2 ಬಾರಿ ಉಳುಮೆ ಆದ ಬಳಿಕ 10 ದಿನ ಗದ್ದೆಯಲ್ಲಿ ನೀರು ಸಂಗ್ರಹಿಸಿಟ್ಟು, ಬಳಿಕ ಮತ್ತೂಮ್ಮೆ ಟಿಲ್ಲರ್‌ನಿಂದ ಉಳುಮೆ ಮಾಡಿ “ಎಂಓ 4 ಭದ್ರಾ’ ಭಿತ್ತನೆ ಮಾಡಲಾಗಿದೆ.
ಮಳೆಗಾಲದಲ್ಲಿ ಮಳೆ ನೀರು ಸಾಕಾದರೆ, ಉಳಿದ ಸಮಯಕ್ಕೆ ಬಾವಿ ನೀರು ಅಗತ್ಯಕ್ಕೆ ತಕ್ಕಷ್ಟು ಲಭ್ಯವಿದೆ. ನಿಯಮಿತವಾಗಿ ಯೂರಿಯಾ ಹಾಕುವುದರಿಂದ ಭತ್ತದ ಬೆಳೆ ಉತ್ತಮವಾಗಿದೆ. ಬೇಸಾಯದ ಮೊದಲು ಗದ್ದೆಯಲ್ಲಿ ಕಸ, ತರೆಗೆಲೆ ಸಹಿತ ಇತರ ವಸ್ತುಗಳನ್ನು ರಾಶಿ ಮಾಡಿ ಬೆಂಕಿ ಹಾಕಿ ಸುಡುಮಣ್ಣು ತಯಾರಿಸಿ, ಕೆಲವೆಡೆಯಿಂದ ಸೆಗಣಿ ತಂದು ಗೊಬ್ಬರ ಕೂಡ ಮಾಡಿ ಗದ್ದೆಗೆ ಹಾಕತ್ತಾರೆ.
ಕಾರ್ಮಿಕರ ಕೊರತೆಯೂ ಇಲ್ಲ!
ಕೃಷಿ ಮಾಡುವ ಸಂದರ್ಭ ಫ್ರಾನ್ಸಿಸ್ ಅವರೇ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಾರೆ. ಜತೆಗೆ ಟಿಲ್ಲರ್ ಉಳುಮೆ ಸಂದರ್ಭ ಒಂದಿಬ್ಬರು, ನಾಟಿ ಮಾಡುವಾಗ ಕೆಲವರನ್ನು ಕೆಲಸಕ್ಕಾಗಿ ಕರೆಯಲಾಗುತ್ತದೆ. ಇನ್ನು, ಕೊಯ್ಲು ಸಂದರ್ಭ ಸುಮಾರು 15 ಜನ, ಭತ್ತ ಹೊಡೆಯಲು ಸುಮಾರು 14 ಜನರ ಅಗತ್ಯವಿದೆ. ಈ ಬಗ್ಗೆ ಅನುಭವವಿರುವ ಬಜಪೆ, ಪೆರ್ಮುದೆಯ ಕಾರ್ಮಿಕರು ಲಭ್ಯವಿರುತ್ತಾರೆ. ಬೆಳೆ ಸಮೀಕ್ಷೆ ಆ್ಯಪ್ ಓಪನ್ ಆಗುತ್ತಿಲ್ಲ!
ನಗರದ ಮಧ್ಯೆ ಕೃಷಿ ಮಾಡುತ್ತಿರುವ ಕಾರಣದಿಂದ ಕೃಷಿ ಇಲಾಖೆಯಿಂದ ಸಹಕಾರ ನೀಡುತ್ತಾರೆ; ಆದರೂ ರೈತರ ಬೆಳೆ ಸಮೀಕ್ಷೆ ಆ್ಯಪ್ ಮಾತ್ರ ಇಲ್ಲಿ ಓಪನ್ ಆಗುತ್ತಿಲ್ಲ. ಇಲ್ಲಿನ ಭೂಮಿಯನ್ನು ಕಂದಾಯ ಇಲಾಖೆಯು “ಕೃಷಿಯೇತರ’ ಎಂದೇ ಗುರುತಿಸಿದ ಕಾರಣದಿಂದ ಆ್ಯಪ್‌ನ ಲಾಭ ಸಿಗುತ್ತಿಲ್ಲ’ ಎನ್ನುತ್ತಾರೆ ಫ್ರಾನ್ಸಿಸ್.
12 ಕ್ವಿಂಟಾಲ್ ಭತ್ತ!
“ಭತ್ತದ ಕೃಷಿಯ ಜತೆಗೆ ನಾನು ವಾಣಿಜ್ಯ ಕೃಷಿ ಕೂಡ ನಿಯಮಿತವಾಗಿ ಬೆಳೆಯುತ್ತಿರುವ ಕಾರಣ ನನಗೆ ಕೃಷಿಯಿಂದ ನಷ್ಟ ಎಂಬುವುದಿಲ್ಲ. ಕಳೆದ ವರ್ಷ ಸುಮಾರು 12 ಕ್ವಿಂಟಾಲ್ ಭತ್ತ ಬೆಳೆಯಲಾಗಿದೆ. ಬೈಹುಲ್ಲು ಕೂಡ ಮಾರಾಟ ಮಾಡಲಾಗಿದೆ. ಭೂಮಿ ಮಾರಾಟ ಮಾಡುವಿರಾ? ಎಂದು ಹಲವು ಜನರು ನನ್ನನ್ನು ಭೇಟಿ ಮಾಡಿದರೂ ಕೂಡ ನಾನು ಆ ಕೆಲಸಕ್ಕೆ ಮನಸ್ಸು ಮಾಡಿಲ್ಲ ‘ ಎನ್ನುತ್ತಾರೆ ಫ್ರಾನ್ಸಿಸ್ ಸಲ್ಡಾನ್ಹಾ .
ಜಮೀನು ಮಾರುವುದು ಸುಲಭ; ಪಡೆಯುವುದು ಕಷ್ಟ
ಹಲವಾರು ವರ್ಷಗಳ ಹಿಂದೆ ಚಿಲಿಂಬಿಯ ಮುಖ್ಯ ರಸ್ತೆಯಿಂದ ಕೆಳಭಾಗದ ಫಲ್ಗುಣಿ ನದಿಯವರೆಗೆ ಕೃಷಿ ಗದ್ದೆಗಳಿತ್ತು. ಭೂಸುಧಾರಣಾ ಕಾಯ್ದೆ ಜಾರಿಗೆ ಬಂದ ಅನಂತರದ ವರ್ಷಗಳಲ್ಲಿ ಈ ಗದ್ದೆಗಳನ್ನು ಹಲವರು ಮಾರಾಟ ಮಾಡಿದರು. ಆದರೆ ಜಮೀನು ಮಾರಲು ಸುಲಭ; ಪಡೆದುಕೊಳ್ಳಲು ಕಷ್ಟ ಎಂಬ ಕಾರಣಕ್ಕೆ ತಂದೆ ಮಾರ್ಟಿನ್ ಸಲ್ಡಾನ್ಹಾ ಅವರು ಗದ್ದೆಯನ್ನು ಹಾಗೆಯೇ ಉಳಿಸಿಕೊಂಡು ಭತ್ತದ ಕೃಷಿ ಮಾಡುತ್ತಾ ಬಂದಿದ್ದಾರೆ. ಮುಂದೆ ಅದನ್ನು ತಾನು ಕೂಡ ಮುಂದುವರಿಸಿದ್ದೇನೆ. ಭತ್ತದ ಕೃಷಿ ಪ್ರತೀವರ್ಷ ನಡೆಸುತ್ತಿದ್ದು, ಉಳಿದ ಸಮಯದಲ್ಲಿ ಬದನೆ ಸಹಿತ ತರಕಾರಿ ಕೃಷಿ ಮಾಡುತ್ತಿದ್ದೇನೆ.
-ಫ್ರಾನ್ಸಿಸ್ ಸಲ್ಡಾನ್ಹಾ , ಪ್ರಗತಿಪರ ಕೃಷಿಕರು, ಚಿಲಿಂಬಿ
ದಿನೇಶ್ ಇರಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.