ರಾ.ಹೆ.169ರಲ್ಲಿ ಕಾಮಗಾರಿ ಬಾಕಿ; “ಜಲಸಿರಿ’ ಗಡುವು ಒಂದೂವರೆ ವರ್ಷ ವಿಸ್ತರಣೆ?
Team Udayavani, Jul 17, 2024, 3:12 PM IST
ಮಹಾನಗರ: ಮಂಗಳೂರು ನಗರಕ್ಕೆ 24×7 ನೀರು ಪೂರೈಕೆ ಮಾಡುವ ಮಹತ್ವಾಕಾಂಕ್ಷೆಯ “ಜಲಸಿರಿ ಯೋಜನೆ’ ನಿರೀಕ್ಷಿತ ಅವಧಿಯಲ್ಲಿ ಪೂರ್ಣಗೊಳ್ಳದೇ ಇರುವುದರಿಂದ ಇದೀಗ “ಗಡುವು’ ಮತ್ತೆ ಒಂದೂವರೆ ವರ್ಷ ವಿಸ್ತರಣೆಯಾಗಲಿದೆ.
ಎರಡನೇ ಹಂತದ ಎಡಿಬಿ (ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್) ನೆರವಿನ ಯೋಜನೆಯಾಗಿದ್ದು, ಸುಮಾರು 792 ಕೋ.ರೂ. ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್‌ಸಿ) ವತಿಯಿಂದ ಕರ್ನಾಟಕ ಸಮಗ್ರ ಮತ್ತು ಸುಸ್ಥಿರ ಜಲಸಂಪನ್ಮೂಲ ನಿರ್ವಹಣ ಯೋಜನೆ (ಕ್ವಿಮಿಪ್) ಯೋಜನೆಯಡಿ 2019ರಲ್ಲಿ ಚಾಲನೆ ನೀಡಲಾಗಿತ್ತು. 2023ರ ಮೇ ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತಾದರೂ ಕಾಮಗಾರಿ ನಿಧಾನ ಗತಿಯಲ್ಲಿ ಸಾಗಿದ ಕಾರಣ, ಗಡುವನ್ನು 2024ರ ಮೇ ವರೆಗೆ ವಿಸ್ತರಣೆ
ಮಾಡಲಾಗಿತ್ತು.
ಆದರೆ ವಿಸ್ತರಿತ ಅವಧಿಯಲ್ಲೂ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗದೆ ಯೋಜನೆಯ ಗುತ್ತಿಗೆ ಪಡೆದಿರುವ ಸುಯೇಝ್ ಪ್ರಾಜೆಕ್ಟ್ ಸಂಸ್ಥೆ 2025ರ ಡಿಸೆಂಬರ್ ವರೆಗೆ ಕಾಲಾವಕಾಶ ನೀಡುವಂತೆ ಕೆಯುಐಡಿಎಫ್‌ಸಿಗೆ ಪ್ರಸ್ತಾವನೆ ಸಲ್ಲಿಸಿದೆ. ಕೆಯುಐಡಿಎಫ್‌ಸಿ ಈ ಪ್ರಸ್ತಾವನೆಯನ್ನು ಕೇಂದ್ರ ಕಚೇರಿಗೆ ಕಳುಹಿಸಿದ್ದು ಅಲ್ಲಿಂದ ಒಪ್ಪಿಗೆ ಸಿಗುವ ಬಹುತೇಕ ಸಾಧ್ಯೆಯಿದೆ.
ಕಾಮಗಾರಿ ಶೇ.63ರಷ್ಟು ಪ್ರಗತಿ ಜಲಸಿರಿ ಯೋಜನೆಯ ಅನುಷ್ಠಾನದಲ್ಲಿ ಪ್ರಸ್ತುತ ಶೇ.63ರಷ್ಟು ಮಾತ್ರ ಪ್ರಗತಿಯಾಗಿದೆ.
ಪಾಲಿಕೆಯ ವಾರ್ಡ್‌ಗಳನ್ನು ಒಟ್ಟು 54 ಝೋನ್‌ಗಳಾಗಿ ವಿಂಗಡಿಸಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಶೇ.90ರಷ್ಟು ಪೈಪ್
ಲೈನ್ ಅಳವಡಿಕೆಯಾಗಿರುವಲ್ಲಿ ಡಿಜಿಟಲ್ ಮೀಟರ್ ಕನೆಕ್ಷನ್ ಸೇರಿದಂತೆ ಇತರ ಕೆಲಸಗಳನ್ನು ಮಾಡಲಾಗುತ್ತಿದೆ. ಬೆಂದೂ
ರುವೆಲ್ ವಾರ್ಡ್ 18 ಸಿ- ಝೋನ್‌ನಲ್ಲಿ ಶೇ.100ರಷ್ಟು ಮೀಟರಿಂಗ್ ಆಗಿದೆ.
ಸುರತ್ಕಲ್‌ನ ಝೋನ್ 25, 25ಎ, 26ಗಳಲ್ಲಿ ಟೆಸ್ಟಿಂಗ್ ಆಗುತ್ತಿದೆ. ಈ ಭಾಗದಲ್ಲಿ ಶೇ. 95ರಷ್ಟು ಮೀಟರಿಂಗ್ ಆಗಿದೆ. ಪೂರೈಕೆ
ಜಾಲ, ಲಿಂಕಿಂಗ್ ಕೆಲಸಗಳು ನಡೆದಿವೆ. ಅಕ್ಟೋಬರ್ ಒಳಗೆ 15 ವಲಯದಲ್ಲಿ ಶೇ.100ರಷ್ಟು ಕೆಲಸ ಮುಗಿಸಲು ಉದ್ದೇಶಿಸಲಾಗಿದೆ. ಎಲ್ಲ ಮೇಲ್ಮಟ್ಟದ ನೀರು ಸಂಗ್ರಹಾಗಾರ (ಓವರ್ ಹೆಡ್ ಟ್ಯಾಂಕ್‌ಗಳನ್ನು ಡಿಸೆಂಬರ್ ಅಂತ್ಯದೊ ಳಗೆ ಪೂರ್ಣಗೊಳಿಸಲಾಗುವುದು. ವಿತರಣಾ ಜಾಲವನ್ನೂ ಶೇ.80ರಷ್ಟು ಪೂರ್ಣಗೊಳಿಸ ಲಾಗುವುದು ಎನ್ನುವುದು ಅಧಿಕಾರಿಗಳ ಮಾತು.
ನೀರು ಶುದ್ಧೀಕರಣ ಘಟಕಕ್ಕೆ ಬೇಕು ಕಾಲಾವಕಾಶ
ಅಡ್ಯಾರ್ – ಹರೇಕಳ ಅಣೆಕಟ್ಟಿನಿಂದ ನಗರಕ್ಕೆ ಕುಡಿಯುವ ನೀರು ಪಡೆಯುವ ನಿಟ್ಟಿನಲ್ಲಿ ಅಡ್ಯಾರ್‌ನಲ್ಲಿ 128 ಕೋ.ರೂ.
ವೆಚ್ಚದ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗುತ್ತಿದ್ದು, ಇದು ಯೋಜನೆಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ
ಕಾಮಗಾರಿ. ಜನವರಿಯಲ್ಲಿ ಇದರ ಕೆಲಸ ಆರಂಭವಾಗಿದ್ದು, ಯೋಜನಾ ಅವಧಿ 18 ತಿಂಗಳು. ಇದರಿಂದಾಗಿ ಹೆಚ್ಚುವರಿ
ಕಾಲಾವಕಾಶ ಕೇಳಬೇಕಾದ ಅನಿವಾರ್ಯತೆ ಉಂಟಾಗಿದೆ. ಸಂಸ್ಥೆ ಡಿಸೆಂಬರ್ ವರೆಗೆ ಕಾಲಾವಧಿ ಕೇಳಿದ್ದರೂ, ಮುಂದಿನ
ಜೂನ್ ಒಳಗೆ ಪೂರ್ಣಗೊಳಿಸುವಂತೆ ಕೆಯುಐಡಿಎಫ್‌ಸಿ ಸೂಚಿಸಿದೆ.
ಯೋಜನೆ ಬಗ್ಗೆ ತೀವ್ರ ಆಕ್ರೋಶ
ನಿಧಾನಗತಿಯಲ್ಲಿ ಸಾಗುತ್ತಿರುವ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರು, ಮನಪಾ ಸದಸ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಯೋಜನೆಯ ಅಸಮರ್ಪಕ ಅನುಷ್ಠಾನದ ಕುರಿತು ಮನಪಾ ಪ್ರತಿ ಸಮಾನ್ಯ ಸಭೆಯಲ್ಲಿಯೂ ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲಲ್ಲಿ ರಸ್ತೆ ಅಗೆದು ಹಾಕಿ ದುರಸ್ತಿ ಮಾಡದಿರುವ ಬಗ್ಗೆ ಸಾರ್ವಜನಿಕರೂ ಆಕ್ರೋಶಿತರಾಗಿದ್ದಾರೆ.
ನಗರಕ್ಕೆ 24×7ನೀರು ಪೂರೈಕೆ ಮಾಡುವ ಉದ್ದೇಶದಿಂದ ಅನುಷ್ಠಾನಗೊಳಿಸಲಾಗುತ್ತಿರುವ ಜಲಸಿರಿ ಯೋಜನೆಯ ಕಾಮಗಾರಿ ನಿಧಾನವಾಗಿ ಸಾಗುತ್ತಿದೆ. ಈ ಕಾರಣಕ್ಕಾಗಿ ಕಾಮಗಾರಿಯ ಗಡುವನ್ನು ಡಿಸೆಂಬರ್ 2025ರ ವರೆಗೆ ವಿಸ್ತರಿಸುವಂತೆ ಅನುಷ್ಠಾನಗೊಳಿಸುವಂತೆ ಸಂಸ್ಥೆ ಕೇಳಿಕೊಂಡಿದೆ. ಈಗಾಗಲೇ ಹಲವು ಸಭೆಗಳನ್ನು ನಡೆಸಿ ಕಾಮಗಾರಿಯ ಪ್ರಗತಿ
ಪರಿಶೀಲನೆ ನಡೆಸಲಾಗಿದ್ದು, ಶೀಘ್ರ ಇನ್ನೊಂದು ಸಭೆ ನಡೆಸಿ ಯೋಜನೆಗೆ ಸಂಬಂಧಿಸಿ ಮಾಹಿತಿ ಪಡೆಯಲಾಗುವುದು.
*ಸುಧೀರ್ ಶೆಟ್ಟಿ ಕಣ್ಣೂರು,
ಮನಪಾ ಮೇಯರ್
ರಾ.ಹೆ.169ರಲ್ಲಿಯೂ ಕಾಮಗಾರಿ ಬಾಕಿ
ರಾಷ್ಟ್ರೀಯ ಹೆದ್ದಾರಿ 169ರ ಅಗಲೀಕರಣ ಕಾಮಗಾರಿಯಲ್ಲಿ ಬಿಕರ್ನಕಟ್ಟೆಯಿಂದ ಬೈತುರ್ಲಿ ವರೆಗಿನ ಕಾಮಗಾರಿಗೆ ಸಂಬಂಧಿಸಿ ಭೂ ಮಾಲಕರು ನ್ಯಾಯಾಲಯದ ಮೊರೆ ಹೋಗಿದ್ದು, ಭೂ ಸ್ವಾಧೀನ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕು. ಹೆದ್ದಾರಿಯಲ್ಲಿ ಸುಮಾರು 6 ಕಿ.ಮೀ.ನಷ್ಟು ಪೈಪ್‌ಲೈನ್ ಕಾಮಗಾರಿ ನಡೆಸಬೇಕಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಆದ ಬಳಿಕ ಅನುಮತಿ ಸಿಗುವ ಸಾಧ್ಯತೆಯಿದೆ.
*ಭರತ್ ಶೆಟ್ಟಿಗಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.