ಪುತ್ತೂರು, ಸುಳ್ಯ ತಾಲೂಕು: 262 ಅತಿಥಿ ಶಿಕ್ಷಕರ ನೇಮಕ
Team Udayavani, Nov 13, 2021, 3:00 AM IST
ಸಾಂದರ್ಭಿಕ ಚಿತ್ರ
ಪುತ್ತೂರು: ಪ್ರಾಥಮಿಕ ಶಾಲೆಗಳಿಗೆ ಮತ್ತು ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು ಪುತ್ತೂರು ಮತ್ತು ಸುಳ್ಯ ತಾಲೂಕಿನಲ್ಲಿ ಒಟ್ಟು 262 ಶಿಕ್ಷಕರ ನೇಮಕವಾಗಲಿದೆ.
ಪ್ರತೀ ತಾಲೂಕುಗಳಲ್ಲಿನ ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳಿಗೆ ಪರ್ಯಾಯವಾಗಿ ಎಷ್ಟು ಮಂದಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎಂಬ ಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದ್ದು, ಆಯಾ ಶಾಲಾ ಮುಖ್ಯ ಶಿಕ್ಷಕರಿಗೇ ಅತಿಥಿ ಶಿಕ್ಷಕರ ನೇಮಕಾತಿ ಜವಾಬ್ದಾರಿ ವಹಿಸಿದೆ.
ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸೆಪ್ಟೆಂಬರ್ ತಿಂಗಳಿಂದ 2022ರ ಮಾರ್ಚ್‌ವರೆಗೆ, ಪ್ರೌಢಶಾಲಾ ಶಿಕ್ಷಕರನ್ನು ಅಕ್ಟೋಬರ್ 21ರಿಂದ ಎಪ್ರಿಲ್ 2022 ರವರೆಗೆ ಅನ್ವಯಿಸುವಂತೆ ನೇಮಕ ಮಾಡಿಕೊಳ್ಳಬೇಕು. ಅತಿಥಿ ಶಿಕ್ಷಕರ ಹುದ್ದೆಗೆ ನಿಗದಿಪಡಿಸಿರುವ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಗೌರವಧನ ನಿಗದಿ:
ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ ಮಾಸಿಕ 7,500 ರೂ., ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ ಮಾಸಿಕ 8,000 ರೂ. ಗೌರವ ಧನ ನಿಗದಿಪಡಿಸಲಾಗಿದೆ. ತಾಲೂಕುವಾರು ನೇಮಕೊಂಡ ಅತಿಥಿ ಶಿಕ್ಷಕರ ಮಾಹಿತಿ ಸಂಗ್ರಹಿಸಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿಲ್ಲೆಯಿಂದ ಅನುದಾನ ಬಿಡುಗಡೆಗೆ ಬೇಡಿಕೆ ಸಲ್ಲಿಸಬೇಕು. ಆರ್ಥಿಕ ಇಲಾಖೆಯಿಂದ ನೇರವಾಗಿ ತಾಲೂಕು ಪಂಚಾಯತ್‌ಗಳಿಗೆ ಸಂಭಾವನೆಯ ಹಣ ಬಿಡುಗಡೆಯಾಗಲಿದ್ದು ಅಲ್ಲಿಂದ ಅತಿಥಿ ಶಿಕ್ಷಕರಿಗೆ ಪಾವತಿಯಾಗಲಿದೆ.
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮೇಲೆ ಆ ಶಾಲೆಯಲ್ಲಿ ಖಾಲಿ ಹುದ್ದೆಗೆ ವರ್ಗಾವಣೆಯಾಗಿ ಬಂದ ಶಿಕ್ಷಕರ ಸ್ಥಾನಕ್ಕೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆ ಅತಿಥಿ ಶಿಕ್ಷಕರನ್ನು ತಾಲೂಕಿನ ಒಳಗಿನ ಬೇರೊಂದು ಶಾಲೆಗೆ ನಿಯೋಜಿಸಬೇಕು ಎಂದು ತಿಳಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ವಿಳಂಬವಾಗಿ ಶಾಲೆಗಳು ಆರಂಭವಾಗಿದ್ದು ಪಠ್ಯಕ್ರಮ ಪೂರ್ಣಗೊಳಿಸಲು ಅನುವಾಗುವಂತೆ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ಅನುಮತಿ ಕೋರಿ ಶಿಕ್ಷಣ ಇಲಾಖೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.ಇದಕ್ಕೆ ಆರ್ಥಿಕ ಇಲಾಖೆ ಅನುಮತಿ ನೀಡಿದ ಮೇರೆಗೆ ಈ ಆಯ್ಕೆ ನಡೆಯುತ್ತಿದೆ.
ಪ್ರಕ್ರಿಯೆ ಪ್ರಗತಿಯಲ್ಲಿ :
ಪುತ್ತೂರು-ಕಡಬ ಶೈಕ್ಷಣಿಕ ತಾಲೂಕಿನಲ್ಲಿ 123 ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ 21 ಪ್ರೌಢಶಾಲಾ ಶಿಕ್ಷಕರ ನೇಮಕಾತಿ ನಡೆಯಲಿದೆ. ಸುಳ್ಯ ತಾಲೂಕಿನಲ್ಲಿ 97 ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ 21 ಪ್ರೌಢಶಾಲಾ ಶಿಕ್ಷಕರ ನೇಮಕಾತಿ ನಡೆಯಲಿದೆ. ಈಗಾಗಲೇ ಆಸಕ್ತರು ಆಯಾ ಶಾಲೆಗಳಿಗೆ ಅರ್ಜಿ ಸಲ್ಲಿಸಿದ್ದು ಅಲ್ಲಿ ಮುಖ್ಯ ಶಿಕ್ಷಕರು ಅರ್ಹರನ್ನು ಆಯ್ಕೆ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಹಾಗೂ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ ಉದಯವಾಣಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.