ವಿಜಯ ಬ್ಯಾಂಕ್ ಅಸ್ತಿತ್ವ ಕಣ್ಮರೆ: ಕಳಚುತ್ತಿದೆ “ಬ್ಯಾಂಕ್‌ಗಳ ತೊಟ್ಟ
Team Udayavani, Jan 7, 2019, 5:43 AM IST
ಮಂಗಳೂರು: ಎಂಟೂವರೆ ದಶಕದ ಹಿಂದೆ ನಗರದ ಸಣ್ಣ ಕೊಠಡಿಯಲ್ಲಿ ಆರಂಭಗೊಂಡು 2 ಸಾವಿರಕ್ಕೂ ಹೆಚ್ಚು ಶಾಖೆಗಳೊಂದಿಗೆ ದೇಶದೆಲ್ಲೆಡೆ ಆರ್ಥಿಕತೆಯ ವಿಜಯ ಪತಾಕೆ ಹಾರಿಸಿ ಕರಾವಳಿಗರ ಹೆಮ್ಮೆ ಯಾಗಿ ಗುರುತಿಸಿಕೊಂಡ ವಿಜಯ ಬ್ಯಾಂಕ್ ಕಣ್ಮರೆಯ ಹಾದಿ ಹಿಡಿದಿದೆ.ದ. ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಅಗ್ರ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಿ ಗೇರಿ ಲಾಭದಲ್ಲಿರುವ ವಿಜಯ ಬ್ಯಾಂಕ್ ವಿಲೀನ ಕರಾವಳಿಗರಲ್ಲಿ ಬೇಸರ ಮೂಡಿಸಿದೆ.
ಸ್ವಾತಂತ್ರ ಪೂರ್ವದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯು ದೇಶಕ್ಕೆ ಕಾರ್ಪೊರೇಶನ್, ಕೆನರಾ, ಸಿಂಡಿಕೇಟ್, ವಿಜಯ ಬ್ಯಾಂಕ್ ಹಾಗೂ ಕರ್ಣಾಟಕ (ಖಾಸಗಿ ಸ್ವಾಮ್ಯದ) ಬ್ಯಾಂಕ್‌ಗಳನ್ನು ಕೊಟ್ಟಿತ್ತು. ಈ ಕಾರಣಕ್ಕೆ ಪ್ರತಿಷ್ಠಿತ 5 ಬ್ಯಾಂಕ್‌ಗಳ ಜತೆಗೆ ಕರಾವಳಿಗರಿಗೆ ವ್ಯವಹಾರವನ್ನು ಮೀರಿದ ಭಾವನಾತ್ಮಕ ಸಂಬಂಧವಿದೆ. 88 ವರ್ಷಗಳಿಂದ ಲಕ್ಷಾಂತರ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾದ ವಿಜಯ ಬ್ಯಾಂಕ್‌ನ ಹೆಸರು ಮೂರ್‍ನಾಲ್ಕು ತಿಂಗಳಲ್ಲಿ ಇತಿಹಾಸದ ಪುಟ ಸೇರಲಿದೆ.
ಕರಾವಳಿಯಲ್ಲೇ 142 ಶಾಖೆ
ವಿಜಯ ಬ್ಯಾಂಕ್‌ನ ಪ್ರಧಾನ ಕಚೇರಿ 1969ರ ವರೆಗೆ ಮಂಗಳೂರಿನಲ್ಲೇ ಇದ್ದು, ಬಳಿಕ ಬೆಂಗಳೂರಿಗೆ ಸ್ಥಳಾಂತರಗೊಂಡಿತು. ಒಟ್ಟು 2,129 ಶಾಖೆಗಳ ಪೈಕಿ 583 ಶಾಖೆಗಳು ರಾಜ್ಯದಲ್ಲೇ ಇವೆ. ಈ ಪೈಕಿ ದ.ಕ.ದಲ್ಲಿ 79 ಹಾಗೂ ಉಡುಪಿ ಜಿಲ್ಲೆಯಲ್ಲಿ 63 ಶಾಖೆಗಳಿವೆ. 2ನೇ ಶಾಖೆ ಆರಂಭವಾಗಿದ್ದೂ ಉಡುಪಿ ನಗರದಲ್ಲಿ. ವಿಧೇಯತೆಯಿಂದ ವ್ಯಕ್ತಿಯೊಬ್ಬರು ಜೇಬಿಗೆ ಕೈ ಹಾಕಿಕೊಂಡು ನಿಂತಿರುವುದು ಇದರ ಲೋಗೋ.
ಮೊದಲು ಎಟಿಎಂ ಪರಿಚಯ
ಭಾರತೀಯ ಮೂಲದ ಬ್ಯಾಂಕ್‌ಗಳ ಪೈಕಿ ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಇಂದಿರಾನಗರ ಶಾಖೆಯಲ್ಲಿ ಎಟಿಎಂ ಆರಂಭಿಸಿದ ಹೆಗ್ಗಳಿಕೆ ಈ ಬ್ಯಾಂಕ್‌ನದ್ದು. 1993 ಹಾಗೂ 1996 ಹೊರತು ಪಡಿಸಿದರೆ ಯಾವ ವರ್ಷವೂ ನಷ್ಟ ಅನುಭವಿಸಿಲ್ಲ. ಇದು ಬ್ಯಾಂಕಿಂಗ್ ವಲಯದಲ್ಲೇ ಗಮನಾರ್ಹ ಸಾಧನೆ. ಸದ್ಯ ಸುಮಾರು 2.79 ಲಕ್ಷ ಕೋಟಿ ರೂ. ವ್ಯವಹಾರ ನಡೆಸುವ ಈ ಬ್ಯಾಂಕ್‌ನಲ್ಲಿ 15,874 ಉದ್ಯೋಗಿಗಳಿದ್ದಾರೆ.
1931ರಲ್ಲಿ ಸ್ಥಾಪನೆ
1931ರ ಅ. 23ರಂದು ಬಂಟ್ಸ್ ಹಾಸ್ಟೆಲ್ ಬಳಿ ಪ್ರಗತಿಪರ ರೈತರ ಬೆಂಬಲದೊಂದಿಗೆ ಎ.ಬಿ. ಶೆಟ್ಟಿ ಮುಂದಾಳತ್ವದಲ್ಲಿ ವಿಜಯ ಬ್ಯಾಂಕ್ ಸ್ಥಾಪನೆ ಆಯಿತು. ವಿಜಯದಶಮಿಯಂದು ಪ್ರಾರಂಭಗೊಂಡ ಕಾರಣಕ್ಕೆ ಈ ಹೆಸರಿಡಲಾಗಿತ್ತು. ಕೃಷಿಕರಿಗೆ ಆರ್ಥಿಕವಾಗಿ ನೆರವಾಗಲು ಬಂಟ ಸಮುದಾಯದ 14 ಮಂದಿ ಇದರ ರೂವಾರಿಗಳು. ಬಳಿಕ ಆಧುನಿಕ ಸ್ಪರ್ಶ ನೀಡಿದವರು ಮೂಲ್ಕಿ ಸುಂದರರಾಂ ಶೆಟ್ಟಿ. ಜಯಲಕ್ಷ್ಮೀ ಬ್ಯಾಂಕ್‌ನ 14 ಶಾಖೆ ಸೇರಿದಂತೆ ಒಟ್ಟು 9 ಬ್ಯಾಂಕ್‌ಗಳು 60ರ ದಶಕದಲ್ಲಿ ವಿಜಯ ಬ್ಯಾಂಕ್‌ನೊಂದಿಗೆ ವಿಲೀನವಾಗಿತ್ತು. 1975ರಲ್ಲಿ ಒಂದೇ ದಿನ 27 ಶಾಖೆ ತೆರೆದ ಹೆಗ್ಗಳಿಕೆ ಕೂಡ ಈ ಬ್ಯಾಂಕ್‌ನದ್ದು.
ಕರುಳ ಸಂಬಂಧ ಕಳಚಿದೆ
ಬ್ಯಾಂಕ್ ಕರಾವಳಿಯ ಸಾವಿರಾರು ಜನರಿಗೆ ಬದುಕಾ ಗಿತ್ತು. ಈಗ ನಮ್ಮ ಕರುಳ ಬಳ್ಳಿ ಸಂಬಂಧ ಕಳಚಿ ಹೋಗಲಿದೆ. ಸರಕಾರಿ ನೌಕರನಾಗಿದ್ದ ನಾನು 1972ರಲ್ಲಿ ಸುಂದರ ರಾಮ್ ಶೆಟ್ಟಿ ಅವರ ಮೂಲಕ ಬ್ಯಾಂಕ್‌ಗೆ ಸೇರಿದ್ದೆ. ನಾನಿದ್ದ ಕಾಲ ದಲ್ಲಿ “ವಿಜಯ ವಿಚಾರ ವಿಹಾರ’ ಎಂಬ ಪರಿಕಲ್ಪನೆ ಪರಿಚಯಿಸಲಾಗಿತ್ತು. ನಮ್ಮ ನೆಲದ ಬ್ಯಾಂಕ್ ವಿಲಯನ ನೋವಿನ ಸಂಗತಿ.
ಪ್ರೇಮನಾಥ್ ಆಳ್ವ , ಬ್ಯಾಂಕ್ ಸಂಸ್ಥಾಪಕ ಎ.ಬಿ. ಶೆಟ್ಟಿ ಸಂಬಂಧಿ, ನಿವೃತ್ತ ಡಿಜಿಎಂ
ಕೈಬಿಡಲು ಕೇಂದ್ರಕ್ಕೆ ಒತ್ತಾಯ
ಪ್ರತಿಷ್ಠಿತ ಹಲವು ಪ್ರಮುಖ ಬ್ಯಾಂಕ್‌ಗಳಿಗೆ ಜನ್ಮ ನೀಡಿದ ಕರಾವಳಿ ಭಾಗದಲ್ಲಿ ಈಗ ವಿಜಯ ಬ್ಯಾಂಕ್‌ನ ವಿಲಯನ ಬೇಸರದ ವಿಚಾರ. ನಮ್ಮ ನೆಲದಲ್ಲೇ ಹುಟ್ಟಿದ ಪ್ರಮುಖ ಬ್ಯಾಂಕ್ ವಿಲಯನ ಪ್ರಕ್ರಿಯೆಯನ್ನು ಕೈಬಿಡುವಂತೆ ಶೀಘ್ರವೇ ಸಂಸ್ಥೆಯ ಸಭೆ ನಿರ್ಣಯ ಕೈಗೊಂಡು ಕೇಂದ್ರ ಸರಕಾರವನ್ನು ಆಗ್ರಹಿಸಲಿದೆ.
ಪಿ.ಬಿ. ಅಬ್ದುಲ್ ಹಮೀದ್, ಅಧ್ಯಕ್ಷರು, ಕೆನರಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ
ಸದೃಢ ಬ್ಯಾಂಕ್
ಬ್ಯಾಂಕಿಂಗ್ ವ್ಯವಸ್ಥೆಯನ್ನು ಸದೃಢಗೊಳಿಸಲು ಮುಂದಾಗಿ ರುವ ಕೇಂದ್ರ ಸರಕಾರ ಬ್ಯಾಂಕ್‌ಗಳ ವಿಲೀನಕ್ಕೆ ಮುಂದಾಗಿದೆ. ಆದರೆ ಈ ಪಟ್ಟಿಯಲ್ಲಿ ನಮ್ಮ ಬ್ಯಾಂಕ್ ಸೇರಿರುವುದು ಬೇಸರ ತಂದಿದೆ. ಈ ಬ್ಯಾಂಕ್ ಲಾಭದ ಹಿರಿಮೆ ಹೊಂದಿರುವ ಕಾರಣ ವಿಲೀನದ ಪಟ್ಟಿಯಿಂದ ಕೈಬಿಡಬಹುದಿತ್ತು.
ಎಚ್.ಎಸ್. ಉಪೇಂದ್ರ ಕಾಮತ್, ವಿಜಯ ಬ್ಯಾಂಕ್ ಮಾಜಿ ಸಿಎಂಡಿ
ಅತ್ಯಂತ ನೋವಿನ ಸಂದರ್ಭ
ವಿಜಯ ಬ್ಯಾಂಕ್ ತುಳುನಾಡಿನ ಹೆಮ್ಮೆ. ಅದನ್ನು ಬೇರೆ ಬ್ಯಾಂಕಿನೊಂದಿಗೆ ವಿಲೀನಗೊಳಿಸುವ ನಿರ್ಣಯ ಅತ್ಯಂತ ನೋವು ತಂದಿದೆ. ವಿಜಯ ಬ್ಯಾಂಕ್ ವಿಲೀನವಾಗದಂತೆ ನಾವು ಶಕ್ತಿಮೀರಿ ಪ್ರಯತ್ನ ನಡೆಸಿದ್ದೆವು. ಆದರೆ ಸ್ಪಂದನೆ ದೊರೆತಿಲ್ಲ.
ಎ. ಸದಾನಂದ ಶೆಟ್ಟಿ , ಇಂಟರ್‌ನ್ಯಾಶನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷ
ಸ್ಥಳೀಯ ಅನನ್ಯತೆ ದೂರ
ಆರ್ಥಿಕವಾಗಿ ಸದೃಢವಾದ ಬ್ಯಾಂಕನ್ನು ಆರ್ಥಿಕವಾಗಿ ಬಲಾಡ್ಯವಲ್ಲದ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸುವುದು ಸೂಕ್ತವಲ್ಲ. ವಿಲೀನವನ್ನು ತಡೆಯಲಾಗದು. ಜತೆಗೆ ವಿಜಯ ಬ್ಯಾಂಕ್ ಹೆಸರೇ ಮುಂದುವರಿ ಸುವ ನಿರೀಕ್ಷೆಯಿತ್ತು. ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಬ್ಯಾಂಕ್ ಅಸ್ತಿತ್ವ ಕಳೆದುಕೊಳ್ಳುತ್ತಿರು ವುದು ಬೇಸರದ ಸಂಗತಿ. ಈ ಮೂಲಕ ಪ್ರಾದೇಶಿಕ ಅನನ್ಯತೆ ದೂರವಾಗಲಿದೆ’.
ಸುಧಾಕರ ಶೆಟ್ಟಿ ಎಂ., ವಿಜಯ ಬ್ಯಾಂಕ್ ನಿವೃತ್ತರ ಸಂಘದ ಅಧ್ಯಕ್ಷ
ಸುರೇಶ್ ಪುದುವೆಟ್ಟು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.