ಮುಕ್ತ ಸಂಚಾರಕ್ಕೆ ಕಾನೂನಾತ್ಮಕ ಪ್ರಯತ್ನ
Team Udayavani, Aug 28, 2020, 3:02 AM IST
ಪುತ್ತೂರು: ಕರ್ನಾಟಕ-ಕೇರಳ ಗಡಿಯಲ್ಲಿ ಮುಕ್ತ ಸಂಚಾರ ಕುರಿತಂತೆ ಕರ್ನಾಟಕ ಸರಕಾರದಿಂದ ಕಾನೂನಾತ್ಮಕ ಪ್ರಯತ್ನಗಳು ನಡೆಯುತ್ತಿವೆ ಎಂದು ದಕ್ಷಿಣ ಕನ್ನಡ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು. ಪತ್ರಕರ್ತರ ಜತೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳು ಅಧಿಕವಾಗಿದ್ದು ಕೇರಳದಿಂದ ಹೆಚ್ಚಿನ ಆ್ಯಂಬುಲೆನ್ಸ್‌ಗಳು ಬರುತ್ತಿದ್ದ ಕಾರಣ ಜಿಲ್ಲೆಯಲ್ಲಿ ಕೋವಿಡ್ ಹರಡದಂತೆ ನಿಯಂತ್ರಿಸುವ ನಿಟ್ಟಿನಲ್ಲಿ ಗಡಿ ಬಂದ್ ಮಾಡಲಾಗಿತ್ತು. ಇಲ್ಲಿ ತೆರವು ಆದ ಅನಂತರ ಕೇರಳ ರಾಜ್ಯವು ಎಲ್ಲ ಗಡಿ ಪ್ರದೇಶಗಳನ್ನು ಬಂದ್ ಮಾಡಿತ್ತು. ಇದರಿಂದ ಪ್ರತಿದಿನ ಉಭಯ ರಾಜ್ಯಗಳ ನಡುವೆ ಸಂಚರಿಸುವ ಉದ್ಯೋಗಿಗಳ ಕೆಲಸಕ್ಕೆ ಕುತ್ತು ಉಂಟಾಗಿ ನಿತ್ಯ ಜೀವನ ದುಸ್ತರ ಎಂಬಂತಾಗಿತ್ತು. ಇದೀಗ ಸಂಚಾರಕ್ಕೆ ಅವಕಾಶ ನೀಡಿದರೂ ಹಲವು ನಿರ್ಬಂಧಗಳು, ಗೊಂದಲ ಮುಂದುವರಿದಿದೆ. ಅವೆಲ್ಲವನ್ನೂ ನಿವಾರಿಸಲು ಯತ್ನ ನಡೆಯುತ್ತಿದೆ ಎಂದರು.
ಕೋವಿಡ್ ಸಂಕಷ್ಟ ಎದುರಾದ ಸಂದರ್ಭ ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ಪರಿಹಾರ ಪ್ಯಾಕೇಜನ್ನು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದರು. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಹಾಗೂ ಎಲ್ಲ ಶಾಸಕರ ನೇತೃತ್ವದಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಸೋಂಕು ಸಮುದಾಯದಲ್ಲಿ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರ್‍ಯಾಂಡಂ ಆಗಿ ಪರೀಕ್ಷಿಸಲಾಗುತ್ತಿದ್ದು ಕೆಲವೊಂದು ಪ್ರಕರಣಗಳು ಪತ್ತೆಯಾಗುತ್ತಿವೆ. ಕೋವಿಡ್ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಹಾಗೂ ಸರಕಾರ ಶ್ರಮಿಸುತ್ತಿವೆ. ಕೋವಿಡ್ ಬಗ್ಗೆ ಭಯ ಬೇಕಿಲ್ಲ. ಎಲ್ಲರೂ ತಮ್ಮ ಜಾಗ್ರತೆಯಿಂದ ಇದ್ದರೆ ಸಾಕು ಎಂದು ಸಂಸದರು ತಿಳಿಸಿದರು.
ಕಾಸರಗೋಡಿನಿಂದ ಮಂಗಳೂರಿಗೆ 1,200 ಮಂದಿ
ಕಾಸರಗೋಡು: ಜಿಲ್ಲೆಯಿಂದ ಕರ್ನಾಟಕಕ್ಕೆ ತೆರಳಿ ಮರಳುವ ದಿನನಿತ್ಯದ ಪ್ರಯಾಣಕ್ಕೆ ಇನ್ನು ಮುಂದೆ ರೆಗ್ಯುಲರ್ ಪಾಸ್ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ಆ. 26ರಂದು ಘೋಷಿಸಿದ ಬಳಿಕ ಆ. 27ರಂದು ಕಾಸರಗೋಡಿನಿಂದ ಮಂಗಳೂರಿಗೆ ತೆರಳಿ ವಾಪಸಾದವರ ಸಂಖ್ಯೆ 1,200 ಎಂದು ತಿಳಿಬಂದಿದೆ. ಅದೇ ರೀತಿ ಪೆರ್ಲ, ಜಾಲೂÕರು, ಮಾಣಿಮೂಲೆ, ಪಾಣತ್ತೂರು ಚೆಕ್‌ಪೋಸ್ಟ್‌ಗಳ ಮುಖಾಂತರ ದ.ಕ. ಜಿಲ್ಲೆಗೆ 500ರಿಂದ 700 ಮಂದಿ ಹೋಗಿ ವಾಪಸಾಗಿದ್ದಾರೆ. ಈ ರಸ್ತೆಗಳಲ್ಲಿ ಪ್ರಯಾಣಿಸುವ ಮಂದಿ ಆ್ಯಂಟಿಜೆನ್ ಟೆಸ್ಟ್ ನಡೆಸಿ ನೆಗೆಟಿವ್ ಸರ್ಟಿಫಿಕೇಟ್ ಸಹಿತ ಕೋವಿಡ್ 19 ಜಾಗ್ರತಾ ಪೋರ್ಟಲ್‌ನಲ್ಲಿ ನೋಂದಣಿ ನಡೆಸಬೇಕೆಂಬುದಾಗಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ಅದರಂತೆ ದ.ಕ.ಜಿಲ್ಲೆಗೆ ತೆರಳಿ ವಾಪಸಾಗುವ ಮಂದಿ ಈ ಪೋರ್ಟಲ್‌ನಲ್ಲಿ ನೋಂದಣಿ ನಡೆಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.