ಸೆ. 16ರಿಂದ ಮಂಗಳೂರು ವಿ.ವಿ. ಪರೀಕ್ಷೆ: ವಿದ್ಯಾರ್ಥಿಗಳು ನಿರಾಳ; ತವರು ವಿ.ವಿ.ಗಳಲ್ಲಿ ಅವಕಾಶ
Team Udayavani, Sep 5, 2020, 6:05 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಮಂಗಳೂರು ವಿ.ವಿ. ವ್ಯಾಪ್ತಿಯ ಕಾಲೇಜುಗಳಲ್ಲಿ ಕಲಿಯುತ್ತಿರುವ ಹೊರ ದೇಶ ಮತ್ತು ಹೊರ ರಾಜ್ಯಗಳ ವಿದ್ಯಾರ್ಥಿಗಳು ಈ ಬಾರಿಯ ಪರೀಕ್ಷೆಯನ್ನು ತವರು ವಿ.ವಿ.ಗಳಲ್ಲೇ ಬರೆಯಲಿದ್ದಾರೆ. ಆ ಮೂಲಕ, ಕೋವಿಡ್ ಆತಂಕವಿಲ್ಲದೆ, ನೆಮ್ಮದಿಯಿಂದ ಪರೀಕ್ಷೆ ಎದುರಿಸುವ ವ್ಯವಸ್ಥೆಯನ್ನು ಮಂಗಳೂರು ವಿ.ವಿ. ಮಾಡುತ್ತಿದೆ.
ಮಂಗಳೂರು ವಿ.ವಿ. ಅಡಿಯಲ್ಲಿರುವ 210 ಕಾಲೇಜುಗಳಲ್ಲಿ ದೇಶ-ವಿದೇಶಗಳ ಹಲವು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಬಾರಿ ಲಾಕ್‌ಡೌನ್‌ನಿಂದಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಮಸ್ಯೆಯಾಗಿದೆ. ಅದಕ್ಕಾಗಿ, ವಿದ್ಯಾರ್ಥಿಗಳಿರುವ ಪ್ರದೇಶಗಳ ವಿ.ವಿ. ಮುಖ್ಯಸ್ಥರುಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಅಲ್ಲಿಯೇ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸುವಂತೆ ಕೋರಲಾಗಿದ್ದು, ಎಲ್ಲ ಕಡೆಯಿಂದಲೂ ಧನಾತ್ಮಕ ಪ್ರತಿಕ್ರಿಯೆ ಬಂದಿದೆ.
ಭೂತಾನ್‌ನ 100 ವಿದ್ಯಾರ್ಥಿಗಳು
ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಭೂತಾನ್ ದೇಶದ 100 ಮಂದಿ ಕಲಿಯುತ್ತಿದ್ದು, ಅವರಿಗೆ ಅಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಲಭಿಸಿದೆ. ಮಹಾರಾಷ್ಟ್ರ 4, ಮಣಿಪುರ 6, ಜಮ್ಮು ಕಾಶ್ಮೀರ 2, ಲಕ್ಷದ್ವೀಪ 7 ಹಾಗೂ ಧಾರವಾಡದ ಕೆಲವು ವಿದ್ಯಾರ್ಥಿಗಳು ಆಯಾ ರಾಜ್ಯಗಳಲ್ಲೇ ಪರೀಕ್ಷೆ ಬರೆಯಲಿದ್ದಾರೆ. ಕೊಡಗು, ಉಡುಪಿ, ಕುಂದಾಪುರ ಮುಂತಾದೆಡೆಗಳ ವಿದ್ಯಾರ್ಥಿಗಳು ಆಯಾ ಜಿಲ್ಲೆಗಳ ಸನಿಹದ ಕಾಲೇಜುಗಳಲ್ಲೇ ಪರೀಕ್ಷೆ ಎದುರಿಸಲಿದ್ದಾರೆ ಎಂದು ವಿ.ವಿ. ಪ್ರಮುಖರು ತಿಳಿಸಿದ್ದಾರೆ.
ಕೇರಳದ್ದು ನಿರ್ಧಾರವಾಗಿಲ್ಲ
ಕೇರಳದ 1,000ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಕೇರಳಿಗರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅಲ್ಲಿಯೇ ಪರೀಕ್ಷೆ ನಡೆಸಬೇಕೇ ಅಥವಾ ವಿ.ವಿ. ವ್ಯಾಪ್ತಿಯಲ್ಲೇ ನಡೆಸಬೇಕೇ ಎಂಬ ಬಗ್ಗೆ ತೀರ್ಮಾನವಾಗಿಲ್ಲ.
ಪಾರದರ್ಶಕ ಪರೀಕ್ಷೆ
ಸೆ. 16ರಿಂದ 30ರೊಳಗೆ ಮಂಗಳೂರು ವಿ.ವಿ. ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಕಾಲೇಜುಗಳಲ್ಲಿ ಆಯಾ ವಿಭಾಗದ ಅಧ್ಯಕ್ಷರು ಸಹಿ ಮಾಡಿರುವ ಉತ್ತರ ಪತ್ರಿಕೆಯನ್ನೇ ವಿದ್ಯಾರ್ಥಿಗಳಿಗೆ ಉತ್ತರ ಬರೆಯಲು ನೀಡಲಾಗುತ್ತದೆ. ಪಾರದರ್ಶಕವಾಗಿ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಪ್ರಕ್ರಿಯೆಗಳು ನಡೆಯುತ್ತಿವೆ.
ಧನಾತ್ಮಕ ಸ್ಪಂದನೆ
ಭೂತಾನ್, ಮೇಘಾಲಯ, ಮಣಿಪುರ, ಜಮ್ಮು ಕಾಶ್ಮೀರ ಸಹಿತ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮಂಗಳೂರಿಗೆ ಆಗಮಿಸಲು ಅನಾನುಕೂಲವಾಗುತ್ತದೆ. ಇದಕ್ಕಾಗಿಯೇ ಅವರವರ ರಾಜ್ಯಗಳಲ್ಲೇ ಅಲ್ಲಿನ ವಿ.ವಿ.ಯೊಂದಿಗೆ ಒಡಂಬಡಿಕೆ ಮಾಡಿ ಪರೀಕ್ಷೆ ನಡೆಸಲು ಯೋಚಿಸಲಾಗಿದೆ. ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಎಲ್ಲಾ ಕ್ರಮ ವಹಿಸಲಾಗುವುದು.
-ಪ್ರೊ| ಪಿ.ಎಲ್. ಧರ್ಮ, ಪರೀಕ್ಷಾಂಗ ಕುಲಸಚಿವರು ಮಂಗಳೂರು ವಿ.ವಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.