ಆಲಂಕಾರು ಪೇಟೆಯಲ್ಲಿ 4 ಸಿಸಿ ಕೆಮರಾ ಅಳವಡಿಕೆ
ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಸಹಕಾರಿ; ಇನ್ನೂ ಎರಡು ಕಡೆಗಳಿಗೆ ಬೇಡಿಕೆ
Team Udayavani, Dec 20, 2019, 4:59 AM IST
ಆಲಂಕಾರು: ಕಡಬ ತಾಲೂಕಿನ ಅತೀ ಹೆಚ್ಚು ಜನ ಸಂಪರ್ಕವಿರುವ ಆಲಂಕಾರು ಪೇಟೆಗೆ ಪೊಲೀಸ್ ಇಲಾಖೆಯಿಂದ ಸಿಸಿ ಕೆಮರಾ ಕಣ್ಗಾವಲು ಹಾಕಲಾಗಿದೆ. ಅಂಚೆ ಕಚೇರಿಯ ಬಳಿಯಲ್ಲಿ ರಾಜ್ಯ ಹೆದ್ದಾರಿಯನ್ನು ಹೊಂದಿಕೊಂಡು ಜನನಿಬಿಡ ಪ್ರದೇಶಗಳಲ್ಲಿ ನಾಲ್ಕು ಸಿಸಿ ಕೆಮರಾ ಅಳವಡಿಸಿ, ಅಕ್ರಮ ಚಟುವಟಿಗಳ ಮೇಲೆ ಹದ್ದಿನ ಕಣ್ಣಿರಿಸಿದೆ. ಪೊಲೀಸ್ ಆಯುಕ್ತರ ಆದೇಶದಂತೆ ಸಿಸಿ ಕೆಮರಾ ಅಳವಡಿಸಿದ್ದು, ಪ್ರಜ್ಞಾವಂತ ನಾಗರಿಕರು ಹಾಗೂ ಪೊಲೀಸರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಸಂಪರ್ಕ ಕೇಂದ್ರ
ಶಾಂತಿಮೊಗರು ನೂತನ ಸೇತುವೆ ಸಂಪರ್ಕಕ್ಕೆ ತೆರವಾದ ಬಳಿಕ ಆಲಂಕಾರು ಪೇಟೆ ಹಲವು ಕಡೆಗಳಿಗೆ ಸಂಪರ್ಕ ಕೇಂದ್ರವಾಗಿ ಬೆಳೆದು ನಿಂತಿದೆ. ಆಲಂಕಾರು – ಶಾಂತಿಮೊಗರು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ಆಲಂಕಾರು ಪೇಟೆ ಉಪ್ಪಿನಂಗಡಿ – ಕಡಬ – ಸುಬ್ರಹ್ಮಣ್ಯ ಹಾಗೂ ನೆಲ್ಯಾಡಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತದೆ. ಧರ್ಮಸ್ಥಳ, ಕೇರಳಕ್ಕೂ ಸುಲಭ ಸಂಪರ್ಕವಾಗುತ್ತಿದೆ. ಹೀಗಾಗಿ, ಕಡಬ ಠಾಣಾ ವ್ಯಾಪ್ತಿಯ ಆಲಂಕಾರು ರಿಕ್ಷಾ ನಿಲ್ದಾಣದ ಬಳಿ, ಆಲಂಕಾರು ಹಾಲು ಉತ್ಪಾದರಕ ಸಹಕಾರಿ ಸಂಘದ ಸಮೀಪ ಒಟ್ಟು 4 ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ. ಆಲಂಕಾರು ಸಿಎ ಬ್ಯಾಂಕ್‌ನ ಆವರಣದಲ್ಲಿಯೂ ಸಿಸಿ ಕೆಮರಾ ಹಾಕಲಾಗಿದೆ.
ಅಕ್ರಮ ಮರಳುಗಾರಿಕೆ, ಮರ ಸಾಗಾಟ ಹಾಗೂ ಗೋಸಾಗಾಟ ರಾತ್ರಿ ವೇಳೆ ಅವ್ಯಾಹತವಾಗಿ ನಡೆಯುತ್ತಿದ್ದು, ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯೂ ನಿರಂತರವಾಗಿದೆ. ಶಾಂತಿಮೊಗರು ಸಂಪರ್ಕ ಸೇತುವೆಯ ವ್ಯಾಪ್ತಿಯಲ್ಲಿ ಸಿಸಿ ಕೆಮರಾಗಳಿಲ್ಲದೆ ಅಕ್ರಮ ದಂಧೆಕೋರರಿಗೆ ವರವಾಗಿ ಪರಿಣಮಿಸಿದೆ. ಹೀಗಾಗಿ, ಪೊಲೀಸರು ಕುದ್ಮಾರು, ಶಾಂತಿಮೊಗರು ದೇವಸ್ಥಾನದ ವಠಾರದಲ್ಲಿ ಸಿಸಿ ಕೆಮರಾ ಅಳವಡಿಸಿ, ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಬೇಕು ಎಂಬ ಆಗ್ರಹ ಸ್ಥಳೀಯರಿಂದ ವ್ಯಕ್ತವಾಗಿದೆ.
ಇನ್ನೆರಡು ಕಡೆಗಳಿಗೆ ಬೇಡಿಕೆ
ಸಿಸಿ ಕೆಮರಾಗಳನ್ನು ಅಳವಡಿಸಿರುವ ಕಾರಣ ಆಲಂಕಾರು ಪೇಟೆಯ ನಿವಾಸಿಗಳಿಗೆ ಹಾಗೂ ವ್ಯಾಪಾರಿಗಳಿಗೆ ಪೂರಕ ವಾತಾವರಣ ನಿರ್ಮಾಣ ವಾಗಿದೆ. ದರೋಡೆ , ಕಳ್ಳತನ ಪ್ರಕರಣಗಳು ಹತೋ ಟಿಗೆ ಬರಲಿವೆ. ಶಾಂತಿಮೊಗರು ಸೇತುವೆ ಬಳಿ ಹಾಗೂ ನೆಕ್ಕರೆ ರಿಕ್ಷಾ ಪಾರ್ಕ್ ಬಳಿಯಲ್ಲಿ ಮತ್ತೆರಡು ಆಧುನಿಕ ಮಾದರಿ ಯ ಸಿಸಿ ಕೆಮರಾಗಳನ್ನು ಅಳವಡಿಸಲು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಗುವುದು.
- ಸುನಂದಾ ಬಾರ್ಕುಲಿ, ಆಲಂಕಾರು ಗ್ರಾ.ಪಂ. ಅಧ್ಯಕ್ಷೆ
ನಿರ್ವಹಣೆ ಗಮನಿಸಿ
ನೂತನ ಸಿಸಿ ಕೆಮರಾಗಳನ್ನು ಅಳವಡಿಸಿರುವುದು ಶ್ಲಾಘನೀಯ. ಈ ಮೂಲಕ ಇನ್ನಾದರೂ ಅಕ್ರಮ ಚಟುವಟಿಕೆಗೆ ಕಡಿವಾಣ ಬೀಳಬೇಕಾಗಿದೆ. ಸಮರ್ಪಕ ನಿರ್ವಹಣೆಗಳಿಲ್ಲದೆ ಕೆಮರಾಗಳು ಕೆಟ್ಟು ಹೋಗದಂತೆ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ. ಕೆಮರಾಗಳ ಕಾರ್ಯವೈಖರಿ ಬಗ್ಗೆ ವಾರಕ್ಕೊಮ್ಮೆ ಪೊಲೀಸರು ಪರಿಶೀಲಿಸಿ ಖಚಿತ ಪಡಿಸಿಕೊಳ್ಳಬೇಕು.
– ಪುರಂದರ ಗೌಡ ಕೋಡ್ಲ, ಆಲಂಕಾರು ಆಟೋ ರಿಕ್ಷಾ ಚಾಲಕ – ಮಾಲಕರ ಸಂಘದ ಅಧ್ಯಕ್ಷ
– ಸದಾನಂದ ಆಲಂಕಾರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.