ಉರ್ವ: ಮರದ ಬುಡಕ್ಕೆ ಬೆಂಕಿ ಇಟ್ಟು ಪರಿಸರ ನಾಶಕ್ಕೆ ಯತ್ನ
Team Udayavani, Mar 10, 2019, 6:53 AM IST
ಮಹಾನಗರ: ಒಂದೆಡೆ ಪರಿಸರ ರಕ್ಷಣೆಗೆ ಧ್ವನಿ ಜೋರಾಗಿದ್ದರೆ, ಇನ್ನೊಂದೆಡೆ ಮರಗಳನ್ನೇ ನಾಶ ಮಾಡಿ ಪರಿಸರ ನಾಶಕ್ಕೆ ಕೆಲವರು ಮುಂದಾಗುತ್ತಿದ್ದಾರೆ. ಇಂತಹ ಘಟನೆಗೆ ಉರ್ವ ಪ್ರದೇಶ ನೆಡೆದಿದ್ದು, ದಶಕದಿಂದ ನೆರಳಿನಾಶ್ರಯ ನೀಡಿದ್ದ ಮರವೊಂದರ ಬುಡಕ್ಕೆ ಅನಾಮಿಕರು ಬೆಂಕಿ ಇಟ್ಟು ಪರಿಸರಕ್ಕೆ ಮಾರಕವಾಗುವ ಕೃತ್ಯವೆಸಗಿದ್ದಾರೆ.
ಇತ್ತೀಚೆಗೆಯಷ್ಟೇ ನಗರದ ಸರ್ಕೀಟ್ ಹೌಸ್ ಎದುರಿನ ಉದ್ಯಾನವನದಲ್ಲಿ ಮರದ ಬುಡಕ್ಕೆ ಅನಾಮಿಕರು ಬೆಂಕಿ ಹಚ್ಚಿದ್ದರು. ಇದೀಗ ಉರ್ವ ಬಳಿ ಇದೇ ರೀತಿಯ ಘಟನೆ ನಡೆದಿದೆ. ಉರ್ವದ ಮೇಯರ್ ಬಂಗ್ಲೆ ಪಕ್ಕ ಎರಡನೇ ಕ್ರಾಸ್ ಬಳಿ, ಸುಮಾರು 15ರಿಂದ 20 ವರ್ಷದ ಬಾದಾಮ್ ಮರದ ಬುಡಕ್ಕೆ ಅನಾಮಿಕರು ಬೆಂಕಿ ಹಾಕಿದ್ದಾರೆ. ಇದರಿಂದ ಮರದ ಕಾಂಡದ ಸುತ್ತಲೂ ಸುಟ್ಟು ಕರಕಲಾಗಿದೆ. ಆದರೆ ಸಂಬಂಧಪಟ್ಟ ಇಲಾಖೆ ಮಾತ್ರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿದೆ.
ಉರ್ವ ಸುತ್ತಮುತ್ತಲಿನ ಮನೆಯವರು ಹೇಳುವಂತೆ, ಬಾದಾಮ್ ಮರದ ಮೇಲೆ ವಿದ್ಯುತ್ ತಂತಿ ಹಾದು ಹೋಗುತ್ತಿದ್ದು, ಮರದ ಗೆಲ್ಲು ಬೀಳುವ ಸಾಧ್ಯತೆ ಇದೆ. ಅಲ್ಲದೆ, ಈ ಮರದಲ್ಲಿ ಕೆಂಪಿರುವೆಗಳ ರಾಶಿ ಇದ್ದು, ದಿನನಿತ್ಯ ರಸ್ತೆಗೆ ಬೀಳುತ್ತದೆ. ಇದರಿಂದ ಅಕ್ಕಪಕ್ಕದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈಗಾಗಲೇ ಸ್ಥಳೀಯ ಜನ ಪ್ರತಿನಿಧಿ, ಮೆಸ್ಕಾಂ ಅಧಿಕಾರಿ ಗಳಿಗೆ ಮನವಿ ಮಾಡಿದರೂ, ಕ್ರಮ ಕೈಗೊಂಡಿಲ್ಲ.
ಕ್ರಮಕ್ಕೆ ಆಗ್ರಹ
ಈ ಹಿಂದೆ ಉರ್ವ ಬಳಿಯ ಗಣಪತಿ ದೇವಸ್ಥಾನ ಬಳಿ ನೆಟ್ಟಿದ್ದ ಹಲಸು, ಹಣಸೆ ಮರದ ಬುಡಕ್ಕೆ ಇದೇ ರೀತಿ ಬೆಂಕಿ ಹಾಕಲಾಗಿತ್ತು. ಅದೇ ರೀತಿ ಮಂಗಳೂರಿನ ಕೆಲವು ಕಡೆಗಳಲ್ಲಿ ಕೆಮಿಕಲ್ ಉಪಯೋಗಿಸಿಯೂ ಮರಗಳನ್ನು ಸಾಯಿಸುತ್ತಿದ್ದಾರೆ. ಮರಕ್ಕೆ ಚಿಕ್ಕದಾದ ರಂಧ್ರಮಾಡಿ ಅದರ ಒಳಗಡೆ ರಾಸಾಯನಿಕ ವಸ್ತುಗಳನ್ನು ಇಡಲಾಗುತ್ತದೆ. ಇದರಿಂದ ಮರ ಬೇಗ ಸಾಯುತ್ತದೆ. ಇಂತಹವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸುತ್ತಮುತ್ತ ಸಿ.ಸಿ. ಕೆಮರಾ ಇಲ್ಲ
ಅರಣ್ಯ ಇಲಾಖೆ ಅಧಿಕಾರಿ ವೆಂಕಟೇಶ್, ‘ಉದಯವಾಣಿ ಸುದಿನ’ಕ್ಕೆ ಪ್ರತಿಕ್ರೀಯಿಸಿ, ಅನಾಮಿಕರು ಮರದ ಬುಡಕ್ಕೆ ಬೆಂಕಿ ಹಾಕಿದ ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ್ದೆ. ಈ ಪ್ರದೇಶದಲ್ಲಿ ಪಾಲಿಕೆಯ ಕಸದ ವಾಹನ ದಿನನಿತ್ಯ ಬರುವುದಿಲ್ಲ. ಸುತ್ತಲಿನ ಕಸ ಗುಡಿಸಿ ಆ ಮರದ ಕೆಳಗೆ ರಾಶಿ ಹಾಕಿ ಬೆಂಕಿ ಹಚ್ಚಲಾಗಿದೆ. ಇದರಿಂದ ಮರದ ಕಾಂಡಕ್ಕೆ ಬೆಂಕಿ ತಗುಲಿದೆ. ಬೆಂಕಿ ಹಚ್ಚಿದವರನ್ನು ಪತ್ತೆ ಹಚ್ಚಲು ಈ ಜಾಗದ ಸುತ್ತಮುತ್ತ ಸಿ.ಸಿ. ಕೆಮರಾಗಳಿಲ್ಲ. ಪಾಲಿಕೆಯ ಅಧಿಕಾರಿಗಳ ಜತೆ ಈ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ.
ಕಠಿನ ಕ್ರಮ
ಮರಗಳ ಬುಡಕ್ಕೆ ಬೆಂಕಿ ಹಾಕಿದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳ ಬಳಿ ಈ ಬಗ್ಗೆ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳುತ್ತೇನೆ.
- ಶಶಿಕಾಂತ್ ಸೆಂಥಿಲ್, ಜಿಲ್ಲಾಧಿಕಾರಿ
ಅಧಿಕಾರಿಗಳು ಅಸಹಾಯಕರು
ಅರಣ್ಯ ಇಲಾಖೆಯ ಕಾನೂನು ಆಟಕ್ಕುಂಟು ಲೆಕ್ಕಕ್ಕಿಲ್ಲ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಕೂಡ ಅಸಹಾಯಕರಾಗಿದ್ದಾರೆ. ಮರದ ಕಾಂಡಕ್ಕೆ ಬೆಂಕಿ ಹಾಕಿ ಸಾಯಿಸುತ್ತಿರುವುದು ಇದು ಮೊದಲಲ್ಲ. ಈ ಹಿಂದೆ ಕೂಡ ಪಾಲಿಕೆಯ ನಿರ್ಲಕ್ಷ್ಯದಿಂದ ಇಂತಹ ಘಟನೆ ನಡೆದಿತ್ತು.
- ಶಶಿಧರ ಶೆಟ್ಟಿ,
ಪ್ರಧಾನ ಕಾರ್ಯದರ್ಶಿ ರಾಷ್ಟ್ರೀಯ ಪರಿಸರಾಸಕ್ತರ ಒಕ್ಕೂಟ
ದೂರು ಬಂದರೆ ತನಿಖೆ
ಮರದ ಬುಡಕ್ಕೆ ಬೆಂಕಿ ಹಾಕಿದ ವಿಚಾರವಾಗಿ ಪಾಲಿಕೆಗೆ ಈವರಗೆ ಯಾರೂ ದೂರು ನೀಡಿಲ್ಲ. ದೂರು ನೀಡಿದರೆ ತನಿಖೆ ನಡೆಸಲಾಗುವುದು.
- ಮಹಮ್ಮದ್ ನಜೀರ್, ಪಾಲಿಕೆ ಆಯುಕ್ತ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.