ನೊಂದ ಮಹಿಳೆಯರಲ್ಲಿ ಭರವಸೆ ಮೂಡಿಸಿದ “ಸಖಿ’ ಕೇಂದ್ರ
ನೆರವು ಪಡೆದವರಲ್ಲಿ ಅಪ್ರಾಪ್ತ ವಯಸ್ಸಿನವರೇ ಅಧಿಕ!
Team Udayavani, Jan 30, 2022, 6:41 PM IST
ಮಹಾನಗರ: ಮಂಗಳೂರಿನ “ಸಖಿ-ಒನ್‌ಸ್ಟಾಪ್ ಸೆಂಟರ್’ ಕಳೆದ ಮೂರು ವರ್ಷಗಳಲ್ಲಿ ದೌರ್ಜನ್ಯಕ್ಕೊಳಗಾದ 549 ಮಹಿಳೆಯರಿಗೆ ಆಸರೆಯಾಗಿದ್ದು ನೆರವು ಪಡೆದವರ ಪೈಕಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಹೆಚ್ಚು!
ಮಹಿಳಾ ದೌರ್ಜನ್ಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ವರದಿಯಾಗುತ್ತಿರುವ ಜತೆಗೆ “ಸಖಿ’ಯ ನೆರವು ಪಡೆಯುವವರ ಸಂಖ್ಯೆಯೂ ಹೆಚ್ಚಳಗೊಂಡಿದೆ. ನೆರವು ಪಡೆದವರಲ್ಲಿ ಶೇ.65ರಷ್ಟು ಮಂದಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ವಯಸ್ಸಿನ ಯುವತಿಯರು.
ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ನೆರವು, ಆಪ್ತ ಸಮಾಲೋಚನೆ, ಪೊಲೀಸ್, ಕಾನೂನು ನೆರವು, ತಾತ್ಕಾಲಿಕ ವಸತಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಮಂಗಳೂರಿನ ಸರಕಾರಿ ಲೇಡಿಗೋಶನ್ ಸರಕಾರಿ ಆಸ್ಪತ್ರೆಯ ಕಟ್ಟಡದಲ್ಲಿ “ಸಖಿ’ ಕೇಂದ್ರವು 2019ರ ಜ. 26ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದೀಗ ನೂತನ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸಲು ಸಿದ್ಧವಾಗಿದೆ.
ತಿಂಗಳಿಗೆ 20ರಿಂದ 25
ಮಂದಿಗೆ ನೆರವು
ಲೈಂಗಿಕ ದೌರ್ಜನ್ಯಕ್ಕೊಳಗಾದ ಅಪ್ರಾಪ್ತ ವಯಸ್ಸಿನ ಯುವತಿಯರು ಅತ್ಯಧಿಕ ಸಂಖೆಯಲ್ಲಿ ಸಖಿಯ ನೆರವು ಪಡೆದಿದ್ದಾರೆ. ಉಳಿದಂತೆ ಕೌಟುಂಬಿಕ ಕಲಹಗಳಲ್ಲಿ ಹಾಗೂ ಇತರ ರೀತಿಯಲ್ಲಿ ದೌರ್ಜನ್ಯಕ್ಕೊಳಗಾಗಿ ನೊಂದವರಿಗೆ ನೆರವು ಒದಗಿಸಲಾಗಿದೆ. ಕೇಂದ್ರದಲ್ಲಿ ಒಟ್ಟು 2019ರ ಎಪ್ರಿಲ್‌ನಿಂದ 2020ರ ಮಾರ್ಚ್‌ವರೆಗೆ 121 ಮಹಿಳೆಯರಿಗೆ ವೈದ್ಯಕೀಯ, 42 ಮಹಿಳೆಯರಿಗೆ ಪೊಲೀಸ್, 87 ಮಹಿಳೆಯರಿಗೆ ಆಪ್ತ ಸಮಾಲೋಚನೆ, 38 ಮಹಿಳೆಯರಿಗೆ ಕಾನೂನು ನೆರವು, 5 ಮಂದಿಗೆ ತಾತ್ಕಾಲಿಕ ವಸತಿ ಒದಗಿಸಲಾಗಿದೆ. 2020ರ ಎಪ್ರಿಲ್‌ನಿಂದ 2021ರ ಮಾರ್ಚ್‌ವರೆಗೆ 129 ಮಹಿಳೆಯರಿಗೆ ವೈದ್ಯಕೀಯ, 9 ಮಹಿಳೆಯರಿಗೆ ಪೊಲೀಸ್, 128 ಮಹಿಳೆಯರಿಗೆ ಆಪ್ತ ಸಮಾಲೋಚನೆ, 71 ಮಹಿಳೆಯರಿಗೆ ಕಾನೂನು ನೆರವು, 11 ಮಂದಿಗೆ ತಾತ್ಕಾಲಿಕ ವಸತಿ ಒದಗಿಸಲಾಗಿದೆ. 2021ರ ಎಪ್ರಿಲ್‌ನಿಂದ 2021ರ ಡಿಸೆಂಬರ್‌ವರೆಗೆ 99 ಮಹಿಳೆಯರಿಗೆ ವೈದ್ಯಕೀಯ, 8 ಮಹಿಳೆಯರಿಗೆ ಪೊಲೀಸ್ ನೆರವು, 145 ಮಹಿಳೆಯರಿಗೆ ಆಪ್ತ ಸಮಾಲೋಚನೆ, 81 ಮಹಿಳೆಯರಿಗೆ ಕಾನೂನು ನೆರವು, 10 ಮಹಿಳೆಯರಿಗೆ ವಸತಿ ಒದಗಿಸಲಾಗಿದೆ.
24 ಗಂಟೆಯೂ ಸೇವೆ
“ಸಖಿ’ ಕೇಂದ್ರದಲ್ಲಿ ಓರ್ವ ಸೆಂಟರ್ ಅಡ್ಮಿನಿಸ್ಟ್ರೇಟರ್, ಓರ್ವ ಆಪ್ತ ಸಮಾಲೋಚಕಿ, ಓರ್ವ ಮಹಿಳಾ ಪೊಲೀಸ್ ಸಿಬಂದಿ, ಇಬ್ಬರು ಸಮಾಜ ಸೇವಾ ಕಾರ್ಯಕರ್ತರು, ಇಬ್ಬರು ಕಾನೂನು ಸಮಾಲೋಚಕರಿದ್ದು, ದಿನದ 24 ಗಂಟೆಯೂ ಸೇವೆ ದೊರೆಯುತ್ತದೆ. ದೌರ್ಜನ್ಯಕ್ಕೊಳಗಾದ ಮಹಿಳೆಗೆ ವೈದ್ಯಕೀಯ ತುರ್ತುಸೇವೆಗಳ ಅಗತ್ಯವಿದ್ದರೆ ತತ್‌ಕ್ಷಣ ವೈದ್ಯಕೀಯ ಪರೀಕ್ಷೆ, ಸಮಾಲೋಚನೆ ಮಾಡಲಾಗುತ್ತದೆ. ಪ್ರಥಮ ವರ್ತಮಾನ ವರದಿ ಬಗ್ಗೆ ಮಾಹಿತಿ, ಸಹಾಯ ನೀಡಲಾಗುತ್ತದೆ. 5 ದಿನಗಳವರೆಗೆ ತಾತ್ಕಾಲಿಕ ಆಶ್ರಯ ನೀಡಲಾಗುತ್ತದೆ. ಮಹಿಳೆಯ ಬಗ್ಗೆ ಗೌಪ್ಯತೆಯನ್ನು ಕಾಪಾಡಲಾಗುತ್ತದೆ. ನೆರವಿಗಾಗಿ ಮಹಿಳಾ ಸಹಾಯವಾಣಿ 181 ಅಥವಾ 7259107284 ಸಂಪರ್ಕಿಸಬಹುದಾಗಿದೆ.
ನೆರವು ಪಡೆಯುವವರ ಸಂಖ್ಯೆ ಹೆಚ್ಚಳ
“ಸಖಿ’ ಸೆಂಟರ್‌ನಿಂದ ನೆರವು ಪಡೆಯುತ್ತಿರುವ ಮಹಿಳೆಯರ ಸಂಖ್ಯೆ ಅಧಿಕವಾಗಿದೆ. ಒಂದೇ ಸೂರಿನಡಿ ದಿನದ 24 ಗಂಟೆಯೂ ವಿವಿಧ ರೀತಿಯ ನೆರವು ಒದಗಿಸಲಾಗುತ್ತಿದೆ..
-ಪಾಪ ಬೋವಿ,
ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ.
ತುರ್ತು ನೆರವು ಅತ್ಯಗತ್ಯ
ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯುವುದು ಅಗತ್ಯ. ಒಂದು ವೇಳೆ ದೌರ್ಜನ್ಯಕ್ಕೊಳಗಾದರೆ ಅವರಿಗೆ ಸಕಾಲದಲ್ಲಿ ಅಗತ್ಯ ನೆರವು ಒದಗಿಸುವುದು ಕೂಡ ಅಷ್ಟೇ ಅಗತ್ಯ. ಈ ನಿಟ್ಟಿನಲ್ಲಿ “ಸಖಿ” ನೊಂದವರಲ್ಲಿ ಹೊಸ ಭರವಸೆ, ಧೈರ್ಯ ಮೂಡಿಸುವ ಕೆಲಸ ಮಾಡುತ್ತಿದೆ.
–ಡಾ| ದುರ್ಗಾಪ್ರಸಾದ್,
ವೈದ್ಯಕೀಯ ಅಧೀಕ್ಷಕರು, ಲೇಡಿಗೋಶನ್ ಆಸ್ಪತ್ರೆ
- ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.