Ullal: ಕಾಸರಗೋಡಿನಿಂದ ಮುಡಿಪಿಗೆ ನೇರವಾಗಿ ಕೇರಳ ಬಸ್
ಸೀತಾಂಗೋಳಿಯಿಂದ ಒಳರಸ್ತೆಗಳ ಮೂಲಕ ಸಂಪರ್ಕ; ಗಡಿ ಭಾಗದವರಿಗೆ ಅನುಕೂಲ; ನಾಳೆ ಆರಂಭ
Team Udayavani, Dec 5, 2024, 3:12 PM IST
ಉಳ್ಳಾಲ: ಕೇರಳದ ಕಾಸರಗೋಡು ಮತ್ತು ಉಳ್ಳಾಲ ತಾಲೂಕಿನ ಮುಡಿಪು ನಡುವೆ ಡಿಸೆಂಬರ್ 6ರಿಂದ ಕೇರಳ ಮೂಲದ ಎರಡು ಖಾಸಗಿ ಬಸ್‌ಗಳು ಸಂಚಾರ ಆರಂಭಿಸಲಿವೆ. ಇವು ಕೇರಳ-ಕರ್ನಾಟಕ ಗಡಿಭಾಗವಾಗಿರುವ ಉಳ್ಳಾಲ ತಾಲೂಕಿನ ಕೈರಂಗಳ ಗ್ರಾಮದ ನಂದರಪಡ್ಪು ಮೂಲಕ ಮುಡಿಪಿಗೆ ಬರಲಿದ್ದು, ಎರಡು ರಾಜ್ಯಗಳ ಪ್ರಮುಖ ಸ್ಥಳಗಳಿಗೆ ಕೊಂಡಿಯಾಗಲಿವೆ. ಈ ರಸ್ತೆಯಲ್ಲಿ ಸರಕಾರಿ ಬಸ್‌ಗಳ ಅಂತಾರಾಜ್ಯ ಓಡಾಟಕ್ಕೆ ಭಾರಿ ಬೇಡಿಕೆ ಇತ್ತು. ಆದರೆ ಅದು ಈಡೇರಿರಲಿಲ್ಲ. ಈಗ ಖಾಸಗಿ ಬಸ್‌ಗಳ ಸಂಚಾರಕ್ಕೆ ಅನುಮತಿ ದೊರೆತಿದೆ.
ಕೈರಂಗಳ ಗ್ರಾಮದ ನಂದರಪಡು³ವಿನಿಂದ ಕೇರಳದ ತಿರುವನಂತಪುರ ಜಿಲ್ಲೆಯ ಪರಸ್ಸಾಲದ ವರೆಗೆ ನಿರ್ಮಾಣಗೊಳ್ಳುತ್ತಿರುವ ಕೇರಳದ ಅತ್ಯಂತ ಮಹತ್ವದ ಯೋಜನೆ ‘ಮಲೆನಾಡು ಹೆದ್ದಾರಿ-ದ್ವಿಪಥ ರಸ್ತೆಯಿಂದಾಗಿ ಇದು ಸಾಧ್ಯವಾಗಲಿದೆ. ಈ ರಸ್ತೆಯು ಪ್ರಸ್ತುತ ಕೇರಳ – ಕರ್ನಾಟಕ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಪರ್ಯಾಯವಾಗಿ ಒಳ ಮಾರ್ಗಗಳಲ್ಲಿ ಸಂಚರಿಸಲಿದೆ. ನಂದರಪಡ್ಪು – ಕಾಸರಗೋಡುವರೆಗಿನ ಮೊದಲ ಹಂತದ ಕಾಮಗಾರಿ ನಡೆದು ಎರಡು ವರುಷದ ಬಳಿಕ ಪ್ರಥಮ ಬಾರಿಗೆ ಬಸ್ ಸಂಚಾರ ಆರಂಭವಾಗುತ್ತಿದೆ.
ಹಲವಾರು ಮಂದಿಗೆ ಸಂಪರ್ಕ
ಗಡಿ ಭಾಗದ ಜನರು ದ.ಕ. ಮತ್ತು ಕಾಸರಗೋಡು ಜಿಲ್ಲೆಯೊಂದಿಗೆ ಸಂಪರ್ಕ ಹೊಂದಿದ್ದಾರೆ. ಅದರಲ್ಲೂ ಮುಖ್ಯವಾಗಿ ಕೇರಳ ಭಾಗದ ಜನರು ಆರೋಗ್ಯ, ಶಿಕ್ಷಣ, ಉದ್ಯಮ ಸಹಿತ ಔದ್ಯೋಗಿಕವಾಗಿ ಮಂಗಳೂರಿಗೆ ಸನಿಹವಾಗಿದ್ದಾರೆ. ಅವರು ಇದುವರೆಗೆ ಒಳಪ್ರದೇಶಗಳಿಂದ ಬೇರೆ ಬಸ್‌ಗಳನ್ನು ಆಶ್ರಯಿಸಿ ರಾಷ್ಟ್ರೀಯ ಹೆದ್ದಾರಿಗೆ ಬಂದು ಅಲ್ಲಿಂದ ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಮಂಗಳೂರು ತಲುಪುತ್ತಿದ್ದು, ಇದೀಗ ಮಲೆನಾಡು ಹೆದ್ದಾರಿಯಲ್ಲಿ ನೂತನ ಬಸ್ ಸಂಚಾರದಿಂದ ಮಂಗಳೂರು ತಲುಪಲು ಸಹಕಾರಿಯಾಗಲಿದೆ.
ಕೇರಳದ ಮಹಾತ್ವಾಕಾಂಕ್ಷಿ ಯೋಜನೆ
ಕೈರಂಗಳ ಗ್ರಾಮದ ಗಡಿಭಾಗವಾದ ನಂದರಪಡು³ವಿನಿಂದ ತಿರುವನಂತಪುರ ಜಿಲ್ಲೆಯ ಪರಸಾಲದವರೆಗೆ ಸುಮಾರು 1,332.16 ಕಿ.ಮೀ. ಉದ್ದದ ಮಾರ್ಗವು ಕೇರಳದ 13 ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಇದಕ್ಕೆ ಕೇರಳದ ಸ್ಪೈಸೀ ಮಾರ್ಗ ಎನ್ನುತ್ತಾರೆ. 1,500 ಕೋಟಿ ರೂ. ವೆಚ್ಚದ ಯೋಜನೆಗೆ 2009ರಲ್ಲಿ ಕೇರಳ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಕಾಸರಗೋಡುವರೆಗೆ ರಸ್ತೆ ನಿರ್ಮಾಣಗೊಂಡು ಎರಡು ವರುಷ ಕಳೆದಿದೆ.
ಕಾಸರಗೋಡು ಒಳಪ್ರದೇಶ ಸಂಪರ್ಕ
ಕಾಸರಗೋಡಿನಿಂದ – ಕುಂಬಳೆ, ಸೀತಾಂಗೋಳಿ, ಪೆರ್ಮುದೆ, ಸಂಕದಕಟ್ಟೆ ಮಾರ್ಗವಾಗಿ ಮುಡಿಪುವಿಗೆ ಈ ಬಸ್ ಸಂಚಾರ ನಡೆಸಲಿದೆ. ಈ ಬಸ್ ಸಂಚಾರದಿಂದ ವರ್ಕಾಡಿ ಗ್ರಾಮದ ನಂದರಪಡು³, ನಚ್ಚಪದವು, ಮೂರುಗೋಳಿ, ಪುರುಷಂಕೋಡಿ, ಪಾವಳ, ಸುಂಕದಕಟ್ಟೆ, ಮೊರತ್ತನೆ ಜಂಕ್ಷನ್, ಮೀಂಜ ಪಂಚಾಯತ್ ವ್ಯಾಪ್ತಿಯ ಬಟ್ಟಪದವು, ಮೀಯಪದವು, ಬೇರಿಕೆ, ಕಲಾಯಿ, ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಪಾಯಿಕಟ್ಟೆ, ಪೈಯೊಳಿಕೆ ನಗರ, ಚೇವಾರು, ಪೆರ್ಮುದೆ, ಪುತ್ತಿಗೆ ಪಂಚಾಯತ್‌ನ ಕಟ್ಟತ್ತಡ್ಕ, ಅಂಗಡಿಮೊಗರು, ಸೀತಾಂಗೋಳಿ, ಬದಿಯಡ್ಕ ಪಂಚಾಯತ್ ವ್ಯಾಪ್ತಿಯ ಪ್ರಯಾಣಿಕರಿಗೆ ಈ ರಸ್ತೆ ಸಹಕಾರಿಯಾಗಲಿದೆ. ಮುಡಿಪುವಿನಿಂದ ಮಂಗಳೂರು ವಿವಿ ರಸ್ತೆಯಾಗಿ ದೇರಳಕಟ್ಟೆ – ತೊಕ್ಕೊಟ್ಟು ಮಾರ್ಗವಾಗಿ ಮಂಗಳೂರು ತಲುಪಲು ಅನುಕೂಲವಾಗಲಿದ್ದು, ಐಟಿ, ಕೈಗಾರಿಕೆ, ಆಸ್ಪತ್ರೆ ವೈದ್ಯಕೀಯ ಶಿಕ್ಷಣ ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಆಗಮಿಸುವ ಜನರಿಗೆ ಸಹಕಾರಿಯಾಗಲಿದೆ.
ಕೇರಳದ ಮಹಾತ್ವಾಕಾಂಕ್ಷಿ ಯೋಜನೆ: ಕೈರಂಗಳ ಗ್ರಾಮದ ಗಡಿಭಾಗವಾದ ನಂದರಪಡ್ಪುವಿನಿಂದ ತಿರುವನಂತಪುರ ಜಿಲ್ಲೆಯ ಪರಸಾಲದವರೆಗೆ ಸುಮಾರು 1,332.16 ಕಿ.ಮೀ. ಉದ್ದದ ಮಾರ್ಗವು ಕೇರಳದ 13 ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಇದಕ್ಕೆ ಕೇರಳದ ಸ್ಪೈಸೀ ಮಾರ್ಗ ಎನ್ನುತ್ತಾರೆ. 1,500 ಕೋಟಿ ರೂ. ವೆಚ್ಚದ ಯೋಜನೆಗೆ 2009ರಲ್ಲಿ ಕೇರಳ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಕಾಸರಗೋಡುವರೆಗೆ ರಸ್ತೆ ನಿರ್ಮಾಣಗೊಂಡು 2 ವರುಷ ಕಳೆದಿದೆ.
ಗ್ರಾಮೀಣ ಭಾಗದವರಿಗೆ ಅನುಕೂಲ
ಎರಡು ವರುಷಗಳಿಂದ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಇದೀಗ ಖಾಸಗಿ ಬಸ್ ಆರಂಭದಿಂದ ಒಳಪ್ರದೇಶದ ಗ್ರಾಮಗಳ ಜನರಿಗೆ ಸಹಕಾರಿಯಾಗಲಿದ್ದು, ಎರಡೂ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ.
– ಅಝೀಝ್ ಕಲ್ಲೂರು, ಸಾಮಾಜಿಕ ಕಾರ್ಯಕರ್ತ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.