Belthangady: ಗ್ರಾಮೀಣ ನೈರ್ಮಲ್ಯ ಕಾಪಾಡುತ್ತಿರುವ ನರೇಗಾ
ಬೆಳ್ತಂಗಡಿ ತಾಲೂಕಿನಲ್ಲಿ 2,212 ವೈಯಕ್ತಿಕ ಸೋಕ್‌ಪಿಟ್ ರಚನೆ
Team Udayavani, Dec 12, 2024, 1:33 PM IST
ಬೆಳ್ತಂಗಡಿ: ಗ್ರಾಮೀಣ ಪ್ರದೇಶವನ್ನು ಕೊಳಚೆ ನೀರು ಮುಕ್ತಗೊಳಿಸಿ, ಗ್ರಾಮೀಣ ನೈರ್ಮಲ್ಯ ಕಾಪಾಡುವ ಸದುದ್ದೇಶದಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಳೆದ 6 ವರ್ಷಗಳಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 2,212 ವೈಯಕ್ತಿಕ ಬಚ್ಚಲು ಗುಂಡಿ (ಸೋಕ್‌ಪಿಟ್) ನಿರ್ಮಿಸುವ ಮೂಲಕ ಗುರಿ ಸಾಧನೆ ಮಾಡಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಜಲಮೂಲ ಪುನಶ್ಚೇತನಗೊಳಿಸಿ ಅಭಿವೃದ್ಧಿಗೊಳಿ ಸುವುದು, ಕೊಳಚೆ ನೀರು ಸದ್ಭಳಕೆ ಮಾಡಿಕೊಳ್ಳುವುದು, ಬಚ್ಚಲು ಮನೆ ನೀರು ವ್ಯರ್ಥವಾಗಿ ಹರಿಯುವುದನ್ನು ತಡೆಗಟ್ಟುವ ಉದ್ದೇಶದಿಂದ ನರೇಗಾ ಯೋಜನೆಯು ಶೌಚಾಲಯ ನಿರ್ಮಾಣಕ್ಕೆ ಸಾಥ್ ನೀಡುತ್ತಾ ಬಂದಿದೆ. ಬಚ್ಚಲು ಮನೆ ನೀರು ಚರಂಡಿ ಅಥವಾ ರಸ್ತೆಗೆ ಹರಿಬಿಡುವುದನ್ನು ತಡೆಗಟ್ಟಲು ವಿನೂತನ ಕ್ರಮವಾಗಿದ್ದು, ಪ್ರತೀ ಮನೆಗೆ ವೈಯಕ್ತಿಕವಾಗಿ ಬಚ್ಚಲು ಗುಂಡಿ ನಿರ್ಮಿಸಲು ಯೋಜನೆ ಉಪಯುಕ್ತತೆ ಪಡೆದಿದೆ.
ಪ್ರತೀ ಮನೆಗಳಲ್ಲಿಯೂ ಅನುಷ್ಠಾನ ಚಿಂತನೆ
ಬಚ್ಚಲಿನ ಮಲಿನ ನೀರು ಅಂದರೆ ಬಟ್ಟೆ ಒಗೆದ ನೀರು, ಸ್ನಾನ ಮಾಡಿದ ನೀರು ಮತ್ತು ಪಾತ್ರೆ ತೊಳೆದ ನೀರು ಮನೆ ಸುತ್ತಮುತ್ತಲು ಅನೈರ್ಮಲ್ಯ ಹಾಗೂ ಅನಾರೋಗ್ಯ ಸೃಷ್ಟಿಸುವ ಸಂಭವಿರುತ್ತದೆ. ಆ ಕೊಳಚೆ ನೀರು ಭೂಮಿಯನ್ನು ಇಂಗಿ ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಯು ವುದರಲ್ಲಿ ಬಚ್ಚಲು ಗುಂಡಿ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ತಾಲೂಕಿನ ಗ್ರಾಮದ ಪ್ರತೀ ಮನೆಗಳಲ್ಲಿಯೂ ಕೂಡ ಬಚ್ಚಲಗುಂಡಿ ನಿರ್ಮಾಣಕ್ಕಾಗಿ ದೊಡ್ಡ ಮಟ್ಟದಲ್ಲಿ ಅಭಿಯಾನವನ್ನೇ ಹಮ್ಮಿಕೊಂಡಿದೆ.
ಗ್ರಾಮೀಣ ಪ್ರದೇಶದಲ್ಲಿ 5 ಸೆಂಟ್ಸ್ ಕಾಲನಿಗಳಲ್ಲಿ ವ್ಯವಸ್ಥಿತವಾದ ಚರಂಡಿ ಇರುವುದಿಲ್ಲ. ಜತೆಗೆ ಪ್ರಸಕ್ತ ದಿನಗಳಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಸರಕಾರದಿಂದ ಫಲಾನುಭವಿಗಳಿಗೆ ಸಿಗುವ ಒಂದು ಮುಕ್ಕಾಲು, ಗ್ರಾಮೀಣ ಭಾಗದಲ್ಲಿ ಎರಡುವರೆ ಸೆಂಟ್ಸ್ ಸ್ಥಳದಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ಡೆಂಗ್ಯೂ, ಮಲೇರಿಯಾ ಸಹಿತ ಸಾಂಕ್ರ ಮಿಕ ರೋಗ ಹರಡುವ ಪರಿಸ್ಥಿತಿ ಬಂದೊದಗುತ್ತದೆ. ಇದನ್ನು ತಡೆಯುವ ಸಲುವಾಗಿ ಅಭಿಯಾನವಾಗಿದೆ.
ಸಮುದಾಯ ಪಿಟ್ ರಚಿಸಲು ಅವಕಾಶ
ವೈಯಕ್ತಿಕ ಸೋಕ್‌ಪಿಟ್‌ಅಲ್ಲದೆ ಸಮುದಾಯ ಸೋಫಿಟ್ ನಿರ್ಮಿಸಲು ಅವಕಾಶವಿದೆ. 5 ಸೆಂಟ್ಸ್ ಕಾಲನಿಗಳಲ್ಲಿ ಅಕ್ಕ-ಪಕ್ಕ ಹೆಚ್ಚಿನ ಮನೆಗಳಿದ್ದು, ಸೋಕ್‌ಪಿಟ್ ಮಾಡಲು ಸ್ಥಳವಕಾಶವಿಲ್ಲದಿದ್ದರೆ ಹತ್ತಿರದ ಯಾವುದೇ ಸರಕಾರಿ ಜಾಗವಿದ್ದರೆ ಆ ಪ್ರದೇಶದಲ್ಲಿ ಸಮುದಾಯ ಸೋಕ್‌ಫಿಟ್ ರಚನೆಗೆ ಅವಕಾಶವಿದೆ. ಅಂಗನವಾಡಿ ಸರಕಾರಿ ಶಾಲಾ ಕಾಲೇಜುಗಳಲ್ಲಿ, ಸರಕಾರಿ ವಸತಿ ಗೃಹಗಳಲ್ಲೂ ಸಮುದಾಯ ಸೋಕ್‌ಪಿಟ್‌ಗೆ ಅವಕಾಶವಿದೆ ಎಂದು ನರೇಗಾ ಪ್ರಭಾರ ಸಹಾಯಕ ನಿರ್ದೇಶಕಿ ಸಫಾನಾ ತಿಳಿಸಿದ್ದಾರೆ.
ಗರಿಷ್ಠ 11 ಸಾವಿರ ರೂ.
ಉದ್ಯೋಗ ಚೀಟಿಯ ಪ್ರತಿ ಮತ್ತು ಮನೆಯ ಆರ್‌ಟಿಸಿ ಪ್ರತಿಯನ್ನು ಪಂಚಾಯತ್‌ಗೆ ಸಲ್ಲಿಸಬೇಕು. ಸೋಕ್‌ಪಿಟ್ 6 ಫೀಟ್ ಆಳ 4 ಫೀಟ್ ಗುಂಡಿ, ತಳ ಭಾಗದಲ್ಲಿ 3 ಅಡಿ ಜಲ್ಲಿ ಸುರಿದು, ಅನಂತರ 4 ಸಿಮೆಂಟ್ ರಿಂಗ್ ಅಳವಡಿಸಲಾಗುತ್ತದೆ. ಬಳಿಕ ಕಾಂಕ್ರೀಟ್ ಸ್ಲಾಬ್‌ನಿಂದ ಮುಚ್ಚಿ ಮನೆಯ ಕೊಳಚೆ ನೀರು ಅದಕ್ಕೆ ಸೇರುವ ವ್ಯವಸ್ಥೆ ಮಾಡಬೇಕು. ಕಾಮಗಾರಿ ಖರ್ಚಿನ ವಿವರ ಹಾಗೂ ಒರಿಜಿನಲ್ (ಜಿಎಸ್‌ಟಿ) ಬಿಲ್ ಸಲ್ಲಿಸಿದರೆ, ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತದೆ. ಗರಿಷ್ಠ 11 ಸಾವಿರ ರೂ. ವರೆಗೆ ಪಡೆಯಬಹುದಾಗಿದೆ.
ಅಭಿಯಾನ ಇಲ್ಲಿಯ ತನಕ
– 2019-20 – 38
– 2020-21 – 457
– 2021-22 – 736
– 2022-23 – 559
– 2023-24 – 288
– 2024-25 – 134
ಒಟ್ಟು 2,212 ಸೋಕ್‌ಪಿಟ್ ರಚಿಸಲಾಗಿದೆ.
ಸಮಗ್ರ ಬೂದು ನೀರು ನಿರ್ವಹಣೆಯಡಿ ಬೆಳ್ತಂಗಡಿ ತಾಲೂಕಿನಲ್ಲಿ ಕಾಶಿಪಟ್ಣ ಮತ್ತು ಪಟ್ರಮೆ ಗ್ರಾಮದಲ್ಲಿ ಪ್ರತೀ ಮನೆಯಲ್ಲಿ ಬಚ್ಚಲು ಗುಂಡಿ ಅನುಷ್ಠಾನಿಸಲು ಮೊದಲ ಹಂತದಲ್ಲಿ ಗುರಿ ಹೊಂದಲಾಗಿದೆ. ಪ್ರಸಕ್ತ ತಾಲೂಕಿನಲ್ಲಿ 2,212 ವೈಯಕ್ತಿಕ ಬಚ್ಚಲು ಗುಂಡಿ ಹಾಗೂ 32 ಸಮುದಾಯ ಬಚ್ಚಲುಗುಂಡಿ ರಚನೆಯಾಗಿದೆ.
-ಭವಾನಿ ಶಂಕರ್, ಇಒ, ಬೆಳ್ತಂಗಡಿ ತಾ.ಪಂ.
-ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.