Mangaluru: ಟ್ರಾಫಿಕ್ ಸಮಸ್ಯೆ: ಶಾಲಾ ಸಮಯ ವ್ಯತ್ಯಾಸ ಸೂತ್ರ ಮತ್ತೆ ಚರ್ಚೆಗೆ
ಶಾಲೆ ಆರಂಭ, ಮುಕ್ತಾಯದ ವೇಳೆ ವಿಪರೀತ ವಾಹನ ದಟ್ಟಣೆ, ಸಂಚಾರ ಸ್ತಬ್ಧ | ಪೊಲೀಸರ ಸಲಹೆಗೆ ಸಿಗದ ಸ್ಪಂದನೆ
Team Udayavani, Sep 25, 2024, 4:37 PM IST
ಮಹಾನಗರ: ಮಂಗಳೂರು ನಗರದಲ್ಲಿ ಶಾಲಾ ಕಾಲೇಜುಗಳ ಆರಂಭ ಮತ್ತು ಮುಕ್ತಾಯದ ವೇಳೆ ಉಂಟಾಗುತ್ತಿರುವ ಟ್ರಾಫಿಕ್ ಜಾಮ್‌ಗೆ ‘ಶಾಲಾ ಕಾಲೇಜುಗಳ ಸಮಯ ವ್ಯತ್ಯಾಸ’ ಪರಿಕಲ್ಪನೆ ಪರಿಹಾರವಾಗಬಲ್ಲುದು ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿಂದೆಯೂ ಇದರ ಬಗ್ಗೆ ಚರ್ಚೆ ನಡೆದು ಪೊಲೀಸ್ ಇಲಾಖೆ ಕೆಲವೊಂದು ಸೂಚನೆಗಳನ್ನು ನೀಡಿದ್ದರೂ ಶಿಕ್ಷಣ ಸಂಸ್ಥೆಗಳು ಆಸಕ್ತಿ ತೋರಿಸಿರಲಿಲ್ಲ.
ಬೆಳಗ್ಗೆ ತರಗತಿಗಳು ಆರಂಭವಾಗುವ ಮತ್ತು ಸಂಜೆ ಮುಕ್ತಾಯದ ವೇಳೆ ಶಾಲಾ ಕಾಲೇಜುಗಳಿಗೆ ಹೊಂದಿಕೊಂಡಿರುವ ರಸ್ತೆ, ಜಂಕ್ಷನ್‌ಗಳಲ್ಲಿ ಭಾರೀ ವಾಹನ ದಟ್ಟಣೆ ಉಂಟಾಗುತ್ತಿದೆ. ಏಕಕಾಲದಲ್ಲಿ ಸಾವಿರಾರು ಮಂದಿ ವಿದ್ಯಾರ್ಥಿಗಳು ರಸ್ತೆಗಿಳಿಯುವುದೇ ಇದಕ್ಕೆ ಮುಖ್ಯ ಕಾರಣ ಎಂಬುದಾಗಿ ಸಂಚಾರಿ ಪೊಲೀಸರು ಕಂಡುಕೊಂಡಿದ್ದು ಇದಕ್ಕೆ ಪರಿಹಾರವಾಗಿ ‘ಸಮಯ ವ್ಯತ್ಯಾಸದ ಸೂತ್ರ’ವನ್ನು ಶಾಲಾಡಳಿತ ಮಂಡಳಿಗಳ ಮುಂದಿಟ್ಟಿದ್ದಾರೆ.
ನಗರದ ಕೆಲವೆಡೆ ಹಲವಾರು ಶಾಲಾ ಕಾಲೇಜುಗಳು ಒಂದೇ ಪ್ರದೇಶದಲ್ಲಿ ಕೇಂದ್ರೀಕೃತವಾಗಿವೆ. ಇವುಗಳಲ್ಲಿ ಹೆಚ್ಚಿನವು ಶಾಲಾ ಬಸ್‌ಗಳನ್ನು ಹೊಂದಿವೆ. ಸಾಮಾನ್ಯ ಬಸ್ ಮತ್ತು ಸ್ಕೂಲ್ ಬಸ್‌ಗಳು ಏಕಕಾಲದಲ್ಲಿ ಕಾರ್ಯಾಚರಣೆ ನಡೆಸುವುದರಿಂದ ದಟ್ಟಣೆ ಹೆಚ್ಚಾಗುತ್ತದೆ. ಏಕಕಾಲದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಶಾಲೆ-ಕಾಲೇಜು ಬಿಡುವುದರಿಂದ ಸಾರಿಗೆ ಬಸ್‌ಗಳಲ್ಲೂ ಒತ್ತಡ ಜೋರಾಗುತ್ತದೆ. ಸಮಯದ ಬದಲಾವಣೆ ಈ ಸಮಸ್ಯೆಗೆ ಶೇ.50ರಷ್ಟು ಪರಿಹಾರ ಒದಗಿಸಬಹುದು ಎಂಬುದು ನಗರದ ಸಂಚಾರ ಪೊಲೀಸರ ಲೆಕ್ಕಾಚಾರ.
ಒಂದೇ ಪ್ರದೇಶದಲ್ಲಿರುವ ಎರಡು ಶಿಕ್ಷಣ ಸಂಸ್ಥೆಗಳು ಸಮಯದಲ್ಲಿ ಒಂದು ಸಣ್ಣ ಬದಲಾವಣೆ ಮಾಡಿಕೊಂಡರೂ ದೊಡ್ಡ ಸಮಸ್ಯೆ ಪರಿಹಾರವಾಗುತ್ತದೆ. ಅಥವಾ ಒಂದೇ ಶಾಲೆ, ಕಾಲೇಜಿನ ಬೇರೆ ಬೇರೆ ವಿಭಾಗ (ಉದಾ: ಪ್ರಾಥಮಿಕ, ಪ್ರೌಢ, ಕಾಲೇಜು)ಗಳಿದ್ದರೆ ಅವುಗಳಿಗೆ ಪ್ರತ್ಯೇಕ ಸಮಯ ನಿಗದಿ ಮಾಡಬಹುದು ಎನ್ನುವುದು ಪೊಲೀಸರ ಸಲಹೆ.
ಶನಿವಾರದ ಟ್ರಾಫಿಕ್ ಸಂತೆ !
ಇತರ ದಿನಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಟ್ರಾಫಿಕ್ ಜಾಮ್ ಇದ್ದರೆ, ಪ್ರತಿ ಶನಿವಾರ ಮಧ್ಯಾಹ್ನ ನಗರದ ಬಹುತೇಕ ಎಲ್ಲ ಕಡೆ ಟ್ರಾಫಿಕ್ ಜಾಮ್. ಏಕಕಾಲದಲ್ಲಿ ಮಕ್ಕಳು ಹೊರಗೆ ಬರುವುದರಿಂದ ಶನಿವಾರ ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಶಾಲಾ ಕಾಲೇಜುಗಳ ಪಕ್ಕದ ರಸ್ತೆಗಳಲ್ಲಿ ವಾಹನ ಸಂಚಾರ ಸ್ತಬ್ಧವಾಗುತ್ತದೆ.
ಪರಿಹಾರ ಹೇಗೆ?
- ಒಂದೇ ಪರಿಸರದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳಿದ್ದರೆ ಅಂತಹ ಶಿಕ್ಷಣ ಸಂಸ್ಥೆಗಳ ಆರಂಭ/ಮುಕ್ತಾಯದ ಅವಧಿಯಲ್ಲಿ ವ್ಯತ್ಯಾಸ ಮಾಡಬೇಕು.
- ಒಂದೇ ಶಿಕ್ಷಣ ಸಂಸ್ಥೆಯಲ್ಲಿ ಹಲವು ವಿಭಾಗಗಳಿದ್ದರೆ (ಶಾಲೆ, ಕಾಲೇಜು, ಸ್ನಾತಕೋತ್ತರ ಇತ್ಯಾದಿ) ಒಂದೊಂದು ವಿಭಾಗಗಳ ಆರಂಭ/ಮುಕ್ತಾಯದ ಅವಧಿ ಬದಲಾಯಿಸಬೇಕು.
- ಶಾಲೆ/ ಕಾಲೇಜು ಆರಂಭ ಅಥವಾ ಮುಕ್ತಾಯದ ಅವಧಿಯ ಬಗ್ಗೆ ಜಿಲ್ಲಾಧಿಕಾರಿಯವರು ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಬಹುದು.
- ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ಒಂದಾಗಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಬಹುದು.
ಜಿಲ್ಲಾಧಿಕಾರಿ ಆದೇಶ ಹೊರಡಿಸಲಿ
ತರಗತಿಗಳ ಆರಂಭ, ಅಂತ್ಯದ ಅವಧಿಯನ್ನು 10-15 ನಿಮಿಷಗಳಷ್ಟು ವ್ಯತ್ಯಾಸ ಮಾಡಿದರೂ ‘ಪೀಕ್ ಅವರ್’ನ ಸಂಚಾರ ದಟ್ಟಣೆ ಸಾಕಷ್ಟು ಮಟ್ಟಿಗೆ ಕಡಿಮೆಯಾಗಬಹುದು. ಇದರಿಂದ ಸುಗಮ, ಸುರಕ್ಷಿತ ಸಂಚಾರವೂ ಸಾಧ್ಯ. ಇದಕ್ಕೆ ಶಿಕ್ಷಣ ಸಂಸ್ಥೆಗಳು ಇಚ್ಛಾಶಕ್ತಿ ತೋರಿಸಬೇಕು. ಪೊಲೀಸರು ಸೂಚನೆ ನೀಡಿದ್ದರೂ ಪ್ರಯೋಜನವಾಗಿಲ್ಲ. ಡಿಸಿಯವರು ಆದೇಶ ಹೊರಡಿಸುವುದು ಸೂಕ್ತ.
-ಜಿ.ಕೆ. ಭಟ್ ಸದಸ್ಯರು, ರಸ್ತೆ ಸುರಕ್ಷ ಸಮಿತಿ, ಮಂಗಳೂರು
ಸೂಚನೆ ಪಾಲನೆಯಾಗಲಿ
ಏಕಕಾಲದಲ್ಲಿ ಶಾಲೆಗಳ ಆರಂಭ, ಮುಕ್ತಾಯ ಮಾಡದೆ ಸಮಯದಲ್ಲಿ ವ್ಯತ್ಯಾಸ ಮಾಡಬೇಕು ಎಂಬುದಾಗಿ ಈಗಾಗಲೇ ಶಾಲಾಡಳಿತ ಮಂಡಳಿಯವರಿಗೆ ಸೂಚನೆ ನೀಡಿದ್ದೇವೆ. ಆದರೆ ಅದು ಪಾಲನೆಯಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಮಟ್ಟದಲ್ಲೇ ಚರ್ಚೆಯಾಗಿ ಆದೇಶ ಜಾರಿಗೆ ಬಂದರೆ ಪ್ರಯೋಜನವಾದೀತು.
-ದಿನೇಶ್ ಕುಮಾರ್ ಬಿ.ಪಿ. ಡಿಸಿಪಿ ಸಂಚಾರ ಮತ್ತು ಅಪರಾಧ ವಿಭಾಗ ಮಂಗಳೂರು
– ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.