ಮಳೆಕೊಯ್ಲು ವ್ಯವಸ್ಥೆ ಅಳವಡಿಕೆಯಿಂದ ಧನಾತ್ಮಕ ಪರಿಣಾಮ
"ಮನೆ ಮನೆಗೆ ಮಳೆಕೊಯ್ಲು' ಉದಯವಾಣಿ ಅಭಿಯಾನದ ಯಶಸ್ಸು
Team Udayavani, Sep 15, 2019, 5:00 AM IST
ಬಾವಿಯಲ್ಲಿ ತುಂಬಿದ ಶುದ್ಧ ನೀರು ನೋಡುವುದೇ ಖುಷಿ
ಗಂಜಿಮಠ ಮುತ್ತೂರಿನ ಜಯರಾಮ್ ಅವರ ಮನೆಯ ಬಾವಿಗೆ ಎರಡು ತಿಂಗಳ ಹಿಂದೆ ಮಳೆಕೊಯ್ಲು ವ್ಯವಸ್ಥೆ ಮಾಡಲಾಗಿದೆ. ಇದೀಗ ಬಾವಿಯಲ್ಲಿ ನೀರು ಹೆಚ್ಚಳವಾಗಿದ್ದು, ಮನೆ ಮಂದಿ ತಿಳಿನೀರನ್ನು ನೋಡಿ ಖುಷಿಗೊಂಡಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರ ಮಾರ್ಗದರ್ಶನದೊಂದಿಗೆ ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮನೆಯ ಬಾವಿಯ ಬದಿಯಲ್ಲಿ ಡ್ರಮ್ ಇಟ್ಟು ಅದರ ಮೇಲೆ ಜಲ್ಲಿ, ಮರಳು ಹಾಕಿ ಛಾವಣಿ ನೀರನ್ನು ಅದಕ್ಕೆ ಬೀಳುವಂತೆ ನೋಡಿಕೊಳ್ಳಲಾಗಿದೆ. ಬಳಿಕ ಶುದ್ಧವಾದ ತಿಳಿನೀರನ್ನು ಬಾವಿಗೆ ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ.
“ಎರಡು ತಿಂಗಳ ಹಿಂದಷ್ಟೇ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಂಡಿದ್ದೇವೆ. ಪ್ರಸ್ತುತ ಬಾವಿಯಲ್ಲಿ ಹಿಂದೆಂದಿಗಿಂತಲೂ ನೀರು ಹೆಚ್ಚಳವಾಗಿದೆ’ ಎನ್ನುತ್ತಾರೆ ಜಯರಾಂ.
ಶುದ್ಧ , ತಿಳಿನೀರು ನಮ್ಮ ಮನೆಯ ಬಾವಿಯಲ್ಲಿದೆ
ಗೌರಿ ಮಠ ಬೀದಿಯಲ್ಲಿರುವ ಜೆ. ಪಾಂಡುರಂಗ ನಾಯಕ್ ಅವರ ಮನೆಯ ಬಾವಿಗೆ ಎರಡು ತಿಂಗಳ ಹಿಂದೆ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮಳೆಕೊಯ್ಲು ವ್ಯವಸ್ಥೆ ಮಾಡಿದ ಅನಂತರ ಬಾವಿಯಲ್ಲಿ ತಿಳಿಯಾದ ನೀರಿರುವುದನ್ನು ಗಮನಿಸಿದೆ ಎಂದು ಹೇಳುತ್ತಾರೆ ಪಾಂಡುರಂಗ ನಾಯಕ್.
ಛಾವಣಿ ನೀರನ್ನು ಪೈಪ್ ಮುಖಾಂತರ ಬಾವಿಗೆ ಬೀಳುವಂತೆ ನೋಡಿಕೊಳ್ಳಲಾಗಿದೆ. ನಡುವೆ ನೀರು ಶುದ್ಧೀಕರಣಗೊಳ್ಳಲು ಫಿಲ್ಟರ್ ಅಳವಡಿಸಲಾಗಿದೆ. ಇದರಿಂದ ನೀರು ತಿಳಿಯಾಗಿ ಶುದ್ಧವಾಗಿ ಸಿಗುತ್ತಿದೆ ಎನ್ನುತ್ತಾರವರು. ಕಳೆದ ಬೇಸಗೆಯಲ್ಲಿ ನೀರಿನ ಅಭಾವದಿಂದಾಗಿ 4 ಟ್ಯಾಂಕರ್ ನೀರನ್ನು ತರಿಸಿ ಪರಿಸ್ಥಿತಿ ನಿಭಾಯಿದ್ದೇವೆ. ಈ ಬಾರಿ ಹಾಗಾಗದಿರಲಿ ಎಂಬ ಮುನ್ನೆಚ್ಚರಿಕೆಯೊಂದಿಗೆ ಮಳೆಕೊಯ್ಲು ಅಳವಡಿಕೆ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಪಾಂಡುರಂಗ ನಾಯಕ್.
ನಾಳೆ ನಲ್ಮೆಮಾರ್‌ನಲ್ಲಿ ಮಳೆಕೊಯ್ಲು ಮಾಹಿತಿ
ಬಂಟ್ವಾಳ ಲಯನ್ಸ್ ಕ್ಲಬ್ ಮತ್ತು ಮೊಡಂಕಾಪು ಕಾರ್ಮೆಲ್ ಕಾಲೇಜು ಎನೆಸ್ಸೆಸ್ ಘಟದ ವತಿಯಿಂದ ಮಳೆ ನೀರಿಂಗಿಸುವಿಕೆ ಪ್ರಾತ್ಯಕ್ಷಿಕೆ ಸೆ. 16ರಂದು ಬೆಳಗ್ಗೆ 9.45ಕ್ಕೆ ನಲ್ಮೆಮಾರ್ ಹಿ.ಪ್ರಾ. ಶಾಲೆಯಲ್ಲಿ ನಡೆಯಲಿದೆ.
ನೀವೂ ಅಳವಡಿಸಿ, ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ
ಕೇಂದ್ರಗಳಲ್ಲಿ ಅಳವಡಿಸುತ್ತಿದ್ದಾರೆ. “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.