ಅಲೆಕ್ಕಾಡಿ: ಚಿಣ್ಣರ ಸೆಳೆಯುವ ಮಕ್ಕಳ ಮನೆ
ಮಗು ಸ್ನೇಹಿ ಶಿಕ್ಷಣದ ಪರಿಕಲ್ಪನೆಯ ಪೂರ್ವ ಪ್ರಾಥಮಿಕ ಶಾಲೆ ಆರಂಭ
Team Udayavani, Jun 7, 2019, 5:50 AM IST
ಬೆಳ್ಳಾರೆ: ಖಾಸಗಿಯಂತೆ ಸರಕಾರಿ ಶಾಲೆಗಳಲ್ಲೂ ಎಲ್.ಕೆ.ಜಿ., ಯು.ಕೆ.ಜಿ. ಮಾದರಿಯ ಪೂರ್ವ ಪ್ರಾಥಮಿಕ ಶಿಕ್ಷಣ ಈ ವರ್ಷದಿಂದ ಆರಂಭಗೊಂಡಿದೆ. ಒಂದನೇ ತರಗತಿಗೆ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿರುವ ತಾಲೂಕಿನ ಮುರುಳ್ಯ ಅಲೆಕ್ಕಾಡಿ ಶಾಲೆಯಲ್ಲಿ ಮಕ್ಕಳ ಹೆತ್ತವರೇ ಮುತುವರ್ಜಿ ವಹಿಸಿ “ಮಕ್ಕಳ ಮನೆ’ ಆರಂಭಿಸಿದ್ದಾರೆ. ಆಕರ್ಷಕ ವಿನ್ಯಾಸ, ಸ್ಮಾರ್ಟ್ ಕ್ಲಾಸ್, ಆಟದ ಮೈದಾನ ಮಕ್ಕಳನ್ನು ಕೈಬೀಸಿ ಕರೆಯುತ್ತಿದೆ. ಸಮವಸ್ತ್ರ, ಶೂ, ಪುಸ್ತಕ, ಶಿಕ್ಷಣ ಶುಲ್ಕ ಎಲ್ಲವನ್ನೂ ಮಕ್ಕಳಿಗೆ ಉಚಿತವಾಗಿ ನೀಡಿ ಖರ್ಚನ್ನು ಹೆತ್ತವರೇ ಭರಿಸಿ ಮಕ್ಕಳ ಮನೆ ಆರಂಭಿಸಿರುವುದು ಇಲ್ಲಿನ ವಿಶೇಷ.
25ಕ್ಕೂ ಹೆಚ್ಚು ಚಿಣ್ಣರ ದಾಖಲಾತಿ
ಅಲೆಕ್ಕಾಡಿ ಮುರುಳ್ಯ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮನೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆಗೆ 25ಕ್ಕೂ ಅಧಿಕ ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದು, ಇನ್ನೂ 10 ವಿದ್ಯಾಥಿಗಳು ಹೆಸರು ನೋಂದಾಯಿಸಿದ್ದಾರೆ. ಸುಮಾರು 6 ಲಕ್ಷ ರೂ.ವೆಚ್ಚದ ಈ ಯೋಜನೆಗೆ ಸಹಕರಿಸಲು ಊರವರು ಹಾಗೂ ಹೆತ್ತವರು ಮುಂದೆ ಬಂದಿರುವುದು ವಿಶೇಷ. ಎಣ್ಮೂರು, ಎಡಮಂಗಲ, ಮುರುಳ್ಯ, ನಿಂತಿಕಲ್ಲು, ಬಾಳಿಲ ಭಾಗದ ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದಾರೆ.
ಎಲ್ಲವೂ ಉಚಿತ
ಸರಕಾರಿ ಶಾಲೆಯನ್ನು ಖಾಸಗಿ ಶಾಲೆಯ ಮಾದರಿಯಲ್ಲಿ ರೂಪುಗೊಳಿಸಿರುವ ಹೆತ್ತವರು ಹಾಗೂ ದಾನಿಗಳು ಮಕ್ಕಳಿಗೆ ಹೊರೆಯಾಗದಂತೆ ಸಂಪೂರ್ಣ ಉಚಿತ ಶಿಕ್ಷಣ ನೀಡಲು ಮುಂದಾಗಿದ್ದಾರೆ. 4 ವರ್ಷ 5 ತಿಂಗಳು ತುಂಬಿದ ಮಕ್ಕಳನ್ನು ಇಲ್ಲಿ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ಇಲ್ಲಿ ದಾಖಲಾತಿ ಪಡೆಯುವ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಿ ದಾನಿಗಳ ನೆರವಿನಿಂದ ಊಟ ಇನ್ನಿತರ ಖರ್ಚುವೆಚ್ಚಗಳನ್ನು ಭರಿಸಲು ನಿರ್ಧರಿಸಲಾಗಿದೆ.
ಹೀಗಿದೆ ಮಕ್ಕಳ ಮನೆ
ಮಕ್ಕಳ ಮನೆಯ ಒಳಹೊಕ್ಕರೆ ಇದು ಸರಕಾರಿ ಶಾಲೆಯೋ ಎಂಬ ಸಂಶಯ ಬಾರದಿರದು. ಚಿಣ್ಣರ ಸೆಳೆಯಲು ಆಕರ್ಷಕ ಗೋಡೆ ಚಿತ್ತಾರವನ್ನು ರಚಿಸಲಾಗಿದೆ. ವಿವಿಧ ಪ್ರಾಣಿ, ಪಕ್ಷಿ, ತರಕಾರಿ, ಅಕ್ಷರಗಳನ್ನು ಮಕ್ಕಳ ಮನೆಯ ಗೋಡೆಗಳಲ್ಲಿ ಆಕರ್ಷಕವಾಗಿ ಚಿತ್ರಿಸಲಾಗಿದೆ. ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾಧ್ಯಮದ ಮೂಲಕ ಕಲಿಯಲು ಎಲ್.ಇ.ಡಿ. ಅಳವಡಿಸಲಾಗಿದೆ. ಸಾಮಾಜಿಕ ಸಂದೇಶವುಳ್ಳ ಕಥಾ ಪುಸ್ತಕಗಳ ಗ್ರಂಥಾಲಯವಿದೆ. ರೇಡಿಯೋ ಮತ್ತು ದುರದರ್ಶನದ ಮೂಲಕ ಪಾಠ ಕೇಳಲು ವ್ಯವಸ್ಥೆ ಮಾಡಲಾಗಿದೆ. ಚಿಣ್ಣರ ಆಟದ ಮೈದಾನವನ್ನೂ ವಿಶೇಷವಾಗಿ ರಚಿಸಲಾಗಿದೆ. ಪಠ್ಯ ಪೂರಕ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗಿದ್ದು, ಗುಣಮಟ್ಟದ ಶಿಕ್ಷಣ ನೀಡಲು ತರಬೇತಿ ಪಡೆದ ಒಬ್ಬರು ಶಿಕ್ಷಕಿ ಹಾಗೂ ಸಹಾಯಕಿಯನ್ನು ನೇಮಿಸಲಾಗಿದೆ. ಒಟ್ಟಿನಲ್ಲಿ ಮಗು ಸ್ನೇಹಿ ಶಿಕ್ಷಣದ ಪರಿಕಲ್ಪನೆಯಲ್ಲಿ ಮಕ್ಕಳ ಮನೆಯನ್ನು ವಿನ್ಯಾಸಗೊಳಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.