ಕೆಂಪುಬಟ್ಟೆ ತೋರಿಸಿ ಸಂಭಾವ್ಯ ರೈಲು ಅವಘಡ ತಪ್ಪಿಸಿದ ಮಹಿಳೆಗೆ ರೈಲ್ವೇ ಪೊಲೀಸರಿಂದ ಸಮ್ಮಾನ
Team Udayavani, Apr 5, 2023, 7:12 AM IST
ಮಂಗಳೂರು: ರೈಲು ಹಳಿಗೆ ಮರ ಬಿದ್ದದ್ದನ್ನು ಗಮನಿಸಿ ತತ್‌ಕ್ಷಣವೇ ಎಚ್ಚೆತ್ತುಕೊಂಡು ಸಮಯ ಪ್ರಜ್ಞೆ ಯಿಂದ ಕೆಂಪುಬಟ್ಟೆಯನ್ನು ಕೈಯಲ್ಲಿ ಪ್ರದರ್ಶಿಸಿ ರೈಲು ನಿಲ್ಲಿಸುವ ಮೂಲಕ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿದ ಕುಡುಪು ಆಯರಮನೆ ಚಂದ್ರಾವತಿ ಅವರ ಕಾರ್ಯ “ಉದಯವಾಣಿ’ಯಲ್ಲಿ ಪ್ರಕಟಗೊಂಡ ಬಳಿಕ ನಾಡಿನೆಲ್ಲೆಡೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ವರದಿ ಗಮನಿಸಿದ ಬಳಿಕ ಮಂಗಳೂರು ರೈಲ್ವೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸಂಜೆ ಮಂಗಳೂರು ಸೆಂಟ್ರಲ್ ನಿಲ್ದಾಣದ ರೈಲ್ವೇ ಪೊಲೀಸ್ ಠಾಣೆಯಲ್ಲಿ ಚಂದ್ರಾವತಿ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಮಂಗಳೂರು ರೈಲ್ವೇ ಪೊಲೀಸ್ ಇನ್‌ಸ್ಪೆಕ್ಟರ್ ಮೋಹನ್ ಕೊಟ್ಟಾರಿ ಅವರು ಮಾತನಾಡಿ, “70ರ ವಯಸ್ಸಿನ ಚಂದ್ರಾವತಿ ಅವರು ಜೀವದ ಹಂಗು ತೊರೆದು ಸಂಭಾವ್ಯ ರೈಲು ದುರ್ಘಟನೆಯನ್ನು ತಪ್ಪಿಸುವ ಮೂಲಕ ಮಾದರಿ ಕಾರ್ಯ ನಡೆಸಿದ್ದಾರೆ. ಚಂದ್ರಾವತಿ ಅವರ ಸಾಧನೆಯನ್ನು ಇಲಾಖೆಯ ಕೇಂದ್ರ ಕಚೇರಿಗೂ ವರದಿ ಮಾಡಲಾಗುವುದು’ ಎಂದರು.
ರೈಲ್ವೇ ಇಲಾಖೆಯ ಆರ್‌ಪಿಎಫ್ ಎಸ್. ದಿಲೀಪ್ ಕುಮಾರ್, ಚಂದ್ರಾವತಿ ಅವರ ಪುತ್ರ ನವೀನ್ ಕುಮಾರ್ ಕುಡುಪು, ಸಂಬಂಧಿಕರಾದ ಉದಯ್ ಕುಡುಪು ಉಪಸ್ಥಿತರಿದ್ದರು.
ಪ್ರಧಾನಿಗೆ ಪತ್ರ
ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿದ ಚಂದ್ರಾವತಿ ಅವರ ಕಾರ್ಯ ವನ್ನು ಪರಿಗಣಿಸಿ ಅವರಿಗೆ ಸೂಕ್ತ ಗೌರವ ನೀಡುವಂತೆ ಒತ್ತಾಯಿಸಿ ಪ್ರಧಾನಿ ಮೋದಿ, ರೈಲ್ವೇ ಸಚಿವರು, ದಕ್ಷಿಣ ರೈಲ್ವೇ ಡಿಆರ್‌ಎಂ, ಜನರಲ್ ಮ್ಯಾನೆಜರ್ ಅವರಿಗೆ ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿ ವತಿಯಿಂದ ಅಧ್ಯಕ್ಷ ಹನುಮಂತ ಕಾಮತ್ ಅವರು ಪತ್ರ ಮೂಲಕ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.