ವಿಶೇಷ ವರದಿ: “ಸ್ಮಾರ್ಟ್ ಬಸ್ ಶೆಲ್ಟರ್’ ಅವ್ಯವಸ್ಥೆ; ಜನರ ದುಡ್ಡು ಪೋಲು!
ಲಕ್ಷಾಂತರ ರೂ. ವ್ಯಯ, ಅವೈಜ್ಞಾನಿಕ ಕಾಮಗಾರಿ; ಮಳೆ, ಬಿಸಿಲಿನಿಂದ ರಕ್ಷಣೆಯಿಲ್ಲ
Team Udayavani, Aug 13, 2020, 4:24 AM IST
ಪಚ್ಚನಾಡಿ ಬಳಿಯ ಸ್ಮಾರ್ಟ್ ಬಸ್ ಶೆಲ್ಟರ್‌ನ ಸುತ್ತ ಗಿಡ, ಪೊದೆ ಬೆಳೆದಿರುವುದು.
ಮಹಾನಗರ: ಲಕ್ಷಾಂತರ ರೂ. ವ್ಯಯಿಸಿ ಮಂಗಳೂರಿನ ವಿವಿ ಧೆಡೆಗಳಲ್ಲಿ ನಿರ್ಮಾಣವಾಗಿರುವ ಸ್ಮಾರ್ಟ್ ಬಸ್ ಶೆಲ್ಟರ್‌ಗಳು ಇದೀಗ ಉಪಯೋಗ ಶೂನ್ಯವಾಗಿವೆ. ಏಕೆಂದರೆ, ಈ ಹಿಂದೆ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಕಾರಣವಾಗಿದ್ದ ಈ ಸ್ಮಾರ್ಟ್ ಬಸ್ ಶೆಲ್ಟರ್‌ನಲ್ಲಿ ಮಳೆಗಾಲದಲ್ಲಿ ಪ್ರಯಾಣಿಕರಿಗೆ ನಿಲ್ಲುವುದಕ್ಕೂ ಸಾಧ್ಯವಿಲ್ಲ. ಹೀಗಾಗಿ ನೋಡುವುದಕ್ಕೆ ಸುಂದರ ಬಸ್ ನಿಲ್ದಾಣವಾಗಿ ಕಾಣಿಸಿದರೂ ರಸ್ತೆ ಬದಿಯೇ ಬಸ್‌ಗಾಗಿ ಕಾಯುವಂತಾಗಿದೆ!
ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ 12, 15 ಮತ್ತು 25 ಲಕ್ಷ ರೂ. ವ್ಯಯಿಸಿ ನಿರ್ಮಾಣವಾದ ವಿವಿಧ ಶ್ರೇಣಿಗಳ ಬಸ್ ಶೆಲ್ಟರ್‌ಗಳಲ್ಲಿ ಜೋರು ಮಳೆಗೆ ಕೊಡೆ ಹಿಡಿದುಕೊಂಡೇ ನಿಲ್ಲಬೇಕಾದ ಪರಿಸ್ಥಿತಿಯಿದೆ. ಅಲ್ಲದೆ, ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿ ವಿಪರೀತ ಗಾಳಿಯಿರುವ ಕಾರಣ ಈ ಮಾದರಿಯ ಸ್ಮಾರ್ಟ್ ಬಸ್ ಶೆಲ್ಟರ್ ಕೇವಲ ನೆಪ ಮಾತ್ರಕ್ಕೆ ಎಂಬಂತಾಗಿದೆ. ಪ್ರಯಾಣಿಕರು ಶೆಲ್ಟರ್ ಅಡಿಯಲ್ಲಿ ನಿಂತರೂ ಮಳೆಯಿಂದ ಅಥವಾ ಬೇಸಗೆಯಲ್ಲಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಕಷ್ಟವಾಗುತ್ತಿದೆ.
ಕಳೆದ ವರ್ಷ ನಡೆದ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಸ್ಮಾರ್ಟ್‌ಸಿಟಿ ಬಸ್ ಶೆಲ್ಟರ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾದ ಬಸ್ ಶೆಲ್ಟರ್‌ನಲ್ಲಿ ವಿನ್ಯಾಸ ಅವೈಜ್ಞಾನಿಕವಾಗಿದೆ. ಅದರ ವಿಸ್ತೀರ್ಣ 600 ಚದರ ಅಡಿಯಿದೆ ಎಂದು ತಿಳಿಸಲಾಗಿದೆ. ಆದರೆ ಅಷ್ಟೊಂದು ವಿಸ್ತೀರ್ಣ ಕಂಡು ಬರುತ್ತಿಲ್ಲ. ಅದೇರೀತಿ, ನಗರದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ ಕಾಮಗಾರಿಗೆ ಟೆಂಡರ್ ಕರೆಯುವಾಗ ಈ ಬಸ್ ಶೆಲ್ಟರ್‌ನಿಂದ ಕರಾವಳಿಯ ಬಿಸಿಲು ಮತ್ತು ಮಳೆಯಿಂದ ಜನರಿಗೆ ರಕ್ಷಣೆ ನೀಡಲಾಗದು ಎಂದು ವಿಮರ್ಶಿಸಲಾಗಿತ್ತು.
ದುಬಾರಿಯಾದ ಬಸ್ ಶೆಲ್ಟರ್ ನಿರ್ಮಾಣ ಹಣ ಮಾಡುವಂತಹ ಯೋಜನೆಯಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ಷೇಪ ಕೂಡ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಶಶಿಕಾಂತ್ ಸೆಂಥಿಲ್ ಅವರು ಬಸ್ ಶೆಲ್ಟರ್ ನಿರ್ಮಾಣ ಕಾಮಗಾರಿ ತಡೆಗೆ ಆದೇಶಿಸಿದ್ದರು. ಮಾದರಿಯಾದ ಮೂರು ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಿ ಅದರ ಸಾಧಕ ಬಾಧಕಗಳನ್ನು ಪರಿಶೀಲಿಸಿ ಮುಂದುವರಿಯುವಂತೆ ಸೂಚಿಸಿದ್ದರು.
ಅದೇ ರೀತಿ ಸದ್ಯ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಯಾವುದೇ ನೂತನ ಬಸ್ ಶೆಲ್ಟರ್ ನಿರ್ಮಾಣವಾಗುತ್ತಿಲ್ಲ. ಆದರೆ ಸಿದ್ಧಗೊಂಡಿರುವ ಬಸ್ ಶೆಲ್ಟರ್‌ನ ಸ್ಥಿತಿ ಹೇಳತೀರದು. ನಂತೂರಿನ ಒಂದೇ ಕಡೆಯ ಕಾಲಳತೆ ದೂರದಲ್ಲಿ ಬರೋಬ್ಬರಿ ಮೂರು ಬಸ್ ನಿಲ್ದಾಣಗಳಿವೆ. ಮಹಾನಗರ ಪಾಲಿಕೆ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಬಸ್ ನಿಲ್ದಾಣ ಈ ಹಿಂದೆಯೇ ಇತ್ತು. ಕಳೆದ ಕೆಲವು ವರ್ಷಗಳ ಹಿಂದೆ ಸ್ಮಾರ್ಟ್‌ಸಿಟಿ ಬಸ್ ನಿಲ್ದಾಣ ಕೂಡ ನಿರ್ಮಾಣವಾಗಿತ್ತು. ಸಾರ್ವಜನಿಕರು ಯಾರೂ ಇದನ್ನು ಉಪಯೋಗಿಸುತ್ತಿಲ್ಲ. ಅದರ ಪಕ್ಕದಲ್ಲಿ ಗುಜರಿ ವಸ್ತುಗಳನ್ನು ರಾಶಿ ಹಾಕಲಾಗಿದೆ. ಇನ್ನು, ಇಲ್ಲೇ ಪಕ್ಕದಲ್ಲಿ ವಾಹನಗಳನ್ನು ಪಾರ್ಕ್ ಮಾಡಲಾಗಿದೆ. ಉಳಿದಂತೆ ಬಹುತೇಕ ಬಸ್ ನಿಲ್ದಾಣಗಳು ಮಳೆಗಾಲಕ್ಕೆ ಪೂರಕವಾಗಿಲ್ಲ.
ಹಾವು ಬಂದರೂ ಅಚ್ಚರಿ ಇಲ್ಲ
ನಗರದ ಪಚ್ಚನಾಡಿ ಸ್ಮಾರ್ಟ್ ಬಸ್ ಶೆಲ್ಟರ್ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಬಸ್ ನಿಲ್ದಾಣದ ಅವ್ಯವಸ್ಥೆ ನೋಡಿದರೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಪ್ರಯಾಣಿಕರು ಈ ಬಸ್ ನಿಲ್ದಾಣದಲ್ಲಿ ನಿಲ್ಲಲು ಹಿಂಜರಿಯುತ್ತಿದ್ದಾರೆ. ಏಕೆಂದರೆ, ಬಸ್ ನಿಲ್ದಾಣದ ಸುತ್ತಮುತ್ತಲೂ ಗಿಡ, ಬಳ್ಳಿ, ಪೊದೆ ಬೆಳೆದಿದ್ದು, ಸಂಜೆಯಾದರೆ ಬಸ್ ನಿಲ್ದಾಣಕ್ಕೆ ಹಾವು ಬಂದರೂ ಅಚ್ಚರಿಯಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಹೊಸದಾಗಿ ನಿರ್ಮಾಣವಾಗುತ್ತಿಲ್ಲ
ಸ್ಮಾರ್ಟ್‌ಸಿಟಿ ಯೋಜನೆಯ ಮೂಲಕ ಮಂಗಳೂರಿನ ಒಟ್ಟು 42 ಕಡೆಗಳಲ್ಲಿ ಬಸ್ ಶೆಲ್ಟರ್ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಆಕ್ಷೇಪ ಬಂದ ಕಾರಣ ಸದ್ಯ ನಗರದ 20 ಕಡೆಗಳಲ್ಲಿ ಬಸ್ ಶೆಲ್ಟರ್ ನಿರ್ಮಿಸಲಾಗಿದೆ. ಮೂರು ಕಡೆಗಳಲ್ಲಿ 21 ಲಕ್ಷ ರೂ. ವೆಚ್ಚದ ಬಸ್ ಶೆಲ್ಟರ್ ನಿರ್ಮಿಸಲಾಗಿದ್ದು, ಅಲ್ಲಿ ಇ-ಟಾಯ್ಲೆಟ್ ಕೂಡ ಇದೆ. ಉಳಿದಂತೆ ಹೊಸದಾಗಿ ಯಾವುದೇ ಬಸ್ ಶೆಲ್ಟರ್ ನಿರ್ಮಾಣವಾಗುತ್ತಿಲ್ಲ.
- ಮೊಹಮ್ಮದ್ ನಜೀರ್, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ
ವರದಿ ತರಿಸಿಕೊಂಡು ಕ್ರಮ
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಿಸಲಾಗಿರುವ ಸ್ಮಾರ್ಟ್ ಬಸ್ ಶೆಲ್ಟರ್ ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಪ್ರಸ್ತುತ ಬಸ್ ಶೆಲ್ಟರ್ ಯಾವ ಹಂತದಲ್ಲಿದೆ ಎಂಬ ಬಗ್ಗೆ ಸ್ಮಾರ್ಟ್ ಸಿಟಿ ನಿರ್ದೇಶಕರು, ಪಾಲಿಕೆ ಆಯುಕ್ತರಿಂದ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು.
- ಡಾ| ಕೆ.ವಿ. ರಾಜೇಂದ್ರ, ದ.ಕ. ಜಿಲ್ಲಾಧಿಕಾರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.