ವೈದ್ಯಕೀಯ ಶಿಕಣ ಪಡೆದವರೇ ಡ್ರಗ್ಸ್ ಗೆ ಬಲಿ: ಸಿವಿಲ್ ನ್ಯಾಯಾಧೀಶೆ ಶೋಭಾ
Team Udayavani, Jun 27, 2024, 2:10 PM IST
ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಮಂಗಳೂರು ಭಾಗದ ಶಾಲೆ, ಕಾಲೇಜುಗಳಲ್ಲಿ ಹದಿಹರೆಯದ ಮಕ್ಕಳು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದು ಬಹಳ ಕಳವಳಕಾರಿ ವಿಚಾರವಾಗಿದೆ. ವಿಶೇಷವಾಗಿ ವೈದ್ಯಕೀಯ ಶಿಕ್ಷಣ ಪಡೆದ ವಿದ್ಯಾರ್ಥಿಗಳೇ ಇಂತಹ ದುಶ್ಚಟಕ್ಕೆ ಗುರಿಯಾಗಿ ಜೈಲು ಸೇರುತ್ತಿರುವುದು ಬಹಳ ಬೇಸರ ತರಿಸುತ್ತದೆ ಎಂದು ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಶೋಭಾ ಬಿ.ಜಿ ಹೇಳಿದರು.
ದ.ಕ. ಜಿ.ಪಂ. ನೇತ್ರಾವತಿ ಸಭಾಗಣದಲ್ಲಿ ಬುಧವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಹಿಳಾ ಮತ್ತು ಪುನರ್‌ವಸತಿ ಕೇಂದ್ರ ಬಜಾಲ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ತಂದೆ ತಾಯಿಗಿಂತ ಹೆಚ್ಚಾಗಿ ಮಾದಕ ವ್ಯಸನಿಗಳ ತಡೆಗಟ್ಟುವಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದಾಗಿದೆ. ಶಾಲೆ/ಕಾಲೇಜುಗಳ
ವಿದ್ಯಾರ್ಥಿಗಳ ಚಲನವಲನಗಳಲ್ಲಿ ಬದಲಾವಣೆಯನ್ನು ಶಿಕ್ಷಕರು ಸುಲಭವಾಗಿ ಗುರುತಿಸುತ್ತಾರೆ. ಈ ಮೂಲಕ ಶಿಕ್ಷಕರ ಪಾತ್ರ
ಈ ವಿಚಾರದಲ್ಲಿ ಮುಖ್ಯವಾಗಿದೆ ಎಂದರು.
ಸ್ವಯಂ ನಿಗ್ರಹ ಜಾಗೃತಿ ಅಗತ್ಯ ಜಿಲ್ಲಾ ವೈದ್ಯಕೀಯ ಅಧೀಕ್ಷಕಿ ಡಾ| ಜೆಸಿಂತಾ ಡಿ’ಸೋಜಾ ಮಾತನಾಡಿ, ಸಾರ್ವಜನಿಕರಲ್ಲಿ ಮಾದಕ ವ್ಯಸನದ ಕುರಿತು ಜಾಗೃತಿ ಮೂಡಿಸುವ ಜತೆಗೆ ಯಾರು ವ್ಯಸನಿಗಳಿದ್ದಾರೋ ಅವರಲ್ಲಿ ಸ್ವಯಂ ನಿಗ್ರಹ ಜತೆಗೆ ಜಾಗೃತಿಯ ಮನೋಭಾವ ಬೆಳೆದುಬರಬೇಕು. ಇದಕ್ಕೆ ಬಲಿಯಾದರೆ ಬರೀ ಒಬ್ಬ ಮಾತ್ರವಲ್ಲ ಆತನ ಕುಟುಂಬ, ಸಮಾಜ ಎಲ್ಲಕ್ಕೂ ಸಮಸ್ಯೆಯಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಮಹಿಳಾ ಮತ್ತು ಪುನರ್‌ವಸತಿ ಕೇಂದ್ರ ಬಜಾಲ್ ಮಂಗಳೂರು ಇದರ ಆಡಳಿತಾಧಿಕಾರಿ ಲಿಡಿಯಾ ಲೋಬೋ ಮಾತನಾಡಿ, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಿಗಳಾಗುತ್ತಿದ್ದಾರೆ. 15ರಿಂದ 30 ವರ್ಷ ಅಥವಾ ಕೆಲವೊಂದು ಬಾರಿ
ಅದಕ್ಕಿಂತ ಕೆಳಗಿನ ವಯಸ್ಸಿನವರು ಇಂತಹ ದುಶ್ಚಟಕ್ಕೆ ಗುರಿಯಾಗುತ್ತಿದ್ದಾರೆ ಎಂದರು. ಡಯಟ್‌ನ ಅಧಿಕಾರಿ ಅಲ್ವಿನ್ ಅಂದ್ರಾದೆ ಮಾತನಾಡಿದರು.
ನಿಯಂತ್ರಣಕ್ಕೆ ಸಹಕರಿಸಿ
ಎಸಿಪಿ ದಿನೇಶ್ ಕುಮಾರ್ ಅಧ್ಯಕ್ಷತೆ ವಹಿಸಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿ, ಮಾದಕ ವ್ಯಸನ ಹಾಗೂ ಅಕ್ರಮ ಕಳ್ಳಸಾಗಾಣಿಕೆಯ ನಿಯಂತ್ರಣದಲ್ಲಿ ಬರೀ ಪೊಲೀಸ್ ಇಲಾಖೆ ಮಾತ್ರವಲ್ಲ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಇಲಾಖೆಯ ಜತೆಯಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.