ಒಂದೂವರೆ ಎಕರೆ ವ್ಯಾಪ್ತಿಯ ಬದ್ಯಾರು ಕೆರೆ ಪುನಶ್ಚೇತನ
Team Udayavani, May 4, 2021, 4:00 AM IST
ಪುಂಜಾಲಕಟ್ಟೆ: ಕೆರೆಗಳು ನೀರಾವರಿಯ ಅತ್ಯುತ್ತಮ ವ್ಯವಸ್ಥೆಯಾಗಿದ್ದು, ನಿಶ್ಚಿತ ಜಲ ನಿಧಿ ಗಳಾಗಿ ಶತ ಮಾನಗಳಿಂದ ನೆರವಾದ ಮೂಲ ಗಳಾಗಿವೆ. ಆದರೆ ಸರಿಯಾದ ವ್ಯವಸ್ಥೆ ಇಲ್ಲದೆ ಸಮು ದಾಯದಿಂದ ದೂರವಾಗುತ್ತಿರುವ ಸಂದರ್ಭದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಮೂಲಕ ನಮ್ಮೂರು ನಮ್ಮ ಕೆರೆ ಯೋಜನೆಯಲ್ಲಿ ಹಲವಾರು ಕೆರೆಗಳು ಪುನಶ್ಚೇತನಗೊಳ್ಳುತ್ತಿವೆ.
ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾ.ಪಂ. ವ್ಯಾಪ್ತಿಯ ಎಲಿಯನಡುಗೋಡು ಗ್ರಾಮದ ಬದ್ಯಾರುವಿನಲ್ಲಿ ಒಂದೂವರೆ ಎಕರೆಯಲ್ಲಿರುವ ಬದ್ಯಾರು ಕೆರೆ ಪುನಶ್ಚೇತನ ಗೊಳ್ಳುತ್ತಿದ್ದು, ಭವಿಷ್ಯದಲ್ಲಿ ಸಮೃದ್ಧ ನೀರು ದೊರಕಲಿದೆ.
ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ನಮ್ಮೂರು ನಮ್ಮ ಕೆರೆ ಯೋಜನೆ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 9 ಲಕ್ಷ ರೂ. ಅನುದಾನದಲ್ಲಿ ಮತ್ತು ಸರಕಾರದ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕೆರೆ ಸಂಜೀವಿನಿ ಯೋಜನೆಯ ಆರ್ಥಿಕ ನೆರವಿನಲ್ಲಿ ಕೆರೆಯ ಪುನಶ್ಚೇತನ ಕಾರ್ಯಕ್ಕೆ ಚಾಲನೆ ದೊರಕಿದ್ದು, ಕಾಮಗಾರಿ ನಡೆಯುತ್ತಿದೆ.
ಬದ್ಯಾರು ಕೆರೆ ಒಂದು ಕಾಲದಲ್ಲಿ ಬೇಸಗೆಯಲ್ಲಿ ಸಮೃದ್ಧ ನೀರು ಸಂಗ್ರಹವಿರುವ ಕೆರೆಯಾಗಿ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರಯೋಜನವಾಗುತಿತ್ತು. ಆದರೆ ಇಂದು ಬದ್ಯಾರು ಕೆರೆಯಲ್ಲಿ ಹೂಳು ತುಂಬಿದೆ. ಕಸ ಕಡ್ಡಿಗಳು ಕೆರೆಗೆ ಸೇರಿ ನೀರು ಕಲುಷಿತಗೊಂಡಿದೆ. ಬದ್ಯಾರು ಕೆರೆಯನ್ನು ಪುನಶ್ಚೇತನಗೊಳಿಸಿ ಅಭಿವೃದ್ಧಿಗೊಳಿಸಿದರೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಸ್ಥಳೀಯ ಕೃಷಿಕರು. ಈ ಪ್ರದೇಶದ ಸುತ್ತಮುತ್ತ ಬಾವಿಗಳ ನೀರು ಆಳದಲ್ಲಿದೆ, ತೊರೆ ಸಂಪೂರ್ಣ ಬತ್ತಿಹೋಗಿದೆ. ಎಲ್ಲಿಯೂ ಬೇಸಗೆಯಲ್ಲಿ ಪ್ರಾಣಿ- ಪಕ್ಷಿಗಳಿಗೆ ಕುಡಿಯುವ ನೀರಿನ ಮೂಲಗಳಿಲ್ಲ. ಹೀಗಾಗಿ ಪ್ರಾಣಿ-ಪಕ್ಷಿಗಳಿಗೆ ಬದ್ಯಾರು ಕೆರೆಯೇ ನೀರಿನ ಮೂಲವಾಗಿದೆ.
ಕೃಷಿಗೆ ಪೂರಕ :
ಸಂಪೂರ್ಣ ಕೆರೆಯ ನೀರು ಮಲಿನಮುಕ್ತ ಗೊಳಿಸಲು ಹೂಳು ತೆಗೆದು ಕೆರೆಯ ಸುತ್ತಲೂ ತಡೆಗೋಡೆ ನಿರ್ಮಿಸಿ, ಸುರಕ್ಷತೆ ದೃಷ್ಟಿಯಿಂದ ಸುತ್ತಲೂ ಬೇಲಿ ಹಾಕಿ ಸಂಪೂರ್ಣವಾಗಿ ಅಭಿವೃದ್ಧಿ ಕಾರ್ಯ ನಡೆದರೆ ಮುಂದೆಯೂ ಇದರ ಪ್ರಯೋಜನ ಸಿಗಲಿದೆ. ಒಂದೂವರೆ ಎಕರೆ ವಿಸ್ತೀರ್ಣದಲ್ಲಿರುವ ಬದ್ಯಾರು ಕೆರೆಯಲ್ಲಿ ಮಳೆಗಾಲದಲ್ಲಿ ಸಮೃದ್ಧವಾಗಿ ನೀರು ಸಂಗ್ರಹವಾದರೆ ಬೇಸಗೆಗಾಲದಲ್ಲಿ ಸುಮಾರು 60ಕ್ಕೂ ಅಧಿಕ ಕೃಷಿಕ ಕುಟುಂಬಗಳ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ.
ಆಗುವ ಪ್ರಯೋಜನ :
ಕೆರೆಯಿಂದ ತಗ್ಗು ಪ್ರದೇಶದಲ್ಲಿ ಅಡಕೆ, ತೆಂಗು, ಭತ್ತ ಮುಂತಾದ ಕೃಷಿ ಚಟುವಟಿಗಳಿಗೆ ಪ್ರಯೋಜನವಾಗಲಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿನ ಮನೆಗಳಿಗೆ ನೀರಿನ ಪೂರೈಕೆ, ಮಳೆಯ ನೀರು ಕೆರೆಯಲ್ಲಿ ಸಂಗ್ರಹ ವಾಗುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಲು ಸಾಧ್ಯವಾಗುತ್ತದೆ. ಕೆರೆಯ ನೀರಿ ನಿಂದ ಗ್ರಾಮದ ಜನತೆಗೆ ಹೆಚ್ಚು ಪ್ರಯೋಜನ ವಾಗ ಲಿದೆ. ಪ್ರಾಣಿ- ಪಕ್ಷಿಗಳಿಗೂ ನೀರು ದೊರೆಯುತ್ತದೆ.
ವಿವಿಧ ಯೋಜನೆ :
ಪುನಶ್ಚೇತನ ಸಮಿತಿಯ ಉದ್ದೇಶ ಸಮುದಾಯ ಮೂಲಕ ಕೆರೆ ಅಭಿವೃದ್ಧಿ , ಕೆರೆಯ ಹೂಳೆತ್ತುವುದು, ದಂಡೆಯ ಸುತ್ತ ಕಲ್ಲು ಕಟ್ಟುವುದು. ಸುರಕ್ಷತೆಯ ಕ್ರಮ ಅಳವಡಿಸುವುದು. ಕಳೆ ಗಿಡಗಳ ನಿಯಂತ್ರಣ, ಅತಿಕ್ರಮಣ ನಡೆಸುವ ಕಳೆ ಗಿಡಗಳನ್ನು ಬೇರು ಸಹಿತ ಕಿತ್ತು ನಾಶ ಪಡಿಸುವುದು, ದಂಡೆಯಲ್ಲಿ ಹಾನಿ ಮಾಡದ ಗಿಡಗಳನ್ನು ನೆಡುವುದು, ಗಾರ್ಡನ್, ಸೋಲಾರ್ ಲೈಟ್, ಕುಳಿತುಕೊಳ್ಳಲು ಸಿಮೆಂಟ್ ಬೆಂಚ್ ಅಳವಡಿಕೆ ಮೊದಲಾದ ಯೋಜನೆಗಳಿವೆ.
ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ನಮ್ಮೂರು ನಮ್ಮ ಕೆರೆ ಯೋಜನೆಯ 334ನೇ ಕೆರೆಯಾಗಿ ಬದ್ಯಾರು ಕೆರೆ ಪುನಶ್ಚೇತನಗೊಳ್ಳುತ್ತಿದೆ. ಪ್ರಸ್ತುತ ಹೂಳೆತ್ತುವಿಕೆಯ ಕಾಮಗಾರಿ ಭರದಿಂದ ನಡೆಯುತ್ತಿದ್ದು ಮಳೆಯ ಕಾರಣದಿಂದಾಗಿ ಸ್ವಲ್ಪ ವಿಳಂಬವಾಗುತ್ತಿದೆ. –ಸುರೇಶ್ ಶೆಟ್ಟಿ ಕುತ್ಲೋಡಿ, ಅಧ್ಯಕ್ಷರು, ಕೆರೆ ಪುನಶ್ಚೇತನ ಸಮಿತಿ
ಕೆರೆಯ ಹೂಳು ತೆಗೆದು ಕೆರೆಯನ್ನು ಅಭಿವೃದ್ಧಿ ಪಡಿಸಿದರೆ ಕೃಷಿಕರಿಗೆ ಅನುಕೂಲವಾಗಲಿದೆ. ಕೆರೆಯ ಸಮಗ್ರ ಅಭಿವೃದ್ಧಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಸರಕಾರದಿಂದ ಹೆಚ್ಚಿನ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. –ಪ್ರಭಾಕರ ಪ್ರಭು, ಸದಸ್ಯರು, ಸಂಗಬೆಟ್ಟು ತಾ.ಪಂ.
ರತ್ನದೇವ್ ಪುಂಜಾಲಕಟ್ಟೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.