![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Feb 20, 2023, 8:15 AM IST
ಮಂಗಳೂರು: ಕರಾವಳಿ ಜಿಲ್ಲೆಗಳ ಮರಳುಗಾರಿಕೆ ನಿಯಮಗಳಲ್ಲಿ ಕೆಲವನ್ನು ಸರಳಗೊಳಿಸಲಾಗಿದ್ದು, ಇದರಿಂದಾಗಿ ಸರಕಾರವು ಕರಾವಳಿಗೆ ಪ್ರತ್ಯೇಕ ಮರಳು ನೀತಿ ಅನುಷ್ಠಾನವನ್ನು ಕೈಬಿಟ್ಟಿದೆ.
ಕರಾವಳಿಯಲ್ಲಿ ಸಾಂಪ್ರದಾಯಿ ಕವಾಗಿ ಮರಳು ತೆಗೆಯುವ ವ್ಯಕ್ತಿ/ಸಮುದಾಯದವರಿಗೆ ಮರಳು ಗಣಿಗಾರಿಕೆ/ಮರಳು ದಿಬ್ಬ ತೆರವುಗೊಳಿಸಲು ಹೆಚ್ಚಿನ ಅವಕಾಶ ನೀಡಲಾಗಿದೆ. ಆದ್ದರಿಂದ ಪ್ರತ್ಯೇಕ ಮರಳು ನೀತಿ ಜಾರಿ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಗಣಿ ಖಾತೆ ಸಚಿವ ಹಾಲಪ್ಪ ಆಚಾರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಉಪಖನಿಜ ರಿಯಾಯಿತಿ ನಿಯಮ ತಿದ್ದುಪಡಿ
ಕರಾವಳಿಯಲ್ಲಿ ಮರಳುಗಾರಿಕೆ ನಿಯಮಗಳನ್ನು ಸರಳಗೊಳಿಸುವ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಸಚಿವರ ಅಧ್ಯಕ್ಷತೆಯಲ್ಲಿ ಕರಾವಳಿ ಜಿಲ್ಲೆಗಳ ಸಚಿವರು ಹಾಗೂ ಶಾಸಕರೊಂದಿಗೆ 2021ರ ಸೆ. 16ರಂದು ಸಭೆ ನಡೆಸಲಾಗಿತ್ತು. ಅದೇ ವರ್ಷ ಡಿ. 1ರಂದು ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮ 1994ಕ್ಕೆ ತಿದ್ದುಪಡಿ ತಂದು ಜಾರಿಗೊಳಿಸಲಾಗಿದೆ. ಇದರಲ್ಲಿ ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿದ (ನಾನ್ ಸಿಆರ್‌ಝಡ್) ಉನ್ನತ ಶ್ರೇಣಿಯ ಹಳ್ಳ/ನದಿ ಪಾತ್ರಗಳ ವ್ಯಾಪ್ತಿಯಲ್ಲಿ ಗುರುತಿಸುವ ಮರಳು ಬ್ಲಾಕ್‌ಗಳನ್ನು ಜಿಲ್ಲೆಯ ಸಾಂಪ್ರದಾಯಿಕ ಮರಳು ತೆಗೆಯುವ ಸಮುದಾಯದವರಿಗೆ ಮಾತ್ರ ಟೆಂಡರ್/ಹರಾಜು ಮೂಲಕ ಗುತ್ತಿಗೆ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಳೆದ ಡಿ. 14ರಂದು ಸರಕಾರದಿಂದ ಮಾರ್ಗಸೂಚಿ ಪ್ರಕಟಿಸಲಾಗಿದೆ.
ನಿರಾಸಕ್ತಿ ಯಾಕೆ ?
ಕರಾವಳಿ ನಿಯಂತ್ರಣ ವಲಯ(ಸಿಆರ್‌ಝಡ್)ದಲ್ಲಿ ಮರಳು ದಿಬ್ಬ ತೆರವಿಗೆ ಸಾಂಪ್ರದಾಯಿಕವಾಗಿ ಮರಳು ತೆಗೆಯುವ ವ್ಯಕ್ತಿ/ಸಮುದಾಯದವರನ್ನು ಗುರುತಿಸುವ ಸಂಬಂಧ 2022ರ ಜ. 11ರಂದು ಏಕರೂಪದ ಮಾರ್ಗಸೂಚಿ ಹೊರಡಿಸಲಾಗಿದೆ. ಇಷ್ಟು ಸರಳಗೊಳಿಸಿರುವುದರಿಂದ ಹೊಸ ನೀತಿ ಅಗತ್ಯವಿಲ್ಲ ಎಂಬುದು ಸರಕಾರದ ಲೆಕ್ಕಾಚಾರ.
ಗಣಿ ಇಲಾಖೆಯ ದ.ಕ. ಉಪ ನಿರ್ದೇಶಕ ಲಿಂಗರಾಜು “ಉದಯವಾಣಿ’ ಜತೆಗೆ ಮಾತನಾಡಿ, “ಈಗಾಗಲೇ ಜಾರಿಗೊಳಿಸಲಾದ ಉಪಖನಿಜ ರಿಯಾಯಿತಿ ನಿಯಮವನ್ನು 2021ರಲ್ಲಿ ತಿದ್ದುಪಡಿಯೊಂದಿಗೆ ಜಾರಿಗೊಳಿಸಲಾಗಿದೆ. ಇದರಂತೆ ಬೇರೆ ಜಿಲ್ಲೆಗಳಲ್ಲಿ ಸರಕಾರದ ಸಂಸ್ಥೆಗಳಿಗೆ ಹರಾಜು/ಟೆಂಡರ್ ಜವಾಬ್ದಾರಿ ಇದ್ದರೆ, ಕರಾವಳಿ ಭಾಗಕ್ಕೆ ಮಾತ್ರ ಜಿಲ್ಲೆಯ ಸಾಂಪ್ರದಾಯಿಕ ಕಾರ್ಮಿಕರೇ ಭಾಗವಹಿಸಲು ತಿದ್ದುಪಡಿ ನಿಯಮದಲ್ಲಿ ಅವಕಾಶ ನೀಡಲಾಗಿದೆ. ಈ ಕಾರಣದಿಂದ ಇದು ಪ್ರತ್ಯೇಕ ನೀತಿಯೇ ಆಗಿರುತ್ತದೆ’ ಎನ್ನುತ್ತಾರೆ.
“ಕರಡು ನೀತಿ’ಯೂ ಸಿದ್ಧ ಎಂದಿದ್ದರು!
“ಕರಾವಳಿಗೆ ಪ್ರತ್ಯೇಕ ಗಣಿ ನೀತಿಯ ಕರಡು ಸಿದ್ಧಗೊಂಡಿದ್ದು, ಜನಪ್ರತಿನಿಧಿಗಳು ಮತ್ತು ಪ್ರಮುಖರ ಜತೆಗೆ ಚರ್ಚಿಸಿ ತಿಂಗಳೊಳಗೆ ಜಾರಿ ಗೊಳಿಸಲು ಕ್ರಮ ಕೈಗೊಳ್ಳ ಲಾಗುವುದು’ ಎಂದು 2021ರಲ್ಲಿ ಗಣಿ ಸಚಿವ ಮುರುಗೇಶ್ ನಿರಾಣಿ ಮಂಗಳೂರಿನಲ್ಲಿ ಹೇಳಿದ್ದರು.
ಕರಾವಳಿಗೆ ಪ್ರತ್ಯೇಕ ಮರಳು ನೀತಿ ಜಾರಿ ಸಂಬಂಧ ನಿಯಮಾವಳಿ ರೂಪಿಸಲು ಬಾಕಿ ಇದೆ. ಸರಕಾರದ ಮಟ್ಟದಲ್ಲಿ ಇದು ಅಂತಿಮವಾಗಬೇಕಿದೆ. ಇಲ್ಲಿಯವರೆಗೆ ಹೊಸ ನೀತಿ ಜಾರಿಗೆ ಬಂದಿಲ್ಲ.
– ರವಿಕುಮಾರ್ ಎಂ.ಆರ್., ದ.ಕ. ಜಿಲ್ಲಾಧಿಕಾರಿ
You seem to have an Ad Blocker on.
To continue reading, please turn it off or whitelist Udayavani.