ಬಿ.ಸಿ.ರೋಡ್- ಪುಂಜಾಲಕಟ್ಟೆ ಹೆದ್ದಾರಿ: ಗಡುವು ಮುಗಿದರೂ ಪರಿಹಾರ ಇನ್ನೂ ಕೈ ಸೇರಿಲ್ಲ
Team Udayavani, Sep 24, 2021, 3:00 AM IST
ಬಂಟ್ವಾಳ: ಬಿ.ಸಿ.ರೋಡ್-ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಜಾಗ ಬಿಟ್ಟು ಕೊಟ್ಟವರು ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಿದ ಬಳಿಕ ಬೆಂಗಳೂರಿನ ವಿಶೇಷ ಭೂಸ್ವಾಧೀನಾ ಧಿಕಾರಿ (ಎಸ್‌ಎಲ್‌ಒ)ಗಳ ತಂಡ ಸಂತ್ರಸ್ತರನ್ನು ಒಮ್ಮೆ ಭೇಟಿ ಮಾಡಿದ್ದು ಬಿಟ್ಟರೆ ಇನ್ನೂ ಪರಿಹಾರ ಕೈ ಸೇರಿಲ್ಲ. ಹೀಗಾಗಿ ಹೆದ್ದಾರಿಯ ಮುಂದಿನ ಭಾಗದ ಅಭಿವೃದ್ಧಿಯ ಭೂಸ್ವಾಧೀನಕ್ಕೆ ಸ್ಥಳೀಯ ರನ್ನೇ ಎಸ್‌ಎಲ್‌ಒಗಳನ್ನಾಗಿ ನೇಮಿಸಲು ಹೆದ್ದಾರಿ ಇಲಾಖೆ ಚಿಂತನೆ ನಡೆಸಿದೆ.
ಹೆದ್ದಾರಿಯ ಕಾಮಗಾರಿ 2018ರಲ್ಲಿ ಪ್ರಾರಂಭಗೊಂಡು ನಮ್ಮ ಭೂಮಿಯನ್ನು ಹೆದ್ದಾರಿ ಇಲಾಖೆಯು ಸ್ವಾಧೀನ ಪಡಿಸಿಕೊಂಡು 2 ವರ್ಷಗಳೇ ಕಳೆದರೂ ಪರಿಹಾರ ಸಿಕ್ಕಿಲ್ಲ ಎಂದು ನಾವೂರು ಗ್ರಾಮದ ಸಂತ್ರಸ್ತರು ಜುಲೈ 20ರಂದು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳ ಬಳಿ ಪರಿಹಾರಕ್ಕೆ ಒಂದು ತಿಂಗಳ ಗಡುವು ನೀಡಿದ್ದರು. ಆಗಸ್ಟ್‌ನಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಗಳ ತಂಡ ಭೂಮಿ ಕಳೆದುಕೊಂಡವರನ್ನು ಭೇಟಿಯಾಗಿ ದಾಖಲೆಗಳ ಪರಿಶೀಲನೆ ನಡೆಸಿ, ಕೆಲವೊಂದು ದಾಖಲೆಗಳ ನಕಲು ಪ್ರತಿಗಳ ಬದಲು ಮೂಲ ಪ್ರತಿಯನ್ನು ಪಡೆದುಕೊಂಡಿದೆ. ಜತೆಗೆ 15 ದಿನಗಳಲ್ಲಿ ಪರಿಹಾರ ಮೊತ್ತ ಜಮೆ ಮಾಡುವುದಾಗಿಯೂ ತಿಳಿಸಿದೆ. ಆದರೆ ಇದಾಗಿ ಮತ್ತೆ ಒಂದು ತಿಂಗಳಾದರೂ ಸಂತ್ರಸ್ತರಿಗೆ ಪರಿಹಾರ ಮಾತ್ರ ಗಗನ ಕುಸುಮವಾಗಿದೆ.
ಈ ಕುರಿತು ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಅಧಿಕಾರಿಗಳ ಬಳಿ ಕೇಳಿದರೆ ಅದು ಎಸ್‌ಎಲ್‌ಒಗಳ ಕೆಲಸ. ನಾವು ಕಾಮಗಾರಿಯನ್ನು ಮಾತ್ರ ಮಾಡುತ್ತೇವೆ ಎಂಬ ಉತ್ತರ ನೀಡುತ್ತಾರೆ. ಪರಿಹಾರ ದೊರಕಿಸಿ ಕೊಡುವವರು ಯಾರು ಎಂಬ ಪ್ರಶ್ನೆ ಭೂಮಿ ಕಳೆದುಕೊಂಡವರನ್ನು ಕಾಡುತ್ತಿದೆ.
ಸ್ಥಳೀಯರೇ ಎಸ್‌ಎಲ್‌ಒಗಳು?:
ಪ್ರಸ್ತುತ ಬಿ.ಸಿ.ರೋಡ್‌ನಿಂದ ಪುಂಜಾಲಕಟ್ಟೆವರೆಗೆ 19.85 ಕಿ.ಮೀ. ಹೆದ್ದಾರಿ ಅಭಿವೃದ್ಧಿಗೊಳ್ಳುತ್ತಿದ್ದು, ಇದರ ಮುಂದುವರಿದ ಭಾಗ ವಾಗಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗಿನ ಹೆದ್ದಾರಿ ಅಭಿವೃದ್ಧಿಯ ಸಿದ್ಧತ ಪ್ರಕ್ರಿಯೆಗಳು ಆರಂಭಗೊಂಡಿವೆ. ಇಲ್ಲಿನ ಭೂಸ್ವಾಧೀನ ಪ್ರಕ್ರಿಯೆಗಳಿಗಾಗಿ ದ.ಕ. ಜಿಲ್ಲಾ ವ್ಯಾಪ್ತಿಯಲ್ಲೇ ಲಭ್ಯವಾಗುವ ವಿಶೇಷ ಭೂಸ್ವಾಧೀನಾಧಿಕಾರಿಗಳನ್ನು ನೇಮಿಸುವುದಕ್ಕೆ ಹೆದ್ದಾರಿ ಇಲಾಖೆ ಚಿಂತಿಸಿದೆ. ಪ್ರಸ್ತುತ ಬಿ.ಸಿ.ರೋಡ್- ಪುಂಜಾಲಕಟ್ಟೆ ಹೆದ್ದಾರಿಯ ಎಸ್‌ಎಲ್‌ಒ ಬೆಂಗಳೂರಿನಲ್ಲಿರುವ ಕಾರಣ ಸಮಸ್ಯೆಯಾಗಿದ್ದು, ಅವರ ಸೂಕ್ತ ಸ್ಪಂದನೆ ಇಲ್ಲದೆ ಪರಿಹಾರ ಸಿಗುವುದು ವಿಳಂಬವಾಗಿದೆ ಎಂದು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಿದ್ದಾರೆ. ಅವರು ಪರಿಹಾರದ ಕುರಿತು ಕೇಳಿದರೆ ಕಡತ ನಮ್ಮಿಂದ ವಿಲೇವಾರಿಯಾಗಿದೆ ಎಂದು ಇನ್ನೊಬ್ಬರತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸುತ್ತವೆ.
ಜಿಲ್ಲಾ ವ್ಯಾಪ್ತಿಯ ಅಧಿಕಾರಿಗಳು ಎಸ್‌ಎಲ್‌ಒಗಳಾದರೆ ಅವರನ್ನು ನೇರವಾಗಿ ಸಂಪರ್ಕಿಸಬಹುದು. ಜತೆಗೆ ಭೂಮಿ ಕಳೆದುಕೊಂಡವರು ಕೂಡ ಅಧಿಕಾರಿಯನ್ನು ಭೇಟಿ ಮಾಡಿ ಸಮರ್ಪಕ ದಾಖಲೆಗಳನ್ನು ನೀಡಿ ಪರಿಹಾರ ಪಡೆಯುವುದಕ್ಕೆ ಸಾಧ್ಯವಾಗುವ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳ ನೇಮಕಕ್ಕೆ ಪ್ರಯತ್ನಗಳು ನಡೆಯಲಿದೆ.
ಭೂಮಿ ಕಳೆದುಕೊಂಡವರು ಪ್ರತಿಭಟನೆ ನಡೆಸಿದ ಬಳಿಕ ಸಂಬಂಧಪಟ್ಟ ಎಸ್‌ಎಲ್‌ಒಗಳನ್ನು ಕರೆಸಿ ಸಂತ್ರಸ್ತರನ್ನು ಭೇಟಿ ಮಾಡಿಸುವ ಕೆಲಸವನ್ನು ಮಾಡಿದ್ದೇವೆ. ಪರಿಹಾರಕ್ಕೆ ಸಂಬಂಧಿಸಿದ ವಿಚಾರಗಳನ್ನು ಎಸ್‌ಎಲ್‌ಒಗಳೇ ಮಾಡಬೇಕು. ಹೆದ್ದಾರಿಯ ಮುಂದಿನ ಭಾಗದ ಅಭಿವೃದ್ಧಿಯ ವೇಳೆ ಸ್ಥಳೀಯರನ್ನೇ ಎಸ್‌ಎಲ್‌ಒಗಳನ್ನಾಗಿ ನೇಮಿಸುವ ಚಿಂತನೆ ಇದೆ. –ಕೃಷ್ಣಕುಮಾರ್, ಎಇಇ,, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಮಂಗಳೂರು
-ಕಿರಣ್ ಸರಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.