ತೋಕೂರು ಹಳ್ಳದಲ್ಲಿ ಮತ್ತೆ ಮಲಿನ ನೀರು ಸಂಗ್ರಹ
ವ್ಯವಸ್ಥಿತ ನಿರ್ವಹಣೆ ಕೊರತೆ; ನೀರಿಗಿಳಿದವರಿಗೆ ಆರೋಗ್ಯ ಸಮಸ್ಯೆ
Team Udayavani, Apr 26, 2022, 11:06 AM IST
ಕೂಳೂರು: ಇಲ್ಲಿಗೆ ಸಮೀಪದ ತೋಕೂರು ಹಳ್ಳದಲ್ಲಿ ಮತ್ತೆ ತೈಲ ಜಿಡ್ಡಿನ ನೀರು ಸಂಗ್ರಹವಾಗಿ ಸುತ್ತಮುತ್ತ ದುರ್ವಾಸನೆ ಹರಡಿಕೊಂಡಿದೆ.
ಫಲ್ಗುಣಿ ನದಿ ದಂಡೆಯ ಉದ್ದಕ್ಕೂ ಕೈಗಾರಿಕೆ ವಲಯ, ಪುನರ್ವಸತಿ ಕಾಲನಿಗಳು ರಚನೆಯಾಗಿದ್ದು, ವ್ಯವಸ್ಥಿತ ನಿರ್ವಹಣೆ ಕೊರತೆಯಿಂದ ಫಲ್ಗುಣಿ ನದಿಯ ಕವಲು ಹಳ್ಳಗಳು ಇಂದು ಮಾಲಿನ್ಯಗೊಂಡು ಕಪ್ಪು ಬಣ್ಣಕ್ಕೆ ತಿರುಗಿವೆ. ಸಮೀಪದ ಮರವೂರು ಡ್ಯಾಂ ಬಳಿ ಮೀನುಗಳು ಸತ್ತು ತೇಲುತ್ತಿರುವ ಬಗ್ಗೆ ದೂರು ಕೇಳಿ ಬರತೊಡಗಿದೆ. ಇತ್ತ ಮರವೂರು ಮತ್ತು ಕೂಳೂರಿನಲ್ಲಿ ನದಿಗೆ ಮಣ್ಣು ತುಂಬಿ ಹೊಸ ಸೇತುವೆ ನಿರ್ಮಾಣವಾಗುತ್ತಿದ್ದು, ನೀರಿನ ಸಹಜ ಹರಿವಿಗೆ ಅಡ್ಡಿಯಾಗಿದ್ದು, ನಿಂತ ನೀರಿಗೆ ರಾಸಾಯನಿಕ ಮಿಶ್ರಣವಾಗಿ ದುರ್ವಾಸನೆ ಹರಡತೊಡಗಿದೆ. ನೀರಿನ ಮೇಲ್ಮೆಯಲ್ಲಿ ಎಣ್ಣೆಯಂತಹ ಪದರವೊಂದು ಸೃಷ್ಟಿಯಾಗಿದ್ದು, ನೀರಿಗಿಳಿದ ಜನರ ಕಾಲುಗಳಲ್ಲಿ ತುರಿಕೆ, ಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ.
ಮೀನುಗಾರಿಕೆಗೆ ಸಂಕಷ್ಟ
ವಿಶೇಷ ಆರ್ಥಿಕ ವಲಯಕ್ಕಾಗಿ ಪುನರ್ವಸತಿ ಕಾಲನಿ ನಿರ್ಮಿಸಲಾಗಿದ್ದು, ಇಲ್ಲಿ ಅಂದಾಜು 300 ಮನೆಗಳಿಗೆ ಬೇಕಾದಷ್ಟು ಸಾಮರ್ಥ್ಯದ ಎಸ್‌ಟಿಪಿ ಇಲ್ಲ. ಹೀಗಾಗಿ ಇಲ್ಲಿನ ಒಳಚರಂಡಿ ನೀರನ್ನು ಸಂಸ್ಕರಿಸದೆ ನೇರವಾಗಿ ಬಿಡಲಾಗುತ್ತಿದ್ದು, ಫಲ್ಗುಣಿ ನದಿಯ ಹಳ್ಳಕೊಳ್ಳಗಳನ್ನು ಸೇರಿ ಮಾಲಿನ್ಯಗೊಂಡಿದ್ದು, ಸ್ಥಳೀಯರು ಮೀನುಗಾರಿಕೆ ನಡೆಸಲೂ ಆಗದ ಸ್ಥಿತಿ ಉಂಟಾಗಿದೆ ಎಂಬ ದೂರು ಕೇಳಿ ಬರುತ್ತಲೇ ಇದೆ. ಈ ಹಳ್ಳದ ದಂಡೆಯುದ್ದಕ್ಕೂ ವಾಸಿಸುವ ಗ್ರಾಮಸ್ಥರು ಮಲಿನ ನೀರಿನ ಸಮಸ್ಯೆ, ದುರ್ವಾಸನೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
‘ಫಲ್ಗುಣಿ ಉಳಿಸಿ’ ಅಭಿಯಾನ
2016ನೇ ಸಾಲಿನ ಬೇಸಗೆಯಲ್ಲಿಯೇ ತೋಕೂರು ಹಳ್ಳದಲ್ಲಿ ನೀರು ಮಲಿನಗೊಂಡಾಗ ಸ್ಥಳೀಯರು ‘ಫಲ್ಗುಣಿ ಉಳಿಸಿ’ ಅಭಿಯಾನ ನಡೆಸಿದ್ದರು. ಅದರ ಪರಿಣಾಮವೆಂಬಂತೆ ನದಿ ಮಾಲಿನ್ಯ ಕುರಿತು ಅಧ್ಯಯನ ನಡೆಸಲು ಜಿಲ್ಲಾಡಳಿತವು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿಧಿ, ಬೈಕಂಪಾಡಿ ಕೈಗಾರಿಕೆ ಪ್ರದೇಶದ ವಿವಿಧ ಕೈಗಾರಿಕೆ ಕಂಪೆನಿಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯೊಂದನ್ನು ಜಿಲ್ಲಾಡಳಿತ ನೇಮಕ ಮಾಡಿತ್ತು ಆದರೆ ಪರಿಣಾಮ ಮಾತ್ರ ಶೂನ್ಯ.
ನಮ್ಮ ಹಲವಾರು ಹೋರಾಟದಿಂದ ಜಿಲ್ಲಾಡಳಿತ ಈ ಹಿಂದೆ ನೇಮಕ ಮಾಡಿದ್ದ ಸಮಿತಿಯ ವರದಿಯ ಬಗ್ಗೆ ಯಾವುದೇ ಪ್ರಯೋಜನವಾಗಿಲ್ಲ ಇದೀಗ ಮತ್ತೆ ಸಮಸ್ಯೆ ಶುರುವಾಗಿದೆ. ಜಿಲ್ಲಾಡಳಿತ ಈ ಕುರಿತು ಗಮನ ಹರಿಸಬೇಕಾಗಿದೆ’ ಎನ್ನುತ್ತಾರೆ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ.
ಇಲ್ಲಿನ ಮೀನುಗಾರಿಕೆ ಉದ್ಯಮವೇ ನೆಲಕಚ್ಚಿದೆ. ಮನೆಬಳಕೆಗೂ ತೋಕೂರು ಹಳ್ಳದಲ್ಲಿ ಅಥವಾ ಫಲ್ಗುಣಿ ನದಿಯಲ್ಲಿ ಮೀನುಗಾರಿಕೆ ಮಾಡುವಂತಿಲ್ಲ. ನದಿಯ ಮೀನು ತಿಂದರೆ ಆರೋಗ್ಯ ಹಾಳಾಗುವ ಆತಂಕವಿದೆ. ಈ ಮಾಲಿನ್ಯದಿಂದಾಗಿ ಕೆಂಜಾರು, ಪಡುಕೋಡಿ, ಬಂಗ್ರಕೂಳೂರು, ಮೇಲುಕೊಪ್ಪಲು, ಕುಂಜತ್‌ಬೈಲ್ ಗ್ರಾಮ, ಮರಕಡ ವ್ಯಾಪ್ತಿಯ ಜನರಿಗೆ ನೀರಿನ ಸಮಸ್ಯೆ ಎದುರಾಗಲಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ಮಾದರಿ ಸಂಗ್ರಹಿಸಿ ಪರೀಕ್ಷೆ
ಫಲ್ಗುಣಿ ನದಿಯ ತೋಕೂರು ಹಳ್ಳ, ಮರವೂರು ಡ್ಯಾಂ ಬಳಿ, ಕೈಗಾರಿಕೆ ಪ್ರದೇಶ, ಬಗ್ಗುಂಡಿ, ಪ್ರದೇಶ ಬಳಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ. ಮುಖ್ಯವಾಗಿ ನೀರಿನ ಹರಿವಿಗೆ ತಡೆಯಾದ ಪರಿಣಾಮ ಮೀನು ಸಾಯುತ್ತಿರುವ ಶಂಕೆಯಿದೆ. ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಿದ್ದೇವೆ. ವಾರದೊಳಗೆ ವರದಿ ಬರಲಿದೆ. ಇತ್ತ ಎಂಎಸ್ ಇಝಡ್ ಪುನರ್‌ವಸತಿ ಕಾಲನಿಯಲ್ಲಿಯೂ ಎಸ್‌ಟಿಪಿ ಫ್ಲಾಂಟ್ ಸೂಕ್ತವಾಗಿ ನಿರ್ವಹಣೆ ಮಾಡುವಂತೆ ನೋಟಿಸ್ ನೀಡುತ್ತೇವೆ. – ಕೀರ್ತಿ ಕುಮಾರ್, ಪರಿಸರ ಅಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ ದ.ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.