Bantwala: ಗುಡ್ಡದ ಬೆಂಕಿಗೆ ಸಿಲುಕಿ ವೃದ್ಧ ದಂಪತಿ ಸಜೀವ ದಹನ
Team Udayavani, Jan 28, 2024, 4:24 PM IST
ಬಂಟ್ವಾಳ: ಇಲ್ಲಿನ ಬಂಟ್ವಾಳದ ಲೊರೆಟ್ಟೋಪದವು ಸಮೀಪದ ತುಂಡುಪದವು ಗುಡ್ಡದಲ್ಲಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ವೃದ್ಧ ದಂಪತಿ ಸಜೀವ ದಹನಗೊಂಡು ಮೃತಪಟ್ಟ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.
ಅಮಾrಡಿ ಗ್ರಾಮದ ತುಂಡುಪದವು ನಿವಾಸಿ ಗಿಲ್ಬರ್ಟ್ ಕಾರ್ಲೊ (78) ಹಾಗೂ ಪತ್ನಿ ಕ್ರಿಸ್ಟಿನಾ ಕಾರ್ಲೊ (70) ಮೃತಪಟ್ಟವರು. ಮಧ್ಯಾಹ್ನದ ಬಿರುಬಿಸಿಲಿನ ಹೊತ್ತಿನಲ್ಲಿ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೋ ಕಾರಣದಿಂದ ಬೆಂಕಿ ಹಿಡಿದಿರುವುದನ್ನು ಕಂಡು ನಂದಿಸಲು ಹೋಗಿ ಬೆಂಕಿಯ ಮಧ್ಯೆ ಸಿಲುಕಿ ಹಾಕಿಕೊಂಡರೋ ಅಥವಾ ಇನ್ನೇನಾದರೂ ಆಗಿದೆಯೋ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಬೆಂಕಿ ಹತ್ತಿಕೊಂಡ ಪ್ರದೇಶದ ಪಕ್ಕದಲ್ಲೇ ಅವರ ಪಂಪ್‌ಸೆಟ್ ಇದ್ದು, ಅದರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಂಕಿ ಕಾಣಿಸಿಕೊಂಡ ಪ್ರದೇಶಕ್ಕೆ ಸ್ಥಳೀಯರು ಹೋಗಿ ನೋಡಿದಾಗ ಇಬ್ಬರು ಕೂಡ ಶವವಾಗಿ ಬಿದ್ದಿದ್ದರು.
ಒಮ್ಮೆ ಹಿಂದಕ್ಕೆ ಕಳುಹಿಸಿದ್ದರು
ಘಟನೆಯು 12.30ರಿಂದ 1.30ರೊಳಗೆ ಸಂಭವಿಸಿದೆ. ಸುಮಾರು 12 ಗಂಟೆಯ ವೇಳೆಗೆ ಈ ದಂಪತಿ ಬೆಂಕಿ ಕಾಣಿಸಿಕೊಂಡ ಸ್ಥಳಕ್ಕೆ ಹೋಗಿದ್ದು, ಆಗ ಸ್ಥಳೀಯ ನಿವಾಸಿ ಲಾರೆನ್ಸ್ ಅವರು ಬೆಂಕಿಯ ಅಪಾಯದ ಕುರಿತು ತಿಳಿ ಹೇಳಿ ದಂಪತಿಯನ್ನು ಹಿಂದಕ್ಕೆ ಕಳುಹಿಸಿದ್ದರು. ಅನಂತರ ಅವರು ಮತ್ತೆ ಸ್ಥಳಕ್ಕೆ ಹೋಗಿರುವ ಸಾಧ್ಯತೆ ಇದೆ.
ಬೆಂಕಿ ಹಿಡಿದಿರುವ ಸ್ಥಳಕ್ಕೂ ಅವರ ಮನೆಗೂ ಸುಮಾರು 100 ಮೀ. ಅಂತರವಿದ್ದು, ಅವರು ಬೇರೆಯವರಿಗೆ ಸೇರಿದ ಸ್ಥಳದಲ್ಲಿ ಶವವಾಗಿ ಬಿದ್ದಿದ್ದರು. ಮಹಿಳೆಯ ಮೃತದೇಹ ಕೊಂಚ ಕೆಳ ಪ್ರದೇಶದಲ್ಲಿ ಇದ್ದು, ಅದಕ್ಕಿಂತ ಸ್ವಲ್ಪ ಮೇಲೆ ಗಿಲ್ಬರ್ಟ್ ಶವವಿತ್ತು. ಹೀಗಾಗಿ ಮಹಿಳೆಗೆ ಮೊದಲು ಬೆಂಕಿ ತಗಲಿರುವ ಸಾಧ್ಯತೆ ಇದೆ. ಅವರು ಬಿದ್ದಿರುವ ಜಾಗದಿಂದ 15 ಮೀ. ಈಚೆಗೂ ಬೆಂಕಿ ವ್ಯಾಪಿಸಿದೆ.
ಮಧ್ಯಾಹ್ನದ ಊಟಕ್ಕೂ ಮೊದಲೇ ಅವರು ದಹನಗೊಂಡಿದ್ದು, ವಿಚಾರ ತಿಳಿದು ಮಂಗಳೂರಿನಲ್ಲಿದ್ದ ಪುತ್ರಿ ಸ್ಥಳಕ್ಕೆ ಆಗಮಿಸಿದ ಬಳಿಕ ಸ್ಥಳದಿಂದ ಮೃತದೇಹಗಳನ್ನು ಸ್ಥಳದಿಂದ ತೆರವು ಮಾಡಲಾಯಿತು.
ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕ ದಳದವರು ಹಾಗೂ ಬಂಟ್ವಾಳ ನಗರ ಪೊಲೀಸ್ ತೆರಳಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕ ದಳದ ವಾಹನ ತೆರಳಲು ಸಾಧ್ಯವಾಗದ ಕಾರಣ ಬಕೆಟ್ ಮೂಲಕ ನೀರು ಕೊಂಡು ಹೋಗಿ ಬೆಂಕಿ ನಂದಿಸುವ ಪ್ರಯತ್ನ ಮಾಡಲಾಗಿದೆ.
ಅಂತ್ಯಸಂಸ್ಕಾರ
ಮೃತದೇಹಗಳ ಮರಣೋತ್ತರ ಪರೀಕ್ಷೆಯು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ತುಂಬೆ ಆಸ್ಪತ್ರೆಯ ಶೈತ್ಯಾಗಾರದಲ್ಲಿಡಲಾಗಿದೆ. ಜ. 29ರ ಸಂಜೆ ಪುತ್ರಿಯರು ವಿದೇಶದಿಂದ ಆಗಮಿಸಲಿದ್ದು, ಮರುದಿನ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಆಪ್ತ ಮೂಲಗಳು ತಿಳಿಸಿದೆ.
ವರ್ಷದ ಹಿಂದೆ ವಿವಾಹ ಸುವರ್ಣ ಸಂಭ್ರಮ
ಗಿಲ್ಬರ್ಟ್ ಕಾರ್ಲೊ ಹಾಗೂ ಕ್ರಿಸ್ಟಿನಾ ಕಾರ್ಲೊ ದಂಪತಿ ಮಾತ್ರ ಮನೆಯಲ್ಲಿದ್ದು, ಬಹಳ ಅನ್ಯೋನ್ಯವಾಗಿದ್ದರು. ಅವರ ವೈವಾಹಿಕ ಜೀವನದ ಸುವರ್ಣ ಮಹೋತ್ಸವ 1 ವರ್ಷದ ಹಿಂದೆಯಷ್ಟೇ ಲೊರೆಟ್ಟೋ ಚರ್ಚ್‌ನಲ್ಲಿ ನಡೆದಿತ್ತು. ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದು ವಿವಾಹ ಮಾಡಿಕೊಡಲಾಗಿದೆ. ಇಬ್ಬರು ಮಸ್ಕತ್‌ನಲ್ಲಿ, ಓರ್ವ ಪುತ್ರಿ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಮಂಗಳೂರಿನಲ್ಲಿರುವ ಪುತ್ರಿ ಆಗಾಗ ಬಂದು ಹೆತ್ತವರನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದರು.
ವಿದೇಶದಲ್ಲಿ ಉದ್ಯೋಗದಲ್ಲಿದ್ದ ಗಿಲ್ಬರ್ಟ್ ನಿವೃತ್ತಿಯ ಬಳಿಕ ಊರಲ್ಲಿ ನೆಲೆಸಿದ್ದರು. ಪತಿ-ಪತ್ನಿ ಇಬ್ಬರೂ ಮಧುಮೇಹ ಕಾಯಿಲೆ ಹೊಂದಿದ್ದು, ಪತಿಗೆ ಡಯಾಲಿಸಿಸ್ ಮಾಡಲಾಗುತ್ತಿತ್ತು. ಅವರಿಗೆ ವೇಗವಾಗಿ ನಡೆಯಲು ಕಷ್ಟವಾಗುತ್ತಿದ್ದು, ಇದೇ ಕಾರಣದಿಂದ ಬೆಂಕಿ ಹಿಡಿಯುವ ವೇಳೆ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಇರುವ ಸಾಧ್ಯತೆಯೂ ಇದೆ.
ಬೇಸಗೆಯಲ್ಲಿ ಬಹಳ ಅಪಾಯಕಾರಿ
ಪ್ರಸ್ತುತ ಬೇಸಗೆ ಆಗಮಿಸುತ್ತಿದ್ದು, ಮುಂದೆ ಹತ್ತಾರು ಕಡೆ ಗುಡ್ಡಕ್ಕೆ ಬೆಂಕಿ ಹಿಡಿಯುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಮಧ್ಯಾಹ್ನದ ವೇಳೆಗೆ ಬೆಂಕಿ ಬಹಳ ಅಪಾಯಕಾರಿಯಾಗಿದ್ದು, ಬಿಸಿಲು ಹಾಗೂ ಗಾಳಿಯ ಮಧ್ಯೆ ಅಗ್ನಿ ವ್ಯಾಪಿಸುವ ವೇಗವನ್ನು ಅಂದಾಜಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಜೀವಹಾನಿಯ ಜತೆಗೆ ಇನ್ನಿತರ ಅವಘಡಗಳ ಸಾಧ್ಯತೆ ಹೆಚ್ಚು. ಗುಡ್ಡ ಪ್ರದೇಶದ ಕಳೆ ಗಿಡಗಳ ನಾಶಕ್ಕೆ ಹೆಚ್ಚಾಗಿ ಬೆಂಕಿ ಹಚ್ಚುತ್ತಿದ್ದು, ಇದು ಬಹಳ ಅಪಾಯಕಾರಿ. ಬಹುತೇಕ ಸಂದರ್ಭಗಳಲ್ಲಿ ವಿದ್ಯುತ್ ಶಾರ್ಟ್ ಸಕೀìಟ್‌ನಿಂದ ಬೆಂಕಿ ಹಚ್ಚಿಕೊಳ್ಳುತ್ತಿದ್ದು, ಇದರ ನಿಯಂತ್ರಣಕ್ಕೂ ಕ್ರಮ ಅಗತ್ಯವಾಗಿದೆ. ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿದ್ದು, ಬೀಡಿಯೋ, ಸಿಗರೇಟೋ ಸೇದಿ ಅದರ ಕಡ್ಡಿಯನ್ನು ಎಸೆಯುವುದರಿಂದಲೂ ಬೆಂಕಿ ಹಬ್ಬುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.