“ಹೊರರಾಜ್ಯಗಳ ಮೀನಿನ ಲಾರಿಗಳಿಗೆ ಪ್ರತ್ಯೇಕ ಸ್ಥಳ’
Team Udayavani, Apr 18, 2020, 5:10 AM IST
ಮಂಗಳೂರು : ಹೊರ ರಾಜ್ಯಗಳಿಂದ ಮಂಗಳೂರಿಗೆ ಬೃಹತ್ ಲಾರಿಗಳ ಮೂಲಕ ಆಗಮಿಸುವ ಮೀನುಗಳನ್ನು ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡಲು ಹಳೆಬಂದರಿನ ಒಂದು ಪಾರ್ಶ್ವದಲ್ಲಿ ಶನಿವಾರದಿಂದ ಅವಕಾಶ ನೀಡಲಾಗುವುದು. ಆದರೆ ಇಲ್ಲಿಗೆ ಸಾರ್ವಜನಿಕ ಪ್ರವೇಶ ಇಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಹಳೆಬಂದರು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ಹೊರರಾಜ್ಯಗಳ ಸುಮಾರು 25ರಷ್ಟು ಬೃಹತ್ ಲಾರಿಗಳು ಮೀನುಗಳ ಸಮೇತ ಮಂಗಳೂರಿಗೆ ಆಗಮಿಸುತ್ತಿವೆ. ಆದರೆ ಸದ್ಯ ಅವರಿಗೆ ಸೂಕ್ತ ಸ್ಥಳಾವಕಾಶವಿರಲಿಲ್ಲ. ಹೀಗಾಗಿ ಹಳೆ ಬಂದರಿನಲ್ಲಿ ಶನಿವಾರ ರಾತ್ರಿಯಿಂದ ಚಿಲ್ಲರೆ ಮಾರಾಟಗಾರರಿಗೆ ಮೀನು ಅನ್‌ಲೋಡ್ ಮಾಡಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮುಂಜಾವ 3 ಗಂಟೆಯಿಂದ ಬೆಳಗ್ಗೆ 8 ಗಂಟೆಯ ಒಳಗೆ ಈ ಪ್ರಕ್ರಿಯೆ ನಡೆಯಬೇಕು. ಟೆಂಪೋದಲ್ಲಿ ಬರುವ ಸಣ್ಣ ವ್ಯಾಪಾರಸ್ಥರಿಗೆ ಮಾತ್ರ ಇಲ್ಲಿಗೆ ಪ್ರವೇಶವಿದ್ದು, ಸಾರ್ವಜನಿಕರಿಗೆ ಪ್ರವೇಶವಿಲ್ಲ. ಸಾಮಾಜಿಕ ಅಂತರ ಪಾಲಿಸಿಕೊಂಡು ಮಾರಾಟಗಾರರು ಇಲ್ಲಿಂದ ಮೀನು ಖರೀದಿಸಿ ತೆರಳಬೇಕು ಎಂದರು. ಆ ಬಳಿಕ ಸೆಂಟ್ರಲ್ ಮಾರುಕಟ್ಟೆ, ಪುರಭವನದ ಬದಿ, ಹಳೆಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಶಾಸಕರ ತಂಡ ತರಕಾರಿ, ಹಣ್ಣು ಮಾರಾಟ ಮಾಡುವವರಿಗೆ ಆಗಬೇಕಾದ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿತು.
ಶಾಸಕರು ಮಾತನಾಡಿ, ಸೆಂಟ್ರಲ್ ಮಾರುಕಟ್ಟೆಯಲ್ಲಿದ್ದ ರಿಟೇಲ್ ವ್ಯಾಪಾರ ಸ್ಥರಿಗೆ ನಗರದ ನೆಹರೂ ಮೈದಾನದ ಬಳಿಯ ನಿಗದಿತ ಜಾಗದಲ್ಲಿ 3 ತಿಂಗಳು ಗಳ ಅವಧಿಗೆ ತಾತ್ಕಾಲಿಕ ಕಟ್ಟಡ ನಿರ್ಮಾಣವಾಗಲಿದೆ. ಅಲ್ಲಿಯವರೆಗೆ ಪುರಭವನದ ಬದಿಯಲ್ಲಿ ಅಥವಾ ಹಳೆ ಬಸ್ ನಿಲ್ದಾಣದಲ್ಲಿ ಶೀಟ್ ಹಾಕಿ ಮಾರಾಟಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಶನಿವಾರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಶಾಸಕ ಯು.ಟಿ. ಖಾದರ್, ಮೇಯರ್ ದಿವಾಕರ್ ಪಾಂಡೇಶ್ವರ, ಸ್ಥಾಯೀ ಸಮಿತಿ ಅಧ್ಯಕ್ಷೆ ಪೂರ್ಣಿಮಾ, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಜೀರ್, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಹರೀಶ್ ಕುಮಾರ್, ಸಹಾಯಕ ಉಪನಿರ್ದೇಶಕ ದಿಲೀಪ್ ಕುಮಾರ್ ಮಾಜಿ ಮೇಯರ್ ಅಶ್ರಫ್, ಮುಸ್ತಫ, ಇಬ್ರಾಹಿಂ ಮೊದಲಾದವರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.