ನಾಡ ಹಸಿವು ನೀಗಿಸಿ ಲೋಕ ಹಿತವ ಕಾಯ್ದ ಶ್ರಮಿಕ ; ರಾಜ್ಯಕ್ಕೆ ಮಾದರಿಯಾದ ಶಾಸಕ ಹರೀಶ್‌ ಪೂಂಜ


Team Udayavani, May 18, 2020, 4:07 AM IST

Shramika-730

ದೇಶದಲ್ಲೇ ಮೊದಲ ಪ್ರಯೋಗವಾಗಿ ಬೆಳ್ತಂಗಡಿಯಲ್ಲಿ ಕೋವಿಡ್‌ ಕ್ವಾರಂಟೈನ್‌ ಮಾಹಿತಿಗೆ ಜಿಪಿಎಸ್‌ ಆಧಾರಿತ ಆ್ಯಪ್‌ ಲೋಕಾರ್ಪಣೆ.

ಶಾಸಕ ಹರೀಶ್‌ ಪೂಂಜ ಅವರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಮಾತ್ರವಲ್ಲದೆ, ಜಿಲ್ಲೆಯ ಇತರ ವಿಧಾನಸಭಾ ವ್ಯಾಪ್ತಿಯಲ್ಲಿಯೂ ಕೋವಿಡ್ ಸಂದರ್ಭದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ರಾಜ್ಯದಲ್ಲಿಯೇ ಮಾದರಿ ಶಾಸಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯ ಸಂದರ್ಭದಲ್ಲಿ ವಿಭಿನ್ನ ರೀತಿಯಲ್ಲಿ ಜನರ ಕಷ್ಟಗಳನ್ನು ಅರಿತುಕೊಂಡು ಸರಕಾರದ ನಿಯಮಾವಳಿಗಳನ್ನು ಪಾಲಿಸುವುದರೊಂದಿಗೆ ಅನೇಕ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಶಾಸಕರಾಗಿದ್ದಾರೆ.

‘ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವಾ

ಧ್ಯೇಯ ಮಹಾಜಲಧಿಯೆಡೆಗೆ ಸಲಿಲವಾಗಿ ಹರಿಯುವಾ

ಲೋಕಹಿತದ ಕಾಯಕ ನಾಡಿಗಭಯದಾಯಕ

ವ್ಯಕ್ತಿ ವ್ಯಕ್ತಿಯಾಗಬೇಕು ನೈಜ ರಾಷ್ಟ್ರಸೇವಕ’

ಎಂಬ ಧ್ಯೇಯವನ್ನೇ ತನ್ನ ಕಾಯಕದಲ್ಲಿ ಸಿದ್ಧಿಸಿಕೊಂಡ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರು ಕ್ಷೇತ್ರದ ಜನ ಸಂಕಷ್ಟದಲ್ಲಿದ್ದಾರೆಂದೊಡನೆ ನೆರವಿಗೆ ಧಾವಿಸುವ ಮೂಲಕ ತನ್ನ ಮಾತೃಹೃದಯಿ ಸೇವೆಯಿಂದಲೇ ತಾಲೂಕಿನ ಜನರ ನಾಡಿಮಿಡಿತ ಅರಿತುಕೊಂಡವರು. ಶಾಸಕನಾಗುವ ಮುನ್ನವೇ ಹಳ್ಳಿ ಹಳ್ಳಿಗೆ ಧಾವಿಸಿ ಯುವ ಸಮೂಹದಲ್ಲಿ ಸಂಚಲನ ಮೂಡಿಸಿ ಸಂಘಟನೆ ಕಟ್ಟಿ ಬೆಳೆಸಿದ ಚತುರ ನಾಯಕ. ಅದೇ ಸಂಘಟನೆಯ ಛಲ ಇಂದು ಯುವ ಸಮೂಹದಲ್ಲೊಂದು ಪರಿವರ್ತನೆಗೆ ಕಾರಣವಾಗಿದೆ. ಅದೇನೆಂದರೆ ತಾವು ಸದೃಢರಾಗುವುದರೊಂದಿಗೆ ಸಮಾಜದ ಅಶಕ್ತರನ್ನು ಸಶಕ್ತರಾಗಿಸಬೇಕೆನ್ನುವುದು.

ತಾನು ಇಂದು ಸಹಾಯ ಹಸ್ತ ಚಾಚಿದರೆ ದೇವರು ಇನ್ನೊಂದು ರೂಪದಲ್ಲಿ ತನ್ನ ಸಹಾಯಕ್ಕೆ ಮಿಡಿವನು ಎಂಬುದನ್ನೇ ದೃಢವಾಗಿ ನಂಬಿದ ಹರೀಶ್‌ ಪೂಂಜ ಅವರು ತಾಲೂಕಿನ ಗ್ರಾಮ ಗ್ರಾಮಕ್ಕೆ ಓಡಾಡಿ ಕೊರೊನಾ ಸಂದರ್ಭ ಸಂಕಷ್ಟಕ್ಕೀಡಾದ ಜೀವಗಳನ್ನು ಉಪಚರಿಸಿದ್ದಾರೆ.

ನ್ಯಾಯಬೆಲೆ ಅಂಗಡಿ ಪರಿಶೀಲನೆ
ಕೋವಿಡ್ ಮುನ್ನೆಚ್ಚರಿಕೆಯಾಗಿ ಅಧಿಕಾರಿಗಳೊಂದಿಗೆ ತುರ್ತು ಸಭೆ ಕರೆದರಲ್ಲದೆ ಪಡಿತರರಿಗೆ ಸಾಮಗ್ರಿ ಸಮಯಕ್ಕೆ ಸರಿಯಾಗಿ ಕೈಸೇರುವಲ್ಲಿ ಖುದ್ದು ತಾನೇ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಪರಿಶೀಲನೆಗೆ ಮುಂದಾದರು. ತಾ| ನ 60 ಸಾವಿರಕ್ಕೂ ಅಧಿಕ ಪಡಿತರ ಕುಟುಂಬಕ್ಕೆ ಪಡಿತರ ತಲುಪಲು ನಿರ್ದೇಶನ ನೀಡಿದರು.

ಕೋವಿಡ್ ಕೇರ್‌
ಕೋವಿಡ್‌-19 ಜಗತ್ತಿಗೆ ಆಕ್ರಮಿಸಿದಾಗ ತಾಲೂಕಿನ ರಕ್ಷಣೆ ಜತೆಗೆ ಸ್ವಯಂ ಜಾಗೃತಿಗೆ ಕರೆಕೊಟ್ಟು ಕೋವಿಡ್‌ ವೈರಸ್‌ ವಿರುದ್ಧ ಹೋರಾಟದಲ್ಲಿ ನಾನು ಜನತೆಯೊಂದಿಗಿದ್ದೇನೆ ಎಂದು ಬಲ ತುಂಬಿದ್ದಾರೆ ಶಾಸಕ ಪೂಂಜ. ಆತಂಕದಲ್ಲಿದ್ದ ತಾಲೂಕಿನ ಜನತೆಗೆ ಅಭಯದ ಹಸ್ತ ಚಾಚಿ ನಿರಾಳತೆ ಪಡೆಯಲು ಮುಂಚೂಣಿಯ ನಿರ್ಧಾರಗಳನ್ನು ಕೈಗೊಂಡರು.

ಜಿಲ್ಲೆಯಲ್ಲಿ ಕೋವಿಡ್‌-19 ಸೋಂಕಿತರ ಪ್ರಕರಣ ಹೆಚ್ಚಾಗುತ್ತಿರುವುದನ್ನು ಕಂಡು ಜಿಲ್ಲೆಯಲ್ಲೇ ಮೊದಲ ಬಾರಿಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯನ್ನು ಕೋವಿಡ್‌ ಕೇರ್‌ ಆಗಿ ಪರಿವರ್ತಿಸಿದರು. ಅಲ್ಲಿದ್ದ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಜಿಲ್ಲೆಗೆ ಮಾದರಿ ಶಾಸಕರೆನಿಸಿಕೊಂಡರು. ಇತ್ತ ಆರೋಗ್ಯ ಇಲಾಖೆ ಸಿಬಂದಿಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪಿಪಿಇ ಕಿಟ್‌, ಮಾಸ್ಕ್ ಆವಶ್ಯಕತೆಗಳನ್ನು ಪೂರೈಸುವಲ್ಲಿ ಸದಾ ನಿಗಾವಹಿಸಿದ್ದರು.


ಕ್ವಾರಂಟೈನ್‌ ಮಾಹಿತಿಗೆ ಜಿಪಿಎಸ್‌ ಆಧಾರಿತ ಆ್ಯಪ್‌ ಅಭಿವೃದ್ಧಿ
ಶಾಸಕ ಹರೀಶ್‌ ಪೂಂಜ ಅವರು ಸದಾ ಹೊಸತನದ ಕಡೆಗೆ ಒಲವು ಹೊಂದಿದವರು. ಈ ಕೋವಿಡ್‌ ಸಂದರ್ಭದಲ್ಲಿ ದೇಶದಲ್ಲೇ ಮೊದಲ ಪ್ರಯೋಗವಾಗಿ ಬೆಳ್ತಂಗಡಿಯಲ್ಲಿ ಕೋವಿಡ್‌ ಕ್ವಾರಂಟೈನ್‌ ಮಾಹಿತಿಗೆ ಜಿಪಿಎಸ್‌ ಆಧಾರಿತ ಆ್ಯಪ್‌ ಲೋಕಾರ್ಪಣೆ ಮಾಡಿರುವುದು ಅಭೂತಪೂರ್ವ ತಂತ್ರಾಂಶದ ಕೊಡುಗೆಯಾಗಿದೆ. ಕೋವಿಡ್‌ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಕೇಂದ್ರ, ರಾಜ್ಯ ಸರಕಾರಗಳು ಆತಂಕಕ್ಕೆ ಒಳಗಾಗಿವೆ.

ಈ ನಿಟ್ಟಿನಲ್ಲಿ ಸಾವಿರಾರು ಮಂದಿ ಹೋಮ್‌ ಕ್ವಾರಂಟೈನ್‌ (ಮನೆಯಲ್ಲೇ ನಿಗಾ ವ್ಯವಸ್ಥೆಯಲ್ಲಿ) ಇದ್ದಾರೆ. ಇವರ ಮೇಲೆ ನಿಗಾ ಇರಿಸಿದಲ್ಲಿ ದೇಶದಲ್ಲೇ ಕೋವಿಡ್‌ ನಿರ್ಮೂಲನೆ ಮಾಡುವ ಉದ್ದೇಶದಿಂದ ನೂತನ ಆ್ಯಪ್‌ನ್ನು ಬೆಳ್ತಂಗಡಿ ವಾರ್‌ ರೂಮ್‌ನಲ್ಲಿ ಲೋಕಾರ್ಪಣೆಗೊಳಿಸಿದ್ದರು. ವಾರ್‌ ರೂಮ್‌ನಲ್ಲಿ ಕುಳಿತು ಹೋಂ ಕ್ವಾರಂಟೈನ್‌ ಆಗಿರುವವರು ಎಲ್ಲಿದ್ದಾರೆ, ಹೇಗಿದ್ದಾರೆ ಮತ್ತು ಅವರ ಭಾವಚಿತ್ರ ಸಹಿತ ಮಾಹಿತಿಯನ್ನು ಇದರಿಂದ ಪಡೆಯಬಹುದಾದ ವಿಭಿನ್ನ ಕಲ್ಪನೆ ಹುಟ್ಟುಹಾಕಿದ್ದರು.

ಆಶಾ ಕಾರ್ಯಕರ್ತೆಯರಿಗೆ ಸಹಾಯ ಹಸ್ತ

ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಅವಿರತ ಶ್ರಮವಹಿಸುತ್ತಿರುವ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಹಾಗೂ ಡಿ ಗ್ರೂಪ್‌ ನೌಕರರಿಗೆ ತಾಲೂಕು ಶಾಸಕರ ನೆಲೆಯಲ್ಲಿ ಒಟ್ಟು 262 ಮಂದಿಗೆ 10 ಕೆ.ಜಿ. ಅಕ್ಕಿ ಸಹಿತ ಅಗತ್ಯ ದಿನಬಳಕೆ ಸಾಮಗ್ರಿ ವಿತರಿಸಿದ್ದಾರೆ.

ಕೋವಿಡ್‌ ಹಿನ್ನೆಲೆ ಆಶಾ ಕಾರ್ಯಕರ್ತೆಯರು ಅತ್ಯಂತ ಜವಾಬ್ದಾರಿಯುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಅವಿರತ ಸೇವೆಯನ್ನು ಪರಿಗಣಿಸಿ ಅಗತ್ಯ ನೆರವು ನೀಡಿ ಧೈರ್ಯ ತುಂಬುವ ಕೆಲಸವನ್ನು ಶಾಸಕ ಹರೀಶ್‌ ಪೂಂಜ ಅವರು ಮಾಡಿದ್ದಾರೆ.  ತಾಲೂಕಿನ 247 ಆಶಾಕಾರ್ಯಕರ್ತೆಯರಿಗೆ 10 ಕೆ.ಜಿ. ಅಕ್ಕಿ ಸಹಿತ ಅಗತ್ಯ ದಿನಬಳಕೆ ಸಾಮಗ್ರಿ ವಿತರಿಸುವ ಮೂಲಕ ರಾಜ್ಯದಲ್ಲೇ ಪ್ರಥಮ ಬಾರಿಗೆ ಆಶಾ ಕಾರ್ಯಕರ್ತೆಯರನ್ನು ಗುರುತಿಸಿದ ಶಾಸಕರು ಎಂಬ ಹೆಗ್ಗಳಿಕೆ.

 ದೈವ, ದೇವರ ಸೇವೆ ಮಾಡುವವರಿಗೆ ನೆರವು

ತುಳುನಾಡಿನ ದೈವ, ದೇವರುಗಳ ಸೇವೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ನೂರಾರು ಕುಟುಂಬಗಳು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾಗಿದೆ. ಇದನ್ನು ಮನಗಂಡು ಶಾಸಕ ಹರೀಶ್‌ ಪೂಂಜ ಅವರು ತಾಲೂಕಿನ 128 ದೈವ ನರ್ತಕರ ಕುಟುಂಬಗಳಿಗೆ ಆಹಾರ ಕಿಟ್‌ ವಿತರಿಸಿದರು. ತಲೆ ತಲಾಂತರದಿಂದ ನಂಬಿಕೊಂಡು ಬಂದಿರುವ ದೈವದೇವರ ನೇಮ, ಕೋಲಗಳ ಸೇವೆ ಸರಕಾರ ಲಾಕ್‌ಡೌನ್‌ ಹೇರಿರುವುದರಿಂದ ನಿಂತುಹೋಗಿವೆ. ಈ ಋತುವನ್ನೇ ನಂಬಿದ್ದ ದೈವ ನರ್ತಕರ ಕುಟುಂಬ ಸಂಕಷ್ಟಕ್ಕೊಳಗಾಗಿದ್ದರು. ಇದನ್ನು ಮನಗಂಡು ಶಾಸಕರು 10 ಕೆ.ಜಿ. ಅಕ್ಕಿ ಹಾಗೂ ಅಗತ್ಯ ದಿನಬಳಕೆ ಆಹಾರ ಕಿಟ್‌ ವಿತರಿಸಿದ್ದಾರೆ.

ಶಾಸಕರಿಂದ ವಾನರಗಳ ಹಸಿವಿಗೆ ಆಸರೆ

ಲಾಕ್‌ಡೌನ್‌ನ ಸಂದರ್ಭದಲ್ಲಿ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ವಾಹನ ಸಂಚಾರ ನಿರ್ಬಂಧಗೊಳಿಸಿದ್ದರಿಂದ ಆಹಾರಕ್ಕಾಗಿ ಪ್ರಯಾಣಿಕರನ್ನು ಅವಲಂಬಿಸಿದ ನೂರಾರು ವಾನರಗಳು ಕೊರಗುತ್ತಿರುವುದನ್ನು ಮನಗಂಡು ಶಾಸಕ ಹರೀಶ್‌ ಪೂಂಜ ಆಹಾರ ಪೂರೈಸುವ ಮೂಲಕ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.

ಕಾಡಿನಲ್ಲಿರುವ ಪ್ರಾಣಿಗಳು ಕಾಡಿನ ಆಹಾರವನ್ನು ಅವಲಂಬಿಸಿರುತ್ತವೆ. ಆದರೆ ಇಲ್ಲಿನ ವಾನರಗಳು ರಸ್ತೆ ಬದಿಯಲ್ಲಿ ಇದ್ದು ಪ್ರಯಾಣಿಕರ ಆಹಾರವನ್ನೇ ಅವಲಂಬಿಸಿದ್ದವು. ಕಾಡಿನ ಪ್ರಾಣಿಗಳು ಪರಾವಲಂಬಿ ಆಹಾರ ಪದ್ಧತಿ ಅಭ್ಯಾಸ ಮಾಡಿಕೊಂಡರೆ ಅದನ್ನೇ ಮುಂದುವರಿಸುತ್ತದೆ. ಇದರಿಂದ ಇಲ್ಲಿನ ಪ್ರಾಣಿಗಳಿಗೆ ಪ್ರಯಾಣಿಕರ ಆಹಾರವೇ ಆಧಾರವಾಗಿತ್ತು. ಈ ನಿಟ್ಟಿನಲ್ಲಿ ಶಾಸಕರು ಹಣ್ಣು, ಹಂಪಲು ಒದಗಿಸಿದರು.

ವಾರದ ಸಂತೆ ಎಪಿಎಂಸಿ ಯಾರ್ಡ್‌ಗೆ

ಕೋವಿಡ್‌ ವೈರಸ್‌ ಆತಂಕದ ನಡುವೆ ವಾರದ ಸಂತೆಯಂದು ಸಂತೆ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಜನ ಸೇರುತ್ತಿರುವುದರಿಂದ ಬೆಳ್ತಂಗಡಿಯ ಸೋಮವಾರದ ಸಂತೆಯನ್ನು ತಾತ್ಕಾಲಿಕವಾಗಿ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸುವ ಕುರಿತು ಶಾಸಕ ಪೂಂಜ ಗಟ್ಟಿ ನಿರ್ಧಾರ ತಾಳಿದ್ದರು. ಸೋಮವಾರ ವಾರದ ಸಂತೆಯಂದು ತೆರೆದಿರುವ ಹಸಿ ಮೀನು, ಒಣ ಮೀನು, ತರಕಾರಿ, ಹಣ್ಣು ಹಂಪಲು, ತಳ್ಳುಗಾಡಿ ಸಹಿತ ಎಲ್ಲ ಅಂಗಡಿಗಳನ್ನು ಎ.ಪಿ.ಎಂ.ಸಿ.ಗೆ ಸ್ಥಳಾಂತರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ತಾಲೂಕಿನ ರೈತರ ಹಿತವನ್ನು ಕಾಯ್ದಿದ್ದರು. ಈ ಮೂಲಕ ಪ್ರಸಕ್ತ ಮೂರು ವಾರ ಉತ್ತಮ ಸ್ಪಂದನೆಯೂ ದೊರೆತಿದೆ.

ಕೋವಿಡ್‌ ನಿರ್ಮೂಲನೆಗೆ ಸ್ಯಾನಿಟೈಸರ್‌ ಸ್ಪ್ರೇ

ತಾಲೂಕಿನಲ್ಲಿ ಕೋವಿಡ್‌ ಸಂಪೂರ್ಣ ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಶಾಸಕ ಹರೀಶ್‌ ಪೂಂಜ ಮನವಿ ಮೇರೆಗೆ ಬದುಕು ಕಟ್ಟೋಣ ತಂಡದ ಸಹಯೋಗದಲ್ಲಿ ತಾಲೂಕಿನ ಪ್ರಮುಖ ಪೇಟೆ, ಆಯಕಟ್ಟಿನ ಪ್ರದೇಶ ಗಳಲ್ಲಿ 12,000 ಲೀ. ಸ್ಯಾನಿಟೈಸರ್‌ ಸಿದ್ಧಪಡಿಸಿ ಸಿಂಪಡಿಸಲಾಯಿತು. ಉಜಿರೆ ಬಸ್‌ ನಿಲ್ದಾಣ ಮುಂಭಾಗ ಸ್ವತಃ ಶಾಸಕ ಹರೀಶ್‌ ಪೂಂಜ ಅವರೇ ಸಿಂಪಡಿಸಿ ಜಾಗೃತಿ ಮೂಡಿಸಿದ್ದರು. ಉಜಿರೆ ನಗರ ಸುತ್ತ ಮುತ್ತ, ಬೆಳ್ತಂಗಡಿ ನಗರ, ಸಂತೆಕಟ್ಟೆ, ಗುರುವಾಯನಕೆರೆ ಸಹಿತ ಜನ ಸಂದಣಿ ಹೆಚ್ಚಾಗಿ ಓಡಾಡುವ ಸ್ಥಳಗಳಲ್ಲಿ ಸ್ಯಾನಿಟೈಸರ್‌ ಸಿಂಪಡಣೆ ಕಾರ್ಯ ನಡೆದಿತ್ತು.

ಬೆಳ್ತಂಗಡಿ – ಬೆಂಗಳೂರು ಬೆಸೆದ ಶ್ರಮಿಕ ಸಂಪರ್ಕ

ಲಾಕ್‌ಡೌನ್‌ ಸಂದರ್ಭ ಊರಿಗೆ ಮರಳಿದ್ದ ಮಂದಿಗೆ ನಿಯಮ ಸಡಿಲಿಕೆಯಾದರೂ ಸೂಕ್ತ ಸಾರಿಗೆ ಸೌಲಭ್ಯವಿಲ್ಲದ್ದರಿಂದ ಮತ್ತೆ ಉದ್ಯೋಗಕ್ಕೆ ತೆರಳಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದರು. ಇದನ್ನರಿತ ಶಾಸಕ ಹರೀಶ್‌ ಪೂಂಜ ಅವರು ಉಚಿತ ಸಾರಿಗೆ  ಸೇವೆ ಒದಗಿಸಿದರು. ಸುಸಜ್ಜಿತ 9 ಬಸ್‌ಗಳ ಮೂಲಕ 160 ಮಂದಿಯನ್ನು ಉಚಿತವಾಗಿ ಕಳುಹಿಸಿಕೊಟ್ಟು ಕ್ಷೇತ್ರದ  ಜನತೆಯ ಮೆಚ್ಚುಗೆಗೆ ಪಾತ್ರರಾದರು.

7 ದಿನಗಳಲ್ಲಿ 30,000 ಕಿಟ್‌ ತಯಾರಿ

ಪಡಿತರ ಹೊರತಾಗಿಯೂ ತಾಲೂಕಿನಲ್ಲಿ ಅದೆಷ್ಟೋ ಕುಟುಂಬಗಳು, ರೈತಾಪಿ ವರ್ಗದವರು, ವಲಸೆ ಕಾರ್ಮಿಕರು, ದಿನಗೂಲಿ ನೌಕರರು, ಆಟೋ ರಿಕ್ಷಾ ಚಾಲಕ – ಮಾಲಕರು, ಯಕ್ಷಗಾನ ಕಲಾವಿದರು, ದೈವ ನರ್ತಕರು, ಛಾಯಾಚಿತ್ರಗ್ರಾಹಕರು, ಮಧ್ಯಮ ವರ್ಗದ ಮಂದಿಯೂ ಸೇರಿದಂತೆ ಹಲವಾರು ಮಂದಿ ಸಂಕಷ್ಟದ ದಿನ ಕಳೆಯುವಂತಾಗಿದೆ.

ತನ್ನ ತಾಲೂಕಿನ ಜನತೆ ಒಂದೊತ್ತು ಕೂಡ ಹಸಿದಿರಬಾರದೆಂಬ ಸಂಕಲ್ಪದೊಂದಿಗೆ ಆಹಾರ-ಆಶ್ರಯ ವಂಚಿತರ ಪಟ್ಟಿ ಸಿದ್ಧಗೊಳಿಸಲಾಯಿತು. ವೈರಸ್‌ ತಡೆಗಟ್ಟುವಲ್ಲಿ ಜೀವದ ಹಂಗು ತೊರೆದು ಶ್ರಮಿಸುತ್ತಿರುವ ಕೋವಿಡ್ ವಾರಿಯರ್ ಆಶಾ ಕಾರ್ಯಕರ್ತೆಯರು, ಗೃಹ ರಕ್ಷಕದಳ, ರಿಕ್ಷಾ ಚಾಲಕ-ಮಾಲಕರ ಸಂಘ, ಬಸ್‌ ಚಾಲಕ-ಮಾಲಕರ ಸಂಘ ಸೇರಿದಂತೆ ತಾಲೂಕಿನ 241 ಬೂತ್‌ಗಳ ಒಟ್ಟು 30,000ಕ್ಕೂ ಅಧಿಕ ಮಂದಿಗೆ ಸಮರೋಪಾದಿಯಲ್ಲಿ ಆಹಾರ ಸಾಮಗ್ರಿ ಕಿಟ್‌ ಸಿದ್ಧಗೊಂಡಿತು.

ಶ್ರೀ ರಾಮನ ಕಷ್ಟಗಳಿಗೆ ದೇವಸ್ವರೂಪಿ ವಾನರ ಸೈನ್ಯ ಲಂಕೆಯಲ್ಲಿ ರಾಮಸೇತು ನಿರ್ಮಿಸಿದಂತೆ ಶಾಸಕರ ಕರೆಗೆ ಓಗೊಟ್ಟು ಉಜಿರೆಯ ‘ಬದುಕು ಕಟ್ಟೋಣ ಬನ್ನಿ’ ತಂಡವು 7 ದಿನಗಳಲ್ಲಿ 30 ಸಾವಿರ ಆಹಾರ ಸಾಮಗ್ರಿ ಕಿಟ್‌ ಶಿಸ್ತುಬದ್ಧವಾಗಿ, ಅಚ್ಚುಕಟ್ಟಾಗಿ ನಿರ್ವಹಿಸುವ ಸಂಘಟಿತ ಕೆಲಸಕ್ಕೆ ಅಣಿಯಾಯಿತು. ತಾಲೂಕಿನ ಪ್ರತಿ ಬೂತ್‌ಗೆ 100ರಂತೆ 30 ಸಾವಿರ ಕಿಟ್‌ ಅರ್ಹರಿಗೆ ತಲುಪಿಯೇ ಸಿದ್ಧ ಎಂಬ ಸಂಕಲ್ಪದೊಂದಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರಿಂದ ಇದಕ್ಕೆ ಅಭೂತಪೂರ್ವ ಚಾಲನೆ ದೊರೆಯಿತು.

ಗೃಹರಕ್ಷಕರ ಕರ್ತವ್ಯ ಕ್ಷಮತೆಗೆ 1.22 ಲಕ್ಷ ರೂ. ನೆರವು

ಯುದ್ಧ ಭೂಮಿಯಲ್ಲಿ ಇರುವಂತಃ ಸೇವೆ ಗೃಹರಕ್ಷಕರದು. ಗೃಹರಕ್ಷಕರ ಜೀವನ ನಿರ್ವಹಣೆ ಕಷ್ಟ ತಿಳಿದು ಶಾಸಕರ ವಯಕ್ತಿಕ ನೆಲೆಯಲ್ಲಿ ತಾಲೂಕಿನ ಒಟ್ಟು 61 ಜನ ಗೃಹರಕ್ಷಕ ದಳದ ಸಿಬಂದಿಗಳಿಗೆ ತಲಾ 2,000 ರೂ.ನಂತೆ 1.22 ಲಕ್ಷ ರೂ. ಮೊತ್ತವನ್ನು ವಿತರಿಸುವ ಮಹಾತ್ಕಾರ್ಯದಲ್ಲಿ ಸೈ ಎನಿಸಿದ್ದಾರೆ.

 ಅಗತ್ಯ ನೆರವಿಗೆ ಶಾಸಕರ ಸ್ಪಂದನೆ

ಕಲ್ಲೇರಿ ಜನತಾ ಕಾಲನಿಯಲ್ಲಿ ಲಾಕ್‌ಡೌನ್‌ ಆಗಿರುವ ಪ್ರದೇಶದಲ್ಲಿರುವ 88 ಮನೆಗಳ ಜನರ ಅಗತ್ಯ ಸೌಕರ್ಯಕ್ಕಾಗಿ ಶಾಸಕರ ನೇತೃತ್ವದಲ್ಲಿ ಒಂದು ಆ್ಯಂಬುಲೆನ್ಸ್‌ ನಿಯೋಜಿಸಿ ಮುಂಗಡವಾಗಿ 50 ಸಾವಿರ ರೂ. ಅಡ್ವಾನ್ಸ್‌ ಹಣ ನೀಡಿದರು. ಅಗತ್ಯ ಔಷಧಿಗಾಗಿ ಪಂಚಾಯಿತಿಗೆ 50 ಸಾವಿರ ರೂ. ಹಾಗೂ ಕಳೆದ ಮಾ.27 ರಿಂದ ಲಾಕ್‌ಡೌನ್‌ ಆದ ಪ್ರದೇಶದಲ್ಲಿ ಸ್ವಯಂ ಪ್ರೇರಣೆಯಿಂದ ದುಡಿಯುತ್ತಿರುವ ಸ್ವಯಂಸೇವಕರ ಊಟದ ವ್ಯವಸ್ಥೆಗೆ 25 ಸಾವಿರ ರೂ. ಸೇರಿ 1.25 ಲಕ್ಷ ರೂ. ಶಾಸಕ ಹರೀಶ್‌ ಪೂಂಜ ನೀಡಿದರು.

100 ಕಿಟ್‌ಗಳ ಜತೆಗೆ ಪಂಚಾಯಿತಿ ವತಿಯಿಂದ ತರಕಾರಿಗಳನ್ನು ನೀಡಲಾಯಿತು. ಪಂಚಾಯತ್‌ನಲ್ಲಿ ಅಗತ್ಯ ಸಂದರ್ಭದಲ್ಲಿ ಬಡವರಿಗೆ ಹಂಚಿಕೆಗೆ 6 ಕ್ವಿಂಟಾಲ್‌ ಅಕ್ಕಿ ದಾಸ್ತಾನು ಇರಿಸಲಾಯಿತು. 100 ಬಟ್ಟೆಯ ಮಾಸ್ಕ್, ಸ್ಯಾನಿಟರಿ, 40 ಗ್ಲೌಸ್‌ ಆರೋಗ್ಯ ಇಲಾಖೆಯಿಂದ ಒದಗಿಸಲಾಯಿತು. ಜನತಾ ಕಾಲೊನಿಗೆ ನೀರಿನ ಸಮಸ್ಯೆಗೆ ಸ್ಪಂದಿಸಿ ಕೊಳವೆ ಬಾವಿ ತೆಗೆಸಿ ಅಲ್ಲಿನ ನೀರಿನ ನಮಸ್ಯೆಯನ್ನು ನೀಗಿಸುವಂತೆ ಶಾಸಕರು ಮಾಡಿದರು.

ಬದುಕು ಕಟ್ಟೋಣ ತಂಡದ ಚಮತ್ಕಾರ

ಶಾಸಕ ಹರೀಶ್‌ ಪೂಂಜ ಅವರು ತಾಲೂಕಿನ 81 ಗ್ರಾಮಗಳ 241 ಬೂತ್‌ನ ಅರ್ಹ ಕುಟುಂಬಗಳಿಗೆ ಹಾಗೂ ಆಟೋ ಚಾಲಕರು, ಗೃಹರಕ್ಷಕದಳದವರಿಗೆ 30 ಸಾವಿರ ಶ್ರಮಿಕ ನೆರವಿನ ಕಿಟ್‌ ಸಿದ್ಧಗೊಳಿಸಿರುವ ಹಿಂದೆ ಬದುಕು ಕಟ್ಟೋಣ ತಂಡದ ಕಾರ್ಯಯೋಜನೆ ಬಹಳಷ್ಟಿದೆ.

ಉಜಿರೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಬದುಕು ಕಟ್ಟೋಣ ತಂಡದ ಸಂಯೋಜನೆಯಲ್ಲಿ 81 ಬೂತ್‌ಗಳಿಂದ ಬಂದ 241 ವಾಹನಗಳಿಗೆ ಅಂತರ ಕಾಯ್ದುಕೊಂಡು ಕಿಟ್‌ ಹಸ್ತಾಂತರಿಸಿರುವುದು ಶಿಸ್ತಿನ ಸಿಪಾಯಿಗಳಂತೆ ಮೂಡಿಬಂದಿತ್ತು. ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಉಜಿರೆ ಕ್ರೀಡಾಂಗಣಕ್ಕೆ ಭೇಟಿ ನೀಡಿ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ರಾಜ್ಯಕ್ಕೆ ಮಾದರಿ ಬೆಳ್ತಂಗಡಿಯ ಶಾಸಕ ಎಂದು ಶ್ಲಾಘಿಸಿದ್ದರು.

ಜನರ ಸ್ಪಂದನೆಯಲ್ಲಿ ಕೋವಿಡ್ ವಾರ್‌ರೂಂ
ಕೋವಿಡ್ ಲಾಕ್‌ಡೌನ್‌ ಹಿನ್ನೆಲೆ ಅಗತ್ಯ ವಸ್ತುಗಳ ಬೇಡಿಕೆಗಾಗಿ ಮಿನಿ ವಿಧಾನಸೌಧ ಕಟ್ಟಡದಲ್ಲಿ ಶಾಸಕರ ಮುಂದಾಳತ್ವದಲ್ಲಿ ತುರ್ತು ಕಾರ್ಯಪಡೆ ವಾರ್‌ರೂಂ ತೆರೆಯುವುದರೊಂದಿಗೆ ಉತ್ತಮ ಜನಸ್ಪಂದನೆಗೆ ಪಾತ್ರವಾಯಿತು. ಜನರು ತಮ್ಮ ಸಮಸ್ಯೆಗಳಿಗೆ ವಾರ್‌ರೂಂಗೆ ಕರೆ ಮಾಡುತ್ತಿದ್ದರು. ಈ ಸಂದರ್ಭ ಪ್ರಾಮುಖ್ಯತೆ ನೀಡಿ ಸಮಸ್ಯೆಗಳನ್ನು ಮತ್ತು ಅಗತ್ಯ ವಸ್ತುಗಳ ಪೂರೈಕೆಯನ್ನು ತತ್‌ಕ್ಷಣ ಮಾಡಲಾಗುತ್ತಿತ್ತು.

ಈ ಕೇಂದ್ರದಲ್ಲಿ ಶಾಸಕರ ಕಚೇರಿಯಿಂದ, ತಾ.ಪಂ., ಆರೋಗ್ಯ ಇಲಾಖೆ, ಆಹಾರ ನಾಗರಿಕ ಪೂರೈಕೆ ಇಲಾಖೆ ಮತ್ತು ಪೊಲೀಸ್‌ ಇಲಾಖೆಯಿಂದ ತಲಾ ಒಬ್ಬರು, ಕಂದಾಯ ಇಲಾಖೆಯಿಂದ ಇಬ್ಬರು ಇರುವಂತೆ ಕ್ರಮ ಕೈಗೊಳ್ಳಲಾಯಿತು. ಸಹಾಯ ಯಾಚಿಸಿ ಈ ಕೇಂದ್ರಕ್ಕೆ ಕರೆ ಬಂದ ತತ್‌ಕ್ಷಣ ವಿವಿಧ ಇಲಾಖೆಗಳ ಮೂಲಕ ಗಮನ ಹರಿಸಿ ಅದನ್ನು ಪರಿಹರಿಸುವ ಕಾರ್ಯ ಮಾಡಲಾಗುತ್ತಿದೆ.

ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳ ಮೂಲಕ ಎಲ್ಲ ಪಿಡಿಒಗಳಿಗೆ, ತಹಶೀಲ್ದಾರ್‌ ಮೂಲಕ ಎಲ್ಲ ವಿಎಗಳಿಗೆ ಸೂಚನೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಗ್ಯಾಸ್‌ ವಿತರಣೆ, ಪಡಿತರ, ಮೆಡಿಕಲ್‌, ಆ್ಯಂಬುಲೆನ್ಸ್‌ ಸೇರಿದಂತೆ ಅನೇಕ ಅಗತ್ಯ ವಸ್ತುಗಳಿಗೆ ಕರೆ ಬಂದ ತತ್‌ಕ್ಷಣ ಅವರ ಪಟ್ಟಿ ಸಿದ್ಧಪಡಿಸಿ ನೋಂದಣಿ ಮಾಡಿ ತುರ್ತು ಸೌಲಭ್ಯ ಒದಗಿಸಲಾಯಿತು.

ತುರ್ತು ಕರೆಗಾಗಿ ದೂರವಾಣಿ ಸಂಖ್ಯೆ: 08256-232047ಮತ್ತು 9901212207 ನಂಬರ್‌ (ಶಾಸಕರ ಕಚೇರಿ ನಂಬರ್‌)ಗೆ ತಾಲೂಕಿನ ಜನತೆ ಕರೆಮಾಡಲು ವಿನಂತಿಸಲಾಗಿದೆ.

ಕಲ್ಲೇರಿ ಜನತಾ ಕಾಲನಿಯಲ್ಲಿ ಮೊದಲ ಪಾಸಿಟಿವ್‌
ತಣ್ಣೀರುಪಂತ ಗ್ರಾ.ಪಂ. ವ್ಯಾಪ್ತಿಯ ಕರಾಯ ಗ್ರಾಮದ ಕಲ್ಲೇರಿ ಜನತಾ ಕಾಲನಿಯಲ್ಲಿ ಮೊದಲ ಬಾರಿಗೆ ಕೋವಿಡ್‌ ಪಾಸಿಟಿವ್‌ ಪ್ರಕರಣ ದಾಖಲಾದ ಬಳಿಕ ಬೆಳ್ತಂಗಡಿ ತಾಲೂಕಿನ ಜನತೆ ಆತಂಕಕ್ಕೆ ಒಳಗಾಗಿದ್ದರು. ಈ ಸಮಯದಲ್ಲಿ ಧೃತಿಗೆಡದೆ ಶಾಸಕ ಹರೀಶ್‌ ಪೂಂಜ ಭೇಟಿ ನೀಡಿ ಆಹಾರ ಸಾಮಗ್ರಿ ಕಿಟ್‌ ಸಹಿತ ದಿನ ಬಳಕೆಯ ಅಗತ್ಯ ಸೌಕರ್ಯ ಒದಗಿಸಿಕೊಟ್ಟರು.

ಶಾಸಕ ಹರೀಶ್‌ ಪೂಂಜ ಅವರ ಮನವಿಗೆ ಸ್ಪಂದಿಸಿದ ಉದ್ಯಮಿ ಬಂಜಾರ ಗ್ರೂಪ್‌ನ ಪ್ರಕಾಶ್‌ ಶೆಟ್ಟಿ ಅವರು ತಣ್ಣೀರುಪಂತ ಗ್ರಾ.ಪಂ. ವ್ಯಾಪ್ತಿಯ ಕಲ್ಲೇರಿ ಜನತಾ ಕಾಲನಿಯ ಮನೆಯೊಂದಕ್ಕೆ ತಲಾ 10 ಕೆ.ಜಿ. ಅಕ್ಕಿ ಹಾಗೂ ದಿನಸಿ ಸಾಮಗ್ರಿಗಳ 100 ಕಿಟ್‌ಗಳನ್ನು ನೀಡಿದ್ದಾರೆ.

ಇಲ್ಲಿನ 88 ಮನೆಗಳನ್ನು ಹೋಂ ಕ್ವಾರೆಂಟೈನ್‌ ಸುತ್ತಲೂ ಸೀಲ್‌ಡೌನ್‌ ಮಾಡಲಾಗಿತ್ತು. ಸೋಂಕಿತನ ಸಂಪರ್ಕದಲ್ಲಿದ್ದ ಒಂದೇ ಮನೆಯ 9 ಜನ ಸಹಿತ ಒಟ್ಟು 20 ಮಂದಿಗೆ ಹೋಂ ಕ್ವಾರೆಂಟೈನ್‌ ವಿಧಿಸುವ ಮೂಲಕ ಯಾರೊಬ್ಬರಿಗೂ ಕೋವಿಡ್ ಹರಡದಂತೆ ಶಾಸಕರು ಅಧಿಕಾರಿಗಳೊಂದಿಗೆ ಅಗತ್ಯ ಕ್ರಮ ವಹಿಸಿದ್ದರಿಂದ ಇದು ತಾಲೂಕಿನಲ್ಲಿ ಅನಂತರ ಕಾಣಿಸಿಕೊಂಡಿಲ್ಲ.

ಎಂಡೋ ಸಂತ್ರಸ್ತರಿಗೆ ಕಿಟ್‌
ಎಂಡೋಸಲ್ಫಾನ್‌ ಎಂಬ ಮಹಾಮಾರಿಗೆ ಅದೆಷ್ಟೋ ಕುಟುಂಬಗಳು ಈಗಲೂ ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ. ಪಟ್ರಮೆ, ಕೊಕ್ಕಡ, ಹತ್ಯಡ್ಕ, ನಿಡ್ಲೆ, ರೆಖ್ಯ ಗ್ರಾಮಗಳ 100 ಎಂಡೋಸಲ್ಫಾನ್‌ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್‌ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ನಾಡ ಹಸಿವು ನೀಗಿಸಿ ಲೋಕ ಹಿತವ ಕಾಯ್ದ ಶ್ರಮಿಕ
ನಮ್ಮೆಲ್ಲರ ಬೆಳವಣಿಗೆಯ ಹಿಂದೆ ಕಾಣುವ ಹಾಗೂ ಕಾಣದ ಕೈಗಳು ಸಾವಿರಾರು. ನಾವು ಕೋವಿಡ್ ವಿರುದ್ಧ ಹೋರಾಡೋಣ. ಜತೆಗೆ ಅಭಿವೃದ್ಧಿಯ ಕಡೆಗೆ ಮುಖ ಮಾಡಿ ನಡೆಯೋಣ. ಸ್ವಾವಲಂಬಿ ಭಾರತ ನಿರ್ಮಿಸಲು ದೃಢವಾಗಿ ಹಜ್ಜೆ ಹಾಕೋಣ. ನಾವಿಷ್ಟು ಮಾಡಿದರೆ ಭಾರತವನ್ನು ಸ್ವಾವಲಂಬಿ ಮಾಡುವುದನ್ನು ಯಾರಿಂದಲೂ ತಡೆಯಲಾಗದು.

ಕೋವಿಡ್ ಸೋಂಕಿಗೆ ಜೀವತೆತ್ತವರ ಕಡೆಗೆ ನನ್ನ ಸಹಾನುಭೂತಿಯಿದೆ. ಕೋವಿಡ್ ವಿರುದ್ಧ ಹೋರಾಟ ಮಾಡುತ್ತಲೇ ಅಭಿವೃದ್ಧಿ ಕಡೆಗೆ ಮುಖಮಾಡಬೇಕಾಗಿದೆ. 21ನೇ ಶತಮಾನ ಭಾರತದ್ದು ಎಂದು ಎಲ್ಲರೂ ಹೇಳುತ್ತಿದ್ದಾರೆ. ಇದು ಕೇವಲ ಮಾತಷ್ಟೇ ಅಲ್ಲ ಅದು ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ.

ಇಂದು ನಾವು ಬಹಳ ಮುಖ್ಯ ಕಾಲಘಟ್ಟದಲ್ಲಿ ನಿಂತಿದ್ದೇವೆ. ಕೋವಿಡ್ ಪೂರ್ವ ಭಾರತದಲ್ಲಿ ಒಂದೇ ಒಂದು ಪಿಪಿಇ ಕಿಟ್‌ ತಯಾರಾಗುತ್ತಿರಲಿಲ್ಲ. ಆದರೆ ಇಂದು ದಿನಕ್ಕೆ ಒಂದು ಲಕ್ಷ ಕಿಟ್‌ ತಯಾರಾಗುತ್ತಿದೆ. ಭಾರತ ಸ್ವಾವಲಂಬಿಯಾದಾಗ ಕೇವಲ ನಮ್ಮನ್ನಷ್ಟೇ ಅಲ್ಲ, ವಿಶ್ವದ ಎಲ್ಲರನ್ನೂ ಸ್ವಾವಲಂಬಿ ಮಾಡುತ್ತದೆ. ವಿಶ್ವದ ಕಲ್ಯಾಣ ಭಾರತದ ಗುರಿಯಾಗಿದೆ.

ಮತ್ತೊಂದೆಡೆ ನನ್ನ ಕ್ಷೇತ್ರದ ಸರ್ವತೋಮುಖ ಬೆಳವಣಿಗೆಯಲ್ಲಿ ನನ್ನೊಂದಿಗೆ ಪಕ್ಷದ ಕಾರ್ಯಕರ್ತರು, ಸೇವಾಧುರೀಣರು ಹೆಗಲು ಕೊಟ್ಟು ಶ್ರಮಿಸುತ್ತಿದ್ದಾರೆ. ಅಧಿಕಾರಿ ವರ್ಗ, ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ , ಆಶಾ ಕಾರ್ಯಕರ್ತೆಯರು, ಕೋವಿಡ್ ವಾರಿಯರ್ಸ್‌ ಎಲ್ಲರ ಸೇವೆಯನ್ನು ಅಭಿನಂದಿಸುತ್ತ ಕ್ಷೇತ್ರದ ಜನತೆಯ ಸಂಕಷ್ಟ ನನ್ನ ಸಂಕಷ್ಟ ಎಂದು ಭಾವಿಸಿದ್ದೇನೆ.

ಸೇವೆಯೇ ಶ್ರಮಿಕನ ಗುರಿ.  ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೇಶ ಹಾಗೂ ರಾಜ್ಯದ ಜನರ ಸಂಕಷ್ಟವನ್ನರಿತು ಹಲವು ವರ್ಗದ ಜನರ ಕಷ್ಟಗಳಿಗೆ ಸದಾ ಸ್ಪಂದಿಸುತ್ತಿರುವುದು ಎಲ್ಲರಿಗೂ ಸಂತೋಷದಾಯಕ ವಿಚಾರ.

– ಹರೀಶ್‌ ಪೂಂಜ, ಶಾಸಕರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ

ಶಾಸಕರ ವಿವಿಧ ಕಾರ್ಯಕ್ರಮಗಳ ಒಂದು ನೋಟ

– ತಾಲೂಕಿನ ಪ್ರಮುಖ ಅಧಿಕಾರಿಗಳ ಜತೆ ಕೋವಿಡ್ ವೈರಸ್‌ ನಿಗ್ರಹ ಹಾಗೂ ಲಾಕ್‌ಡೌನ್‌ ಬಗ್ಗೆ ಸಭೆ.

– ತಾಲೂಕು ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಶಂಕಿತರ ಶುಶ್ರೂಷಗೆ ಮೀಸಲಿಡಲು ನಿರ್ಧಾರ.

– ತಾಲೂಕು ಆಸ್ಪತ್ರೆಯಲ್ಲಿ ಇರುವ ಎಲ್ಲ ರೋಗಿಗಳನ್ನು ತಾಲೂಕಿನ ವಿವಿಧ 6 ಖಾಸಗಿ ಆಸ್ಪತ್ರೆಗಳಿಗೆ ಸಾಗಿಸಿ ಅಲ್ಲಿ ಉಚಿತ ಚಿಕಿತ್ಸೆ ನೀಡಲು ಕ್ರಮ

– ಕೋವಿಡ್ ವಾರ್‌ ರೂಮ್‌ 24 x 7 ಸ್ಥಾಪನೆ.

– ಕೋವಿಡ್ ವಿಪತ್ತನ್ನು ಎದುರಿಸಲು ಖಾಸಗಿ ಆಸ್ಪತ್ರೆಗಳ ಸಹಕಾರವನ್ನು ಕೋರಿ ಸಭೆ

– ಕೋವಿಡ್ ಸೋಂಕು ಪತ್ತೆಯಾದ ತಣ್ಣೀರುಪಂತ ಗ್ರಾ.ಪಂ. ವ್ಯಾಪ್ತಿಯ ಕರಾಯ ಜನತಾ ಕಾಲನಿಗೆ ಸಂಪೂರ್ಣ ನೆರವು.

– ಬದುಕು ಕಟ್ಟೋಣ ಬನ್ನಿ ಬಳಗದ ಸಹಕಾರದಿಂದ ಬೆಳ್ತಂಗಡಿ ತಾಲೂಕಿನ ಆಯಕಟ್ಟಿನ ಪ್ರಮುಖ ಪೇಟೆಗಳಲ್ಲಿ ಸ್ಯಾನಿಟೈಸರ್‌ ಸಿಂಪಡಣೆ.

– ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಅಗತ್ಯತೆಗಳು, ತುರ್ತು ಬೇಕಾಗಿರುವ ಸಾಮಗ್ರಿಗಳ ಖರೀದಿಗೆ ನೆರವು.

– ದ.ಕ. ಜಿಲ್ಲೆಯ ಮತ್ಸ್ಯತೀರ್ಥವೆಂದೇ ಖ್ಯಾತಿ ಪಡೆದಿರುವ ಶಿಶಿಲ ಶ್ರೀ ಶಿಶಿಲೇಶ್ವರ ಕಪಿಲ ನದಿಯ ಮತ್ಸ್ಯಗಳಿಗೆ ಅರಳು ಸಮರ್ಪಣೆ.

– ರೋಟರಿ ಸಂಸ್ಥೆಯ ಸಹಯೋಗದಿಂದ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ 50 ಪಿಪಿಇ ಕಿಟ್‌ ಹಾಗೂ ವಿನಾಯಕ ರೈಸ್‌ ಮಿಲ್‌ ಹಾಗೂ ಡಾ| ಶಶಿಧರ ಡೋಂಗ್ರೆ ಅವರ ಸಹಕಾರದೊಂದಿಗೆ ಬಡ ಕಾರ್ಮಿಕರ ಮನೆಗಳಿಗೆ ಅಕ್ಕಿ ವಿತರಣೆ.

– ತಣ್ಣೀರುಪಂತ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ಕೊಳವೆಬಾವಿ, ತುರ್ತು ವೈದ್ಯಕೀಯ ಉಪಯೋಗಕ್ಕೆ ಬೇಕಾದ ಖರ್ಚು ವೆಚ್ಚಕ್ಕೆ ವ್ಯವಸ್ಥೆ.

– ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಶಯದಂತೆ ದೀಪ ಬೆಳಗಿಸಿ ನಮ್ಮೆಲ್ಲರನ್ನು ಕಾಪಾಡುವ ಮಹಾನ್‌ ಶಕ್ತಿಯ ಸ್ಮರಣೆಗಾಗಿ ಭಜನೆ.

– ಕ್ವಾರಂಟೈನ್‌ ವ್ಯಕ್ತಿಗಳನ್ನು ಮಾನಿಟರ್‌ ಮಾಡಲು ಜಿಪಿಎಸ್‌ ಆನ್‌ಲೈನ್‌ ಅಪ್ಲಿಕೇಶನ್‌ ಮತ್ತು ವೆಬ್‌ ಆಧಾರಿತ ವ್ಯವಸ್ಥೆಯಾಗಿ ಕೋವಿಡ್‌ -19 ಪರಿವೀಕ್ಷಣಾ ವರದಿ ಆ್ಯಪ್‌ ಬಿಡುಗಡೆ.

– ಲಾಕ್‌ಡೌನ್‌ ಕಾರಣದಿಂದ ತಾಲೂಕಿನ ರಬ್ಬರ್‌ ಬೆಳೆಗಾರರ ಹಿತ ಕಾಪಾಡುವ ದೃಷ್ಟಿಯಿಂದ ತಾಲೂಕಿನಲ್ಲಿ ರಬ್ಬರ್‌ ಖರೀದಿಸಲು ಬೆಳ್ತಂಗಡಿ ರಬ್ಬರ್‌ ಸೊಸೈಟಿಗೆ ಅನುಮತಿ.

– ಆಶಾ ಕಾರ್ಯಕರ್ತೆಯರಿಗೆ ಹಾಗೂ ಆರೋಗ್ಯ ಇಲಾಖೆಯ ಡಿ ವರ್ಗದ ಕಾರ್ಯಕರ್ತರಿಗೆ  ಆಹಾರ ಹಾಗೂ ಇನ್ನಿತರ ವಸ್ತುಗಳ ಕಿಟ್‌ ವಿತರಣೆ.

– ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇರುವ ದೈವಗಳ ಸೇವೆ ಮಾಡುವ 128 ಕುಟುಂಬಗಳಿಗೆ ಅಕ್ಕಿ ಹಾಗೂ ದೈನಂದಿನ ಬಳಕೆಯ ಕಿಟ್‌ ಹಸ್ತಾಂತರ.

– ಬೆಳ್ತಂಗಡಿ ನ.ಪಂ. ವ್ಯಾಪ್ತಿಯ ಗುಂಪಲಾಜೆ ಪ್ರದೇಶಕ್ಕೆ ನ.ಪಂ. ಸದಸ್ಯ ಜಯಾನಂದ ಗೌಡ ಅವರ ಉಪಸ್ಥಿತಿಯಲ್ಲಿ ದೈನಂದಿನ ಉಪಯೋಗಕ್ಕೆ ಬೇಕಾದ ಸಾಮಗ್ರಿ ವಿತರಣೆ.

– ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರಿಲ್ಲದೆ ಆಹಾರಕ್ಕೆ ಪರಿತಪಿಸುತ್ತಿದ್ದ ವಾನರಗಳಿಗೆ ಲಾಕ್‌ಡೌನ್‌ ಮುಗಿಯುವವರೆಗೆ ಹಣ್ಣು – ಹಂಪಲು ನೀಡಿಕೆ.

– ಪ್ರತೀ ಸೋಮವಾರ ಬೆಳ್ತಂಗಡಿ ಸಂತೆಕಟ್ಟೆ ಬಳಿ ನಡೆಯುತ್ತಿದ್ದ ವಾರದ ಸಂತೆಯನ್ನು ಮುಂಜಾಗ್ರತಾ ಕ್ರಮವಾಗಿ ಎಪಿಎಂಸಿ ಪ್ರಾಂಗಣಕ್ಕೆ  ಬದಲಾಯಿಸಲು ಸೂಚನೆ.

– ಬೆಳ್ತಂಗಡಿ ತಾ| ಸಾರ್ವಜನಿಕ ಆಸ್ಪತ್ರೆಗೆ ನಿರ್ಮಿತಿ ಕೇಂದ್ರ ನೀಡಿದ ಕೋವಿಡ್‌-19 ಸೋಂಕಿತರ ಗಂಟಲಿನ ದ್ರವ ಸಂಗ್ರಹಣಾ ಬೂತ್‌ ಗೆ (ಕಿಯೋಸ್ಕ್) ಚಾಲನೆ.

– ತಾಲೂಕಿನ ಎಲ್ಲ ಗ್ರಾಮದ ಪ್ರತಿ ಬೂತ್‌ಗಳಿಗೆ 100 ಕಿಟ್‌ನಂತೆ ಸುಮಾರು 30 ಸಾವಿರಕ್ಕಿಂತಲೂ ಅಧಿಕ ಕಿಟ್‌ ವಿತರಣೆ ಮಾಡುವ ಶ್ರಮಿಕ ನೆರವು ಕಾರ್ಯಕ್ರಮಕ್ಕೆ ಚಾಲನೆ.

– ಸಂಕಷ್ಟಕ್ಕೊಳಗಾದ ತಾಲೂಕಿನ ಸುಮಾರು 150ಕ್ಕೂ ಹೆಚ್ಚು ಯಕ್ಷಗಾನ ಕಲಾವಿದರು ಹಾಗೂ ರಂಗ ಪರಿಚಾರಕರಿಗೆ ಶ್ರಮಿಕ ನೆರವು ಆಹಾರ ಕಿಟ್‌ ವಿತರಣೆ.

– ತಾಲೂಕಿನ ಖಾಸಗಿ ಬಸ್‌ ಚಾಲಕರು, ನಿರ್ವಾಹಕರಿಗೆ ದೈನಂದಿನ ಉಪಯೋಗದ ವಸ್ತುಗಳ ಶ್ರಮಿಕ ನೆರವು ಕಿಟ್‌ ವಿತರಣೆ.

– ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಜನರಿಗೆ ಅಲ್ಲಿನ ಬಿಜೆಪಿ ಮಂಡಲಾಧ್ಯಕ್ಷ ಚಂದ್ರಹಾಸ್‌ ಪಂಡಿತ್‌ ಹೌಸ್‌ ಮುಖಾಂತರ 2,100 ಶ್ರಮಿಕ ನೆರವು ಕಿಟ್‌ ಹಸ್ತಾಂತರ.

– ತಾಲೂಕಿನ ಗೃಹರಕ್ಷಕದಳದ ಸಿಬಂದಿಯ ಸೇವೆ ಗುರುತಿಸಿ ಅವರಿಗೆ ತಲಾ 2 ಸಾವಿರದಂತೆ 1.22 ಲಕ್ಷ ರೂ. ವಿತರಣೆ.

– ತಾ|ನ 35 ಎಚ್‌ಐವಿ ಪೀಡಿತರಿಗೆ ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇಲ್ಲಿನ ಕೌನ್ಸಿಲರ್‌ ಸುರೇಶ್‌ ಅವರ ಮುಖೇನ ಶ್ರಮಿಕ ನೆರವು ಕಿಟ್‌ ವಿತರಣೆ.

– ಶ್ರೀ ಗುರುಚೈತನ್ಯ ಸೇವಾಶ್ರಮ ಗುಂಡೂರಿ ಇಲ್ಲಿಗೆ ಭೇಟಿ ನೀಡಿ ಆಶ್ರಮ ನಿರ್ವಹಣೆಗೆ ಅಗತ್ಯವಿದ್ದ ಆಹಾರ ಸಾಮಗ್ರಿ ಹಾಗೂ ಆಶ್ರಮದ ಖರ್ಚು ವೆಚ್ಚ ನಿರ್ವಹಣೆಗೆ ಆರ್ಥಿಕ ಪ್ರೋತ್ಸಾಹ.

–  ಕಾವೇರಮ್ಮ ಅಮೃತಧಾರೆ ಗೋಶಾಲೆ, ಗುಂಡೂರಿ- ವೇಣೂರು ಗೋವುಗಳಿಗೆ ಗೋ ಗ್ರಾಸ ನೀಡಿ ಗೋ ಶಾಲೆಯ ನಿರ್ವಹಣೆಗೆ ಧನ ಸಹಾಯ.

– ತಾ|ನ 108 ಆಂಬುಲೆನ್ಸ್‌ ವಾಹನದಲ್ಲಿ ಕಾರ್ಯ ನಿರ್ವಹಿಸುತ್ತಿರುವ 16 ಸಿಬಂದಿಗೆ ಶ್ರಮಿಕ ನೆರವು ಕಿಟ್‌.

– ಬೆಳ್ತಂಗಡಿ ತಾಲೂಕಿನಲ್ಲಿರುವ ಚೆಂಡೆ, ವಾಲಗ, ಕೊಂಬು, ಬ್ಯಾಂಡ್‌, ನಾದಸ್ವರ, ಸ್ಯಾಕ್ಸೋಫೋನ್‌ ನುಡಿಸುತ್ತಿರುವ 143 ಕುಟುಂಬಗಳಿಗೆ ದೈನಂದಿನ ಉಪಯೋಗದ ಆಹಾರದ ಶ್ರಮಿಕ ನೆರವು ಕಿಟ್‌.

– ಬೆಳ್ತಂಗಡಿ ತಾಲೂಕಿನ ವಿವಿಧ ಭಾಗಗಳಲ್ಲಿ ನೆಲೆಸಿದ ವಲಸೆ ಕಾರ್ಮಿಕರನ್ನು ವಾಪಸು ಅವರ ಊರಿಗೆ ಕಳುಹಿಸುವ ವ್ಯವಸ್ಥೆ.

– ತಾಲೂಕಿನ ಎಂಡೋ ಸಲ್ಫಾನ್‌ ಪೀಡಿತರ ಮನೆಗಳಿಗೆ ಶ್ರಮಿಕ ನೆರವು ಸಹಾಯದ ದೈನಂದಿನ ಉಪಯೋಗದ ಕಿಟ್‌ ವಿತರಣೆ.

– ಉದ್ಯೋಗದ ನಿಮಿತ್ತ ಬೆಂಗಳೂರಿಗೆ ತೆರಳುವ ಬೆಳ್ತಂಗಡಿ ತಾಲೂಕಿನ ನಿವಾಸಿಗಳಿಗೆ ಶ್ರಮಿಕ ಸಂಪರ್ಕ ಬಸ್‌ನ ವ್ಯವಸ್ಥೆ.

– ಕರಾವಳಿಯ ಗಂಡು ಕಲೆ ಯಕ್ಷಗಾನ ಕಲಾವಿದರಿಗೆ ಹಾಗೂ ರಂಗ ಪರಿಚಾಕರಿಗೆ, ಕರಾವಳಿ ಡ್ಯಾನ್ಸ್‌ ಫೌಂಡೇಶನ್‌ಗೆ ಶ್ರಮಿಕ ನೆರವು ಆಹಾರ ಧಾನ್ಯಗಳ ಕಿಟ್‌ ಜತೆಗೆ ಸುಂಕದಕಟ್ಟೆ ಮೇಳದ ಕಲಾವಿದರಿಗಾಗಿ 20,000 ರೂ. ನಗದು ಹಸ್ತಾಂತರಿಸಿ ಕಲಾ ಆರಾಧಕರನ್ನೂ ಪೋಷಿಸಿದರು.

ದೇವರ ಅನುಗ್ರಹ, ಶಾಸಕರ ಸಮಯೋಚಿತ ನಿರ್ಧಾರ
ನಮ್ಮ ದೇಶದಲ್ಲಿ ಮತ್ತು ರಾಜ್ಯದಲ್ಲಿ ಅನೇಕ ಪ್ರಾಕೃತಿಕ ಆಪತ್ತುಗಳನ್ನು ಮತ್ತು ಸಮಸ್ಯೆಗಳನ್ನು ಎದುರಿಸಿದ್ದೇವೆ. ಇಂದಿನ ಕೋವಿಡ್‌-19 ಮಾತ್ರ ದೇಶಕ್ಕೆ ಮೊದಲ ಅನುಭವ, ಈ ಸಂದರ್ಭದಲ್ಲಿ ಪ್ರಜೆಗಳು ಏಕಸ್ತರಾಗಿ ಸಂಘಟಿತರಾಗಿ ಸವಾಲನ್ನು ಎದುರಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸರಕಾರಗಳು, ರಾಜ್ಯಸರಕಾರಗಳು ಪ್ರತಿಯೊಬ್ಬ ಪ್ರಜೆಗಳಿಗೂ ಸಮಯೋಚಿತ ಹಾಗೂ ಸಂದರ್ಭೋಚಿತ ಸಹಾಯವನ್ನು ನೀಡುತ್ತಿದ್ದಾರೆ. ಇದು ಕೇವಲ ಅನುಕಂಪದಿಂದಲ್ಲ ಬದಲಾಗಿ ಅನಿವಾರ್ಯ ಸಂದರ್ಭಗಳಲ್ಲಿ ಎಲ್ಲರೂ ನೆಮ್ಮದಿಯಿಂದಿರಬೇಕು ಎಂಬುದು. ದುಡಿಯುವ ಮನಸ್ಸು ಮತ್ತು ಕೈಗಳಿದ್ದರೂ ಅವಕಾಶ ವಂಚಿತರಾಗಿದ್ದವರಿಗೆ ವಿಭಿನ್ನ ರೀತಿಯ ಬೆಂಬಲ ಬೇಕಾಗಿರುತ್ತದೆ. ರಾಜ್ಯದ ಅನೇಕ ಶಾಸಕರು ಪ್ರಾದೇಶಿಕವಾಗಿ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಬೆಳ್ತಂಗಡಿ ತಾಲೂಕಿನ ಶಾಸಕರಾದ ಶ್ರೀ ಹರೀಶ್‌ ಪೂಂಜ ಅವರು ಕೊರೊನಾ ಲಾಕ್‌ಡೌನ್‌ ಪ್ರಾರಂಭವಾದ ತಕ್ಷಣವೇ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಕಾರ್ಮಿಕರಿಂದ ಹಿಡಿದು ಮಧ್ಯಮ ಮತ್ತು ಮೇಲ್ವರ್ಗದ ಜನತೆಗೂ ಬೇಕಾಗುವ ಅವಶ್ಯಕತೆಯನ್ನು ಪೂರೈಸುವ ಮತ್ತು ಮನಸ್ಥೈರ್ಯ ಉಂಟುಮಾಡುವಲ್ಲಿ ಶ್ರಮಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಶಾಸಕರಿಂದ ಸಮಸ್ಯೆಗಳಿಗೆ ಸ್ಪಂದಿಸುವ ಮನೋಧರ್ಮವನ್ನು ಪ್ರಾತ್ಯಕ್ಷಿಕವಾಗಿ ಮಾಡಿ ತೋರಿಸಿದ್ದಾರೆ. ಶ್ರೀ ಹರೀಶ್‌ ಪೂಂಜ ಅವರಿಗೆ ಅಭಿನಂದನೆಗಳು ಮತ್ತು ಬೆಳ್ತಂಗಡಿ ತಾಲೂಕಿನ ಜನತೆಗೂ ಶ್ರೀ ಮಂಜುನಾಥ ಸ್ವಾಮಿ ಆತ್ಮಸ್ಥೈರ್ಯ, ಅತ್ಮವಿಶ್ವಾಸವಿತ್ತು ಮುಂದಿನ ಬದುಕು ಸುಗಮವಾಗಿ ಸಾಗುವಂತೆ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.

– ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ

ರಾಜ್ಯಕ್ಕೆ ರಾಜಕೀಯ ರಹಿತ ಸೇವಾ ಮಾದರಿ
ಸರಕಾರದ ಸವಲತ್ತುಗಳಿಂದ ವಂಚಿತರಾದವರಿಗೆ ಬದುಕಿಗೆ ಬೆಳಕಾಗಬೇಕೆಂಬ ಭಾವನೆಯಿಂದ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಮತ್ತು ಅವರ ತಂಡ ಕ್ಷೇತ್ರದ ಮಂದಿಗೆ 30 ಸಾವಿರ ಕಿಟ್‌ ಕೊಡುವಂತಹ ಮಹಾನ್‌ ಕೆಲಸ ನಿರ್ವಹಿಸಿದ್ದಾರೆ. ಗ್ರಾಮ ಮಟ್ಟಕ್ಕೆ ಆಹಾರ ಕಿಟ್‌ ಅನ್ನು ಅಚ್ಚುಕಟ್ಟಾಗಿ ಪೂರೈಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಜತೆಗೆ ಕ್ಷೇತ್ರದ ಜನತೆಯ ಯಾವುದೇ ಸಂಕಷ್ಟದಲ್ಲೂ ನಾನು ನಿಮ್ಮೊಂದಿಗಿದ್ದೇನೆ ಎಂಬ ಸಂದೇಶವನ್ನು ಶಾಸಕ ಹರೀಶ್‌ ಪೂಂಜ ನೀಡಿದ್ದಾರೆ. ಇದು ರಾಜ್ಯಕ್ಕೆ ರಾಜಕೀಯ ರಹಿತ ಸೇವಾಮಾದರಿಯಾಗಿದೆ.

– ನಳಿನ್‌ ಕುಮಾರ್‌ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸಂಸದರು, ದ.ಕ.

ಸಮರ್ಥ ನಾಯಕನ ತೃಪ್ತಿಕರ ಸ್ಪಂದನೆ
ಶಾಸಕ ಹರೀಶ್‌ ಪೂಂಜ ಅವರು ಕೋವಿಡ್ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗಾಗಿ ಸ್ಪಂದಿಸಿದ ರೀತಿ ಬಹಳ ತೃಪ್ತಿಕರವಾದದ್ದು. ಸಾಮಾನ್ಯ ಜನರ ನೋವು ನಲಿವುಗಳನ್ನು ಬಹಳಷ್ಟು ಹತ್ತಿರದಿಂದ ಬಲ್ಲವರಾಗಿದ್ದರಿಂದ ಕ್ಷೇತ್ರದ ಜನರನ್ನು ಸಂಪೂರ್ಣ ಅರ್ಥಮಾಡಿಕೊಂಡಿದ್ದಾರೆ. ಪರಿಣಾಮ ಯಾವುದೇ ಸಂದರ್ಭದಲ್ಲೂ ಸವಾಲುಗಳನ್ನು ಎದುರಿಸುವ ಸಮರ್ಥ ನಾಯಕರಾಗಿ ಶಾಸಕ ಹರೀಶ್‌ ಪೂಂಜ ಗುರುತಿಸಲ್ಪಡುತ್ತಾರೆ.

– ಕೋಟ ಶ್ರೀನಿವಾಸ್‌ ಪೂಜಾರಿ, ರಾಜ್ಯ ಮುಜರಾಯಿ, ಬಂದರು ಮತ್ತು ಒಳನಾಡು ಜಲಸಾರಿಗೆ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ

ಶ್ರಮದ ಹಾದಿಯಲಿ ಸಮಯೋಚಿತ ನಿರ್ಧಾರ
ಹರೀಶ್‌ ಪೂಂಜ ಯೋಗ್ಯ ಮತ್ತು ಮಾದರಿ ಶಾಸಕರಾಗಿದ್ದು, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದನ್ನು ಗಮನಿಸಿದ್ದೇನೆ. ಇದೀಗ ಕೋವಿಡ್ ಸಂದರ್ಭದಲ್ಲೂ ಜನರ ಆಶೋತ್ತರಗಳಿಗೆ ಉತ್ತಮ ಸ್ಪಂದನೆಯನ್ನು ಕೊಡುತ್ತಿರುವ ಶಾಸಕರಾಗಿ ರಾಜ್ಯಕ್ಕೆ ಮಾದರಿ ಶಾಸಕರಾಗಿದ್ದಾರೆ. ಕೋವಿಡ್ ಮಹಾಮಾರಿಯನ್ನು ಒಧ್ದೋಡಿಸಬೇಕಾದರೆ ಇಂತಹ ಸಮಾಜಮುಖಿ ಕೆಲಸ ಮಾಡುವ ಶಾಸಕರ ಅಗತ್ಯವಿದೆ. ಉಜಿರೆಯ ಕ್ರೀಡಾಂಗಣದಲ್ಲಿ ತಾಲೂಕಿನ ಜನತೆಯ ಕಷ್ಟಗಳನ್ನರಿತು ಸುಮಾರು 30 ಸಾವಿರಕ್ಕೂ ಅಧಿಕ ಕಿಟ್‌ಗಳನ್ನು ತಯಾರಿಸಿ ನೀಡಿದ ಕೆಲಸ ಕಾರ್ಯ ಬಹಳ ಅದ್ಭುತವಾಗಿದೆ. ಶಾಸಕ ಹರೀಶ್‌ ಪೂಂಜ ಅವರು ಸದಾ ಜನರ ಕಷ್ಟಗಳಿಗೆ ಹೀಗೆ ಸ್ಪಂದಿಸುತ್ತಿರಲಿ ಎಂದು ಆಶಿಸುತ್ತೇನೆ.

– ಬಸವರಾಜ ಬೊಮ್ಮಾಯಿ, ಗೃಹ ಸಚಿವರು, ಕರ್ನಾಟಕ ಸರಕಾರ

ಶಾಸಕರ ಕ್ರಮ ಶ್ಲಾಘನೀಯ
ಕೋವಿಡ್ ಮಹಾಮಾರಿ ದೂರದ ದೇಶಗಳಿಂದ ನಮ್ಮ ತಾಲೂಕಿಗೆ ಪ್ರಥಮವಾಗಿ ಸಂಪರ್ಕ ಪಡೆದಾಗ ಜನತೆ ಭಯಭೀತರಾಗುವಂತೆ ಮಾಡಿತ್ತು. ಆದರೆ ಶಾಸಕ ಹರೀಶ್‌ ಪೂಂಜ ಅವರ ಮುಂದಾಲೋಚನೆ ಹಾಗೂ ಕೋವಿಡ್‌ ಸೋಂಕು ಹರಡದಂತೆ ಕೈಗೊಂಡ ಕ್ರಮಗಳು ನಿಜಕ್ಕೂ ಗಮನಾರ್ಹ. ಕ್ಷೇತ್ರಾದ್ಯಂತ ಓಡಾಡಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕೋವಿಡ್ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

– ಜಯಂತ್‌ ಕೋಟ್ಯಾನ್‌,  ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷರು

ಕಷ್ಟಗಳಿಗೆ ನೆರವಾದ ಶಾಸಕರು
ಬೆಳ್ತಂಗಡಿ ಯುವ ಶಾಸಕರಾದ ಹರೀಶ್‌ ಪೂಂಜಾ ಅವರು ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲಿ ಅತ್ಯಂತ ಕ್ರೀಯಾಶೀಲರಾಗಿ ಕ್ಷೇತ್ರಾದ್ಯಂತ ಸಂಚರಿಸಿ, ಜನರ ಕಷ್ಟಗಳಿಗೆ ನೆರವಾಗಿದ್ದಾರೆ. ತಾಲೂಕಿನಲ್ಲಿ ತಾಲೂಕು ಆಡಳಿತದ ಜತೆಗೆ ತಮ್ಮ ಸಿಬಂದಿ ನಿಯೋಜಿಸಿ ಕಂಟ್ರೋಲ್‌ ರೂಮ್‌ ಮೂಲಕ 24×7 ಜನ ಸ್ಪಂದನಾ ಕೇಂದ್ರವಾಗಿ ಕಾರ್ಯಾಚರಿಸುವಂತೆ ನೋಡಿದ್ದಾರೆ. ಪಡಿತರ ವಿತರಣೆಯಲ್ಲಿ ಎಲ್ಲಿಯೂ ಲೋಪವಾಗ ದಂತೆ ಮುಂಜಾಗ್ರತೆ ವಹಿಸಿದ್ದರು. ಎಲ್ಲ  ಇಲಾಖೆ ಸಮನ್ವಯವಾಗಿ ಸ್ಪಂದನೆ ನೀಡುವಲ್ಲಿ ನಿರ್ದೇಶನ ಹಾಗೂ ಸೂಕ್ತ ಬೆಂಬಲ ನೀಡಿದ್ದಾರೆ.

– ಡಾ| ಯತೀಶ್‌ ಉಳ್ಳಾಲ್‌, ಎ.ಸಿ., ಪುತ್ತೂರು

ಶಾಸಕರ ನೇತೃತ್ವಕ್ಕೆ ಬೆಂಬಲ
ರಾಜ್ಯ ಸರಕಾರದ ನಿರ್ದೇಶನದಂತೆ ಕೋವಿಡ್‌-19 ಸಂಪೂರ್ಣ ನಿರ್ಮೂಲನೆಗಾಗಿ ಶಾಸಕರ ಸೂಚನೆಯಂತೆ ತಾಲೂಕು ಆಡಳಿತ ಸರ್ವ ವಿಧದಲ್ಲೂ ಕ್ರಮ ಕೈಗೊಂಡ ಹಿನ್ನೆಲೆ ಬೆಳ್ತಂಗಡಿ ತಾಲೂಕಿನ ಜನ ನಿಶ್ಚಿಂತೆಯಿಂದ ಕಳೆಯುವಂತಾಗಿದೆ. ಪಡಿತರ ವಿತರಣೆ, ವಾರ್‌ ರೂಮ್‌ ಸ್ಥಾಪನೆ ಸಹಿತ ರಾಜ್ಯದಲ್ಲೇ ಇತರ ಜಿಲ್ಲೆಗಳಿಗೆ ಬೆಳ್ತಂಗಡಿ ಮಾದರಿಯಾಗಿದೆ. ಈ ನಿಟ್ಟಿನಲ್ಲಿ ತಾ| ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಶಾಸಕರು ಅಗತ್ಯ ಸಲಹೆ ಸೂಚನೆ ನೀಡಿ ಬೆಳ್ತಂಗಡಿಯನ್ನು ಎಲ್ಲರೂ ಸೇರಿ ಕೋವಿಡ್ ಮುಕ್ತವಾಗಿಸುವಲ್ಲಿ ಶ್ರಮಿಸಿದ್ದಾರೆ.

– ಗಣಪತಿ ಶಾಸ್ತ್ರಿ, ತಹಶೀಲ್ದಾರ್‌, ಬೆಳ್ತಂಗಡಿ

ಆತ್ಮಸ್ಥೆರ್ಯ ವೃದ್ಧಿಸುವ ಕೆಲಸ
ಕೋವಿಡ್‌-19 ಆರಂಭದ ಹಂತದಲ್ಲಿ ಆರೋಗ್ಯ ಇಲಾಖೆಗೆ ಸೂಕ್ತ ಸಲಕರಣೆಗಳ ಸಮಸ್ಯೆ ಎದುರಾಗಿತ್ತು. ಇದೇ ಸಂದರ್ಭದಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯನ್ನು ಕೋವಿಡ್‌ ಚಿಕಿತ್ಸೆಗೆಂದೇ ಮೀಸಲಿಡುವ ಮೂಲಕ ಮಹತ್ತರ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಸಂದರ್ಭ ಅಗತ್ಯ ಸಲಕರಣೆಗಳನ್ನು ಶಾಸಕರು ಒದಗಿಸುವಲ್ಲಿ ಶ್ರಮಿಸಿದ್ದಾರೆ. ತಾ|ನ ಪ್ರತಿ ಕ್ವಾರಂಟೈನ್‌ ಮೇಲೆ ನಿಗಾವಹಿಸಲು ಶಾಸಕರು ಪರಿಚಯಿಸಿದ ಆ್ಯಪ್‌ ಹಾಗೂ ಕೋವಿಡ್‌ ವಾರಿಯರ್, ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಮೂಲಕ ಆತ್ಮಸ್ಥೆರ್ಯ ವೃದ್ಧಿಸುವ ಕೆಲಸ ಮಾಡಿದ್ದಾರೆ.

– ಡಾ| ಕಲಾಮಧು, ತಾಲೂಕು ಆರೋಗ್ಯಾಧಿಕಾರಿ

ಸಮಾಜಕ್ಕೆ ಉತ್ತಮ ಸಂದೇಶ
ದೇಶಕ್ಕೆ ಆವರಿಸಿದ ಕೋವಿಡ್ ನಿವಾರಣೆಗೆ ಮಾನವೀಯ ನೆಲೆಯಲ್ಲಿ ಪ್ರತಿಯೊಬ್ಬರೂ ಮಿಡಿಯಬೇಕಿದೆ. ಅಂದು ನಾಡಿಗೆ ನೆರೆ ಅಪ್ಪಳಿಸಿದಾಗಲೂ ಗ್ರಾಮ ಗ್ರಾಮಕ್ಕೆ ಧಾವಿಸಿ ಸಂಕಷ್ಟಕೀRಡಾದವರ ಜತೆ ನಿಂತ ಶಾಸಕ ಹರೀಶ್‌ ಪೂಂಜ ಇಂದು ಕೋವಿಡ್ ಸಂದರ್ಭದಲ್ಲೂ ಜನತೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಇದು ನಮ್ಮನ್ನೂ ಪ್ರೇರಣೆಗೊಳಪಡಿಸುವಂಥದ್ದು. ಈ ಮೂಲಕ ಸಮಾಜಕ್ಕೊಂದು ಸಂದೇಶವಾಗಿದೆ. ನಮ್ಮಿಂದಾದ ಸಹಾಯವನ್ನು ನೀಡುವ ಮೂಲಕ ಶಾಸಕರೊಂದಿಗೆ ಕೈಜೋಡಿಸ ಬೇಕಾದುದು ನಮ್ಮ ಕರ್ತವ್ಯ.

– ಶಶಿಧರ ಶೆಟ್ಟಿ ಬರೋಡ, ಉದ್ಯಮಿ

ಶಾಸಕರೊಂದಿಗೆ ಕೈಜೋಡಿಸಿ
ಜಗತ್ತಿಗೆ ಆವರಿಸಿದ ಕೋವಿಡ್ ಮಹಾಮಾರಿ ನಿವಾರಣೆಗೆ ಸರಕಾರ ಹಾಗೂ ಶಾಸಕರೊಂದಿಗೆ ಜನತೆ ಕೈಜೋಡಿಸಬೇಕಿದೆ. ಈ ದಿಸೆಯಲ್ಲಿ ಶಾಸಕ ಹರೀಶ್‌ ಪೂಂಜ ಅವರು ನಾಡಿನ ಜನತೆಯ ಹಿತ ಕಾಯುವಲ್ಲಿ ಹಗಲಿರುಳು ಶ್ರಮಿಸಿದ್ದಾರೆ. ನಾನು ಅವರ ಕಾರ್ಯವೈಖರಿಯನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ. ಸಂಕಷ್ಟಕ್ಕೊಳಗಾದವರ ಕೈಹಿಡಿಯುವ ಮೂಲಕ ಕ್ಷೇತ್ರದ ಶಾಸಕನಾಗಿ ಕರ್ತವ್ಯ ನಿಭಾಯಿಸಿದ್ದಾರೆ.

– ಶರತ್‌ಕೃಷ್ಣ ಪಡ್ವೆಟ್ನಾಯ, ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನ

ವಯಸ್ಸಿಗೆ ಮೀರಿದ ಪ್ರೌಢಿಮೆ
ಕ್ಷೇತ್ರದ ಶಾಸಕರಾಗಿ ಆಯ್ಕೆ ಆದಂದಿನಿಂದ ತನ್ನ ವಯಸ್ಸಿಗೆ ಮೀರಿದ ಪ್ರೌಢಿಮೆಯನ್ನು ತೋರಿದ್ದು, ರಾತ್ರಿ ಹಗಲು ಎನ್ನದೆ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ದೃಷ್ಟಿಯಿಂದ ಸಂಪೂರ್ಣವಾಗಿ ತನ್ನನ್ನು ತಾನು ತೊಡಿಗಿಸಿ ಶಾಸಕತ್ವಕ್ಕೆ ಪೂರ್ಣ ನ್ಯಾಯ ಒದಗಿಸುತ್ತಿದ್ದಾರೆ. ವಿಶೇಷ ಪರಿಸ್ಥಿತಿಯಲ್ಲಿ ಅವರು ಹಮ್ಮಿಕೊಂಡ ಕಾರ್ಯಕ್ರಮಗಳು ಸಂಕಷ್ಟಕ್ಕೊಳಗಾದವರಿಗೆ ಧೈರ್ಯತುಂಬುವ ಕೆಲಸ ಎಲ್ಲೆಡೆ ಮಾದರಿಯಾಗಿದೆ.

– ಪ್ರತಾಪ್‌ ಸಿಂಹ ನಾಯಕ್‌, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ

ಜನರ ಬೇಡಿಕೆ ಈಡೇರಿಸಿದ ಕೀರ್ತಿ
ಕೋವಿಡ್ ಅವಧಿಯಲ್ಲಿ ತಾಲೂಕಿನಾದ್ಯಂತ ಎಲ್ಲ ಅಧಿಕಾರಿ ವರ್ಗವನ್ನು ಒಟ್ಟುಗೂಡಿಸಿ, ವ್ಯವಸ್ಥಿತವಾಗಿ ವೈರಸ್‌ ತಡೆಗಟ್ಟುವಲ್ಲಿ ಕೆಲಸವನ್ನು ನಿರ್ವಹಿಸಿದ್ದಾರೆ. 2ನೇ ಹಂತದಲ್ಲಿ ಬೆಳ್ತಂಗಡಿ ಗೃಹರಕ್ಷಕ ದಳದ ಸದಸ್ಯರಿಗೆ ಅವರು ಕರ್ತವ್ಯ ನಿರ್ವಹಿಸುವ ಸಂದರ್ಭ ಪ್ರೋತ್ಸಾಹಧನ ನೀಡಿ ಸಹಕರಿಸಿದ್ದಾರೆ. ಒಬ್ಬ ಶಾಸಕ ಮಾಡುವ ಜವಾಬ್ದಾರಿಗಿಂತ ಹೆಚ್ಚು ಮುತುವರ್ಜಿಯಿಂದ ಜನರ ಆಶೋತ್ತರಗಳನ್ನು ಈಡೇರಿಸಿದ ಕೀರ್ತಿ ನಮ್ಮ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರಿಗೆ ಸಲ್ಲುತ್ತದೆ.

– ಜಯಾನಂದ್‌ ಲಾೖಲ, ಗೃಹ ರಕ್ಷಕದಳ ಘಟಕಾಧಿಕಾರಿ, ಬೆಳ್ತಂಗಡಿ

ನಮ್ಮ ಕಷ್ಟ ಆಲಿಸಿ ಅಗತ್ಯ ನೆರವು
ಕೋವಿಡ್ ಸಂಕಷ್ಟದಿಂದಾಗಿ ದುಡಿಯುವ ಕೈಗಳು ಇಂದು ಬರಿದಾಗಿವೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಕುಟುಂಬ ನಿರ್ವಹಣೆ, ಔಷಧ, ಬ್ಯಾಂಕ್‌ ಸಾಲ ಭರಿಸಲಾಗದೆ ಸಂಕಷ್ಟದಲ್ಲಿ ಜೀವನ ಕಳೆದೋಗಿತ್ತು. ಆದರೆ ಶಾಸಕರಾಗಿ ಪೂಂಜ ಅವರು ನಮ್ಮ ಕಷ್ಟ ಆಲಿಸಿ ಅಗತ್ಯ ನೆರವು ನೀಡಿದ್ದಾರೆ. ಹಸಿದವರಿಗೆ ಅನ್ನದ ಜತೆ ನಾವು ನಿಮ್ಮೊಂದಿಗಿದ್ದೇವೆ ಎಂಬ ಧೈರ್ಯ ತುಂಬಿದ್ದಾರೆ. ಕೋವಿಡ್ ಸಂದರ್ಭ ರಿಕ್ಷಾ ಚಾಲಕ-ಮಾಲಕರನ್ನು ಮೊದಲಾಗಿ ಗಣನೆಗೆ ತೆಗೆದುಕೊಂಡ ಶಾಸಕರಾಗಿದ್ದಾರೆ.

– ಸುರೇಶ್‌ ಕುಮಾರ್‌ ಹೆಗ್ಡೆ, ಆಟೋ ಚಾಲಕ

ಟಾಪ್ ನ್ಯೂಸ್

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

3-kadaba

Kadaba: ಕರ್ತವ್ಯದ ಬಿಡುವಿನಲ್ಲಿ ಮೊಬೈಲ್‌ನಲ್ಲೇ ಓದಿ ಎಸ್‌ಐ ಆದ ಪೊಲೀಸ್‌ ಚಾಲಕ!

1

Puttur: ನಳಿನ್‌ಗೆ ನಿಂದನೆ; ದೂರು ದಾಖಲು

1-asdaaasdasd

Kadaba; ಪ್ರೀತಿಸುವ ನಾಟಕವಾಡಿ ಬಾಲಕಿಯ ಮೇಲೆ ಅತ್ಯಾಚಾರ:ಯುವಕ ಸೆರೆ

1aaaane

Sullia: ತೋಟದಲ್ಲಿ ಮೂರು ಕಾಡಾನೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

ಗದಗ: ಮಾವು ಬಂಪರ್‌ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ

ಗದಗ: ಮಾವು ಬಂಪರ್‌ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.