ಆಧಾರ್ ಅದಾಲತ್: 604 ಮಂದಿ ನೋಂದಣಿ
Team Udayavani, Jul 25, 2018, 2:31 PM IST
ಬಂಟ್ವಾಳ: ಬಿ.ಸಿ. ರೋಡ್‌ನಲ್ಲಿ ಜು. 16ರಿಂದ 21ರ ತನಕ ಆರು ದಿನಗಳ ಕಾಲ ನಡೆದ ಆಧಾರ್ ಕಾರ್ಡ್ ನೋಂದಣಿ ವಿಶೇಷ ಅದಾಲತ್‌ನಲ್ಲಿ 102 ಮಂದಿ ಹೊಸದಾಗಿ ಆಧಾರ್ ಕಾರ್ಡ್ ನೋಂದಣಿ ಮಾಡಿಸಿಕೊಂಡಿದ್ದಾರೆ. 502 ಮಂದಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದು, ಒಟ್ಟು 604 ಮಂದಿ ಅದರ ಲಾಭ ಪಡೆದಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ತಾ|ಆಡಳಿತ ಆಧಾರ್ ಅದಾಲತ್ ನಡೆಸಿತ್ತು. ಅದಾಲತ್ ಕೊನೆಯ ದಿನಕ್ಕಾಗುವಾಗ ಬಿ.ಸಿ. ರೋಡ್ ಮಿನಿ ವಿಧಾನಸೌಧದಲ್ಲಿ ಕಳೆದ ವಿಧಾನಸಭೆ ಚುನಾವಣೆ ಬಳಿಕ ತಂತ್ರಾಂಶ ಬದಲಾವಣೆ ಮತ್ತಿತರ ಕಾರಣಗಳಿಂದ ಮುಚ್ಚಿಕೊಂಡಿದ್ದ ಬಂಟ್ವಾಳ, ಪಾಣೆಮಂಗಳೂರು ಹೋಬಳಿ ಮಟ್ಟದ ಅಟಲ್ ಜನಸ್ನೇಹಿ ಕೇಂದ್ರ ಪುನರಾರಂಭ ಆಗಿದ್ದು, ವಾರಾಂತ್ಯಕ್ಕೆ ಆಧಾರ್ ನೋಂದಣಿ, ತಿದ್ದುಪಡಿಗೆ ತೀವ್ರ ನೂಕುನುಗ್ಗಲು ಉಂಟಾಗಿತ್ತು.
ಈ ಹಿಂದೆ ಬಿ.ಸಿ. ರೋಡ್ ತಾ.ಪಂ. ಹಳೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಪಾಣೆಮಂಗಳೂರು ಹೋಬಳಿ ಮಟ್ಟದ ಅಟಲ್ ಜನಸ್ನೇಹಿ ಕೇಂದ್ರವನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಉಪ ಖಜಾನೆಗೆ ಮೀಸಲಿಟ್ಟ ಈ ಕೊಠಡಿಯಲ್ಲಿ ಸ್ಥಳಾವಕಾಶ ಕೊರತೆಯೂ ಎದ್ದು ಕಾಣುತ್ತಿದೆ.
ಒಂದೆಡೆ ಎಲ್ಲ ವ್ಯವಸ್ಥೆ
ಪಡಿತರ ಚೀಟಿಗೆ ಕುಟುಂಬದ ಪ್ರತಿ ಸದಸ್ಯರಿಂದ ಪ್ರತ್ಯೇಕ ಆದಾಯ ದೃಢೀಕರಣ ನೀಡಲು ಸರಕಾರ ಸೂಚಿಸಿದೆ. ರೈತರಿಗೆ ಪಹಣಿಪತ್ರ, ಖಾತೆ ಸಂಖ್ಯೆ, ವಿದ್ಯಾರ್ಥಿಗಳಿಗೆ ಆದಾಯ ಮತ್ತು ಜಾತಿ ಪ್ರಮಾಣಪತ್ರಕ್ಕೆ ಇಲ್ಲಿಯೇ ಬರಬೇಕು. 94ಸಿ ಮತ್ತು 94ಸಿಸಿ ಅರ್ಜಿ ಸಲ್ಲಿಕೆ ಸಹಿತ ಜಮೀನಿನ ದೃಢೀಕೃತ ದಾಖಲೆ ಪತ್ರ ಪಡೆಯುವುದಕ್ಕಾಗಿ ವಿವಿಧೆಡೆಗಳಿಂದ ಅಪಾರ ಮಂದಿ ಬರುತ್ತಾರೆ.
ಸರ್ವರ್ ದೋಷ, ಕಂಪ್ಯೂಟರ್ ದುರಸ್ತಿ, ವಿದ್ಯುತ್ ಇಲ್ಲ ಇತ್ಯಾದಿ ಸಮಸ್ಯೆಗಳಿದ್ದು, ತಾ| ಕಚೇರಿಯಲ್ಲಿ ಜನರೇಟರ್ ಇದ್ದರೂ ಅಟಲ್ ಕೇಂದ್ರಕ್ಕೆ ಸಂಪರ್ಕವಿಲ್ಲ. ವಿದ್ಯುತ್ ನಿಲುಗಡೆ ಆದರೆ ಜನರು ವಿದ್ಯುತ್ ಬರುವವರೆಗೆ ಕಾಯಬೇಕು. ಕೂರಲು ಸೂಕ್ತ ವ್ಯವಸ್ಥೆಯಿಲ್ಲದೆ ದಿನವಿಡೀ ಕಟ್ಟಡದ ಜಗಲಿಯಲ್ಲಿ ನಿಲ್ಲಬೇಕು. ಬಂಟ್ವಾಳ ಮತ್ತು ಪಾಣೆಮಂಗಳೂರು ಹೋಬಳಿ ಮಟ್ಟದ ಈ ಎರಡೂ ‘ಅಟಲ್ ಜನಸ್ನೇಹಿ ಕೇಂದ್ರ’ದಲ್ಲಿ ಸ್ಥಳಾವಕಾಶವೂ ಇಲ್ಲ. ಕೇವಲ ಎರಡೆರಡು ಗುತ್ತಿಗೆ ಆಧಾರಿತ ಮಹಿಳಾ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ.
ವೇತನವೂ ಆಗಿಲ್ಲ
ಕಳೆದ ಮೂರು ತಿಂಗಳಿನಿಂದ ಇವರಿಗೆ ಮಾಸಿಕ ವೇತನವೂ ಪಾವತಿಯಾಗಿಲ್ಲ ಎಂಬ ಆರೋಪವಿದೆ. ಮಂಗಳೂರು ಪುತ್ತೂರು ಮಾದರಿಯಲ್ಲಿ ಮಿನಿ ವಿಧಾನಸೌಧ ಒಳಾಂಗಣದಲ್ಲಿ ಪ್ರತ್ಯೇಕ ಕೇಂದ್ರ ತೆರೆಯಲು ಇಲ್ಲಿನ ಕಂದಾಯ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರಾಸಕ್ತಿ ತೋರುತ್ತಿದ್ದಾರೆ. ಇದಕ್ಕಾಗಿ ಜಿಲ್ಲಾಡಳಿತ ಅನುದಾನ ಒದಗಿಸದಿರುವುದೇ ಪ್ರಮುಖ ಕಾರಣ ಎಂಬ ಅಭಿಪ್ರಾಯ ಅಧಿಕಾರಿಗಳಿಂದ ಕೇಳಿ ಬಂದಿದೆ.
ಸಮಯ ಬದಲಾವಣೆ
ಅಟಲ್ ಜನಸ್ನೇಹಿ ಕೇಂದ್ರದಲ್ಲಿ ನಾಗರಿಕರ ಒತ್ತಡ ನಿವಾರಣೆ ಮತ್ತು ಸರ್ವರ್ ದೋಷ ಸರಿಪಡಿಸಲು ಕಂಪ್ಯೂಟರ್ ಆಪರೇಟರ್‌ಗಳನ್ನು ಬೆಳಗ್ಗೆ 10ಕ್ಕೆ ಬದಲಾಗಿ 9.30ಕ್ಕೆ ಬರಲು ಸೂಚಿಸಲಾಗಿದೆ. ಮಧ್ಯಾಹ್ನ ಮತ್ತು ಸಂಜೆಯೂ ಕೆಲಸದ ಸಮಯ ಬದಲಾವಣೆ ಮಾಡಿದೆ. ಜು. 16ರಿಂದ 21ರ ವರೆಗೆ ಬಿ.ಸಿ. ರೋಡ್ ನ ಸಾಮರ್ಥ್ಯ ಸೌಧ ಕಟ್ಟಡದಲ್ಲಿ ಆಯೋಜಿಸಲಾದ ಆಧಾರ್ ಅದಾಲತ್ ಕಾರ್ಯಕ್ರಮದಲ್ಲಿ ಆಧಾರ್ ಅದಾಲತ್ 604 ಮಂದಿ ಸದುಪಯೋಗ ಪಡೆದಿದ್ದಾರೆ. ದ.ಕ. ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ತಾಲೂಕು ಆಡಳಿತ ಆಧಾರ್ ಅದಾಲತ್ ನಡೆಸಿತ್ತು.
– ಸೀತಾರಾಮ್
ಪ್ರಭಾರ ಉಪ ತಹಶೀಲ್ದಾರ್