Mangalore Water scarcity; ಬಾವಿಗಳು ಬರಿದು; ಬೋರ್‌ವೆಲ್ ಕೊರೆದರೂ ನೀರಿಲ್ಲ
ನೀರಿನ ಪ್ರಮಾಣ ಇಳಿಕೆ ಆಗುತ್ತಿರುವಂತೆ ಟ್ಯಾಂಕರ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.
Team Udayavani, Apr 20, 2023, 3:53 PM IST
ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಗೂ ನೀರಿನ ಮೂಲವಾಗಿರುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಪ್ರಮಾಣ ಇಳಿಕೆ ಆಗುತ್ತಿರುವಂತೆ ಟ್ಯಾಂಕರ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ನಗರದ ಎತ್ತರ ಪ್ರದೇಶಗಳಿಗೆ, ಪೈಪ್‌ಲೈನ್ ನೀರು ತಲುಪದ ಕಡೆ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ ಮಂಗಳೂರು ನಗರ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸುತ್ತಿದ್ದು, ಕುಡಿಯುವ ನೀರಿಗಾಗಿಯೂ ಜನರು ಪರದಾಡುವಂತಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸುರತ್ಕಲ್, ಪಾಂಡೇಶ್ವರ ಸಹಿತ ಪೈಪ್‌ಲೈನ್ ನಿಂದ ನೀರು ತಲುಪದ ಕೆಲವು ಪ್ರದೇಶಗಳಿಗೆ ಪ್ರತಿನಿತ್ಯ ಸುಮಾರು 70 ಟ್ಯಾಂಕರ್ (7 ಟ್ಯಾಂಕರ್‌ಗಳಲ್ಲಿ ಟ್ರಿಪ್ ಗಳಲ್ಲಿ ) ನೀರು ಪಾಲಿಕೆಯಿಂದ ಪೂರೈಕೆಯಾಗುತ್ತಿದೆ. ಎಎಂಆರ್ ಡ್ಯಾಂನಿಂದ ತುಂಬೆ ಡ್ಯಾಂಗೆ ನೀರು ಹರಿಸುತ್ತಿರುವ ಕಾರಣ ಈಗಾಗಲೇ ಎಎಂಆರ್ ಡ್ಯಾಂನ ನೀರು ಎ. 19ಕ್ಕೆ 13.90 ಮೀಟರ್‌ಗೆ ತಲುಪಿದ್ದರೆ, ತುಂಬೆ ನೀರಿನ ಮಟ್ಟ 5.22 ಮೀಟರ್‌ಗೆ ತಲುಪಿದೆ. ಎಪ್ರಿಲ್‌ನಲ್ಲಿ ಸಾಮಾನ್ಯವಾಗಿ ಸುರಿ ಯುವ ಮಳೆ ಇನ್ನೂ ಬಾರದ ಕಾರಣ ತುಂಬೆ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವ ಜತೆಗೆ ಆವಿಯಾಗುವ
ಪ್ರಮಾಣವೂ ಹೆಚ್ಚಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿಯಾಗಿಯೂ ಟ್ಯಾಂಕರ್‌ಗಳ ಮೂಲಕ ವಿವಿಧ ಅಪಾರ್ಟ್‌ಮೆಂಟ್, ಪಿಜಿ, ಹಾಸ್ಟೆಲ್ ಗಳು, ಹೊಟೇಲ್‌ಗಳಿಗೂ ಟ್ಯಾಂಕರ್‌ಗಳಲ್ಲಿ ನೀರಿನ ಪೂರೈಕೆಗಾಗಿ ಬೇಡಿಕೆ ಹೆಚ್ಚಾಗುತ್ತಿದೆ. ಗ್ರಾಮಾಂತರದಲ್ಲಿ ನೀರಿಗಾಗಿ ಪರದಾಟ ನೇತ್ರಾವತಿಯ ಪಕ್ಕದಲ್ಲೇ ಇರುವ ಸೋಮೇಶ್ವರ ಪುರಸಭೆ, ಉಳ್ಳಾಲ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿಯೂ ಜನರು ಪರದಾಡುವಂತಾಗಿದೆ. ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕುಂಪಲ, ಕನೀರು ತೋಟ ಮೊದಲಾದ ಕಡೆ ಮನೆಗಳಲ್ಲಿನ ಬಾವಿಗಳಲ್ಲಿ ನೀರು ಬತ್ತಿಹೋಗಿದೆ.
ನೀರು ಸಿಗದ ಬೋರ್‌ವೆಲ್
ಕುಡಿಯುವ ನೀರಿಗಾಗಿ ಬೇಡಿಕೆ ಹೆಚ್ಚಾಗುತ್ತಿದೆ. ಈಗಾಗಲೇ ಪುರಸಭೆ ವ್ಯಾಪ್ತಿಯಲ್ಲಿ ಎರಡು ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದ್ದು, ಮತ್ತೆರಡು ಟ್ಯಾಂಕರ್‌ಗಳ ವ್ಯವಸ್ಥೆ ಮಾಡಲಾಗಿದೆ. ಆದರೆ ಟ್ಯಾಂಕರ್ ಗಳಲ್ಲಿ ನೀರು ಪೂರೈಸಲು ಬಾವಿಗಳಲ್ಲಿ ನೀರಿಲ್ಲದ ಕಾರಣ ಕೊರೆಯಲಾದ ಎರಡು ಬೋರ್ ವೆಲ್‌ಗಳಲ್ಲಿ ನೀರು ಸಿಕ್ಕಿಲ್ಲ. ಬೇಡಿಕೆಗೆ ಅನುಸಾರ ಮೂಲಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಇಲ್ಲದೆ ಪೂರೈಕೆಗೆ ತೊಂದರೆಯಾಗುತ್ತಿದೆ. ಕೆಲ ದಿನಗಳಲ್ಲಿ ಮಳೆ ಬಾರದಿದ್ದರೆ ಸಮಸ್ಯೆ ಮತ್ತಷ್ಟು ಹದಗೆಡಲಿದೆ. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸುವ ಮೂಲಕ ಸಹಕರಿಸಬೇಕು.
– ಮತ್ತಡಿ, ಮುಖ್ಯ ಅಧಿಕಾರಿ, ಸೋಮೇಶ್ವರ ಪುರಸಭೆ
*ಸತ್ಯಾ.ಕೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.