Zika Virus: ರಾಜ್ಯದಲ್ಲಿ ಜಿಕಾ ವೈರಸ್ ಪತ್ತೆ… ದ.ಕ., ಉಡುಪಿ ಜಿಲ್ಲೆಗಳಲ್ಲಿ ವಿಶೇಷ ನಿಗಾ
Team Udayavani, Nov 3, 2023, 9:31 AM IST
ಮಂಗಳೂರು/ಉಡುಪಿ: ಚಿಕ್ಕಬಳ್ಳಾಪುರದಲ್ಲಿ ಸೊಳ್ಳೆಗಳಲ್ಲಿ ಅಪಾಯಕಾರಿ ಜಿಕಾ ವೈರಸ್ ಪತ್ತೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವಿಶೇಷ ನಿಗಾ ಇಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ಜಿಕಾ ವೈರಸ್ ರೋಗದ ಲಕ್ಷಣವಿರುವ ಪ್ರಕರಣ ಕಂಡುಬಂದರೆ ಕೂಡಲೇ ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಲು ಎಲ್ಲ ಪ್ರಾಥಮಿಕ, ಸಮುದಾಯ, ತಾಲೂಕು ಆರೋಗ್ಯ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ. ಜಿಕಾ ಲಕ್ಷಣ ಡೆಂಗ್ಯೂ ಲಕ್ಷಣವೇ ಇರುವ ಕಾರಣ ಲಾರ್ವಾ ನಾಶಕ್ಕೆ ಆರೋಗ್ಯ ಇಲಾಖೆ ಈಗಾಗಲೇ ನಿರ್ಧರಿಸಿದೆ. ಮಂಗಳೂರು ಪಾಲಿಕೆ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಹೆಚ್ಚಾಗುತ್ತಿದ್ದು, ಸದ್ಯ 393 ಪ್ರಕರಣಗಳಿವೆ. ಡೆಂಗ್ಯೂ ಸೊಳ್ಳೆ ನಿಯಂತ್ರಣಕ್ಕೆ ಸದ್ಯ ಫಾಗಿಂಗ್, ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ. ಇದನ್ನು ಮತ್ತಷ್ಟು ಪರಿಣಾಮ ಕಾರಿಯಾಗಿಸಲು ನಿರ್ಧರಿಸಲಾಗಿದೆ. ಜಿಕಾ ಮಾರಣಾಂತಿಕ ಕಾಯಿಲೆಯ ಲ್ಲದಿದ್ದರೂ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಬೇಕು. ಗರ್ಭಿಣಿಯರು ಹೆಚ್ಚಿನ ನಿಗಾ ವಹಿಸಬೇಕು.
ದ.ಕ. ಮತ್ತು ಉಡುಪಿ ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾ ಧಿಕಾರಿಗಳಾದ ಡಾ| ನವೀನ್ ಚಂದ್ರ ಕುಲಾಲ್ ಮತ್ತು ಡಾ| ಪ್ರಶಾಂತ ಭಟ್ “ಉದಯವಾಣಿ’ಗೆ ಪ್ರತಿಕ್ರಿಯಿಸಿ, ಜಿಕಾ ವೈರಸ್ ನಿಟ್ಟಿನಲ್ಲಿ ಜಿಲ್ಲೆಯಲ್ಲೂ ನಿಗಾ ಇರಿಸಲಾಗಿದೆ. ಈ ರೋಗಕ್ಕೆ ತುತ್ತಾದವರಲ್ಲಿ ಕೆಂಗಣ್ಣು, ತಲೆನೋವು, ಜ್ವರ, ತುರಿಕೆ, ಕೀಲು ನೋವು ಇರುತ್ತದೆ. 2ರಿಂದ 7 ದಿನಗಳೊಳಗೆ ರೋಗ ತೀವ್ರತೆ ಪಡೆದುಕೊಳ್ಳುತ್ತದೆ. ಜಿಲ್ಲೆಯಲ್ಲಿ ಸದ್ಯ ಅಂತಹ ಯಾವುದೇ ಪ್ರಕರಣಗಳಿಲ್ಲ.ಆದರೂ ಪ್ರತಿಯೊಬ್ಬರೂ ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರದಿಂದ ಇರಬೇಕು. ರೋಗ ಲಕ್ಷಣ ಕಂಡುಬಂದರೆ ವೈದ್ಯರನ್ನು ಭೇಟಿಯಾಗಿ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Hunsur: ಕ್ಷುಲ್ಲಕ ಕಾರಣಕ್ಕೆ ಕಾರ್‌ಸ್ಟ್ಯಾಂಡ್ ಅಧ್ಯಕ್ಷ-ಉಪಾಧ್ಯಕ್ಷರ ನಡುವೆ ಬಡಿದಾಟ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.