ಅಡ್ಡಹೊಳೆ ಸೇತುವೆ, ಬಿಸಿಲೆ-ಘಾಟಿ ರಸ್ತೆ ಅತಿವೃಷ್ಟಿಯಿಂದ ಹಾನಿ
ಪುಣ್ಯ ಕ್ಷೇತ್ರ ಸಂಪರ್ಕಿತ 2 ಕಿ.ಮೀ. ರಸ್ತೆಯೂ ಹಾಳು, ಸಂಚಾರಕ್ಕೆ ಅಡಚಣೆ; ಅಪಾಯದ ಮುನ್ಸೂಚನೆ
Team Udayavani, Nov 19, 2019, 4:30 AM IST
ಸುಬ್ರಹ್ಮಣ್ಯ: ಬೆಂಗಳೂರು-ಜಾಲಸೂರು ನಡುವಿನ ಬಿಸಿಲೆ ಘಾಟಿ ರಾಜ್ಯ ಹೆದ್ದಾರಿ 185ರ ಅಡ್ಡಹೊಳೆ ಎನ್ನುವಲ್ಲಿ ಸೇತುವೆ ಅತಿವೃಷ್ಟಿಗೆ ಹಾನಿಯಾಗಿದೆ. ಇಲ್ಲಿನ ರಸ್ತೆಯೂ 2 ಕಿ.ಮೀ.ನಷ್ಟು ಹಾನಿಯಾಗಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.
ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸಹಿತ ಹಲವು ಕಡೆಗಳಿಗೆ ಸಂಪರ್ಕಿಸುವ ಪ್ರಮುಖ ಸಂಪರ್ಕ ರಸ್ತೆಯಿದು. ಹಾಸನ, ಮೈಸೂರು, ಕೊಡಗು ಜಿಲ್ಲೆಯ ಜನರನ್ನು ದಕ್ಷಿಣ ಕನ್ನಡಕ್ಕೆ ಹಾಗೂ ಕೇರಳಕ್ಕೆ ಈ ರಸ್ತೆ ಸಂಪರ್ಕಿಸುತ್ತದೆ. ಶಿರಾಡಿ ಹೆದ್ದಾರಿಗೆ ಬೆಂಗಳೂರು – ಕರಾವಳಿಗಿರುವ ಪರ್ಯಾಯ ರಸ್ತೆಯಿದು.
ಬಿಸಿಲೆ ಘಾಟಿನಿಂದ ಇಳಿದು ಸುಬ್ರಹ್ಮಣ್ಯ ಕಡೆ ಬರುವ ಬಿಸಿಲೆ ಘಾಟಿ ಮಾರ್ಗದ ಪ್ರವಾಸಿ ವೀಕ್ಷಣ ತಾಣದಿಂದ 6 ಕಿ.ಮೀ. ವ್ಯಾಪ್ತಿಯಲ್ಲಿ ಅಡ್ಡಹೊಳೆ ಸಿಗುತ್ತದೆ. ಕುಮಾರಧಾರಾ ಉಪನದಿಗೆ ಕಟ್ಟಿದ ಸೇತುವೆಯಿದು. ಬ್ರಿಟಿಷರ ಕಾಲದ ಈ ಸೇತುವೆ ಗಟ್ಟಿಮುಟ್ಟಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಘಾಟಿ ಪ್ರದೇಶದಲ್ಲಿ ಸುರಿದ ಭಾರೀ ಮಳೆ ಹಾಗೂ ನೆರೆಗೆ ಅಡ್ಡಹೊಳೆ ಸೇತುವೆಗೆ ಹಾನಿಯಾಗಿದೆ. ಸೇತುವೆ ಮೇಲೆ ಹಾಕಲಾದ ಕಾಂಕ್ರೀಟ್ ಎದ್ದು ಹೋಗಿದೆ. ಸೇತುವೆ ನಿರ್ಮಾಣದ ವೇಳೆ ಕಾಂಕ್ರೀಟ್ ಜತೆ ಅಳವಡಿಸಿದ್ದ ಸರಳುಗಳು ಮೇಲೆದ್ದು ಬಂದಿವೆ. ವಾಹನಗಳು ಸಂಚಾರ ನಡೆಸುವಾಗ ಸರಳುಗಳು ಅಡ್ಡಿಯಾಗುತ್ತಿವೆ. ಸೇತುವೆ ಬದಿಯ ತಡೆಗೋಡೆ ಕೂಡ ಶಿಥಿಲವಾಗಿ ಬಲ ಕಳಕೊಂಡಿದೆ.
ಪಿಲ್ಲರ್‌ಗಳಿಗೆ ಹಾನಿ
ಕಳೆದ ಬಾರಿಯ ಭಾರೀ ಮಳೆಗೆ ಅಡ್ಡಹೊಳೆಯಲ್ಲೂ ಮರದ ದಿಮ್ಮಿಗಳು ಕೊಚ್ಚಿಕೊಂಡು ಬಂದು ಸೇತುವೆಯ ಪಿಲ್ಲರ್‌ಗಳಿಗೆ ಬಡಿದಿವೆ. ಪಿಲ್ಲರ್‌ಗಳಿಗೆ ಹಾನಿಯಾಗಿದ್ದು, ಸೇತುವೆ ಮೇಲೆ ಸಂಚಾರವೀಗ ದುಸ್ತರವಾಗಿದೆ. ಮೈಸೂರು ಪ್ರಾಂತದ ಜನರು ಹಿಂದೆ ಕುಕ್ಕೆ ಕ್ಷೇತ್ರಕ್ಕೆ ಬರಲು ಬಳಸುತ್ತಿದ್ದ ರಸ್ತೆಯಿದು. ಬಿಸಿಲೆ – ಶನಿವಾರಸಂತೆ – ಹೊಳೆನರಸೀಪುರ ಮೂಲಕ ಬೆಂಗಳೂರಿಗೆ ತೆರಳಲು ಹತ್ತಿರದ ರಸ್ತೆ ಇದಾಗಿದೆ. ಅರಕಲಗೂಡು ಮಾರ್ಗವಾಗಿ ಪ್ರಸಿದ್ಧ ಪುಣ್ಯ ಕ್ಷೇತ್ರ ರಾಮನಾಥಪುರದ ಮೂಲಕ ಮೈಸೂರಿಗೂ ಹತ್ತಿರದ ರಸ್ತೆಯಿದು. ಸುಬ್ರಹ್ಮಣ್ಯಕ್ಕೆ ಸಕಲೇಶಪುರ, ಕೂಡುರಸ್ತೆ, ವನಗೂರು ಮೊದಲಾದೆಡೆಗಳಿಂದ ಶಿಕ್ಷಣ ಪಡೆಯಲು ಬರುವ ವಿದ್ಯಾರ್ಥಿಗಳಿಗೂ ಈ ರಸ್ತೆ ಅನುಕೂಲಕರವಾಗಿದೆ.
ಪ್ರಧಾನಿಗೂ ಪತ್ರ ಬರೆಯಲಾಗಿತ್ತು
ಅಪಾಯಕಾರಿ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಬೆಂಗಳೂರು, ಮೈಸೂರಿನಿಂದ ಸುಳ್ಯ, ಸುಬ್ರಹ್ಮಣ್ಯ ಧರ್ಮಸ್ಥಳಗಳಿಂದ ಸಂಚರಿಸುತ್ತಿವೆ. ಭಾರೀ ಘನ ಹಾಗೂ ಲಘು ವಾಹನಗಳು, ಪ್ರವಾಸಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಚಲಿಸುತ್ತವೆ. ಅರಣ್ಯದಿಂದ ಬರುವ ನೀರು, ಸೂಕ್ತ ಚರಿಂಡಿಯಿಲ್ಲದೆ ರಸ್ತೆ ಮೇಲೆ ಹರಿಯುತ್ತಿದೆ. ರಸ್ತೆ ಹಾಳಾಗುತ್ತಿದೆ. ಬಿಸಿಲೆ ಘಾಟಿ ರಸ್ತೆಯಲ್ಲಿ ಈ ಹಿಂದೆ ನಡೆದ ಕಾಂಕ್ರೀಟ್ ಸಹಿತ ರಸ್ತೆ ವಿಸ್ತರಣೆ ಕಾಮಗಾರಿಯಲ್ಲಿ ಆದ ಲೋಪ ಭಾರೀ ಸುದ್ದಿ ಮಾಡಿತ್ತು. ಪ್ರತಿಭಟನೆಗಳೂ ನಡೆದಿದ್ದವು. ಪ್ರಧಾನಿಯವರಿಗೂ ಸಕಲೇಶಪುರ ಭಾಗದವರು ಪತ್ರ ಬರೆದಿದ್ದರು.
ರಸ್ತೆ ದುರಸ್ತಿಯಾಗಬೇಕು
ಬಿಸಿಲೆ ಘಾಟಿ ರಸ್ತೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹತ್ತಿರದ ರಸ್ತೆಯಾದ್ದರಿಂದ ಈ ರಸ್ತೆಯಾಗಿ ಬಂದಿರುವೆ. ಆದರೆ ನಡುವೆ ಸ್ವಲ್ಪ ಭಾಗದ ರಸ್ತೆ ಹಾಳಾಗಿದೆ. ಸೇತುವೆ ಬಳಿಯೂ ಕಷ್ಟವಾಗುತ್ತಿದೆ. ತುರ್ತಾಗಿ ಈ ರಸ್ತೆ ದುರಸ್ತಿಗೊಳಿಸಿದಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಹಾಸನದ ಟ್ಯಾಕ್ಸಿ ಚಾಲಕ ಪ್ರಭು ಪ್ರತಿಕ್ರಿಯಿಸಿದ್ದಾರೆ.
ದುರಸ್ತಿಯಾದಲ್ಲಿ ಅನುಕೂಲ
ರಸ್ತೆ ಚೆನ್ನಾಗಿದೆ. ನಡುವೆ ಅತ್ಯಲ್ಪ ದೂರದ ತನಕ ಹದೆಗೆಟ್ಟಿದೆ. ಸೇತುವೆ ಮೇಲ್ಭಾಗದಲ್ಲಿ ಸಂಚಾರಕ್ಕೆ ಕಷ್ಟವಾಗುತ್ತಿದೆ. ಇವುಗಳ ದುರಸ್ತಿಯಾದಲ್ಲಿ ಸಂಚಾರಕ್ಕೆ ಅನುಕೂಲ. ಶೀಘ್ರ ಅದನ್ನು ನಡೆಸುವಂತೆ ಸರಕಾರಕ್ಕೆ ಆಗ್ರಹಿಸುತ್ತೇವೆ.
– ರವಿ ಕೂಡುರಸ್ತೆ, ಆಟೋ ಚಾಲಕ
26 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ
ಕಚ್ಚಾ ರಸ್ತೆ ಆಗಿದ್ದ ಇದು ನಿಧಾನವಾಗಿ ಡಾಮರು ರಸ್ತೆಯಾಗಿ ಬದಲಾಗಿತ್ತು. ಎರಡು ವರ್ಷಗಳ ಹಿಂದೆ ಮೂರು ಹಂತದಲ್ಲಿ 26 ಕೋಟಿ ರೂ. ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಬಿಸಿಲೆ ಘಾಟಿ ರಸ್ತೆಯ ಸುಬ್ರಹ್ಮಣ್ಯ-ಕೂಡು ರಸ್ತೆ ನಡುವೆ ದ.ಕ. ವಿಭಾಗಕ್ಕೆ ಸೇರಿದ 30 ಕಿ.ಮೀ. ರಸ್ತೆ ಅಭಿವೃದ್ಧಿಗೊಂಡಿದೆ. ಯಸಳೂರು ವಿಭಾಗಕ್ಕೆ ಸೇರಿದ 2 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ಶೀಘ್ರ ಕಾಮಗಾರಿ ಆರಂಭ
ಬಿಸಿಲೆ ಘಾಟಿ ರಸ್ತೆಯಲ್ಲಿ ಅಡ್ಡಹೊಳೆ ಸೇತುವೆ ಗಟ್ಟಿಯಾಗಿಯೇ ಇದೆ. ಸೇತುವೆ ಸಂಪರ್ಕ ಕಡಿತಗೊಳ್ಳುವಷ್ಟು ಶಿಥಿಲಗೊಂಡಿಲ್ಲ. ಸೇತುವೆ ಮೇಲಿನ ಕಾಂಕ್ರೀಟ್ ಎದ್ದು ಹೋಗಿ ಕಬ್ಬಿಣದ ಸರಳುಗಳು ಕಾಣುತ್ತಿವೆಯಷ್ಟೆ. ಹಾನಿಗೊಳಗಾದ ಅಡ್ಡಹೊಳೆ ಸೇತುವೆ ದುರಸ್ತಿ ಸಹಿತ ಈ ರಸ್ತೆಯ 2.5 ಕಿ.ಮೀ. ದೂರದ ರಸ್ತೆ ಕಾಂಕ್ರೀಟ್ ಕಾಮಗಾರಿ 10 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ. ಟೆಂಡರು ಪ್ರಕ್ರಿಯೆ ಪೂರ್ಣಗೊಂಡಿದೆ. ಮಂಗಳೂರು ಮೂಲದ ವಿಜಯಾನಂದ ಹೆಸರಿನ ಗುತ್ತಿಗೆದಾರರು ಕಾಮಗಾರಿ ನಡೆಸುತ್ತಾರೆ. ವಾರದಲ್ಲಿ ಕೆಲಸ ಆರಂಭಿಸಲು ಸೂಚಿಸುವೆ.
– ವೆಂಕಟೇಶ್ ಎಇಇ , ಸಕಲೇಶಪುರ ಲೋಕೋಪಯೋಗಿ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ
ESI ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸಂಕಷ್ಟ:ಸಂಸದ ಬ್ರಿಜೇಶ್ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು
Kodagu: ಯೋಧ ದಿವಿನ್ ಪಂಚಭೂತಗಳಲ್ಲಿ ಲೀನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.