ಪಿಲಿಕುಳ ನಿಸರ್ಗಧಾಮ: ಸದ್ಯಕ್ಕೆ ಎಲ್ಲವೂ ಕ್ಷೇಮ !
Team Udayavani, Apr 6, 2017, 3:32 PM IST
ಪಿಲಿಕುಳ: ಮಂಗಳೂರು ನಗರವೂ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ನೀರಿನ ಅಭಾವ ಕಂಡುಬರುತ್ತಿದ್ದರೂ ಪ್ರತಿಷ್ಠಿತ ಪ್ರವಾಸಿತಾಣ ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಹಾಗಾಗಿ ಇಲ್ಲಿನ ಪ್ರಾಣಿಗಳು ನಿರಾಂತಕವಾಗಿವೆ. ಮೇ ಅಂತ್ಯದವರೆಗೂ ಮಳೆ ಬಾರದೇ ಇದ್ದಲ್ಲಿ ನೀರಿನ ಸಮಸ್ಯೆ ಎದುರಾಗಬಹುದೆಂಬ ಆತಂಕವಿದೆ.
ಸರಾಸರಿ 3.5 ಲಕ್ಷ ಲೀ. ನೀರು.!
ಪ್ರಾಣಿಗಳಿಗೆ ಕುಡಿಯುವ ನೀರು, ಗಾರ್ಡನ್‌ನ ಗಿಡಗಳಿಗೆ ನೀರು ಹಾಗೂ ಪ್ರವಾಸಿಗರಿಗೆ ಕುಡಿಯುವ ನೀರು ಸಹಿತ ದಿನಕ್ಕೆ ಸರಾಸರಿ 3.5 ಲಕ್ಷ ಲೀ. ನೀರು ಬೇಕು. ಪ್ರಾಣಿಗಳು ಹಾಗೂ ಪ್ರವಾಸಿಗರಿಗೆ ಗುರುಪುರ ಫಲ್ಗುಣಿ ನದಿಯಿಂದ ದಿನಕ್ಕೆ 2 ಲಕ್ಷ ಲೀ. ನೀರನ್ನು ಜಾಕ್‌ವೆಲ್ ಮೂಲಕ ಸಂಗ್ರಹಿಸಿ, ಶುದ್ಧೀಕರಿಸಿ ಬಳಿಕ ಕುಡಿಯುವ ಉದ್ದೇಶಕ್ಕೆ ಬಳಸಲಾಗುತ್ತದೆ. ಗಾರ್ಡನ್‌ಗಳಿಗೆ ಪಾಲಿಕೆಯ ವ್ಯಾಪ್ತಿಯ ತ್ಯಾಜ್ಯ ನೀರನ್ನು ಖಾಸಗಿ ಸಂಸ್ಥೆಯ ಮೂಲಕ 1.5 ಲಕ್ಷ ಲೀ. ಶುದ್ಧೀಕರಿಸಿ ಬಳಸಲಾಗುತ್ತದೆ. ಹೀಗಾಗಿ ಪ್ರಸ್ತುತ ನೀರಿನ ಅಭಾವ ಕಂಡುಬಂದಿಲ್ಲ.
ಕೊಳವೆಬಾವಿಗಳು
ಕುಡಿಯಲು ಹಾಗೂ ಗಿಡಗಳಿಗೆ ಪ್ರತ್ಯೇಕ ಮೂಲಗಳಿಂದ ನೀರನ್ನು ಬಳಸಲಾಗುತ್ತಿದ್ದು, ಎಲ್ಲಿ ಕೊರತೆ ಬಂದರೂ ಇಲ್ಲಿನ 4 ಕೊಳವೆಬಾವಿಗಳಿಂದ ನೀರು ಪೂರೈಸಲಾಗುವುದು. 2 ಲಕ್ಷ ಲೀ. ಹಾಗೂ 1.5 ಲಕ್ಷ ಲೀ. ಸಾಮರ್ಥ್ಯದ 2 ಅಂಡರ್‌ಗ್ರೌಂಡ್ ಟ್ಯಾಂಕ್‌ಗಳಿವೆ. ಜತೆಗೆ ಇಲ್ಲಿನ ಕೆರೆಗಳಲ್ಲೂ ಸಾಕಷ್ಟು ನೀರಿದ್ದು, ಅದನ್ನು ಬೇರೆ ಉದ್ದೇಶಕ್ಕೆ ಬಳಸಲಾಗುತ್ತಿಲ್ಲ. ನೀರು ಇಂಗಲು ಇದು ಉತ್ತಮವಾದ ಮಾರ್ಗ.
ಹೊಸ ಟ್ಯಾಂಕ್ ನಿರ್ಮಾಣ
ಪ್ರಸ್ತುತ ನೀರಿನ ಅಗತ್ಯ ಈಡೇರಿಸಿಕೊಳ್ಳಲು ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ 1 ಲಕ್ಷ ಲೀ. ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಿಸಲಾಗುತ್ತಿದೆ. ಇದಕ್ಕೆ ಗುರುಪುರ ನದಿಯಿಂದ ನೀರು ಪೂರೈಕೆಯಾಗಲಿದ್ದು, ಒಂದಷ್ಟು ಬೇಡಿಕೆಯನ್ನು ಈಡೇರಿಸಲಿದೆ ಎನ್ನುತ್ತಾರೆ ಅಧಿಕಾರಿಗಳು.
ಬೇಸಗೆ ರಜೆ: ಪ್ರವಾಸಿಗರ ಸಂಖ್ಯೆ ಹೆಚ್ಚಳ
ಪ್ರಸ್ತುತ ಬೇಸಗೆ ರಜೆ ಸಮೀಪಿಸುತ್ತಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗತೊಡಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಇರುವ ಎಪ್ರಿಲ್-ಮೇ, ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚು. ಆದ ಕಾರಣ ನೀರಿನ ಬೇಡಿಕೆಯೂ ಹೆಚ್ಚುತ್ತದೆ. ಸರಾಸರಿ ಲೆಕ್ಕಾಚಾರದ ಪ್ರಕಾರ ಶನಿವಾರ-ರವಿವಾರ ಪ್ರವಾಸಿಗರ ಸಂಖ್ಯೆ 2 ಸಾವಿರ ಇದ್ದರೆ, ಉಳಿದ ದಿನಗಳಲ್ಲಿ 400ರಿಂದ 500 ಮಂದಿ ಭೇಟಿ ನೀಡುತ್ತಾರೆ.
ಸದ್ಯಕ್ಕೆ ನೀರಿನ ಅಭಾವವಿಲ್ಲ
ಸದ್ಯಕ್ಕೆ ನೀರಿನ ಅಭಾವ ಕಂಡುಬಂದಿಲ್ಲ. ವಿವಿಧ ಮೂಲಗಳಿಂದ ನೀರನ್ನು ನಿರ್ವಹಿಸುತ್ತಿದ್ದೇವೆ. ಒಂದು ಹೊಸ ಟ್ಯಾಂಕನ್ನೂ ನಿರ್ಮಿಸಲಾಗುತ್ತಿದೆ. ಪ್ರಸ್ತುತ ಬೇಸಗೆ ರಜೆ ಆಗಮಿಸುತ್ತಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಈ ಸಂದರ್ಭದಲ್ಲಿ ನೀರಿನ ಬೇಡಿಕೆಯೂ ಸಹಜವಾಗಿಯೇ ಹೆಚ್ಚು.
ಪ್ರಸನ್ನ ವಿ., ಕಾರ್ಯನಿರ್ವಾಹಕ ನಿರ್ದೇಶಕರು
ಕಿರಣ್ ಸರಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.