ಪಾವೂರು ಉಳಿಯ ದ್ವೀಪ ನಿವಾಸಿಗಳ ವ್ಯಥೆ
Team Udayavani, Apr 25, 2017, 2:30 PM IST
ಮಹಾನಗರ: ಸುಮಾರು 55 ಎಕ್ರೆ ಭೂ ಪ್ರದೇಶದ ಈ ದ್ವೀಪದ ಸುತ್ತಲೂ ನೇತ್ರಾವತಿ ನದಿ. ದ್ವೀಪದ ಉತ್ತರ ದಿಕ್ಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 75 ರ ಅಡ್ಯಾರ್. ದಕ್ಷಿಣ ದಿಕ್ಕಿನಲ್ಲಿ ಕೊಣಾಜೆ ಬಳಿಯ ಪಾವೂರು ಗ್ರಾಮ. ಪೂರ್ವ ದಿಕ್ಕಿನಲ್ಲಿ ಮೇಲ್ಗಡೆಯಿಂದ ನೇತ್ರಾವತಿ ಹರಿದರೆ, ಪಶ್ಚಿಮ ದಿಕ್ಕಿನಲ್ಲಿ ಕೆಳಗೆ ಹರಿಯುತ್ತಾಳೆ. ಇದು ಪಾವೂರು ಗ್ರಾ.ಪಂ. ವ್ಯಾಪ್ತಿಯ ಪಾವೂರು ಉಳಿಯ ದ್ವೀಪ. ಮಂಗಳೂರಿನಿಂದ ಬಹಳ ದೂರವಿಲ್ಲ, ಬರೀ 12 ಕಿ.ಮೀ.
ಇಲ್ಲಿನ ಜನಸಂಖ್ಯೆ ಸುಮಾರು 200. 54 ಕುಟುಂಬಗಳು. 25- 30 ಮಕ್ಕಳು, 50 ರಷ್ಟು ಯುವಜನರು. 70 ರಷ್ಟು ಪುರುಷರು ಹಾಗೂ 65 ರಷ್ಟು ಮಹಿಳೆಯರು. 54 ಕುಟುಂಬಗಳಲ್ಲಿ 1 ಕುಟುಂಬ ಮಾತ್ರ ಪರಿಶಿಷ್ಟ ಜಾತಿಗೆ ಸೇರಿದ್ದು, ಉಳಿದವರೆಲ್ಲಾ ಕೆಥೋಲಿಕ್ ಕ್ರೈಸ್ತ ಕುಟುಂಬಗಳು. ಈ ಪೈಕಿ 35 ಕುಟುಂಬಗಳು ಪ್ರಸ್ತುತ ಇಲ್ಲಿಯೇ ವಾಸವಾಗಿವೆ. ಇಲ್ಲಿ ಒಂದು ಕ್ರೈಸ್ತ ಪ್ರಾರ್ಥನಾ ಮಂದಿರ (ಚಾಪೆಲ್) ಇದೆ. ಫರಂಗಿ ಪೇಟೆಯ ಕಾಪುಚಿನ್ ಧರ್ಮಗುರುಗಳು ರವಿವಾರ ಮತ್ತು ಇತರ ತುರ್ತು ಸಂದರ್ಭಗಳಲ್ಲಿ ಇಲ್ಲಿಗೆ ಬಂದು ಬಲಿ ಪೂಜೆ ಮತ್ತು ಇತರ ಧಾರ್ಮಿಕ ಸೇವೆಯನ್ನು ಕೈಗೊಳ್ಳುತ್ತಾರೆ. ಸ್ಮಶಾನವೂ ಚಾಪೆಲ್ ಪಕ್ಕದಲ್ಲಿದೆ.
1 ರಿಂದ 5 ನೇ ತರಗತಿವರೆಗಿನ ಸರಕಾರಿ ಪ್ರಾಥಮಿಕ ಶಾಲೆ ಮಕ್ಕಳ ಕೊರತೆಯಿಂದಾಗಿ 6 ವರ್ಷಗಳ ಹಿಂದೆ ಮುಚ್ಚಲಾಗಿದೆ. ಈಗ ಕಟ್ಟಡದ ಪಳಿಯುಳಿಕೆ ಮಾತ್ರ ಇದೆ. ಇಲ್ಲಿನ ಮಕ್ಕಳು ನದಿ ದಾಟಿ ದೂರದ ಕಪಿತಾನಿಯೊ, ನೀರುಮಾರ್ಗ ಮತ್ತಿತರ ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದಾರೆ. ಓರ್ವ ಶಿಕ್ಷಕಿಯನ್ನು ಹೊರತು ಪಡಿಸಿದರೆ ಇಲ್ಲಿ ಬೇರೆ ಸರಕಾರಿ ನೌಕರರಿಲ್ಲ. ಪುರುಷರಲ್ಲಿ ಹೆಚ್ಚಿನವರು ಮೀನುಗಾರರು ಮತ್ತು ಕೂಲಿ ಕಾರ್ಮಿಕರು. ನಾಲ್ಕೈದು ಕುಟುಂಬಗಳ ಪುರುಷರು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಉಳಿದ ಬಹುತೇಕರು ಬೀಡಿ ಕಟ್ಟಿ ಬದುಕುತ್ತಿದ್ದಾರೆ.
ವಿದ್ಯುತ್ ಸಂಪರ್ಕಕ್ಕೆ ಕೊರತೆ ಇಲ್ಲ. ಮನೆಗಳಲ್ಲಿ ಟಿವಿ, ಫ್ರಿಜ್, ಮೊಬೈಲ್ ಫೋನ್ ಇದೆ. ಎಲ್ಲಾ ಕುಟುಂಬಗಳಿಗೂ ಪಡಿತರ ಚೀಟಿ, ಆಧಾರ್ ಕಾರ್ಡ್ ಇದೆ. ಮತದಾರರ ಗುರುತು ಚೀಟಿ ಇದೆ (ಹೆಸರು ಬದಲಾವಣೆ/ ತಿದ್ದುಪಡಿ, ಹೊಸ ಸೇರ್ಪಡೆಗೆ ಸಲ್ಲಿಸಿದ ಅರ್ಜಿಗಳು ಬಾಕಿ ಇದೆ).
“ಇಲ್ಲ’ಗಳ ವಿವರ
ಇಲ್ಲಿನ ಪ್ರಮುಖ ಕೊರತೆಯೇ ಸಂಪರ್ಕ. ಒಂದಾದರೂ ಅಂಗಡಿ, ನ್ಯಾಯ ಬೆಲೆ ಅಂಗಡಿ, ಶಾಲೆ, ಆಸ್ಪತ್ರೆ (ಪ್ರಾಥಮಿಕ ಆರೋಗ್ಯ ಕೇಂದ್ರ), ಅಂಗನವಾಡಿ ಇಲ್ಲ. ನದಿ ಮಧ್ಯೆ ಇದ್ದರೂ ಕುಡಿಯಲು ಯೋಗ್ಯವಾದ ಸಿಹಿ ನೀರು ಇಲ್ಲ. ಚಾಪೆಲ್ ಪಕ್ಕದ ಒಂದು ತೆರೆದ ಬಾವಿ ಮಾತ್ರ ಇದಕ್ಕೆ ಅಪವಾದ. ಈ ಬಾವಿಯೇ ಎಲ್ಲರಿಗೂ ಆಶ್ರಯ. ಇಲ್ಲಿನವರು ಪ್ರತಿ ವಸ್ತುವಿಗೂ ನದಿ ದಾಟಿ ಹೋಗಬೇಕು. ಸೇತುವೆ ಇಲ್ಲ ವಾದ್ದರಿಂದ ನಾಡ ದೋಣಿಯೇ ಆಸರೆ. ಫೆರಿ ಬೋಟ್ ಇಲ್ಲ. ಒಂದು ನಾಡ ದೋಣಿ ಮತ್ತು ಇಬ್ಬರು ಅಂಬಿಗರನ್ನು ಜನರೇ ಹಣ ಒಟ್ಟು ಮಾಡಿ ನೇಮಿಸಿಕೊಂಡಿದ್ದಾರೆ.
ಕೃಷಿ ಹಿಂದೆ ಇತ್ತು
ಈ ಹಿಂದೆ ಇಲ್ಲಿ ಗದ್ದೆಗಳಿದ್ದು, ಕೃಷಿ ಮಾಡುತ್ತಿದ್ದರು. ಈಗ ಉಪ್ಪು ನೀರು ಬರುತ್ತಿರುವುದರಿಂದ ಕೃಷಿ ಮಾಡುತ್ತಿಲ್ಲ. ಮರಳುಗಾರಿಕೆಯಿಂದ ಉಪ್ಪು ನೀರಿನ ಪ್ರಮಾಣ ಹೆಚ್ಚುತ್ತಿದೆ. ರಾತ್ರಿ ವೇಳೆ ಈಗಲೂ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಇದರಿಂದ ದ್ವೀಪದ ಕೆಲವು ಭಾಗಗಳು ಕೊಚ್ಚಿ ಹೋಗುತ್ತಿವೆ ಎಂದು ಆತಂಕ ವ್ಯಕ್ತ ಪಡಿಸುತ್ತಾರೆ ಸ್ಥಳೀಯರು. ಪ್ರಾರ್ಥನಾ ಮಂದಿರದಿಂದ ನದಿ ದಡ ತನಕ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರು 5 ಲಕ್ಷ ರೂ. ಅನುದಾನದಲ್ಲಿ ಕಾಂಕ್ರೀಟು ದಾರಿಯನ್ನು ಮಾಡಿಸಿದ್ದಾರೆ.
ಸೇತುವೆ, ನೀರು ಶುದ್ಧೀಕರಣ ಘಟಕ ಸೌಲಭ್ಯಕ್ಕೆ ಆಗ್ರಹ
ಪ್ರಸ್ತುತ ಸಾರಿಗೆ ಸಂಪರ್ಕಕ್ಕಾಗಿ ಸೇತುವೆ ನಿರ್ಮಾಣ ಹಾಗೂ ಕುಡಿಯುವ ನೀರು ಸೌಲಭ್ಯಕ್ಕಾಗಿ ನದಿ ನೀರು ಶುದ್ಧೀಕರಣ ಘಟಕವನ್ನು ಸ್ಥಾಪಿಸಬೇಕೆಂಬುದು ಇಲ್ಲಿ ನವರ ಪ್ರಮುಖ ಬೇಡಿಕೆ. ಸಹ್ಯಾದ್ರಿ ಎಂಜಿನಿ ಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಅಲಿಸ್ಟರ್ ಸುಜಿತ್ ಲಸ್ರಾದೊ, ಅಲನ್ ಲೋಯ್ ಡಿ’ಸೋಜಾ, ಜೊನಾಥನ್ ಆ್ಯಡ್ರಿಯಲ್ ರೊಡ್ರಿಗಸ್ ಮತ್ತು ಇತರ 11 ಮಂದಿಯ ತಂಡ “ಟೀಮ್ ಟ್ರಿಗಾನ್’ ಹೆಸರಿನಲ್ಲಿ ಈ ದ್ವೀಪದ ಸಮೀಕ್ಷೆಯನ್ನು ಕೈಗೆತ್ತಿಕೊಂಡಿದ್ದು, ದ್ವೀಪವನ್ನು ಉಳಿಸಿ ಅಲ್ಲಿನ ನಿವಾಸಿಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಶ್ರಮಿಸುತ್ತಿದೆ.
ಪ್ರಧಾನಿಗೆ ಪತ್ರ
ಈ ನಿಟ್ಟಿನಲ್ಲಿ ಸಚಿವ ಯು.ಟಿ. ಖಾದರ್ ಮೂಲಕ ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಪ್ರಧಾನಿಯವರ ಕಚೇರಿಯಿಂದ ಕ್ರಮ ವಹಿಸುವ ಬಗ್ಗೆ ಸಂದೇಶ ಬಂದಿದೆ. ಸೇತುವೆ ನಿರ್ಮಾಣದ ಬಗ್ಗೆ 5 ಕೋಟಿ ರೂ. ಗಳನ್ನು ತುರ್ತಾಗಿ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗುವುದು ಎಂದು ಸಚಿವ ಖಾದರ್ ಹೇಳಿದ್ದಾರೆ ಎಂದು ಅಲಿಸ್ಟರ್ ಸುಜಿತ್ ಲಸ್ರಾದೊ ತಿಳಿಸಿದ್ದಾರೆ. ಈ ದ್ವೀಪಕ್ಕೆ ಓರಿಯೋ ಐಲ್ಯಾಂಡ್ ಎಂಬುದಾಗಿ ತಮ್ಮ ತಂಡ ಹೆಸರಿಸಿದ್ದು, ಸರಕಾರ ಮತ್ತು ಇತರ ಪ್ರಾಯೋಜಕರ ಮೂಲಕ ಸೇತುವೆ ಸೇರಿದಂತೆ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಿ ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ ಅವರು.
1986 ರ ಬಳಿಕ ನೆರೆ ಬಂದಿಲ್ಲ
1974 ರಲ್ಲಿ ದೊಡ್ಡ ನೆರೆ ಬಂದಾಗ ಮನೆಯೊಳಗೆ ನೀರು ನುಗ್ಗಿತ್ತು. ಚಾಪೆಲ್ ಅರ್ಧ ಮುಳುಗಿತ್ತು. ನಾವೆಲ್ಲರೂ 2ಧಿ-3 ದಿನಗಳ ಕಾಲ ಮನೆ ಬಿಟ್ಟು ಸಂಬಂಧಿಕರ ಮನೆಗೆ ಹೋಗಿದ್ದೆವು. 1986 ರಲ್ಲಿ ಮತ್ತೆ ನೆರೆ ಬಂದಿತ್ತು. ಆ ಬಳಿಕ ನೆರೆ ಬಂದಿಲ್ಲ.
ಗಿಲ್ಬರ್ಟ್ ಡಿ’ಸೋಜಾ, ಸ್ಥಳೀಯರು
ಸುತ್ತಿಬಳಸಿ ಹೋಗಬೇಕಿತ್ತು
ಈ ಪ್ರದೇಶ ಪಾವೂರು ಗ್ರಾ.ಪಂ. ವ್ಯಾಪ್ತಿಗೆ ಬರುತ್ತಿದ್ದು, ಪಡಿತರ ನ್ಯಾಯ ಬೆಲೆ ಅಂಗಡಿ ಪಾವೂರಿನಲ್ಲಿದೆ. ನಮಗೆ ಹತ್ತಿರದ ಸಂಪರ್ಕ ಅಡ್ಯಾರ್. ಆದರೆ ಗ್ರಾ.ಪಂ. ಕಚೇರಿ, ಪಡಿತರ ಸಾಮಗ್ರಿ ತರಲು ಪಾವೂರಿಗೆ ಸುತ್ತು ಬಳಸಿ ಹೋಗಬೇಕಿದೆ.
ಫ್ಲೆವಿ ಡಿ’ಸೋಜಾ, ಸ್ಥಳೀಯರು
ಮೂಲಸೌಕರ್ಯ ಬೇಕಿದೆ
ಮಂಗಳೂರು ನಗರ ಸ್ಮಾರ್ಟ್ ಸಿಟಿಯತ್ತ ಸಾಗುತ್ತಿರುವಾಗ ಮಂಗಳೂರು ತಾಲೂಕಿನದ್ದೇ ಭಾಗವಾದ ನಗರದಿಂದ ಕೇವಲ 12 ಕಿ.ಮೀ. ದೂರ ಇರುವ ಈ ದ್ವೀಪಕ್ಕೆ ಮೂಲ ಸೌಕರ್ಯ ಸಿಗಬೇಕಿದೆ. ಈ ದಿಶೆಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ನಾವು ಶ್ರಮಿಸುತ್ತಿದ್ದೇವೆ.
ಅಲಿಸ್ಟರ್ ಸುಜಿತ್ ಲಸ್ರಾದೊ, ಟ್ರಿಗಾನ್ ತಂಡದ ಮುಖಂಡ
ಮಳೆಗಾಲದಲ್ಲಿ ಅಪಾಯಕಾರಿ
ಸಚಿವ ಯು.ಟಿ. ಖಾದರ್ ಅವರು ಕಳೆದ ಚುನಾವಣೆ ಸಂದರ್ಭದಲ್ಲಿ ಓಟು ಕೇಳಲು ಬಂದಿದ್ದರು. ಬಳಿಕ ಈ ಕಡೆ ಬಂದಿಲ್ಲ. ಬೆಳಗ್ಗೆ ಮತ್ತು ಸಂಜೆ ಹೊತ್ತು ಶಾಲೆಗೆ ಹೋಗುವ ಮಕ್ಕಳ ಕಷ್ಟ ಹೇಳ ತೀರದು. ಬೆಳಗ್ಗೆ 6.30 ಕ್ಕೆ ದೋಣಿ ಏರಲು ಆರಂಭಿ ಸುತ್ತಾರೆ. 25- 30 ಮಕ್ಕಳನ್ನು ನಾಡ ದೋಣಿಯಲ್ಲಿ ಸಾಗಿಸಲು 2- 3 ಟ್ರಿಪ್ ಮಾಡಬೇಕು. ಮಳೆಗಾಲದಲ್ಲಿ ಅವರನ್ನು ಸಾಗಿಸುವುದು ತೀರಾ ಅಪಾಯಕಾರಿ.
ಬಾಸಿಲ್ ಡಿ’ಸೋಜಾ, ಸ್ಥಳೀಯರು.
ಶಾಶ್ವತ ಸೇತುವೆ ಬೇಕು
ಸೇತುವೆ ಬಗ್ಗೆ ಅನೇಕ ಸಭೆಗಳು ನಡೆದಿವೆ. ಎಂಜಿನಿಯರುಗಳು ಬಂದು ಸರ್ವೆ ನಡೆಸಿದ್ದಾರೆ. ಎರಡು ವರ್ಷಗಳ ಹಿಂದೆ ತೂಗು ಸೇತುವೆಗಾಗಿ 1.5 ಕೋಟಿ ರೂ. ಮಂಜೂರಾಗಿದೆ ಎಂದು ತಿಳಿಸಲಾಗಿತ್ತು. ಆದರೆ ಯೋಜನಾ ವರದಿಯಲ್ಲಿನ ಕೆಲವು ತಾಂತ್ರಿಕ ದೋಷಗಳ ಕಾರಣ ಈ ಹಣ ವಾಪಸ್ ಹೋಗಿದೆ. ನಮಗೆ ತೂಗು ಸೇತುವೆ ಬೇಡ. ಅದರಲ್ಲಿ ಮತ್ತು ದೋಣಿಯಲ್ಲಿ ಹೋಗುವುದು ಒಂದೇ. ಆದ್ದರಿಂದ ನಮಗೆ ಶ್ವಾಶ್ವತ ಸೇತುವೆ ಬೇಕು.
ಗ್ರೇಶನ್ ಡಿ’ಸೋಜಾ, ಸ್ಥಳೀಯರು
ಸಕಾಲಿಕ ಚಿಕಿತ್ಸೆ
ಸಿಗದೆ ಮಡಿದರು ರಸ್ತೆ ಸಂಪರ್ಕ ಹಾಗೂ ಆರೋಗ್ಯ ಕೇಂದ್ರವಿಲ್ಲದ ಕಾರಣ ಅನಾರೋಗ್ಯದ ಸಂದರ್ಭದ ಸಮಸ್ಯೆ ಹೇಳತೀರದು.
ಹೃದಯಾಘಾತ ಮತ್ತಿತರ ಸಂದರ್ಭಗಳಲ್ಲಿ ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗದೆ ಕೆಲವು ಮಂದಿ ಸಾವನ್ನಪ್ಪಿದ್ದಾರೆ. 1996 ರಲ್ಲಿ
ಐರಿನ್ ಡಿ’ಸೋಜಾ, 1999 ರಲ್ಲಿ ಮೈಕಲ್ ಡಿ’ಸೋಜಾ, 2000 ರಲ್ಲಿ ಬಾಸಿಲ್ ಡಿ’ಸೋಜಾ, 2008 ರಲ್ಲಿ ಫ್ರಾನ್ಸಿಸ್ ಫೆರಾವೊ, 2015 ರಲ್ಲಿ ಜೋಸೆಫಿನ್ ಐರಿನ್ ಅವರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತ ಪಟ್ಟಿದ್ದರು. ಇಪ್ಪತ್ತು ವರ್ಷಗಳ ಹಿಂದೆ ನನ್ನ
ಮಗುವೊಂದು ತೀರಿತ್ತು ಈಗಲೂ ಯಾರಾದರೂ ಅಸ್ವಸœರಾದರೆ ಅವರನ್ನು ಎತ್ತಿಕೊಂಡು ದೋಣಿಯಲ್ಲಿ
ಸಾಗಬೇಕು. ಅಲ್ಲದೆ ಗ್ರಾಮ ಪಂಚಾಯತ್‌ನವರು ನಮಗೆ ಗ್ರಾಮ ಸಭೆಗೆ ಕರೆಯುವುದಿಲ್ಲ. ಈ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಿದರೆ ಸಭೆಗೆ ಹೋಗಿ ನಮ್ಮ ಸಮಸ್ಯೆಗಳನ್ನು ಹೇಳಬಹುದು. ವರ್ಷದ ಹಿಂದೆ ಗ್ರಾಮ ಪಂಚಾಯತ್‌ಗೆ ಹೋಗಿ ಆಗ್ರಹಿಸಿದ್ದರಿಂದ ನಾಲ್ಕು ದಾರಿ ದೀಪಗಳು ಬಂದಿವೆ.
ಲವೀನಾ ಡಿ’ಸೋಜಾ, ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.