Facebook ಷೇರು ಮಾರುಕಟ್ಟೆ ಹೂಡಿಕೆ ಜಾಹೀರಾತು ನಂಬಿ 46 ಲಕ್ಷ ರೂ. ಕಳೆದುಕೊಂಡರು
Team Udayavani, Apr 8, 2024, 12:43 AM IST
![Facebook ಷೇರು ಮಾರುಕಟ್ಟೆ ಹೂಡಿಕೆ ಜಾಹೀರಾತು ನಂಬಿ 46 ಲಕ್ಷ ರೂ. ಕಳೆದುಕೊಂಡರು](https://www.udayavani.com/wp-content/uploads/2024/04/fb-620x398.jpg)
![Facebook ಷೇರು ಮಾರುಕಟ್ಟೆ ಹೂಡಿಕೆ ಜಾಹೀರಾತು ನಂಬಿ 46 ಲಕ್ಷ ರೂ. ಕಳೆದುಕೊಂಡರು](https://www.udayavani.com/wp-content/uploads/2024/04/fb-620x398.jpg)
ಪುತ್ತೂರು: ಫೇಸ್‌ಬುಕ್‌ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಬಗ್ಗೆ ಬಂದ ಜಾಹೀರಾತನ್ನು ನಂಬಿ ವ್ಯಕ್ತಿಯೋರ್ವರು 46.1 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.
ಹಣ ಕಳೆದುಕೊಂಡ ಸಾಲ್ಮರ ಆಶಿಯಾನ ಯು. ಅಬ್ದುಲ್ಲಾ ಹಾಜಿ ಅವರ ಪುತ್ರ ಮುಹಮ್ಮದ್ ಅನ್ಸಾಫ್ ಎಂ. (40) ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 20-02-2024ರಂದು ಫೇಸ್‌ಬುಕ್‌ನಲ್ಲಿ ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ಬಂದ ಜಾಹೀರಾತು ನೋಡಿದಾಗ ಅದರಲ್ಲಿ “ಗುಡ್ ಇನ್‌ಕಂ ರಿಸಲ್ಟ್’ ಎಂಬುದಾಗಿ ಇದ್ದು, ಅದರಲ್ಲಿದ್ದ ಲಿಂಕನ್ನು ತೆರೆದಾಗ ವಾಟ್ಸ್ ಆ್ಯಪ್ ಪೇಜ್ ಕಾಣಿಸಿದೆ. ಪೇಜ್‌ನಲ್ಲಿ ಅಪರಿಚಿತ ವ್ಯಕ್ತಿಯು ಕಂಪೆನಿಯಲ್ಲಿರುವ ಸ್ಟಾಕ್‌ನ ಬಗ್ಗೆ ಡೀಟೈಲ್ಸ್ ನೀಡಿ ಬೇರೊಂದು ವಾಟ್ಸ್ ಆ್ಯಪ್ ಗ್ರೂಪ್‌ಗೆ ಜಾಯಿನ್ ಮಾಡಿಸಿದ್ದು, ಅದರಲ್ಲಿ ಗ್ರೂಪ್ ಅಡ್ಮಿನ್ ದೀಪ್ತಿ ಶರ್ಮ ಅವರ ಹೆಸರಿನಲ್ಲಿತ್ತು.
ವಾಟ್ಸ್ ಆ್ಯಪ್ ಗ್ರೂಪ್‌ನವರು ಹಣ ಹೂಡಿಕೆ ಮಾಡಲು ಬೇರೊಂದು ವಾಟ್ಸ್ ಆ್ಯಪ್ ಗ್ರೂಪ್‌ಗೆ ಜಾಯಿನ್ ಆಗುವಂತೆ ತಿಳಿಸಿ, ನೀಡಿದ ಲಿಂಕ್ ಒತ್ತಿದಾಗ ವಿಕಿಂಗ್ “ಗ್ಲೋಬಲ್ ಇನ್ವೆಸ್ಟರ್ಸ್’ ಎಂಬ ವಾಟ್ಸ್ ಆ್ಯಪ್ ಗ್ರೂಪ್ ತೆರೆದಿದ್ದು, ಅದರಲ್ಲಿ ಸುಮಾರು 100ಕ್ಕಿಂತ ಹೆಚ್ಚಿನ ಸದಸ್ಯರು ಇದ್ದರು.
ವಾಟ್ಸ್ ಆ್ಯಪ್ ಗ್ರೂಪಿನಲ್ಲಿ ಟ್ರೇಡಿಂಗ್ ಬಗ್ಗೆ ಮಾಹಿತಿಯನ್ನು ನೀಡಿ ಆ್ಯಪ್ ಡೌನ್‌ಲೋಡ್ ಮಾಡಲು ತಿಳಿಸಿದ್ದು, ಅದರಂತೆ ಅನ್ಸಾಫ್ ವಿಕಿಂಗ್ ಟ್ರೇಡಿಂಗ್ ಎಂಬ ಹೆಸರಿನ ಆ್ಯಪ್ ಡೌನ್‌ಲೋಡ್ ಮಾಡಿ ಅದರಲ್ಲಿ ತನ್ನ ಹೆಸರಿನಲ್ಲಿ ಟ್ರೇಡಿಂಗ್ ಖಾತೆ ತೆರೆದು ಅದಕ್ಕೆ ತನ್ನ ಆಧಾರ್ ಕಾರ್ಡ್, ಮೊಬೈಲ್ ನಂಬರ್, ಬ್ಯಾಂಕ್ ವಿವರವನ್ನು ಹಾಕಿದ್ದಾರೆ. ಆ್ಯಪ್‌ಗೆ ಹಣ ಹಾಕುವ ಬಗ್ಗೆ ಮಾಹಿತಿಯನ್ನು ವ್ಯಕ್ತಿಯೊಬ್ಬ ವಾಟ್ಸ್ ಆ್ಯಪ್‌ನಲ್ಲಿ ಕೋಡ್ ಹಾಗೂ ವಿವಿಧ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡಿದಂತೆ 21-02-2024ರಂದು 10,000 ರೂ. ಹಣವನ್ನು ಪಾವತಿಸಿದ್ದಾರೆ.
ಅನಂತರ ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಲು ತಿಳಿಸಿದ್ದಕ್ಕೆ ಅಪರಿಚಿತ ವ್ಯಕ್ತಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಹಂತ-ಹಂತವಾಗಿ ಒಟ್ಟು 46,10,000 ರೂ. ಹಣವನ್ನು ಪಾವತಿಸಿದ್ದಾರೆ. ಹಂತ-ಹಂತವಾಗಿ ಒಟ್ಟು 2,00,000 ರೂ. ಹಣ ಅನ್ಸಾಫ್ ಎರಡು ಖಾತೆಗೆ ಮರು ಜಮೆಯಾಗಿದ್ದು, ಉಳಿದ ಹಣವನ್ನು ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.