ಹಲವೆಡೆ ಜೇನು ಕುಟುಂಬ ಸಾಕುವ ರಾಧಾಕೃಷ್ಣ ದಾಸ್
ಸ್ವಂತ ಜಾಗದ ಅಭಾವದ ನಡುವೆ ಛಲ ಬಿಡದೆ ಸಾಧನೆ
Team Udayavani, Jan 2, 2020, 7:59 AM IST
ಹೆಸರು: ರಾಧಾಕೃಷ್ಣ ದಾಸ್
ಏನೇನು ಕೃಷಿ?: ಜೇನು ಸಾಕಣೆ
ಎಷ್ಟು ವಯಸ್ಸು: 65
ಕೃಷಿ ಪ್ರದೇಶ: 17 ಸೆಂಟ್ಸ್
ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ “ಉದಯವಾಣಿ’ಯು ಕಿಸಾನ್ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.
ಸುಳ್ಯ: ಜೇನು ಕೃಷಿಗೆ ಸ್ವಂತ ಜಾಗದ ಕೊರತೆ ಎದುರಾದಾಗ ಸುಮ್ಮನೆ ಕೂರದೆ, ತಾಲೂಕಿನೆಲ್ಲೆಡೆ ಸುತ್ತಾಡಿ ಅವಕಾಶ ಸಿಕ್ಕ ಕಡೆಗಳಲ್ಲಿ ಜೇನು ಪೆಟ್ಟಿಗೆ ಇರಿಸಿ ಕೃಷಿ ಮಾಡಿ ಯಶಸ್ವಿಯಾದ ಅಪರೂಪದ ಸಾಧಕ ಉಬರಡ್ಕ ಮಿತ್ತೂರಿನ ಕೈಪದ ರಾಧಾಕೃಷ್ಣ ದಾಸ್.
17 ಸೆಂಟ್ಸ್ ಜಾಗ
ಕಳೆದ 40 ವರ್ಷಕ್ಕಿಂತ ಅಧಿಕ ಕಾಲದಿಂದ ಜೇನು ಕೃಷಿ ಮಾಡುತ್ತಿರುವ ರಾಧಾಕೃಷ್ಣ ದಾಸ್ ಅವರಿಗೆ ಇರುವುದು ಕೇವಲ 17 ಸೆಂಟ್ಸ್ ಜಾಗ ಮಾತ್ರ. ಆರಂಭದಲ್ಲಿ 4 ಪೆಟ್ಟಿಗೆಯಿಟ್ಟು ಜೇನು ಕೃಷಿ ಪ್ರಾರಂಭಿಸಿದರು. ಇದರಲ್ಲಿ ಇನ್ನಷ್ಟು ಸಾಧನೆ ಮಾಡಬೇಕು ಎಂಬ ಛಲ ಬಂತು. ಜಾಗ ಖರೀದಿಗೆ ಆಗ ಆರ್ಥಿಕ ಶಕ್ತಿ ಇರಲಿಲ್ಲ. ಹೀಗಾಗಿ ತಾಲೂಕಿನ ನಾನಾ ಮನೆಗಳಿಗೆ ತೆರಳಿ ಜೇನು ಪೆಟ್ಟಿಗೆ ಇರಿಸಿ ಕೃಷಿಗೆ ಅವಕಾಶ ನೀಡುವಂತೆ ಭಿನ್ನವಿಸಿಕೊಂಡರು. ಅದಕ್ಕೆ ಸಹಕಾರ ಸಿಕ್ಕಿದ ಪರಿಣಾಮ ಈಗ 30ಕ್ಕೂ ಅಧಿಕ ಕಡೆಗಳಲ್ಲಿ 400ಕ್ಕೂ ಅಧಿಕ ಜೇನು ಕುಟುಂಬ ಸಾಕಿ ಜೇನು ತುಪ್ಪ ಸಂಗ್ರಹಿಸುತ್ತಾರೆ. ಜೇನು ಪೆಟ್ಟಿಗೆ ಇರಿಸಲು ಅವಕಾಶ ಮಾಡಿಕೊಟ್ಟವರಿಗೆ ಸಂಗ್ರಹದ ಸಂದರ್ಭ 1 ಕೆ.ಜಿ. ಜೇನು ತುಪ್ಪ ಕೊಡಲು ಇವರು ಮರೆಯುವುದಿಲ್ಲ.
4,500 ಕೆ.ಜಿ.ಜೆೇನು ತುಪ್ಪ ಮಾರಾಟ
ತೊಡವೆ ಜಾತಿಯ ಜೇನು ಸಾಕಾಣೆ ಮಾಡುವ ಇವರು 4,500 ಕೆ.ಜಿ. ಜೇನು ತುಪ್ಪ ತೆಗೆದು ಮಾರಾಟ ಮಾಡುತ್ತಾರೆ. 3,500 ಕೆ.ಜಿ. ಜೇನು ಸೊಸೈಟಿಗೆ ಮಾರಾಟ ಮಾಡುತ್ತಾರೆ. ಉಳಿದವುಗಳನ್ನು ಆಸ್ಪತ್ರೆ ಸಹಿತ ಬೇರೆ ಬೇರೆ ಅಗತ್ಯಕ್ಕೆ ಬೇಡಿಕೆ ಇರುವೆಡೆ ನೀಡುತ್ತಾರೆ. ಇವರು ವಿದೇಶಕ್ಕೂ ಜೇನು ಪೂರೈಸಿದ್ದುಂಟು. ವರ್ಷದಿಂದ ವರ್ಷಕ್ಕೆ ಜೇನು ಪೆಟ್ಟಿಗೆ ಇಡುವ ಸಂಖ್ಯೆ ಹೆಚ್ಚಳವಾಗುತ್ತಿದೆ. ಪ್ರಕೃತಿದತ್ತ ಕ್ರಮದಲ್ಲೇ ಜೇನು ತುಪ್ಪ ಉತ್ಪಾದಿಸುವ ಕಾರಣ ಗುಣಮಟ್ಟವು ಉತ್ತಮವಾಗಿ ಬೇಡಿಕೆ ಹೆಚ್ಚಾಗುತ್ತಿದೆ.
ತರಬೇತಿ ನೀಡುತ್ತಾರೆ
ತಾನೊಬ್ಬನೇ ಆದಾಯ ಗಳಿಸುವ ಬದಲು ಇತರರು ಈ ಕೃಷಿಯಲ್ಲಿ ತೊಡಗಬೇಕು ಎಂಬ ಕಾರಣದಿಂದ ಜೇನು ಕೃಷಿ ಬಗ್ಗೆ ತರಬೇತಿ ನೀಡುತ್ತಾರೆ. ತನ್ನನ್ನು ಸಂಪರ್ಕಿಸಿದವರ ಮನೆ-ಮನೆ ಭೇಟಿ ನೀಡಿ ಮಾಹಿತಿ ಕೊಡುತ್ತಾರೆ. ಈಗಾಗಲೇ 50ಕ್ಕೂ ಅಧಿಕ ಕಡೆಗಳಲ್ಲಿ ತರಬೇತಿ ನೀಡಿದ್ದೇನೆ ಎನ್ನುತ್ತಾರಿವರು.
ಸಮ್ಮಾನ, ಪ್ರಶಸ್ತಿ
ಹಲವು ಪ್ರಶಸ್ತಿ, ಸಮ್ಮಾನಗಳು ಇವರಿಗೆ ಸಂದಿವೆ. ಮುಖ್ಯವಾಗಿ ರಾಜ್ಯ ಪ್ರಗತಿಪರ ಜೇನು ಕೃಷಿಕ ಪ್ರಶಸ್ತಿ, ತೋಟಗಾರಿಕೆ ಇಲಾಖೆ ನೀಡುವ ಪ್ರಶಸ್ತಿ ಸಂದಿವೆ. ಅನೇಕ ಸಂಘ-ಸಂಸ್ಥೆಗಳು ಇವರ ಸಾಧನೆ ಕಂಡು ಸಮ್ಮಾನಿಸಿ, ಗೌರವಿಸಿವೆ. ವರ್ಷದ ಮೂರು ತಿಂಗಳು ಜೇನು ತುಪ್ಪ ತೆಗೆಯುವ ಕಾಯಕ. ಮಳೆಗಾಲದ ಮೂರು ತಿಂಗಳು ಜೇನು ಕೃಷಿಗೆ ವಿಶ್ರಾಂತಿ. ಆ ಸಂದರ್ಭ ಜೇನು ತುಪ್ಪ ಉತ್ಪಾದನೆ ಇರುವುದಿಲ್ಲ. ಇವರು ಎಂಟು ದಿವಸಕ್ಕೊಮ್ಮೆ ಜೇನು ಸಂಗ್ರಹಿಸುತ್ತಾರೆ. ವರ್ಷವಿಡಿ ಈ ಕೃಷಿಯ ಕಾಯಕದಲ್ಲೇ ಇರುತ್ತಾರೆ. ಮನೆ ಮಂದಿ ಸಾಥ್ ನೀಡುತ್ತಾರೆ. ಇದರ ಜತೆಗೆ ರಾಧಾಕೃಷ್ಣ ದಾಸ್ ಜೇನು ಕುಟುಂಬಗಳ ಕೃತಕ ವಿಂಗಡನೆ, ಕೃತಕ ರಾಣಿ ಕಣ ಉತ್ಪಾದನೆಯಲ್ಲಿ ತೊಡಗಿದ್ದು, ಮಾಹಿತಿ ನೀಡುವುದು ಇವರ ಹವ್ಯಾಸ.
ನೆಮ್ಮದಿ, ಗೌರವದ ಜೀವನೆ
ಜೇನು ಕೃಷಿಯಿಂದ ಉತ್ತಮ ಆದಾಯ ಪಡೆಯಲು ಸಾಧ್ಯವಿದೆ. 40 ವರ್ಷದ ಹಿಂದೆ ನಾನು ಈ ವೃತ್ತಿ ಆರಂಭಿಸಿದೆ. ನನ್ನಲ್ಲಿ 17 ಸೆಂಟ್ಸ್ ಮಾತ್ರ ಜಾಗ ಇರುವ ಕಾರಣ ತಾಲೂಕಿನ ಬೇರೆ ಬೇರೆ ಮನೆಗಳಿಗೆ ತೆರಳಿ ಅಲ್ಲಿ ಜೇನು ಪೆಟ್ಟಿಗೆ ಇರಿಸಿ ಕೃಷಿ ಮಾಡಿದೆ. ಇದರಿಂದ ಅಲ್ಲಿನ ಕೃಷಿ ತೋಟದಲ್ಲಿನ ಫಲ ಬಿಡುವ ಬೆಳೆಗಳಿಗೂ ಲಾಭ ಸಿಗುತ್ತದೆ. ನಾನು ಜೇನು ಕೃಷಿಯ ಮೂಲಕವೇ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದೇನೆ. ಮುಳಿ ಮನೆ ಇದ್ದ ಜಾಗದಲ್ಲಿ ಆರ್‌ಸಿಸಿ ಮನೆ ಮಾಡಿದ್ದೇನೆ. ನನಗೆ ಜೀವನಕ್ಕೆ ಆದಾಯ ಇರುವುದು ಜೇನು ಕೃಷಿ ಮಾತ್ರ. ಬೇರೆ ಕೃಷಿ ಮಾಡಲು ಜಾಗವೂಇಲ್ಲ. ಜೇನು ಕೃಷಿ ನನಗೆ ನೆಮ್ಮದಿ, ಗೌರವ, ತೃಪ್ತಿ ತಂದುಕೊಟ್ಟಿದೆ. ಇದರಲ್ಲಿ ಉತ್ತಮ ಭವಿಷ್ಯ ಇದೆ ಎಂದು ಹೇಳಬಲ್ಲೆ. ಈ ಬಗ್ಗೆ ತರಬೇತಿ ನೀಡುತ್ತಿದ್ದೇನೆ..
-ರಾಧಾಕೃಷ್ಣ ದಾಸ್, ಉಬರಡ್ಕ ಮಿತ್ತೂರು
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.