ತ್ಯಾಜ್ಯ ಸಂಗ್ರಹ ದುಪ್ಪಟ್ಟಾದರೂ ನಿರ್ವಹಣೆ ಇನ್ನೂ ಅವೈಜ್ಞಾನಿಕ !
Team Udayavani, Nov 7, 2019, 3:30 AM IST
ಮಂಗಳೂರು ನಗರ ಬೆಳೆದಂತೆ ಇಲ್ಲಿನ ಸಮಸ್ಯೆಗಳು ಹೆಚ್ಚುತ್ತಿದ್ದು, ಟ್ರಾಫಿಕ್-ಪಾರ್ಕಿಂಗ್, ಒಳಚರಂಡಿ, ಫುಟ್‌ಪಾತ್, ತ್ಯಾಜ್ಯ ನಿರ್ವಹಣೆ ಜ್ವಲಂತ ನಗರ ಸಮಸ್ಯೆಗಳಾಗಿ ಕಾಡುತ್ತಿದೆ. 5 ವರ್ಷಗಳಿಗೊಮ್ಮೆ ಪಾಲಿಕೆ ಚುನಾವಣೆ ನಡೆದು ವಿವಿಧ ರಾಜಕೀಯ ಪಕ್ಷಗಳಿಂದ ಜನಪ್ರತಿನಿಧಿಗಳು ಆಯ್ಕೆಯಾಗಿ ಆಡಳಿತ ನಡೆಸಿ ಹೋಗಿದ್ದಾರೆ. ಆದರೆ ಇಲ್ಲಿನ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಇನ್ನೂ ದೊರಕಿಲ್ಲ. ಇದೀಗ ಮತ್ತೆ ಚುನಾವಣೆ ಬಂದಿದ್ದು, ನಗರದ ಆದ್ಯತೆಯ ನಾಗರಿಕ ಸಮಸ್ಯೆಗಳಿಗೆ ಮುಂದಿನ ಆಡಳಿತಾವಧಿಯಲ್ಲಾದರೂ ಮುಕ್ತಿ ಸಿಗಬೇಕೆಂಬುದು ಮತದಾರರ ನಿರೀಕ್ಷೆ. ಈ ಹಿನ್ನೆಲೆಯಲ್ಲಿ “ಸುದಿನ’ ಜನರ ಧ್ವನಿಯಾಗಿ “ನಗರ ಸಮಸ್ಯೆ-ಜನರ ನಿರೀಕ್ಷೆ’ ಅಭಿಯಾನವನ್ನು ಹಮ್ಮಿಕೊಂಡಿದೆ.
ಮಹಾನಗರ: ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಾರಣದಿಂದ ತ್ಯಾಜ್ಯ ಸಂಗ್ರಹ ಕೂಡ ದುಪ್ಪಟ್ಟಾಗುವಾಗ, ತ್ಯಾಜ್ಯ ಸಂಸ್ಕರಣೆಗೆ ಹೆಚ್ಚು ಆಸ್ಥೆ ವಹಿಸುವುದು ಪಾಲಿಕೆಯ ಜವಾಬ್ದಾರಿ. ಆದರೆ ಸುದೀರ್ಘ ವರ್ಷದಿಂದ ನಗರದಿಂದ ಸಂಗ್ರಹವಾಗುವ ತ್ಯಾಜ್ಯದ ನಿರ್ವಹಣೆ ಹಂತ ಸಂಪೂರ್ಣ ಅವೈಜ್ಞಾನಿಕವಾದ್ದರಿಂದ ನಗರವನ್ನೂ ತ್ಯಾಜ್ಯದ ಸಮಸ್ಯೆ ಮತ್ತೆ ಮತ್ತೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ!
ನಗರದ ಮನೆ-ಮನೆಯಿಂದ ತ್ಯಾಜ್ಯ ಸಾ ಗಾಟ ಆಗುತ್ತಿದ್ದರೂ ನಿರ್ವ ಹಣೆಯಲ್ಲಿ ಮಾತ್ರ ಪಾಲಿಕೆ ಸೂಕ್ತ ಕಾರ್ಯಯೋಜನೆಯನ್ನು ಕೈಗೊಂಡಿಲ್ಲ. ಹೀಗಾಗಿ ತ್ಯಾಜ್ಯದ ಸಮಸ್ಯೆ ಪಾಲಿಕೆಗೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಸವಾಲು.
ಸಂಪನ್ಮೂಲ ಕ್ರೋಡೀಕರಿಸುವ ಸವಾಲು
ನಗರದಲ್ಲಿ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಎಂಬ ಸಂಸ್ಥೆಗೆ ತ್ಯಾಜ್ಯ ಸಾಗಾಟದ ನಿರ್ವ ಹಣೆ ನೀಡಲಾಗಿದ್ದು, ಇದು ಬಹುತೇಕ ಭಾಗದಲ್ಲಿ ಸೂಕ್ತವಾಗಿ ನಡೆಯುತ್ತಿದೆ. ಏಕೆಂದರೆ ತ್ಯಾಜ್ಯ ನಿರ್ವಹಣೆಯಲ್ಲಿ ಸುಧಾರಿತ ತಂತ್ರಜ್ಞಾನಗಳೊಂದಿಗೆ ದೇಶ ದಲ್ಲೇ ಮುಂಚೂಣಿಯಲ್ಲಿರುವ ಸಂಸ್ಥೆ ಎಂಬ ಹೆಗ್ಗಳಿಕೆಯೂ ಇದೆ. ಆದರೂ ಕೆಲವೆಡೆ ತ್ಯಾಜ್ಯ ನಿರ್ವಹಣೆ ಸರಿಯಾಗಿಲ್ಲ ಎಂಬ ಆರೋಪವೂ ಆಗಾಗ್ಗೆ ಪಾಲಿಕೆ ಸಭೆಯಲ್ಲಿ ಕೇಳುತ್ತಿರುತ್ತದೆ. ಇದನ್ನೇ ನೆಪವಾಗಿಟ್ಟುಕೊಂಡು ಪಾಲಿಕೆಯು ಆ್ಯಂಟನಿ ಸಂಸ್ಥೆಗೆ ಪ್ರತೀ ತಿಂಗಳು ನಿಗದಿತ ಪ್ರಮಾಣದಲ್ಲಿ ಹಣ ನೀಡುತ್ತಿಲ್ಲ ಎಂಬ ಅಪವಾದವಿದೆ. ಹೀಗಾಗಿ ಕಾರ್ಮಿಕರಿಗೆ ಸಂಬಳ ಸಿಗದೆ ಅವರು ಪ್ರತಿಭಟನೆ ನಡೆಸಿ ಕಸ ಸಾಗಾಟ ಕೆಲವೊಮ್ಮೆ ಸ್ಥಗಿತಗೊಂಡದ್ದೂ ಇದೆ. ಈಗಾಗಲೇ ಈ ಖಾಸಗಿ ಸಂಸ್ಥೆಗೆ ನಾನಾ ಕಾರಣಗಳಿಗೆ ಕೋಟ್ಯಂತರ ರೂ. ಸಂದಾಯ ಬಾಕಿ ಉಳಿಸಿಕೊಂಡಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ದೊಡ್ಡ ಮಟ್ಟದ ಬಿಕ್ಕಟ್ಟಿಗೂ ಇದು ಕಾರಣವಾಗಬಹುದು. ಇಂತಹ ಸಮಸ್ಯೆಗೆ ಪಾಲಿಕೆ ಶಾಶ್ವತ ಪರಿಹಾರ, ಕಸ ನಿರ್ವಹಣೆಗೆ ಸಮರ್ಪಕ ಸಂಪನ್ಮೂಲ ಕ್ರೋಡೀಕರಿಸಬೇಕಾದ ಸವಾಲು ಕೂಡ ಮುಂದಿನ ಆಡಳಿತ ನಡೆಸುವವರ ಮುಂದಿದೆ.
ಇಷ್ಟಿದ್ದರೂ ಶ್ರೀ ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ 5 ವರ್ಷಗಳಿಂದ ಪಾಲಿಕೆಯಲ್ಲಿ “ಸ್ವತ್ಛ ಮಂಗಳೂರು’ ಶ್ರಮದಾನ ನಡೆದಾಗ ಬಹುತೇಕ ಭಾಗದಲ್ಲಿ ತ್ಯಾಜ್ಯಗಳಿರುವ ಪ್ರದೇಶವನ್ನು ಪತ್ತೆಹಚ್ಚಿರುವುದು ಮಂಗ ಳೂರಿನ ವಾಸ್ತವ ಸ್ಥಿತಿ ಎನ್ನದೆ ವಿಧಿಯಿಲ್ಲ !
ಇನ್ನು ಪಾಲಿಕೆಯು ತನ್ನ ಆದಾಯ ಸಂಗ್ರಹಕ್ಕೆ ಸೂಕ್ತ ಹೆಜ್ಜೆಗಳನ್ನು ಕೈಗೊಳ್ಳದ ಕಾರಣದಿಂದ ಪ್ರತೀ ತಿಂಗಳು ತ್ಯಾಜ್ಯ ಸಾಗಾಟ ಮಾಡುವ ಕಂಪೆನಿಗೆ ಹಣ ನೀಡಲು ಕಷ್ಟಪಡುವ ಪರಿಸ್ಥಿತಿ ಇದೆ. ಸರಕಾರ ಅಥವಾ ಬೇರೆ ಮೂಲಗಳಿಂದ ಇದಕ್ಕೆ ಹೆಚ್ಚುವರಿ ಅನುದಾನವಿಲ್ಲವಾದ್ದರಿಂದ ಪ್ರತೀ ತಿಂಗಳು ಪಾಲಿಕೆಯೇ ತ್ಯಾಜ್ಯ ನಿರ್ವಹಣೆ ಮಾಡುವ ಸಂಸ್ಥೆಗೆ ಹಣ ಹೊಂದಿಸಬೇಕಾಗಿರುವುದು ದೊಡ್ಡ ತಲೆನೋವು. ಇದರ ಬಗ್ಗೆಯೂ ಪಾಲಿಕೆ ಮುಂಬರುವ ದಿನಗಳಲ್ಲಿ ಹೆಚ್ಚು ಆದ್ಯತೆ ನೀಡಬೇಕಿದೆ.
ಇದೆಲ್ಲಕ್ಕಿಂತ ಮುಖ್ಯವಾಗಿ, ತ್ಯಾಜ್ಯ ನಿರ್ವಹಣೆ ಸೂಕ್ತವಾಗಿ ಆಗುತ್ತಿಲ್ಲ ಎಂಬುದು ಪಚ್ಚನಾಡಿ ಡಂಪಿಂಗ್ ಯಾರ್ಡ್ ನೋಡಿದವರಿಗೆ ಅರ್ಥವಾಗುತ್ತದೆ. ಮಂಗಳೂರು ವ್ಯಾಪ್ತಿಯಿಂದ ಪ್ರತಿನಿತ್ಯ ಸುಮಾರು 250ರಿಂದ 300 ಟನ್‌ನಷ್ಟು ಕಸವನ್ನು ಸಂಗ್ರಹಿಸಲಾಗುತ್ತದೆ. ಇದನ್ನು ತ್ಯಾಜ್ಯ ಸಂಸ್ಕರಣ ಘಟಕಕ್ಕೆ ತಂದು ಸಂಸ್ಕರಿ ಸಲಾಗುತ್ತದೆ. ಇಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲ ಎಂಬ ಆರೋಪವಿದೆ. ಹೀಗಾಗಿ ಈ ವ್ಯವಸ್ಥೆಯಲ್ಲಿ ಬಹುದೊಡ್ಡ ಬದಲಾವಣೆ ಅಗತ್ಯವಿದೆ. ಸಂಸ್ಕರಣೆ ಆಗಿ ಅದರಲ್ಲಿ ಬಾಕಿಯಾಗುವ ಸುಮಾರು 50 ಟನ್‌ಗಳಷ್ಟು ತ್ಯಾಜ್ಯವನ್ನು ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ನಲ್ಲಿ ಡಂಪ್ ಮಾಡಲಾಗುತ್ತದೆ. ಇದು ಲೆಕ್ಕಕ್ಕೆ ಸಿಗುವ ತ್ಯಾಜ್ಯದ ಪ್ರಮಾಣವಾದರೆ, ಉಳ್ಳಾಲ, ಬಂಟ್ವಾಳದಿಂದ ಪ್ರತೀದಿನ ಸುಮಾರು 50 ಟನ್‌ಗಳಷ್ಟು ಕಸವನ್ನು ನೇರವಾಗಿ ಡಂಪಿಂಗ್ ಯಾರ್ಡ್‌ನಲ್ಲಿ ಸುರಿಯಲಾಗುತ್ತಿದೆ. ಅಲ್ಲದೆ ಕೇರಳ ನೋಂದಣಿಯ ವಾಹನಗಳಲ್ಲಿಯೂ ತ್ಯಾಜ್ಯ ತಂದು ಡಂಪಿಂಗ್ ಯಾರ್ಡ್‌ನಲ್ಲಿ ಸುರಿಯುತ್ತಾರೆ. ಸ್ಥಳೀಯರು ಇದರ ಬಗ್ಗೆ ಪಾಲಿಕೆಗೆ ಎಷ್ಟೇ ಬಾರಿ ಹೇಳಿದರೂ ಅವರು ಮಾತ್ರ ಇದನ್ನು ಗಂಭೀರವಾಗಿ ತೆಗೆದುಕೊಂಡಂತಿಲ್ಲ.
ತಲೆ ತಗ್ಗಿಸುವಂತೆ ಮಾಡಿದ ಪಚ್ಚನಾಡಿ ದುರಂತ
ಪಚ್ಚನಾಡಿ ಡಂಪಿಂಗ್‌ಯಾರ್ಡ್ ನ ತ್ಯಾಜ್ಯ ಕುಸಿತದ ಪರಿಣಾಮ ತೆಂಗು-ಕಂಗುಗಳ ಹಸರು ಸಿರಿಯಿಂದ ಕಂಗೊಳಿಸುತ್ತಿದ್ದ ಕುಡುಪು ಸಮೀಪದ “ಮಂದಾರ’ ಎಂಬ ಸುಂದರ ಪ್ರದೇಶ ಮಾನವ ಪ್ರಹಾರದಿಂದ ಮಾಯವಾಗಿದೆ. ಸುಮಾರು ಎರಡು ಕಿ.ಮೀ.ಗಳಷ್ಟು ಉದ್ದಕ್ಕೆ ತ್ಯಾಜ್ಯವು ಕೆಳಭಾಗದಲ್ಲಿ ಜಾರಿಬಂದ ಕಾರಣ ಮಂದಾರ ವ್ಯಾಪ್ತಿಯ 27 ಮನೆಗಳ ನಿವಾಸಿಗಳ ಬದುಕು ಬೀದಿಗೆ ಬಿದ್ದಿದ್ದು-ಸುದೀರ್ಘ ವರ್ಷಗಳಿಂದ ನೆಲೆಸಿದ್ದ ಮನೆಯನ್ನೇ ಖಾಲಿ ಮಾಡಿದ್ದಾರೆ. ಘಟನೆ ನಡೆದು ನ. 6ಕ್ಕೆ ಮೂರು ತಿಂಗಳು ಕಳೆದಿವೆ. ಮೂರು ಮನೆಗಳು, ದೈವಸ್ಥಾನ, ನಾಗಬನವು ತ್ಯಾಜ್ಯ ರಾಶಿಯೊಳಗೆ ಮರೆಯಾಗಿದ್ದು, ಸುಮಾರು 5,000ಕ್ಕೂ ಅಧಿಕ ಅಡಿಕೆ-ತೆಂಗಿನ ಮರಗಳು ತ್ಯಾಜ್ಯ ರಾಶಿಗೆ ಆಹುತಿಯಾಗಿವೆೆ. ಕುಡಿಯುವ ನೀರು ಹಾಳಾಗಿದೆ. ಸಂತ್ರಸ್ತರಿಗೆ ಪರಿಹಾರ ಎಂಬುದು ಮರೀಚಿಕೆಯಾಗಿದೆ. ಪಾಲಿಕೆಯಲ್ಲಿ ಮುಂಬರುವ ಆಡಳಿತ ನಡೆಸುವವರಿಗೆ ಮಂದಾರ ಸಂತ್ರಸ್ತರಿಗೆ ಪರಿಹಾರ ನೀಡುವುದೇ ಬಹುದೊಡ್ಡ ಜವಾಬ್ದಾರಿ-ಹೊಣೆಗಾರಿಕೆಯಿದೆ.
ಈ ಮಧ್ಯೆ ಪಚ್ಚನಾಡಿಯಲ್ಲಿರುವ ಪ್ರಮುಖ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಹಾಕಿರುವ ತ್ಯಾಜ್ಯಕ್ಕೆ ಬೇಸಗೆಯಲ್ಲಿ ಬೆಂಕಿ ಬಿದ್ದು ವಿಷಪೂರಿತ ಹೊಗೆಯಿಂದ ಸ್ಥಳೀಯ ಮಂಗಳನಗರ, ಮಂಗಳಜ್ಯೋತಿ ವ್ಯಾಪ್ತಿಯ ಹಲವು ಜನರು ಅಸ್ವಸ್ಥರಾಗುತ್ತಿದ್ದು, ಈ ಸಮಸ್ಯೆಗೂ ಪರಿಹಾರ ದೊರೆಯಬೇಕಿದೆ.
ಅವೈಜ್ಞಾನಿಕ ವಿಧಾನದ ತ್ಯಾಜ್ಯ ಸಂಸ್ಕರಣೆ
ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಸುಮಾರು 77.93 ಎಕರೆ ಜಾಗವಿದೆ. ಇದರಲ್ಲಿ 10 ಎಕರೆ ವ್ಯಾಪ್ತಿಯಲ್ಲಿ ಕಸ ತುಂಬಿಸಿ ಅದನ್ನು ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ. ಅದರ ಬಳಿಯಲ್ಲಿಯೇ ಇದೀಗ ಸುಮಾರು 12 ಎಕರೆ ಜಾಗದಲ್ಲಿ 8-10 ವರ್ಷಗಳಿಂದ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಲಕ್ಷಗಟ್ಟಲೆ ತ್ಯಾಜ್ಯ-ಕಸ ಭೂಮಿಯೊಳಗೆ ಇಟ್ಟು ಮಣ್ಣುಹಾಕಲಾಗುತ್ತಿದೆ. ಮಣ್ಣುಹಾಕಿ ಮುಚ್ಚುವ ಅವೈಜ್ಞಾನಿಕ ವಿಧಾನ ದಿಂದಾಗಿಯೇ ಇತ್ತೀಚೆಗೆ ಮಂದಾರದಲ್ಲಿ ನಡೆಯಬಾರದ ಘಟನೆಯೊಂದು ನಡೆದುಹೋಗಿದೆ. ಸುಮಾರು 23 ಕುಟುಂಬಗಳು ಮನೆ ಬಿಟ್ಟು ಸಂತ್ರಸ್ತರ ಕೇಂದ್ರಕ್ಕೆ ಬರುವಂತಾಗಿದೆ.
ತ್ಯಾಜ್ಯದಿಂದ ವಿದ್ಯುತ್-ಕಡತದಲ್ಲೇ ಬಾಕಿ!
ತ್ಯಾಜ್ಯದಿಂದ ಇಂಧನ ತಯಾರಿ ಘಟಕ ಸ್ಥಾಪನೆಯ ಪ್ರಸ್ತಾವನೆ ಇದ್ದರೂ ಇನ್ನೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಪಚ್ಚನಾಡಿಯಲ್ಲಿ 100 ಕೋ.ರೂ. ವೆಚ್ಚದಲ್ಲಿ ಕಂಪೆನಿಯೊಂದರಿಂದ ಈ ಯೋಜನೆಯ ಪ್ರಸ್ತಾವನೆ ಸಿದ್ಧಗೊಳಿಸಲಾಗಿತ್ತು. ಡಂಪಿಂಗ್ ಯಾರ್ಡ್‌ಗೆ ದಿನಂಪ್ರತಿ ಬರುವ ಸುಮಾರು 350 ಟನ್ ತ್ಯಾಜ್ಯವನ್ನು ಹಸಿ, ಒಣ ತ್ಯಾಜ್ಯವಾಗಿ ವಿಂಗಡಿಸಿ ಹಸಿ ತ್ಯಾಜ್ಯದಿಂದ ಸಿಎನ್‌ಜಿ ಇಂಧನ, ಒಣ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ಇದು. ಸಿಎನ್‌ಜಿ ಇಂಧನವನ್ನು ಕೇಂದ್ರ ಸರಕಾರಕ್ಕೆ ಹಾಗೂ ಒಣ ತ್ಯಾಜ್ಯದಿಂದ ಪ್ರತಿ ದಿನ ಉತ್ಪಾದನೆಯಾಗುವ ಸುಮಾರು 2 ಮೆ.ವ್ಯಾ.ವಿದ್ಯುತ್‌ನ್ನು ಮೆಸ್ಕಾಂಗೆ ನೀಡುವ ಪ್ರಸ್ತಾವನೆಯಿತ್ತು. ಪ್ಲಾಸ್ಲಿಕ್ ತ್ಯಾಜ್ಯಗಳನ್ನು ಕೂಡ ಸಂಸ್ಕರಣೆ (ರಿಸೈಕ್ಲಿಂಗ್) ಮರುಬಳಕೆ ಮಾಡುವ, ಫರ್ನಿಸ್ ಆಯಿಲ್ ಹಸಿ ಕಸದಿಂದ ಇಂಧನ ತಯಾರಿ ಮಾಡುವಾಗ ಉತ್ಪಾದನೆಯಾಗುವ ನೀರನ್ನು ಸಂಸ್ಕರಿಸಿ ಘಟಕಕ್ಕೆ ಬಳಸಲು, ಒಣ ಕಸ ಉರಿದು ಉಂಟಾಗುವ ಬೂದಿ ಮಾರಾಟ ಮಾಡುವ ಪ್ರಸ್ತಾವನೆಯಿತ್ತು. ಇದಾವುದೂ ಕಾರ್ಯರೂಪಕ್ಕೆ ಬಂದಿಲ್ಲ.
- ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
ಮಂಗಳೂರಿಗೆ ವಾಟರ್ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ
Mangaluru: ಕರಾವಳಿಯ ವೃತ್ತಿಪರರಿಗೆ ವಿಶ್ವದೆಲ್ಲೆಡೆ ಮನ್ನಣೆ
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.