ಬೆದ್ರಾಳ-ಮುಕ್ವೆ: ರಸ್ತೆ ಬದಿ ಕಸದ ರಾಶಿ
Team Udayavani, Mar 8, 2019, 6:29 AM IST
ನರಿಮೊಗರು: ಪುತ್ತೂರು ತಾಲೂಕಿನ ಕೆಲವೆಡೆ ರಸ್ತೆಯ ಪಕ್ಕದಲ್ಲಿ ಸದಾ ಕಾಣಸಿಗುವ ಕಸದ ರಾಶಿಗಳು ಸ್ವಚ್ಛ ಭಾರತ್ ಅಭಿಯಾನದ ಆಶಯಗಳನ್ನು ಅಣಕಿಸುವಂತಿವೆ. ನರಿಮೊಗರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಕ್ವೆ- ಬೆದ್ರಾಳ ರಸ್ತೆ ಬದಿಯಲ್ಲಿ ಕಸದ ರಾಶಿಗಳು ಸಮಸ್ಯೆಯನ್ನು ಸೃಷ್ಟಿಸಿದೆ.
ದೊಡ್ಡ ದೊಡ್ಡ ಕಸ ತುಂಬಿದ ಪ್ಲಾಸ್ಟಿಕ್ ಚೀಲಗಳು, ಗೋಣಿಗಳು ಬೆಳಗಾಗುವುದರ ಒಳಗೆ ಇಲ್ಲಿ ಪ್ರತ್ಯಕ್ಷವಾಗುತ್ತಿವೆ. ಮಾಂಸದ ತುಂಡುಗಳು, ಹಳಸಿದ ಪದಾರ್ಥ, ತರಕಾರಿ, ಹಣ್ಣು, ಬಟ್ಟೆಯ ತುಂಡುಗಳು, ಬಾಟಲಿಗಳು ಇತ್ಯಾದಿ ಇಲ್ಲಿ ಕಾಣಸಿಗುತ್ತಲಿದೆ. ಬೆದ್ರಾಳದ ರಸ್ತೆ ಬದಿಯಲ್ಲಿ ತ್ಯಾಜ್ಯ ರಾಶಿಯಾಗುತ್ತಿರುವ ಕುರಿತು ವರದಿ ಪ್ರಕಟಿಸಿದ ಬಳಿಕ ಈ ಭಾಗದ ಕಸವನ್ನು ತೆರವುಗೊಳಿಸಿ ನರಿಮೊಗರು ಗ್ರಾ.ಪಂ. ವತಿಯಿಂದ ಎಚ್ಚರಿಕೆ ಫಲಕ ಅಳವಡಿಸಲಾಗಿತ್ತು. ಆದರೂ ಇಲ್ಲಿನ ಸ್ಥಿತಿ ಬದಲಾಗಿಲ್ಲ.
ಪ್ರಜ್ಞಾವಂತರೇ ಕಸ ಎಸೆಯುತ್ತಾರೆ
ಸಮಾಜದ ಬಗ್ಗೆ ತಿಳಿದಿರುವ ಪ್ರಜ್ಞಾವಂತರೇ ಇಲ್ಲಿ ಕಸ ಎಸೆಯುತ್ತಿರುವುದು ಗೊತ್ತಾಗುತ್ತಿದೆ. ಐಶಾರಾಮಿ ಕಾರು, ದ್ವಿಚಕ್ರ ವಾಹನಗಳಲ್ಲಿ ಬರುವ ಜನರು ಹಗಲು, ರಾತ್ರಿ ಎನ್ನದೆ ರಾಜಾರೋಷವಾಗಿ ಕಸ ಎಸೆದು ಹೋಗುತ್ತಿದ್ದಾರೆ. ಪರಿಸರದಲ್ಲಿ ಇದರಿಂದಾಗಿ ದುರ್ವಾಸನೆ ಹೆಚ್ಚಾಗಿದೆ. ಇಲ್ಲಿನ ಕಸಗಳನ್ನು ಪ್ರಾಣಿ, ಪಕ್ಷಗಳು ಎಳೆದುಕೊಂಡು ಹೋಗಿ ಎಲ್ಲೆಂದರಲ್ಲಿ ಹಾಕುತ್ತಿರುವುದೂ ಸಮಸ್ಯೆ ತಂದೊಡ್ಡಿದೆ.
ಮಾಹಿತಿ ಕೊಡಿ
ಬೆದ್ರಾಳ – ಮುಕ್ವೆ ಪ್ರದೇಶದಲ್ಲಿ ಯಾರಾದರೂ ಕಸವನ್ನು ಎಸೆಯುವುದನ್ನು ನಾಗರಿಕರು ಕಂಡಲ್ಲಿ ತತ್‌ಕ್ಷಣವೇ ಒಂದು ಫೊಟೋ ಕ್ಲಿಕ್ಕಿಸಿ, ವಾಹನದ ನಂಬರ್ ನೋಟ್ ಮಾಡಿಕೊಂಡು ಪಂಚಾಯತ್‌ನ ಗಮನಕ್ಕೆ ತರಬೇಕು. ಮಾಹಿತಿ ಕೊಟ್ಟಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ನರಿಮೊಗರು ಗ್ರಾ.ಪಂ. ಆಡಳಿತ ಮಂಡಳಿ ತಿಳಿಸಿದೆ.
ದೇವರ ಹೆಸರಿನಲ್ಲಿ ಫಲಕ ಹಾಕಿದರೂ ಲೆಕ್ಕಕ್ಕಿಲ್ಲ
ಸ್ಥಳೀಯ ಗ್ರಾ.ಪಂ. ಕಸ ಎಸೆಯದಂತೆ ಎಚ್ಚರಿಕೆ ಫಲಕ ಅಳವಡಿಸಿದರೂ ಜನರು ಕ್ಯಾರೇ ಎನ್ನುತ್ತಿಲ್ಲ. ಇಲ್ಲಿನ ಪರಿಸ್ಥಿಯನ್ನು ನೋಡಲಾಗದೆ ‘ಇದು ಮಹಾಲಿಂಗೇಶ್ವರ ದೇವರ ಅವಭೃಥ ಸ್ನಾನಕ್ಕೆ ಹೋಗುವ ರಾಜ ರಸ್ತೆ. ಇಲ್ಲಿ ಕಸ ಎಸೆಯಬೇಡಿ’ ಎಂದು ಖಾಸಗಿ ವ್ಯಕ್ತಿಯೋರ್ವರು ಫಲಕ ಅಳವಡಿಸಿದ್ದರೂ ಪ್ರಯೋಜನವಿಲ್ಲ. ಸ್ಥಳೀಯಾಡಳಿತ, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ನಾವೇ ತ್ಯಾಜ್ಯ ಹಾಕುವವರನ್ನು ಹಿಡಿದು ಥಳಿಸುತ್ತೇವೆ ಎನ್ನುವ ಆಕ್ರೋಶದ ಮಾತನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಸಿ.ಸಿ. ಕೆಮರಾ ಅಳವಡಿಕೆಗೆ ಚಿಂತನೆ
ಮುಕ್ವೆಯ ಬಳಿ ಕಸ ಎಸೆಯುತ್ತಿರುವುದು ಪಂಚಾಯತ್ ಗಮನಕ್ಕೆ ಬಂದಿದೆ. ಎಚ್ಚರಿಕೆ ಫಲಕವನ್ನು ಅಳವಡಿಸಿದ್ದೇವೆ. ಒಂದು ಬಾರಿ ನಾವೇ ಕಸವನ್ನು ವಿಲೇವಾರಿ ಮಾಡಿರುತ್ತೇವೆ. ಮತ್ತೂ ಮುಂದುವರಿದಿದೆ. ಸಿ.ಸಿ. ಕೆಮರಾವನ್ನು ಅಳವಡಿಸುವ ಬಗ್ಗೆ ಮಾತುಕತೆ ನಡೆದಿದೆ. ಈ ಮೂಲಕ ಕಸ ಎಸೆಯುವವರನ್ನು ಪತ್ತೆ ಹಚ್ಚಿ ಕಾನೂನಿನ ಮೂಲಕ ಕ್ರಮ ಕೈಗೊಳ್ಳಗಾಗುವುದು.
– ಚಂದ್ರಕಲಾ,
ಅಧ್ಯಕ್ಷರು, ನರಿಮೊಗರು ಗ್ರಾ.ಪಂ.
ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.