6,956 ಅನರ್ಹ ಪಡಿತರ ಚೀಟಿ ಪತ್ತೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 26,89,406 ರೂಪಾಯಿ ದಂಡ ವಸೂಲಿ
Team Udayavani, Aug 14, 2020, 6:32 AM IST
ಸಾಂದರ್ಭಿಕ ಚಿತ್ರ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ತನಕ ನಿಯಮಕ್ಕೆ ವಿರುದ್ಧವಾಗಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ 6,956 ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲಾಗಿದೆ!
ದ.ಕ. ಜಿಲ್ಲೆಯಲ್ಲಿ ನಿಯಮ ಮೀರಿ 6,956 ಕುಟುಂಬಗಳು ಬಿಪಿಎಲ್ (ಆದ್ಯತ ಪಡಿತರ ಚೀಟಿ) ಪಡಿತರ ಚೀಟಿ ಪಡೆದು, ಅದರ ಸವಲತ್ತುಗಳನ್ನು ಉಪಯೋಗಿಸುತ್ತಿರುವುದು ಪತ್ತೆ ಆಗಿದೆ. ಮಂಗಳೂರು ಗ್ರಾಮಾಂತರ-477, ಮಂಗಳೂರು-1,256, ಬಂಟ್ವಾಳ- 1,301, ಪುತ್ತೂರು-1,247, ಬೆಳ್ತಂಗಡಿ- 1,873, ಸುಳ್ಯ-801 ಅನರ್ಹ ಕಾರ್ಡ್ ಗಳನ್ನು ಪತ್ತೆ ಮಾಡಲಾಗಿದೆ.
26,89,406 ರೂ. ದಂಡ ವಸೂಲಿ
ಅನರ್ಹ ಪಡಿತರ ಚೀಟಿ ಪತ್ತೆ ಮಾಡಿ ಜನವರಿಯಿಂದ ಈ ತನಕ 26,89,406 ರೂ. ದಂಡ ವಸೂಲಿ ಮಾಡಲಾಗಿದೆ. ಬಿಪಿಎಲ್ ಪಡಿತರ ಕಾರ್ಡ್ ಅನ್ನು ಆ ಕುಟುಂಬ ಯಾವಾಗ ಪಡೆದುಕೊಂಡಿತು ಮತ್ತು ಸರಕಾರದ ಸವಲತ್ತು ಉಪಯೋಗಿಸಿದ ಪ್ರಮಾಣ ಆಧರಿಸಿ ದಂಡ ವಿಧಿಸಲಾಗಿದೆ. ಮಂಗಳೂರು ಗ್ರಾಮಾಂತರ-3,63,339 ರೂ., ಮಂಗಳೂರು-5,63,463 ರೂ., ಬಂಟ್ವಾಳ- 5,24,224 ರೂ., ಪುತ್ತೂರು- 49,535 ರೂ., ಬೆಳ್ತಂಗಡಿ- 8,80,006 ರೂ., ಸುಳ್ಯ- 3,08,839 ರೂ. ದಂಡ ವಿಧಿಸಲಾಗಿದೆ.
ಸರೆಂಡರ್ ಅವಧಿ ಮುಕ್ತಾಯ
ಸರಕಾರದ ಮಾನದಂಡಗಳನ್ನು ಮೀರಿ ಬಿಪಿಎಲ್ ಪಡಿತರ ಚೀಟಿ ಹೊಂದಿದ್ದರೆ ದಂಡ ರಹಿತವಾಗಿ 2019ರ ಸೆ. 3ರೊಳಗೆ ಆಯಾ ತಾಲೂಕು ಕಚೇರಿಯ ಆಹಾರ ಶಾಖೆಗೆ ತೆರಳಿ ಪಡಿತರ ಚೀಟಿ ಒಪ್ಪಿಸಿ, ರದ್ದು ಮಾಡುವಂತೆ ಸರಕಾರ ಸೂಚನೆ ನೀಡಿತ್ತು. ಆ ಬಳಿಕ ಅ. 15ರ ತನಕ ಅವಧಿ ವಿಸ್ತರಿಸಿತು. ಎರಡು ಬಾರಿ ನೀಡಿದ ಅವಕಾಶದಲ್ಲಿ ಪಡಿತರ ಚೀಟಿ ರದ್ದು ಮಾಡದೆ, ಇದ್ದ ಅನರ್ಹ ಪಡಿತರ ಚೀಟಿದಾರರಿಂದ ದಂಡ ವಸೂಲಿ ಮಾಡಲಾಗಿದೆ. ಅನಂತರ ಸರಕಾರ ದಂಡ ವಿಧಿಸುವುದನ್ನು ತಡೆ ಹಿಡಿದು ವಸೂಲಿ ಕಾರ್ಯಕ್ಕೆ ಆದೇಶ ನೀಡಿತ್ತು. ಈಗ ಸರಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ದಂಡ ವಿಧಿಸಲಾಗುತ್ತಿದೆ. ಆದಾಯ ಪರಿಮಿತಿ, ಪಡಿತರ ಬಳಕೆಯ ಅವಧಿ ಆಧರಿಸಿ ಉಳಿದವರಿಗೆ ದಂಡ ವಿಧಿಸಲಾಗುತ್ತಿದೆ.
ಮನೆಗೆ ನೋಟಿಸ್
ತಾಲೂಕು ಆಹಾರ ಇಲಾಖೆಯು ಕುಟುಂಬಗಳು ಹೊಂದಿರುವ ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿಗಳ ಬಗ್ಗೆ ತನಿಖೆ ನಡೆಸುತ್ತಿದೆ. ಅಗತ್ಯ ವಸ್ತುಗಳ ಕಾಯ್ದೆ 1955ರಡಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ಅನರ್ಹ ಪಡಿತರ ಚೀಟಿದಾರರು ರದ್ದುಪಡಿಸದೆ ಇದ್ದರೆ ಆಯಾ ಪಡಿತರದಾರನ ಮನೆಗೆ ನೋಟಿಸ್ ಜಾರಿಯಾಗುತ್ತದೆ. ಆರ್‌ಟಿಒ, ಮೆಸ್ಕಾಂ ಮಾಹಿತಿ ಆಧರಿಸಿ ಅನರ್ಹ ಫಲಾನುಭವಿಗಳ ಪತ್ತೆ ಪ್ರಕ್ರಿಯೆ ನಡೆಯುತ್ತಿದೆ.
ಒಂದೇ ಮನೆ ನಂ.; 2 ಕಾರ್ಡ್ ಇಲ್ಲ
ಆನ್‌ಲೈನ್ ಮೂಲಕ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ಒಂದು ಮನೆ ನಂಬರ್‌ನಲ್ಲಿ 2 ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ. ಸುಳ್ಳು ಮಾಹಿತಿ ನೀಡಿ ಎರಡು ಕಾರ್ಡ್ ಹೊಂದಿದ್ದರೂ ಅಂತಹವರ ವಿರುದ್ಧವೂ ಕಾನೂನು ಕ್ರಮ ಅನ್ವಯವಾಗಲಿದೆ.
ಯಾರೆಲ್ಲ ಅನರ್ಹರು?
– ಕುಟುಂಬದಲ್ಲಿ ಸರಕಾರಿ ಅಥವಾ ಅರೆ ಸರಕಾರಿ ಉದ್ಯೋಗ ಹೊಂದಿರುವರು.
– ಆದಾಯ ತೆರಿಗೆ ಪಾವತಿಸುವವರು.
– ಪಡಿತರ ಚೀಟಿ ವಿಳಾಸದಲ್ಲಿ ವಾಸ್ತವ್ಯ ಇಲ್ಲದೆ ಇರುವವರು
– ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿರುವವರು.
– ಮರಣ ಹೊಂದಿದವರ ಮತ್ತು ಕುಟುಂಬದಲ್ಲಿ ವಾಸ್ತವ್ಯವಿಲ್ಲದೆ ಇರುವವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆಯದೆ ಉಳಿಸಿಕೊಂಡವರು.
– ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಭೂಮಿ ಹಾಗೂ ನಗರ ಪ್ರದೇಶದ 1,000 ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆ ಸ್ವಂತವಾಗಿ ಹೊಂದಿರುವವರು.
– ಸ್ವಂತ ಉಪಯೋಗಕ್ಕಾಗಿ ಕಾರು, ಲಾರಿ, ಜೆಸಿಬಿ ಇತ್ಯಾದಿ ವಾಹನ ಹೊಂದಿರುವವರು.
ಪತ್ತೆ ಕಾರ್ಯ ಪ್ರಗತಿಯಲ್ಲಿ
ಅನರ್ಹ ಕಾರ್ಡ್ ಪತ್ತೆ ಕಾರ್ಯ ಪ್ರಗತಿಯಲ್ಲಿದೆ. ಆರ್‌ಟಿಒ ಮಾಹಿತಿ ಆಧರಿಸಿ ಪ್ರಕ್ರಿಯೆ ನಡೆಯುತ್ತಿದೆ. ಸರಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಸರೆಂಡರ್ ಅವಧಿ ಮುಕ್ತಾಯ ಆಗಿದ್ದು, ದಂಡ ಸಹಿತ ಕಾರ್ಡ್ ಪಡೆದುಕೊಳ್ಳಲಾಗುತ್ತಿದೆ.
– ರಮ್ಯಾ, ಜಂಟಿ ನಿರ್ದೇಶಕಿ, ಆಹಾರ ಇಲಾಖೆ ದ.ಕ. ಜಿಲ್ಲೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.