ಮಳೆ ನೀರು ರಸ್ತೆಗೆ; ಕೆಸರು ಗದ್ದೆಗೆ
Team Udayavani, Jun 11, 2018, 4:07 PM IST
ಬಂಟ್ವಾಳ : ಮಂಗಳೂರು ಬೆಂಗಳೂರು ರಾ.ಹೆ. ಹಾದುಹೋಗುವ ಮಾಣಿ ಉಪ್ಪಿನಂಗಡಿ ರಸ್ತೆಯ ಅಧ್ವಾನ ಮಳೆಗಾಲದಲ್ಲಿ ಸ್ಥಳೀಯರಿಗೆ ಎದುರಿಸಲಾಗದ ಸಮಸ್ಯೆಯಾಗಿದೆ. ಗುಡ್ಡದ ಮಳೆ ನೀರು ರಸ್ತೆಗೆ ಬರುತ್ತದೆ. ರಸ್ತೆಯಲ್ಲಿ ಇದ್ದಂತ ಕೆಸರು ಇಲ್ಲಿನ ತಗ್ಗು ಪ್ರದೇಶದ ಗದ್ದೆಗೆ ಹರಿಯುತ್ತದೆ. ಚತುಷ್ಪಥ ಹೆದ್ದಾರಿ ವಿಸ್ತರಣೆಗಾಗಿ ಅಗೆದು ಹಾಕಿದ ಮಣ್ಣು ಮಳೆಯಿಂದಾಗಿ ಕೃಷಿಕರ ಗದ್ದೆಯಲ್ಲಿ ಹರಿದು ಬಂದು ಹೂಳು ತುಂಬಿಕೊಂಡಿದೆ.
ಗುಡ್ಡ ಅಗೆದಿರುವುದರಿಂದ ನೀರು ಹರಿಯುವ ತೋಡು ಮುಚ್ಚಿ ಹೋಗಿದ್ದು, ಮಳೆ ನೀರು ಎಲ್ಲೆಂದರಲ್ಲಿ ಹರಿದು ಮನೆ, ಹಟ್ಟಿ, ಕೊಟ್ಟಿಗೆ, ಗದ್ದೆ, ರಸ್ತೆ, ಅಡಿಕೆ ತೋಟ ಎಲ್ಲವನ್ನು ಕೊಚ್ಚಿ ಹೋಗುತ್ತಿದೆ. ರಸ್ತೆಯನ್ನು ಎರಡಾಗಿ ವಿಭಾಗಿಸಿರುವ ಗುತ್ತಿಗೆಯವರು ರಾ.ಹೆ. ಕಾಮಗಾರಿಯನ್ನು ವಿಳಂಬಿಸಿ ಅವಾಂತರಕ್ಕೆ ಕಾರಣರಾಗಿದ್ದಾರೆ. ಕೆಲವು ಕಡೆಗಳಲ್ಲಿ ರಸ್ತೆ ಪಕ್ಕ ವಿವಿಧ ಉದ್ದೇಶಕ್ಕೆ ಮಣ್ಣು ಅಗೆದಿರುವ ಕಾರಣಕ್ಕೆ ದೊಡ್ಡ ಹೊಂಡವಾಗಿದ್ದು, ಅದರಲ್ಲಿ ನೀರು ನಿಂತು ಕೆರೆಯಂತೆ ಕಾಣುತ್ತಿದೆ.
ತುಂಬೆ ಶಾಲಾ ಬಳಿ ಹೆದ್ದಾರಿಯಲ್ಲಿ ಕಳೆದ ಎರಡು ವರ್ಷಗಳಿಂದ ಮಳೆ ನೀರು ನಿಂತು ಸಂಚಾರಕ್ಕೆ ಆಗುತ್ತಿರುವ ಅಡಚಣೆ ಬಗ್ಗೆ ಹೆದ್ದಾರಿ ಪ್ರಾಧಿಕಾರ ಯಾವುದೇ ರೀತಿಯ ದುರಸ್ತಿ ಕೆಲಸಕ್ಕೆ ಮುಂದಾಗಿಲ್ಲ. ಸಾರ್ವಜನಿಕರೇ ಅಲ್ಲಿ ನೀರು ಹರಿಯಲು ಕಾಮಗಾರಿ ನಡೆಸಿದ್ದಾರೆ. ಬಿ.ಸಿ. ರೋಡ್ ಕೈಕಂಬದಲ್ಲಿ ಗುಡ್ಡದ ನೀರು ರಸ್ತೆಗೆ ಹರಿದು ಬಂರುತ್ತಿದೆ. ಇಲ್ಲಿನ ಹೆದ್ದಾರಿ ಚರಂಡಿಯ ಕೊಳವೆ ಮಣ್ಣು, ಕಸಗಳಿಂದ ಮುಚ್ಚಿದ್ದು ಅದನ್ನು ತೆರವು ಮಾಡುವ ಕ್ರಮಗಳು ನಡೆದಿಲ್ಲ ಎಂಬ ದೂರು ವ್ಯಾಪಕವಾಗಿದೆ.
ಮೆಲ್ಕಾರ್ ಸಂಚಾರ ಠಾಣೆ ಬಳಿ ಎತ್ತರ ಜಾಗದ ಮಣ್ಣು ತಗ್ಗು ಪ್ರದೇಶಕ್ಕೆ ಹರಿದು ಬಂದು ಹೆದ್ದಾರಿಯ ಡಾಮರು ಕಾಣದಂತೆ ಕೆಸರುಮಯ ಆಗಿದೆ. ಮಳೆ ಬಂದಾಗೆಲ್ಲಾ ಜೆಸಿಬಿ ಬಳಸಿ ಇಲ್ಲಿನ ಹೆದ್ದಾರಿ ಬದಿಯ ಕೆಸರು ತೆಗೆಯುವ ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.