ಪಶ್ಚಿಮ ಘಟ್ಟದಲ್ಲಿ ಕುಸಿತ: ಡಿಸೆಂಬರ್‌ನೊಳಗೆ ತಜ್ಞರ ವರದಿ
Team Udayavani, Oct 4, 2020, 2:10 AM IST
ಅಧ್ಯಯನ ವರದಿಯನ್ನು ಅನಂತ ಹೆಗಡೆ ಆಶೀಸರ ಶನಿವಾರ ಬಿಡುಗಡೆಗೊಳಿಸಿದರು.
ಮಂಗಳೂರು: ಪಶ್ಚಿಮ ಘಟ್ಟದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಭವಿಸುತ್ತಿರುವ ಭಾರೀ ಭೂಕುಸಿತಕ್ಕೆ ಕಾರಣವಾದ ಅಂಶಗಳು ಮತ್ತು ತಡೆಗೆ ವೈಜ್ಞಾನಿಕ ಮಾರ್ಗೋಪಾಯಗಳ ಕುರಿತ ಅಧ್ಯಯನಕ್ಕೆ ರಚಿಸಲಾಗಿರುವ ಸಮಿತಿಯು ಡಿಸೆಂಬರ್ ಅಂತ್ಯದೊಳಗೆ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ತಿಳಿಸಿದ್ದಾರೆ. ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಸಮಾಲೋಚನೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಕಾರಣದಿಂದ ಅಧ್ಯಯನ ವಿಳಂಬವಾಯಿತು ಎಂದರು.
ಜೀವ ವೈವಿಧ್ಯ ತಾಣ
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜೀವ ವೈವಿಧ್ಯ ಕಾನೂನಿನನ್ವಯ ಅಪರೂಪದ ಮತ್ತು ಅಮೂಲ್ಯ ಜೀವ ಸಂಕುಲಗಳಿರುವ ಪ್ರದೇಶಗಳನ್ನು ಪಾರಂಪರಿಕ ಜೀವವೈವಿಧ್ಯ ತಾಣಗಳೆಂದು ಗುರುತಿಸಿ ಘೋಷಣೆ ಮಾಡಲಾಗುತ್ತಿದೆ. ಈಗಾಗಲೇ ಅಳಿವಿನಂಚಿಲ್ಲಿರುವ ರಾಮಪತ್ರೆ ಪ್ರಭೇದವಿರುವ ಸುಳ್ಯದ 4 ಪ್ರದೇಶಗಳನ್ನು ಪಾರಂಪರಿಕ ಜೀವವೈವಿಧ್ಯ ತಾಣ ಎಂದು ಗುರುತಿಸಲಾಗಿದೆ. ವಿಶಿಷ್ಟ ಜಾತಿಯ ಮೀನುಗಳಿರುವ ತಾಣಗಳನ್ನಾಗಿ ಶಿಶಿಲ ಮತ್ತು ಸೀತಾನದಿ ಪ್ರದೇಶಗಳನ್ನು ಘೋಷಣೆ ಮಾಡಲಾಗಿದೆ. ಇನ್ನಷ್ಟು ಮೀನು ವೈವಿಧ್ಯ ತಾಣಗಳನ್ನು ಗುರುತಿಸಲಾಗುವುದು. ನಶಿಸುತ್ತಿರುವ ಜೀವವೈವಿಧ್ಯಗಳ ರಕ್ಷಣೆ, ಅಭಿವೃದ್ಧಿಗೆ ಪಾರಂಪಾರಿಕ ಜೀವವೈವಿಧ್ಯ ತಾಣ ಘೋಷಣೆ ಪೂರಕವಾಗಲಿದೆ ಎಂದು ಆಶೀಸರ ತಿಳಿಸಿದರು. ಜಿಲ್ಲೆಯಲ್ಲಿ ಕೆಲವು ಭಾಗದಲ್ಲಿ ಅಡಿಕೆ ಬೆಳೆಗೆ ಹಳದಿ ರೋಗ ಕಾಡುತ್ತಿದ್ದು ಆ ಜಾಗದಲ್ಲಿ ಪರ್ಯಾಯ ಬೆಳೆ ಬೆಳೆಸುವುದು, ಸೂಕ್ತ ಪರಿಹಾರ ಒದಗಿಸುವುದು ಮುಂತಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಬೇಕಾಗಿದೆ ಎಂದರು.
ಜೀವ ವೈವಿಧ್ಯ ಸಮಿತಿಗಳು
ರಾಜ್ಯದಲ್ಲಿ ಗ್ರಾ.ಪಂ.,ತಾ.ಪಂ.,ಜಿ.ಪಂ.ಮಟ್ಟ ದಲ್ಲಿ ಜೀವ ವೈವಿಧ್ಯ ಸಮಿತಿ ರಚನೆ ಪೂರ್ಣ ಗೊಂಡಿದ್ದು ಜೀವವೈವಿಧ್ಯ ದಾಖಲಾತಿ ಮುಗಿ ದಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಗಳಲ್ಲಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಸಮಿತಿಗಳು ಸಕ್ರಿಯವಾಗಿದ್ದು ಕ್ರಿಯಾಶೀಲವಾಗಿ ಚಟುವಟಿಕೆ ಗಳನ್ನು ಮುಂದುವರಿಸಬೇಕಾಗಿದೆ ಎಂದರು.
ವಿಶೇಷ ಯೋಜನೆ
ಕರಾವಳಿ ಪರಿಸರ ರಕ್ಷಣೆ, ಮಾಲಿನ್ಯ ತಡೆ, ಆಮೆಗಳು, ಡಾಲ್ಫಿನ್‌ಗಳಂಥ ಅಪರೂಪದ ಜೀವಿಗಳ ರಕ್ಷಣೆಗೆ ವಿಶೇಷ ಯೋಜನೆಯನ್ನು ಅರಣ್ಯ ಇಲಾಖೆ ಈಗಾಗಲೇ ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ. ಪಿಲಿಕುಳ ಡಾ| ಶಿವರಾಮ ಕಾರಂತ ನಿಸರ್ಗಧಾಮದಲ್ಲಿರುವ ಅರಣ್ಯ, ಜೀವವೈವಿಧ್ಯ ಅಭಿವೃದ್ಧಿ ಕುರಿತಾಗಿ ಪಿಲಿಕುಳದ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕರಿಕಲನ್, ಪರಿಸರ ಇಲಾಖೆಯ ಅಧಿಕಾರಿ ದಿನೇಶ್ ಉಪಸ್ಥಿತರಿದ್ದರು.
ಕಾಡು ಜೇನು “ರಾಜ್ಯ ಕೀಟ’: ಶಿಫಾರಸು
ವಿನಾಶದ ಅಂಚಿನಲ್ಲಿರುವ ಅಡವಿ ತುಡವಿ ಜೇನು (ಕಾಡು ಜೇನು) ಅನ್ನು “ರಾಜ್ಯ ಕೀಟ’ ಎಂದು ಘೋಷಿಸಲು ವನ್ಯಜೀವಿ ಮಂಡಳಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿಯವರಿಗೆ ಈಗಾಗಲೇ ಜೀವ ವೈವಿಧ್ಯ ಮಂಡಳಿಯಿಂದ ಶಿಫಾರಸು ಮಾಡಲಾಗಿದ್ದು ಘೋಷಣೆಯಾಗುವ ಸಾಧ್ಯತೆಗಳಿವೆ ಎಂದು ಅನಂತ ಹೆಗಡೆ ತಿಳಿಸಿದರು.
ಪಶ್ಚಿಮ ಘಟ್ಟದಲ್ಲಿವೆ 1,936 ಸಸ್ಯಪ್ರಭೇದ
ಮಂಗಳೂರು: ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಪಿಲಿಕುಳ ಡಾ| ಶಿವರಾಮ ಕಾರಂತ ನಿಸರ್ಗಧಾಮದ ಸಸ್ಯಶಾಸ್ತ್ರ ವಿಭಾಗದ ವಿಜ್ಞಾನಿಗಳ ತಂಡ ನಡೆಸಿದ ಅಧ್ಯಯನದಲ್ಲಿ 194 ಸಸ್ಯಗಳಿಗೆ ಸೇರಿದ 1,936 ಪ್ರಭೇದಗಳನ್ನು ಗುರುತಿಸಲಾಗಿದೆ.
ಕರ್ನಾಟಕ ಜೀವವೈವಿಧ್ಯ ಮಂಡಳಿಯ ಯೋಜನೆಯನ್ವಯ 1.22 ಕೋ.ರೂ. ಅನುದಾನದೊಂದಿಗೆ ನಡೆಸಿದ ಅಧ್ಯಯನ ವರದಿಯನ್ನು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು ಶನಿವಾರ ಬಿಡುಗಡೆಗೊಳಿಸಿದರು.
ನಿಸರ್ಗಧಾಮದ ಪ್ರಧಾನ ವಿಜ್ಞಾನಿ ಡಾ| ಎಚ್. ಸೂರ್ಯಪ್ರಕಾಶ್ ಶೆಣೈ ಹಾಗೂ ವೈಜ್ಞಾನಿಕ ಅಧಿಕಾರಿ ರಾಮಕೃಷ್ಣ ಮರಾಟಿ ಅವರನ್ನೊಳಗೊಂಡ ಅಧ್ಯಯನ ತಂಡವು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಹಾಗೂ ಬೆಳಗಾವಿ ಪ್ರದೇಶದ ಅರಣ್ಯ ಪ್ರದೇಶಗಳು ಹಾಗೂ ಮೈಸೂರು ಜಿಲ್ಲೆಗೆ ಭೇಟಿ ನೀಡಿ ಸಸ್ಯದ ಮಾದರಿಗಳನ್ನು ಸಂಗ್ರಹಿಸಿ ಸಸ್ಯೋದ್ಯೋನ (ಹಬೇìರಿಯಂ) ತಯಾರಿಸಿದೆ.
ಗುರುತಿಸಿರುವ ಪ್ರಭೇದಗಳಲ್ಲಿ 229 ಸ್ಥಳೀಯ ಪ್ರಭೇದಗಳಾಗಿದ್ದು, 116 ಮರ ಜಾತಿಗಳು, 42 ಕುರುಚಲು ಗಿಡಗಳು, 29 ಔಷಧೀಯ ಸಸ್ಯಗಳು, 3 ಬಳ್ಳಿಗಳು ಹಾಗೂ 39 ಹುಲ್ಲು ಜಾತಿಯ ಗಿಡಗಳನ್ನು, 4 ಏಕಪ್ರಭೇದದ ಸಸ್ಯಗಳಿವೆ. ಇದರಲ್ಲಿ ಗುಂಡ್ಯ ನದಿ ಪಾತ್ರದಲ್ಲಿ ಸುಮಾರು 120 ವರ್ಷಗಳ ಬಳಿಕ ನಾನಿಲ್ (ಮಧ್ಯಕ ಇನ್‌ಸಿಗ್ನಿಸ್) ಹಾಗೂ ಉತ್ತರ ಕನ್ನಡದ ಗೇರುಸೊಪ್ಪದಲ್ಲಿ 60 ವರ್ಷಗಳ ಬಳಿಕ ನೇರಳೆ ಜಾತಿಗೆ ಸೇರಿದ ಪ್ರಭೇದಗಳನ್ನು ಪುನರ್‌ಸಂಶೋಧಿಸಲಾಗಿದೆ ಎಂದು ಡಾ| ಎಚ್. ಸೂರ್ಯಪ್ರಕಾಶ್ ವಿವರಿಸಿದರು. ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ., ವಿಭಾಗೀಯ ಅರಣ್ಯಾಧಿಕಾರಿ ಡಾ| ಕರಿಕಲನ್, ಸಿಆರ್‌ಝಡ್ ಅಧಿಕಾರಿ ದಿನೇಶ್ ಉಪಸ್ಥಿತರಿದ್ದರು.
ದ.ಕ.: 985 ನಾಗಬನಗಳು
ದ.ಕ. ಜಿಲ್ಲೆಯಲ್ಲಿ ಕಂದಾಯ ಇಲಾಖೆ ದಾಖಲೆ ಪ್ರಕಾರ 985 ನಾಗಬನಗಳಿವೆ. 335 ಸರಕಾರಿ ಜಾಗದಲ್ಲಿ, 654 ಖಾಸಗಿ ಜಾಗದಲ್ಲಿವೆ. ಅವುಗಳಲ್ಲಿ 24 ಬನಗಳ ವಿಸ್ತೃತ ಅಧ್ಯಯನ ಮಾಡಿದ್ದು ಅಲ್ಲಿ 290 ಸಸ್ಯಪ್ರಭೇದಗಳನ್ನು ಗುರುತಿಸಲಾಗಿದೆ. ಇದರಲ್ಲಿ 119 ಮರ, 67 ಪೊದೆಜಾತಿ ಸಸ್ಯಗಳು, 46 ಬಳ್ಳಿಗಳು, 51 ಗಿಡಮೂಲಿಕೆ ಸಸ್ಯಗಳು, 3 ಆರ್ಕಿಡ್ ಮತ್ತು 4 ಜರಿಗಿಡಗಳು ಎಂದು
ಡಾ| ಎಚ್. ಸೂರ್ಯಪ್ರಕಾಶ್ ಶೆಣೈ ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.