ನಿರ್ಮಿತಿ ಕೇಂದ್ರದಿಂದ ಪ್ರತಿ ಮನೆಗೆ ತೆರಳಿ ಮಾಹಿತಿ, ತರಬೇತಿ
Team Udayavani, Jun 29, 2019, 5:00 AM IST
ನಿರ್ಮಿತಿ ಕೇಂದ್ರದವರು ಮನೆಮನೆಗಳಲ್ಲಿ ಮಳೆಕೊಯ್ಲು ಕುರಿತುಮಾರ್ಗದರ್ಶನ, ತರಬೇತಿ ನೀಡುತ್ತಿರುವುದು.
ಮಹಾನಗರ: ‘ಮನೆ ಮನೆಗೆ ಮಳೆಕೊಯ್ಲು’ ಉದಯವಾಣಿಯ ಜಾಗೃತಿ ಅಭಿಯಾನದ ಬಳಿಕ ಮಹಾನಗರ ಮಾತ್ರವಲ್ಲದೆ, ನಗರದ ಹೊರವಲಯದಲ್ಲಿಯೂ ಮಳೆ ನೀರು ಕೊಯ್ಲು ಅಳವಡಿಸಲು ಜನ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ. ಆ ಮೂಲಕ ಭವಿಷ್ಯದಲ್ಲಿ ನೀರಿನ ಅಭಾವಕ್ಕೆ ಮುಕ್ತಿ ಹಾಡಲು ಈಗಿಂದಲೇ ತಯಾರಾಗುತ್ತಿರುವುದು ಉತ್ತಮ ಬೆಳವಣಿಗೆ.
ವಿಶೇಷವೆಂದರೆ, ಮಳೆಕೊಯ್ಲು ಅಳವಡಿಸಲು ಸಲಹೆ, ಮಾರ್ಗದರ್ಶನ ನೀಡುವಂತೆ ನಗರ ಮತ್ತು ಹೊರವಲಯಗಳಿಂದ ನಿರ್ಮಿತಿ ಕೇಂದ್ರಕ್ಕೆ ಸುಮಾರು 150ಕ್ಕೂ ಹೆಚ್ಚು ಕರೆಗಳು ಬಂದಿದ್ದು, ಕೇಂದ್ರದವರು ಎಲ್ಲ ಮನೆಗಳಿಗೆ ತೆರಳಿ ಉಚಿತವಾಗಿಯೇ ಸಲಹೆಗಳನ್ನು ನೀಡುತ್ತಿದ್ದಾರೆ.
‘ಮನೆಮನೆಗೆ ಮಳೆಕೊಯ್ಲು’ ಜಾಗೃತಿ ಅಭಿಯಾನದ ಭಾಗವಾಗಿ ಜೂ. 19ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ‘ಉದಯವಾಣಿ’ಯು ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಮಾಹಿತಿ ಕಾರ್ಯಕ್ರಮ ಆಯೋಜಿಸಿತ್ತು. ಈ ಸಂದರ್ಭ ಸಭಾಂಗಣದ ಹೊರಭಾಗದಲ್ಲಿ ನಿರ್ಮಿತಿ ಕೇಂದ್ರದವರು ಮಳಿಗೆ ಹಾಕಿ ಮಳೆಕೊಯ್ಲು ಬಗ್ಗೆ ಪ್ರಾತ್ಯಕ್ಷಿಕೆ ಹಮ್ಮಿಕೊಂಡಿದ್ದರು. ಅಲ್ಲದೆ ಮಳೆಕೊಯ್ಲು ಅಳವಡಿಸುವವರ ಮನೆಗೆ ತೆರಳಿ ಸಲಹೆ, ಮಾರ್ಗದರ್ಶನ ನೀಡುವ ಸಲುವಾಗಿ ಸ್ಥಳದಲ್ಲೇ ನೋಂದಣಿ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
74 ಮಂದಿ ಈ ವೇಳೆ ಸ್ಥಳದಲ್ಲೇ ನೋಂದಣಿ ಮಾಡಿದ್ದರು. ಕಾರ್ಯಕ್ರಮ ಮುಗಿದ ಅನಂತರವೂ ಹಲವು ಮಂದಿ ಕರೆ ಮಾಡಿ ಸಲಹೆ ಕೇಳಿದ್ದರು.
ಈ ಪೈಕಿ ಶುಕ್ರವಾರದವರೆಗೆ 130 ಮಂದಿ ತಮ್ಮ ಮನೆಗೆ ಆಗಮಿಸುವಂತೆ ನಿರ್ಮಿತಿ ಕೇಂದ್ರದ ಪ್ರಮುಖರಲ್ಲಿ ವಿನಂತಿಸಿಕೊಂಡಿದ್ದು, ಅವರೆಲ್ಲರ ಹೆಸರುಗಳನ್ನು ನೋಂದಣಿ ಮಾಡಿಕೊಳ್ಳಲಾಗಿದೆ. ಈಗಾಗಲೇ ಹಲವರ ಮನೆಗಳಿಗೆ ಭೇಟಿ ನೀಡಿ ಮಾರ್ಗದರ್ಶನ ನೀಡಿದ್ದಾರೆ. ಜತೆಗೆ ಅಳವಡಿಕೆ ಪ್ರಕ್ರಿಯೆ ಬಗ್ಗೆ ಸೂಕ್ತ ತರಬೇತಿಗಳನ್ನೂ ನೀಡಲಾಗುತ್ತಿದೆ. ಈ ಪೈಕಿ ಈಗಾಗಲೇ ಕೆಲವರು ತಮ್ಮ ಮನೆಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಂಡು ಅದನ್ನು ಪತ್ರಿಕೆಯೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹಂತ ಹಂತವಾಗಿ ಉಳಿದವರ ಮನೆಗೂ ಭೇಟಿ ನೀಡಿ ಮಾರ್ಗದರ್ಶನ ನೀಡುವ ಕೆಲಸ ನಿರ್ಮಿತಿ ಕೇಂದ್ರದಿಂದ ನಡೆಯುತ್ತಿದೆ.
ಮಳೆನೀರೇ ಪರ್ಯಾಯ
ಈಗಾಗಲೇ ನಿರ್ಮಿತಿ ಕೇಂದ್ರದವರು ತೆರಳಿದ ಬಹುತೇಕ ಮನೆಗಳಲ್ಲಿ ಜನ ತಮ್ಮ ಬಳಕೆಯ ನೀರಿನ ಮೂಲಗಳ ಬಳಿ ಮಳೆಕೊಯ್ಲು ಅಳವಡಿಸಿದರೆ, ಭವಿಷ್ಯದಲ್ಲಿ ನೀರು ಸಿಗಬಹುದೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಕೆಲವು ಕಡೆಗಳಲ್ಲಿ ಬಾವಿ ನೀರು ಒಳಚರಂಡಿ ಸೇರಿ ಮಲಿನಗೊಂಡಿದ್ದು, ಅಂತಹ ಬಾವಿಗೆ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡರೆ ಸಮಸ್ಯೆಯಾಗುವುದೇ ಎಂಬ ಆತಂಕ ತೋಡಿಕೊಂಡಿದ್ದಾರೆ.
ಇರುವ ಬಾವಿ, ಕೊಳವೆಬಾವಿಗೆ ಯಾವ ರೀತಿಯಲ್ಲಿ ಮಳೆಕೊಯ್ಲು, ಜಲಮರುಪೂರಣ ವ್ಯವಸ್ಥೆ ಮಾಡಬಹುದು ಮತ್ತು ಅದರಿಂದ ಯಾವ ರೀತಿಯ ಫಲ ಮುಂದಿನ ದಿನಗಳಲ್ಲಿ ಸಿಗಬಹುದು ಎಂಬ ಬಗ್ಗೆ ಜನರು ಸಲಹೆ ಕೇಳಿದ್ದಾರೆ. ಕೆರೆ ನಿರ್ಮಿಸಿ ಮಳೆಕೊಯ್ಲು ಅಳವಡಿಸಿಕೊಳ್ಳಲು ಸೂಕ್ತ ಜಾಗದ ಬಗ್ಗೆಯೂ ಶಿಕ್ಷಣ ಸಂಸ್ಥೆಗಳ ಪ್ರಮುಖರು ವಿಚಾರಿಸಿರುವುದಾಗಿ ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ ಅವರು ಹೇಳುತ್ತಾರೆ.
ಹೊರ ಜಿಲ್ಲೆಯಲ್ಲೂ ಜಲ ಸಾಕ್ಷರತೆ
ಸುರತ್ಕಲ್, ಕಿನ್ನಿಗೋಳಿ, ಮೂಡುಬಿದಿರೆ, ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಮತ್ತಿತರೆಡೆಗಳಿಂದಲೂ ಜನರು ಕರೆ ಮಾಡಿ ಮಾರ್ಗದರ್ಶನ ಕೇಳುತ್ತಿದ್ದಾರೆ. ಗಮನಾರ್ಹವೆಂದರೆ, ‘ಉದಯವಾಣಿ’ ಮಂಗಳೂರಿನಲ್ಲಿ ಆರಂಭಿಸಿದ ಈ ಅಭಿಯಾನ ಇತರೆಡೆಗಳಲ್ಲಿಯೂ ನೀರು ಉಳಿತಾಯದ ಬಗ್ಗೆ ಜನರನ್ನು ಸಾಕ್ಷರರನ್ನಾಗಿಸುವಲ್ಲಿ ಪ್ರೇರೇಪಿಸಿದೆ. ಇದಕ್ಕೆ ಪೂರಕವೆಂಬಂತೆ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿಯಲ್ಲಿಯೂ ಈಗಾಗಲೇ ಕೆಲವರು ಮಳೆ ನೀರು ಕೊಯ್ಲು ಅಳವಡಿಕೆ ಮಾಡಿ ಮಾದರಿಯಾಗಿದ್ದಾರೆ.
ಶಾಲೆಯಲ್ಲಿ ಅಳವಡಿಸಲು ಚಿಂತನೆ
ಅಶೋಕನಗರ ಮಾಲೆಮಾರ್‌ನ ರೇಖಲತಾ ಅವರ ಮಹಿಳಾ ವೇದಿಕೆ ತಂಡವು ಮಳೆಕೊಯ್ಲು ವಿಷಯದಲ್ಲಿ ಒಂದೆಜ್ಜೆ ಮುಂದಿಟ್ಟಿದ್ದು, ಪೊಳಲಿಯ ಶಾಲೆಯೊಂದಕ್ಕೆ ಮಳೆ ನೀರು ಕೊಯ್ಲು ಅಳವಡಿಸಲು ಮುಂದಾಗಿದ್ದಾರೆ. ಅಲ್ಲದೆ, ವೇದಿಕೆಯ ಸದಸ್ಯರಿಗಾಗಿ ಮಾಹಿತಿ ಕಾರ್ಯಾಗಾರವನ್ನೂ ಹಮ್ಮಿಕೊಳ್ಳಲು ನಿರ್ಧರಿಸಿ ಭವಿಷ್ಯದಲ್ಲಿ ಎಲ್ಲರ ಮನೆಗಳಲ್ಲಿಯೂ ಮಳೆಕೊಯ್ಲು ಅಳವಡಿಸುವಂತೆ ಪ್ರೇರೇಪಿಸಲಾಗುವುದು ಎನ್ನುತ್ತಾರೆ ರೇಖಲತಾ. ಮನೆಯಲ್ಲಿ ಮಳೆಕೊಯ್ಲು ಅಳವಡಿಸಲು ಮಾರ್ಗದರ್ಶನ ನೀಡಲು ಈಗಾಗಲೇ ರಾಜೇಂದ್ರ ಕಲ್ಬಾವಿಯವರೊಂದಿಗೆ ಮಾತನಾಡಿದ್ದೇನೆ. ಅವರ ಸಲಹೆ ಮೇರೆಗೆ ನಮ್ಮ ಮನೆಯಲ್ಲಿ ಅಳವಡಿಕೆ ಮಾಡಲಾಗುವುದು ಎಂದು ವಾಮಂಜೂರಿನ ಅನಿಲ್ ಪಿಂಟೋ ತಿಳಿಸಿದ್ದಾರೆ.
ಮನೆಗೆ ಭೇಟಿ‘ಉದಯವಾಣಿ’ ನಡೆಸಿದ ಕಾರ್ಯಕ್ರಮದಂದು 74 ಮಂದಿ ಸ್ಥಳದಲ್ಲೇ
ನೋಂದಣಿ ಮಾಡಿಕೊಂಡಿದ್ದರು. ಆ ಬಳಿಕ ಹಲವರು ಕರೆ ಮಾಡಿ ಮಾರ್ಗದರ್ಶನ ಕೇಳುತ್ತಿದ್ದಾರೆ. 150ಕ್ಕೂ ಹೆಚ್ಚು ಮಂದಿ ಕರೆ ಮಾಡಿದ್ದು, ಇಲ್ಲಿವರೆಗೆ 130 ಮಂದಿಯ ಹೆಸರು ನೋಂದಣಿ ಮಾಡಲಾಗಿದ್ದು, ಹಂತ ಹಂತವಾಗಿ ಎಲ್ಲರ ಮನೆಗಳಿಗೂ ಭೇಟಿ ನೀಡಲಾಗುತ್ತಿದೆ. ಉಳಿದವರು ಕೇವಲ ಸಲಹೆಗಷ್ಟೇ ಕರೆ ಮಾಡಿದ್ದರಿಂದ ಅವರ ಹೆಸರನ್ನು ನೋಂದಾಯಿಸಿಕೊಂಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kotekar Robbery Case: ಮುಂಬಯಿ, ತಮಿಳುನಾಡಿನಲ್ಲಿ ಮತ್ತೆ ನಾಲ್ವರು ವಶಕ್ಕೆ?
Kotekar Robbery: ಮುರುಗೆಂಡಿಗೆ ಚಿನ್ನ ಮತ್ತು ಫಿಯೆಟ್‌ನದ್ದೇ ಮೋಹ !
Mangaluru: ಕೆನರಾ ಶಿಕ್ಷಣ ಸಂಸ್ಥೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪ
Mangaluru: ವ್ಯವಹಾರ ಮನಸ್ತಾಪ: ಹಣಕ್ಕಾಗಿ ಬೆದರಿಕೆ, ದೂರು ದಾಖಲು
Karnataka Sports Meet: ಈಜು… ಚಿಂತನ್ ಶೆಟ್ಟಿ , ರಚನಾ ಬಂಗಾರ ಬೇಟೆ
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್