ಬೀಡಿ ಲೇಬಲ್ ಹಚ್ಚುತ್ತಿದ್ದಾಕೆ ರಾಜ್ಯಕ್ಕೆ 6ನೇ ಸ್ಥಾನಿ
Team Udayavani, Apr 30, 2019, 6:14 AM IST
ಉಪ್ಪಿನಂಗಡಿ: ಕಾಲೇಜಿನಿಂದ ಬಂದು ಮನೆಯಲ್ಲಿ ಬೀಡಿ ಲೇಬಲ್ ಹಾಕಿ ಓದಿರುವ ಹುಡುಗಿಯೋರ್ವಳು ದ್ವಿತೀಯ ಪಿಯುಸಿಯಲ್ಲಿ 600ರಲ್ಲಿ 589 ಅಂಕ ಗಳಿಸಿ ರಾಜ್ಯಕ್ಕೆ ಆರನೇ ಸ್ಥಾನ ಪಡೆದಿದ್ದಾಳೆ. ಯಾವುದೇ ಸೌಲಭ್ಯ ಇಲ್ಲದಿದ್ದರೂ ಇಚ್ಛಾಶಕಿ ಇದ್ದರೆ ಸಾಧನೆ ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾಳೆ.
ದ.ಕ. ಜಿಲ್ಲೆಯ ಪುತ್ತೂರಿನ ಅಂಬಿಕಾ ವಿದ್ಯಾಲಯದ ದ್ವಿತೀಯ ಪಿಯುಸಿ ಪಿಸಿಎಂಬಿ ವಿದ್ಯಾರ್ಥಿನಿ, ಉಪ್ಪಿನಂಗಡಿ ನಟ್ಟಿಬೈಲು ನಿವಾಸಿ ನಾಗೇಶ್ – ವನಜಾ ದಂಪತಿಯ ಪುತ್ರಿ ಸ್ನೇಹಾ ಈ ಸಾಧಕಿ.
ತಂದೆ ಬೀಡಿ ಫ್ಯಾಕ್ಟರಿಯಲ್ಲಿ ಕಾರ್ಮಿಕ. ತಾಯಿ ಗೃಹಿಣಿ. ಬರುವ ಆದಾಯ ಕುಟುಂಬ ನಿರ್ವಹಣೆಗೆ ಸಾಕಾಗದ ಕಾರಣ ಮನೆಯಲ್ಲಿ ಬೀಡಿಗೆ ಲೇಬಲ್ ಹಾಕುವ ಹೆಚ್ಚುವರಿ ಕಾಯಕ ಇವರದ್ದು. ಮಕ್ಕಳಿಬ್ಬರು ಇದರಲ್ಲಿ ಸಹಭಾಗಿಗಳು.
ಸ್ನೇಹಾ ಸಾಯಂಕಾಲ ಮನೆಗೆ ಬಂದ ಕೂಡಲೇ ಪಠ್ಯ ಸಂಬಂಧಿ ಕೆಲಸಗಳನ್ನು ಪೂರೈಸಿ ರಾತ್ರಿ 8.30ರಿಂದ 11ರ ವರೆಗೆ ಬೀಡಿ ಲೇಬಲ್ ಹಾಕುವ ಕಾಯಕದಲ್ಲಿ ತೊಡಗುತ್ತಿದ್ದರು.
ಮತ್ತೆ ನಸುಕಿನಲ್ಲಿ 5.30ರ ವೇಳಗೆ ಎದ್ದು ಓದುತ್ತಿದ್ದರು. ಓರಗೆಯ ಮಕ್ಕಳೆಲ್ಲ ಬಸ್ ನಿಲ್ದಾಣವರೆಗೆ ಹೆತ್ತವರ ವಾಹನದಲ್ಲಿ ಹೋದರೆ ಸ್ನೇಹಾ ನಡೆದುಕೊಂಡೇ ನಿಲ್ದಾಣ ತಲುಪುತ್ತಿದ್ದರು. ಆದರೆ ಆಕೆ ಮಾಡಿರುವ ಸಾಧನೆ ಮಾತ್ರ ಎಲ್ಲರಿಗೂ ಮಾದರಿಯಾಗಿದೆ.
ವಿದ್ಯಾಸಂಸ್ಥೆ, ಪೋಷಕರಿಗೆ ಸಮರ್ಪಣೆ
ಅಂದು 10ನೇ ತರಗತಿಯಲ್ಲಿ ಶೇ. 94.8 ಅಂಕ ಗಳಿಸಿದಾಗ “ಮುಂದಕ್ಕೆ ಎಲ್ಲಿ ಕಲಿಯುತ್ತೀ’ ಎಂಬ ಅಪ್ಪನ ಪ್ರಶ್ನೆಗೆ ಅಂಬಿಕಾ ವಿದ್ಯಾಲಯದಲ್ಲಿ ಕಲಿಯುವ ಆಸೆ ಇದೆ ಎಂದಿದ್ದೆ. ಶೇ. 98ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ಅಲ್ಲಿ ಉಚಿತ ಶಿಕ್ಷಣವಿತ್ತು. ನನಗೆ ಅಂಕ ಸ್ವಲ್ಪ ಕಡಿಮೆಯಿದ್ದರಿಂದ ಪೂರ್ಣ ಶುಲ್ಕ ಪಾವತಿಸಬೇಕಿತ್ತು. ತಂದೆಯವರು ನನ್ನ ಆಸೆಗೆ ನೀರೆರೆದು ಪೋಷಿಸಿದರು. ಅದಕ್ಕಾಗಿ ನನ್ನ ಶ್ರೇಯಸ್ಸು ವಿದ್ಯಾಲಯಕ್ಕೆ ಮತ್ತು ಹೆತ್ತವರಿಗೆ ಸಮರ್ಪಿತವಾಗಿದೆ ಎನ್ನುತ್ತಾರೆ ಸ್ನೇಹಾ.
ಮೆಡಿಕಲ್‌ಓದುವೆ
ನೀಟ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ಮೆಡಿಕಲ್ ಓದುವೆ. ಇಲ್ಲವಾದರೆ ವೆಟರ್ನರಿ ಅಥವಾ ತೋಟಗಾರಿಕಾ ಕ್ಷೇತ್ರದತ್ತ ಗಮನ ಹರಿಸುವೆ.
– ಸ್ನೇಹಾ
ಸಾಧನೆ ತೃಪ್ತಿ ತಂದಿದೆ
ಬಡತನವಿದ್ದರೂ ಮಗಳು ಎಸೆಸೆಲ್ಸಿ ಯಲ್ಲಿ ಶೇ. 94.8 ಅಂಕ ಗಳಿಸಿದ್ದಳು. ಅವರಿವರ ಸಹಕಾರದಿಂದ ಪಿಯುಸಿಗೆ ಸೇರಿಸಿದೆ. ಈಗ ಅವಳ ಸಾಧನೆಯಿಂದ ತುಂಬಾ ಖುಷಿಯಾಗಿದೆ.
– ನಾಗೇಶ್, ತಂದೆ
ಮಾಹಿತಿ ಕೊಡಿ
ನಿಮ್ಮ ಪರಿಸರದಲ್ಲೂ ಇಂತಹ ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳಿದ್ದಲ್ಲಿ 8095192817 ನಂಬರ್‌ಗೆ ವಾಟ್ಸಪ್ ಮಾಡಿ. ನಾವು ಅವರನ್ನು ಮಾತನಾಡಿಸಿ ಸಾಧನೆಯ ಕುರಿತು ಈ ಅಂಕಣದಲ್ಲಿ ಪ್ರಕಟಿಸುತ್ತೇವೆ.
– ಸಂಪಾದಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.