Ullal: ಉತ್ಸಾಹದಿಂದ ಭಾಗವಹಿಸಿದ ಕೃಷಿಕರು,ಇಂದು ಸಮಾರೋಪ
ಶಾರದಾಗಣಪತಿ ವಿದ್ಯಾಕೇಂದ್ರ: ರಾಜ್ಯ ಮಟ್ಟದ ಶಿಕ್ಷಣ,ಉದ್ಯೋಗ, ಕೃಷಿ ಮೇಳ
Team Udayavani, Dec 8, 2024, 1:06 PM IST
ಉಳ್ಳಾಲ: ಕೈರಂಗಳ ಗ್ರಾಮದ ಪುಣ್ಯಕೋಟಿ ನಗರದ ಶಾರದಾಗಣಪತಿ ವಿದ್ಯಾಕೇಂದ್ರದ ಆಶ್ರಯದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ರಾಜ್ಯ ಮಟ್ಟದ ಶಿಕ್ಷಣ, ಉದ್ಯೋಗ, ಕೃಷಿ ಮೇಳದಲ್ಲಿ ಗಡಿನಾಡ ಕೇರಳ ಸೇರಿದಂತೆ ರಾಜ್ಯಾದ್ಯಾಂತ ಕೃಷಿಕರು, ಮಾರಾಟಗಾರರು, ವಿದ್ಯಾರ್ಥಿಗಳು, ಯುವ ಪದವೀಧರರೂ ಭಾಗವಹಿಸಿದ್ದು, ಶನಿವಾರ ಮಧ್ಯಾಹ್ನ ಅನಂತರ ಮೇಳಕ್ಕೆ ಆಸಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಶಾರದಾ ಗಣಪತಿ ವಿದ್ಯಾಕೇಂದ್ರದ ಮೈದಾನದಲ್ಲಿ ಶಾಲಾ ಸಂಚಾಲಕ ಟಿ .ಜಿ .ರಾಜಾರಾಮ ಭಟ್ ಅವರ ನೇತೃತ್ವದಲ್ಲಿ ಈ ಬಾರಿ ನಾಲ್ಕನೇ ವರ್ಷದ ಕೃಷಿ ಮೇಳದೊಂದಿಗೆ ಶಿಕ್ಷಣ ಮಾರ್ಗದರ್ಶನ, ಉದ್ಯೋಗ ಮೇಳವನ್ನು ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಅವಿಭಜಿತ ಶಿಕ್ಷಣ ಸಂಸ್ಥೆಗಳ ಮಾರ್ಗದರ್ಶಕರು ಮೇಳದ ಮಳಿಗೆಯಲ್ಲಿ ತಮ್ಮ ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಸಿಗುವ ಉನ್ನತ ಶಿಕ್ಷಣದ ಮಾಹಿತಿಯನ್ನು ನೀಡಿದರೆ, ಯುವ ಪದವೀಧರರಿಗೆ ಉದ್ಯೋಗದ ಮಾಹಿತಿಯೊಂದಿಗೆ ಆಯಾಯ ಪದವಿಗನುಸಾರವಾಗಿ ಆಯ್ದ ಸಂಸ್ಥೆಗಳಲ್ಲಿ ಉದ್ಯೋಗ ನೋಂದಾಣಿಯನ್ನು ಮಾಡುತ್ತಿದ್ದಾರೆ.
ಕೃಷಿ ಪರಿಕರಗಳ ಮಾಹಿತಿ ಪ್ರದರ್ಶನ
ಕೃಷಿ ಮೇಳದಲ್ಲಿ ಸುಮಾರು 120ಕ್ಕೂ ಹೆಚ್ಚು ಮಳಿಗೆಗಳಿದ್ದು, ಎಸ್‌ಸಿಡಿಸಿಸಿ ಬ್ಯಾಂಕ್ ಸೇರಿದಂತೆ ವಿವಿಧ ಖಾಸಗಿ ಬ್ಯಾಂಕ್‌ಗಳು, ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘ ನಿಯಮಿತ (ಸ್ಕ್ಯಾಡ್) ಸೇರಿದಂತೆ ಖಾಸಗಿ ಸಂಸ್ಥೆಗಳಿಂದ ಕೃಷಿ ಯಂತ್ರೋಪಕರಣಗಳು, ಸಲಕರಣೆಗಳ ಮಾರಾಟ ನಡೆಯಿತು.
ನರ್ಸರಿಯಲ್ಲಿ ಹೂವಿನ ಗಿಡಗಳಿಗೆ ಬೇಡಿಕೆ ಹೆಚ್ಚಾದ್ದು, ಸಾವಯವ ರಸಗೊಬ್ಬರ, ಕೃಷಿ ಪರಿಕರಗಳ ಖರೀದಿಯಲ್ಲೂ ತೊಡಗಿಸಿಕೊಂಡಿದ್ದಾರೆ.
ಇದರೊಂದಿಗೆ ಮಕ್ಕಳಿಗೆ ಮನೋರಂಜನೆಯ ಆಟದ ವ್ಯವಸ್ಥೆ ಮಾಡಿದ್ದು ಸಂಜೆ ವೇಳೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕೃಷಿ ಮೇಳದ ಮಳಿಗೆಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಬಯಲಾಟ, ಗಾನ ವೈವಿಧ್ಯ, ಹರಿಕಥೆ ಜನರಿಗೆ ಮನೋರಂಜನೆಯನ್ನು ನೀಡಿತು.
ರವಿವಾರ ಸಮಾರೋಪ
ರಾಜ್ಯ ಮಟ್ಟದ ಶಿಕ್ಷಣ,ಉದ್ಯೋಗ, ಕೃಷಿ ಮೇಳ ರವಿವಾರ ಸಮಾರೋಪಗೊಳ್ಳಲಿದೆ. ಸಂಜೆ 6ರಿಂದ ನೃತ್ಯ ಸಂಭ್ರಮ ನಡೆಯ ಲಿದ್ದು, ಸಂಜೆ ಶಾಂಬವಿ ವಿಲಾಸ ಯಕ್ಷಗಾನ ನಡೆಯಲಿದೆ. ರವಿವಾರ ಬೆಳಗ್ಗಿನಿಂದಲೇ ಮೇಳದಲ್ಲಿ ಜನರು, ಕೃಷಿಕರು, ವಿದ್ಯಾರ್ಥಿಗಳು ಮತ್ತು ಪದವೀಧರರು ಭಾಗವಹಿಸುವ ನಿರೀಕ್ಷೆ ಇದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.