ಬೆಳ್ತಂಗಡಿ: 55 ಸರಕಾರಿ ಶಾಲೆಗಳ ಶೌಚಾಲಯವೀಗ ಹೈಟೆಕ್
ಎಂ.ಆರ್.ಪಿ.ಎಲ್.ನಿಂದ 5.50 ಕೋಟಿ ರೂಪಾಯಿ ಅನುದಾನ ; ಶೇ. 95 ಕಾಮಗಾರಿ ಪೂರ್ಣ
Team Udayavani, Nov 12, 2020, 5:30 AM IST
ಬೆಳ್ತಂಗಡಿ: ಗ್ರಾಮೀಣ ಭಾಗದ ರಸ್ತೆಗಳು, ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲಿ ಬೆಳ್ತಂಗಡಿ ತಾಲೂಕು ವೇಗ ಪಡೆಯುತ್ತಿರುವ ನಡುವೆ ತಾಲೂಕಿನ 55 ಸರಕಾರಿ ಶಾಲೆಗಳ ಶೌಚಾಲಯಗಳಿಗೀಗ ಹೈಟೆಕ್ ಸ್ಪರ್ಶ ದೊರೆಯುವ ಮೂಲಕ ಬಯಲು ಶೌಚಾಲಯ ಮುಕ್ತದೆಡೆಗೆ ಮಕ್ಕಳಿಂದಲೇ ಜಾಗೃತಿ ಬೆಳೆಸುವಲ್ಲಿ ಮಹತ್ವದ ಹೆಜ್ಜೆ ಇರಿಸಿದೆ.
ಸರಕಾರಿ ಶಾಲೆಗಳ ಶೌಚಾಲಯ ಕೊರತೆ ನೀಗಿಸುವ ಜತೆಗೆ ಸಶಕ್ತೀಕರಣದ ಉದ್ದೇಶದಿಂದ ಶಾಸಕ ಹರೀಶ್ ಪೂಂಜ ಅವರ ಮನವಿ ಮೇರೆಗೆ, ಮಂಗಳೂರು ರಿಫೈನರಿ ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂ.ಆರ್.ಪಿ.ಎಲ್.)ನ ಸಿಎಸ್‌ಆರ್ ಅನುದಾನದಿಂದ ತಾಲೂಕಿನ 55 ಸರಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ತಲಾ 10 ಲಕ್ಷ ರೂ.ಗಳಂತೆ 5.50 ಕೋಟಿ ರೂ. ಒದಗಿಸಲಾಗಿತ್ತು.
ಮೂರು ಹಂತಗಳ ಕಾಮಗಾರಿ
ಒಟ್ಟು ಮೂರು ಹಂತಗಳಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕಾಮಗಾರಿಯನ್ನು 6 ತಿಂಗಳ ಒಳಗಾಗಿ ಪೂರ್ಣಗೊಳಿಸುವ ಉದ್ದೇಶವನ್ನು ಹೊಂದಲಾಗಿತ್ತಾದರೂ ಕೋವಿಡ್-19 ಸಮಸ್ಯೆ ಎದುರಾದ್ದರಿಂದ ವಿಳಂಬ ಆಗಿತ್ತು.
ಪ್ರಸಕ್ತ ಎಲ್ಲವನ್ನೂ ನಿಭಾಯಿಸಿ 50 ಶಾಲೆಗಳ ಶೌಚಾಲಯಗಳ ಶೇ. 95ರಷ್ಟು ಕಾಮಗಾರಿ ಪೂರ್ಣಗೊಳಿಸಲಾಗಿದೆ. 5 ಶಾಲೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಗುತ್ತಿಗೆದಾರ ಉಜಿರೆಯ ಗಣೇಶ್ ಕಾಮಗಾರಿ ಕೈಗೊಂಡಿದ್ದರು. ಎಂ.ಆರ್.ಪಿ.ಎಲ್. ಸಂಸ್ಥೆ ಅಧಿಕಾರಿಗಳು ಅವರ ಕಾರ್ಯವನ್ನು ಪ್ರಶಂಸಿಸಿದ್ದು, ಶೀಘ್ರವೇ ಉದ್ಘಾಟನೆಗೂ ಸಜ್ಜಾಗಿ ನಿಂತಿದೆ.
ಗುಣಮಟ್ಟ , ಆಧುನಿಕ ಸ್ಪರ್ಶ
ದ.ಕ. ಜಿಲ್ಲೆಯಲ್ಲೇ ಸರಕಾರಿ ಶಾಲೆಗಳ ಶೌಚಾಲಯ ಅಭಿವೃದ್ಧಿಗೆ ಎಂ.ಆರ್.ಪಿ.ಎಲ್. ಬೆಳ್ತಂಗಡಿಗೆ ಅತೀ ಹೆಚ್ಚು ಅನುದಾನ ಒದಗಿಸಿತ್ತು. ಇದನ್ನು ಸಮರ್ಪಕವಾಗಿ ಸದ್ವಿನಿಯೋಗಿಸುವ ಮೂಲಕ ಜಿಲ್ಲೆಗೆ ಬೆಳ್ತಂಗಡಿ ತಾಲೂಕು ಮಾದರಿಯಾಗಿದೆ. ಬಾಲಕ ಮತ್ತು ಬಾಲಕಿಯರ ಪ್ರತ್ಯೇಕ ವಿಭಾಗವುಳ್ಳ ಶೌಚಾಲಯಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದೆ. ಟೈಲ್ಸ್ ಹಾಗೂ ಆಧುನಿಕ ಕಮೋಡ್ ಬಳಸಲಾಗಿದೆ. ಸ್ವತ್ಛತೆ ಹಾಗೂ ಕಾಮಗಾರಿ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ. ಇಲಾಖೆಯ ಮೂವರು ಅಧಿಕಾರಿಗಳು ಹಾಗೂ ಎಂ.ಆರ್.ಪಿ.ಎಲ್. ತಂಡ ಗುಣಮಟ್ಟ ಪರಿಶೀಲಿಸಿದ್ದು, ಕಾಮಗಾರಿ ನಿರ್ವಹಣೆಗೆ ಸೈ ಎನಿಸಿದೆ. ಇಲಾಖೆಯ ಪರವಾಗಿ ಪುಂಜಾಲಕಟ್ಟೆ ಕೆ.ಪಿ.ಎಸ್.ಶಾಲೆ ಶಿಕ್ಷಕ ಧರಣೇಂದ್ರ ಕೆ. ಅವರನ್ನೂ ನಿಯೋಜಿಸಲಾಗಿತ್ತು. ಮೂರು ಹಂತಗಳಲ್ಲಿ ಪರಿಶೀಲಿಸಿದ ಬಳಿಕ ಕಾಮಗಾರಿಗೆ ಚೆಕ್ ಮುಖೇನ ಮೊತ್ತ ನೀಡಲಾಗಿದೆ.
ಉದ್ಘಾಟನೆಗೆ ಶೀಘ್ರ ದಿನ ನಿಗದಿ
ಗ್ರಾಮದ ಉನ್ನತಿಯೊಂದಿಗೆ ಶಾಲೆಯ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ. ತಾಲೂಕಿನ ಸರಕಾರಿ ಶಾಲೆಗಳಲ್ಲಿ ಶೌಚಾಲಯದ ಕೊರತೆಯನ್ನು ಗಮನಿಸಿ, ಎಂ.ಆರ್.ಪಿ.ಎಲ್.ಗೆ ನೂರು ಶೌಚಾಲಯಗಳ ನಿರ್ಮಾಣಕ್ಕಾಗಿ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಎಂ.ಆರ್.ಪಿ.ಎಲ್. ಅಧಿಕಾರಿಗಳು ತಾಲೂಕಿಗೆ 55 ಶೌಚಾಲಯಗಳಿಗಾಗಿ ಏಕಕಾಲದಲ್ಲಿ ಅನುದಾನ ನೀಡಿ ದ್ದಾರೆ. ಕಾಮಗಾರಿಯೂ ಅಷ್ಟೇ ಉತ್ತಮವಾಗಿ ಮೂಡಿಬಂದಿದೆ. ಉದ್ಘಾಟನೆಗೆ ಶೀಘ್ರವೇ ದಿನ ನಿಗದಿಪಡಿಸಲಾಗುವುದು.
-ಹರೀಶ್ ಪೂಂಜ, ಶಾಸಕರು
ಗುಣಮಟ್ಟದ ಕಾಮಗಾರಿ
ಶಾಸಕ ಹರೀಶ್ ಪೂಂಜ ವಿನಂತಿ ಮೇರೆಗೆ ಬೆಳ್ತಂಗಡಿ ತಾಲೂಕಿನ 55 ಶಾಲೆಗಳಿಗೆ ಶೌಚಾಲಯ ನಿರ್ಮಾಣಕ್ಕೆ ಎಂ.ಆರ್.ಪಿ.ಎಲ್.ನ ಸಿಎಸ್‌ಆರ್ ಅನುದಾನದಿಂದ ಪ್ರಥಮವಾಗಿ 20, ಎರಡನೇ ಹಂತದಲ್ಲಿ 35 ಶೌಚಾಲಯಗಳಿಗೆ ಅನುದಾನ ಒದಗಿಸಲಾಗಿತ್ತು. ಗುಣಮಟ್ಟದ ಕಾಮಗಾರಿ ಮೂಡಿಬಂದಿದೆ.
-ವೀಣಾ ಟಿ.ಶೆಟ್ಟಿ, ಡಿಜಿಎಂ, ಎಂ.ಆರ್.ಪಿ.ಎಲ್. ಸಿಎಸ್‌ಆರ್ ವಿಭಾಗ
– ಬೆಳ್ತಂಗಡಿ ತಾಲೂಕಿನ 55 ಸರಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ
– ಎಂ.ಆರ್.ಪಿ.ಎಲ್. ಸಿಎಸ್‌ಆರ್ ಫಂಡ್‌ನಿಂದ 5.50 ಕೋ.ರೂ. ಅನುದಾನ
– ಪ್ರತಿ ಶೌಚಾಲಯ ನಿರ್ಮಾಣಕ್ಕೆ ತಲಾ 10 ಲಕ್ಷ ರೂಪಾಯಿ ವೆಚ್ಚ
– ದ.ಕ. ಜಿಲ್ಲೆಯಲ್ಲೇ ಸರಕಾರಿ ಶಾಲೆ ಪೈಕಿ ಅತೀ ದೊಡ್ಡ ಯೋಜನೆ
ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.