ಮಾಹಿತಿ, ಕಟ್ಟಡ ಕೊರತೆ; ಜನತೆಗೆ ತಲುಪದ ಸೇವೆ; ಗ್ರಾಮೀಣ ಜನರಿಗಾಗಿ ಆರಂಭವಾದ ಆರೋಗ್ಯ, ಕ್ಷೇಮ ಕೇಂದ್ರ
Team Udayavani, Dec 9, 2022, 12:22 PM IST
ಉಪ್ಪಿನಂಗಡಿ: ಗ್ರಾಮೀಣ ಜನಸಮುದಾಯಕ್ಕೆ ಸ್ಥಳೀಯ ಮಟ್ಟದಲ್ಲಿ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ ಹಲವು ಸೇವೆಗಳು ಲಭ್ಯವಾಗುತ್ತಿದ್ದರೂ, ಹೆಚ್ಚಿನ ಕಡೆಗಳಲ್ಲಿ ಮಾಹಿತಿಯ ಕೊರತೆಯಿಂದ ಜನರು ಈ ಕಡೆ ಮುಖಮಾಡುತ್ತಿಲ್ಲ. ಅಲ್ಲದೇ ಈ ಕೇಂದ್ರಕ್ಕೆ ಕಟ್ಟಡದ ಕೊರತೆಯೂ ಇರುವುದರಿಂದ ಹೆಚ್ಚಿನ ಕಡೆ ಎಲ್ಲ ಸೇವೆಗಳನ್ನು ನೀಡುವಲ್ಲಿ ಹಿನ್ನೆಡೆ ಅನುಭವಿಸುವಂತಾಗಿದೆ.
ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೇಂದ್ರ ಸ್ಥಾನವನ್ನು ಬಿಟ್ಟು ಅವುಗಳ ವ್ಯಾಪ್ತಿ ಗ್ರಾಮೀಣ ಭಾಗಗಳಲ್ಲಿ ಈ ಕೇಂದ್ರಗಳಿವೆ. ದ.ಕ. ಜಿಲ್ಲೆಯಲ್ಲಿ ಈ ಯೋಜನೆ ಕಳೆದ ಡಿಸೆಂಬರ್ ತಿಂಗಳಿನಿಂದ ಹಂತಹಂತವಾಗಿ ಅನುಷ್ಠಾನವಾಗಿವೆ.
ಸೌಲಭ್ಯಗಳೇನು?
ಈ ಕೇಂದ್ರದಲ್ಲಿ 48 ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು, ಕಣ್ಣು, ಮೂಗು, ಗಂಟಲು ಮತ್ತು ಬಾಯಿ ಸಂಬಂಧಿ ರೋಗಗಳ ತಪಾಸಣೆ, ಔಷಧ, ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ, ಗಾಯಗಳಿಗೆ ಡ್ರೆಸ್ಸಿಂಗ್, ರೋಗಿಗಳನ್ನು ತಪಾಸಣೆ ನಡೆಸಿ ಅಗತ್ಯವಿದ್ದರೆ ಮೇಲ್ದರ್ಜೆಯ ಆಸ್ಪತ್ರೆಗಳಿಗೆ ಕಳುಹಿಸಿಕೊಡುವ ಸೌಲಭ್ಯ. ಸಕ್ಕರೆ ಕಾಯಿಲೆ, ರಕ್ತದೊತ್ತಡ ತಪಾಸಣೆ, ಹದಿಹರೆಯದವರಿಗೆ ಆಪ್ತ ಸಮಾಲೋಚನೆ, ಸಾರ್ವಜನಿಕರಿಗೆ ಯೋಗ ಶಿಕ್ಷಣ ಶಿಬಿರ ಮುಂತಾದ ಸೇವೆಗಳು ಲಭ್ಯವಿವೆ.
ಆದರೆ ಇದಿನ್ನೂ ಅನುಷ್ಠಾನದ ಹಂತದಲ್ಲಿ ಇರುವುದರಿಂದ ಎಲ್ಲ ಸೇವೆಗಳು ಈಗ ಲಭ್ಯವಿಲ್ಲ. ಮುಂದಕ್ಕೆ ಇಲ್ಲಿ ರೋಗಿಯ ಮಲೇರಿಯಾ ಲಕ್ಷಣಗಳನ್ನು ನೋಡಿ ಆರ್‌ಡಿಕೆ ಕಿಟ್ ಮೂಲಕ ರಕ್ತ ತಪಾಸಣೆ ನಡೆಸುವ ಸೌಲಭ್ಯವೂ ದೊರೆಯಲಿದೆ. ಕ್ಷೇಮ ಕೇಂದ್ರದ ವ್ಯಾಪ್ತಿಗೆ ಬರುವ ಗರ್ಭಿಣಿ, ಬಾಣಂತಿ, ಎಂಡೋಪೀಡಿತರು, ದೀರ್ಘಕಾಲದಿಂದ ಹಾಸಿಗೆ ಹಿಡಿದವರು ಇರುವ ಮನೆಗಳಿಗೆ ಮನೆ ಭೇಟಿ ನೀಡಿ, ಅವರ ಆರೋಗ್ಯ ತಪಾಸಣೆಯೂ ಈ ಕೇಂದ್ರದ ಮೂಲಕ ನಡೆಯಲಿದೆ.
ಕೇಂದ್ರದ ವ್ಯಾಪ್ತಿಯೊಳಗಿದ್ದುಕೊಂಡು ಆರೋಗ್ಯ ಮತ್ತು ಕ್ಷೇಮ ಕೇಂದ್ರವನ್ನೂ ತಲುಪದ ಜನಕೇಂದ್ರಿತ ಪ್ರದೇಶಗಳಲ್ಲಿ ಎನ್‌ಸಿಡಿ ಶಿಬಿರದ ಮೂಲಕ ರಕ್ತದೊತ್ತಡ, ಸಕ್ಕರೆಕಾಯಿಲೆ ತಪಾಸಣೆಗಳನ್ನು ಈ ಕೇಂದ್ರದ ಸಿಬಂದಿ ಮಾಡಬೇಕಾಗುತ್ತದೆ.
ಗ್ರಾಮೀಣ ಭಾಗದಲ್ಲಿ ಈ ಮೊದಲು ಉಪಆರೋಗ್ಯ ಕೇಂದ್ರಗಳಿದ್ದು, ಅವುಗಳಲ್ಲಿ ಪಿಎಚ್‌ಸಿಒ (ಪ್ರಾಥಮಿಕ ಆರೋಗ್ಯಾಧಿಕಾರಿ) ಹಾಗೂ ಆಶಾ ಕಾರ್ಯಕರ್ತೆಯರ ಹುದ್ದೆಗಳಿತ್ತು. ಆದರೆ ಈಗ ಅದನ್ನು ಮೇಲ್ದರ್ಜೆಗೇರಿಸಿ ಅದಕ್ಕೆ ಆರೋಗ್ಯ ಮತ್ತು ಕ್ಷೇಮ ಕೇಂದ್ರವೆಂದು ಹೆಸರಿಡಲಾಗಿದ್ದು, ಇಲ್ಲಿ ಸಿಎಚ್‌ಒ (ಸಮುದಾಯ ಆರೋಗ್ಯಾಧಿಕಾರಿ) ಎಂಬ ಹೆಚ್ಚುವರಿ ಹುದ್ದೆಯನ್ನು ಸೃಷ್ಟಿಸಿ, ಬಿಎಸ್ಸಿ ನರ್ಸಿಂಗ್ ಪದವೀಧರರನ್ನು ಇದಕ್ಕೆ ನೇಮಕಗೊಳಿಸಲಾಗಿದೆ. ಈ ಕೇಂದ್ರದ ವ್ಯಾಪ್ತಿಯಲ್ಲಿ ಸಿಎಚ್‌ಒ, ಪಿಎಚ್‌ಸಿಒ ಹಾಗೂ ಆಶಾ ಕಾರ್ಯಕರ್ತೆಯರು ಬರುತ್ತಾರೆ.
ಗ್ರಾಮೀಣ ಪ್ರದೇಶಗಳ ಜನರಿಗೆ ಪ್ರಾಥಮಿಕ ಹಂತದ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಸ್ಥಾಪಿಸಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಸ್ಥಾಪನೆಯ ಪರಿಕಲ್ಪನೆ ಉತ್ತಮವಾಗಿದ್ದು, ಇದರ ಸ್ಥಾಪನೆಗೆ ಒತ್ತು ನೀಡುವ ಸರಕಾರ ಇವುಗಳಿಗೆ ಬೇಕಾದ ಕಟ್ಟಡ, ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಕೂಡ ಗಮನಹರಿಸಬೇಕಿದೆ. ಅಲ್ಲದೆ ಇಲ್ಲಿರುವ ಸೇವೆಗಳ ಬಗ್ಗೆ ಗ್ರಾಮೀಣ ಜನರಿಗೂ ಮಾಹಿತಿ ನೀಡುವ ಕೆಲಸವಾಗಬೇಕಿದೆ. ಆಗ ಮಾತ್ರ ಈ ಯೋಜನೆ ಹೆಚ್ಚಿನ ಜನರಿಗೆ ತಲುಪಿ ಜನೋಪಯೋಗಿಯಾಗಲು ಸಾಧ್ಯ.
ಉಪ್ಪಿನಂಗಡಿ ವ್ಯಾಪ್ತಿಯಲ್ಲಿ 6 ಕೇಂದ್ರ
ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 34 ನೆಕ್ಕಿಲಾಡಿ, ಬೆಳ್ಳಿಪ್ಪಾಡಿ, ಕೋಡಿಂಬಾಡಿ, ಬನ್ನೂರು, ಪಟ್ನೂರು ಹಾಗೂ ಚಿಕ್ಕಮುಟ್ನೂರಿನಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿವೆ. ಇವುಗಳಿಗೆ ಪ್ರಮುಖವಾಗಿ ಕಾಡುತ್ತಿರುವುದು ಕಟ್ಟಡದ ಕೊರತೆ. ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಆರು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿದ್ದರೂ, ಅವುಗಳಲ್ಲಿ ಕೋಡಿಂಬಾಡಿ ಮತ್ತು ಬನ್ನೂರಿನ ಕೇಂದ್ರಗಳು ಮಾತ್ರ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿವೆ. ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕಟ್ಟಡದಲ್ಲಿ ಒಂದು ಲ್ಯಾಬ್, ವೈಟಿಂಗ್ ರೂಂ ಹೀಗೆ ಹಲವು ಸವಲತ್ತುಗಳಿರಬೇಕೆಂಬ ಮಾನದಂಡಗಳಿವೆ. ಆದ್ದರಿಂದ ಇದಕ್ಕೆ ವಿಶಾಲ ಕಟ್ಟಡ, ಪ್ರತ್ಯೇಕ ಪ್ರತ್ಯೇಕ ಕೋಣೆಗಳ ಅಗತ್ಯವಿದೆ. ಆದರೆ ಕೋಡಿಂಬಾಡಿ ಮತ್ತು ಬನ್ನೂರಿನ ಕಟ್ಟಡ ಸ್ವಂತದ್ದಾದರೂ, ಅವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದ ವಸತಿ ಗೃಹ. ಆದ್ದರಿಂದ ಅಲ್ಲಿ ಅಂತಹ ಸೌಲಭ್ಯಗಳಿಲ್ಲ. ಇನ್ನು 34 ನೆಕ್ಕಿಲಾಡಿ, ಬೆಳ್ಳಿಪ್ಪಾಡಿ, ಪಟ್ನೂರು, ಚಿಕ್ಕಮುಟ್ನೂರುವಿನಲ್ಲಿ ಈ ಕೇಂದ್ರ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ.
ಜನಸ್ನೇಹಿಯಾಗಿ ಮಾಡಲಾಗುವುದು: ಗ್ರಾಮೀಣ ಭಾಗದ ಜನರಿಗೆ ಸುಲಭದಲ್ಲಿ ಚಿಕಿತ್ಸಾ ಸೌಲಭ್ಯ ಸಿಗಲು ಸರಕಾರ ಮಾಡಿದ ಯೋಜನೆ ಇದಾಗಿದೆ. ಆರಂಭದಲ್ಲಿ ಇಲ್ಲಿ ಚಿಕಿತ್ಸೆ ನೀಡಿದರೂ ಅಗತ್ಯ ಬಿದ್ದರೆ ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಲಾಗುವುದು. ಕೇಂದ್ರವನ್ನು ಜನಸ್ನೇಹಿಯಾಗಿ ಮಾಡಲಾಗುವುದು. –ಡಾ| ದೀಪಕ್ ರೈ, ತಾಲೂಕು ವೈದ್ಯಾಧಿಕಾರಿ, ಪುತ್ತೂರು
-ಎಂ.ಎಸ್. ಭಟ್ ಉಪ್ಪಿನಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ
Belthangady: ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ 1.18 ಕೋಟಿ ರೂ.
Madanthyar: ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಗೆ ತೇಪೆ ಕಾರ್ಯ
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.