ಬೆಳ್ತಂಗಡಿ: ಜಲ ಸಂರಕ್ಷಣೆಗೆ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳ ಪಣ
Team Udayavani, Jul 3, 2019, 5:00 AM IST
ಬೆಳ್ತಂಗಡಿ: ಜಲ ಸಂರಕ್ಷಣೆಗಾಗಿ ಸಾಮಾಜಿಕ ಅರಣ್ಯ ಇಲಾಖೆ ಬೆಳ್ತಂಗಡಿ ತಾ|ನಲ್ಲಿ ಕಳೆದ ಮೂರು ವರ್ಷಗಳಿಂದ ಈ ವರೆಗೆ 7,600 ಇಂಗುಗುಂಡಿ ನಿರ್ಮಾಣ ಮಾಡಿದೆ. ಪ್ರಸಕ್ತ ವರ್ಷದಲ್ಲಿ 5,000 ಇಂಗುಗುಂಡಿ, 2 ಸಾವಿರ ಗಿಡ ನೆಟ್ಟು ಪೋಷಣೆ ಗುರಿ ಹೊಂದಲಾಗಿದೆ.
ಸಾಮಾಜಿಕ ಅರಣ್ಯ ಯೋಜನೆ ಹಾಗೂ ಉ. ಖಾತರಿ ಯೋಜನೆಯಡಿ ಗೇರು ಅಭಿವೃದ್ಧಿ ನಿಗಮದ ಗೇರು ನೆಡು ತೋಪು ಗಳ ಸುಮಾರು 60 ಹೆಕ್ಟೇರ್ ಪ್ರದೇಶದಲ್ಲಿ ಇಂಗು ಗುಂಡಿ, ರಸ್ತೆ ಬದಿ ವಿವಿಧ ಜಾತಿಗಳ ಗಿಡ ನೆಟ್ಟು ಪೋಷಿಸುತ್ತಿದೆ. ಪ್ರಸಕ್ತ ವರ್ಷದಲ್ಲಿ ಗೇರುಕಟ್ಟೆ ಪಣೆಜಾಲು ಗೇರು ನೆಡುತೋಪುಗಳಲ್ಲಿ 400 ಇಂಗು ಗುಂಡಿ, ಅಮರ್ಜಾಲು, ನೆಕ್ಕಿ ಲೊಟ್ಟು, ಗೇರುಕಟ್ಟೆ ರಸ್ತೆ ಅಂಚಿ ನಲ್ಲಿ 600, ಮಡಂತ್ಯಾರು ವ್ಯಾಪ್ತಿಯಲ್ಲಿ 900 ಗಿಡ ನೆಡುವ ಮೂಲಕ ನೀರಿನ ಸಂರಕ್ಷಣೆಗೆ ಮಹತ್ತರ ಹೆಜ್ಜೆ ಇಟ್ಟಿದೆ.
ಇಂಗುಗುಂಡಿ
0.50 ಮೀ. ಅಗಲ, 0.50 ಮೀ ಗುಂಡಿ, 4 ಮೀ. ಉದ್ದ ಸುತ್ತಳತೆಯ ಇಂಗುಗುಂಡಿ ನಿರ್ಮಿಸಲಾಗುತ್ತಿದ್ದು, ಪ್ರತಿ ವರ್ಷ ನಿರ್ವಹಣೆಗೂ ಪ್ರಾಶಸ್ತ್ಯ ನೀಡಿದೆ. ಸಮೀಪದಲ್ಲೇ ಯಥೇಚ್ಛ ನೀರು ಭೂಮಿ ಆಳಕ್ಕೆ ಕೊಂಡೊಯ್ಯಬಲ್ಲ ಸಾಮರ್ಥ್ಯದ ಹಲಸು, ಮಾವು, ನೇರಳೆ ಗಿಡ ನೆಡಲಾಗಿದೆ. 2017-18ರಿಂದ 2019-20ರ ವರೆಗೆ ಸುಮಾರು 7,600 ಮಾನವ ನಿರ್ಮಿತ ಇಂಗುಗುಂಡಿ ನಿರ್ಮಿಸುವ ಮೂಲಕ ನೀರಿನ ಸಂರಕ್ಷಣೆಯಲ್ಲಿ ತಾಲೂಕಿನಲ್ಲೇ ಪರಿಣಾಮಕಾರಿ ಯೋಜನೆಯಾಗಿ ಕಾರ್ಯಗತವಾಗಿದೆ.
ಜಲ ಸಾಕ್ಷರತೆಗೂ ಆದ್ಯತೆ
2017-18ರಲ್ಲಿ ವರ್ಗಾಜೆ-500, ಪೊಸಲಾಯಿ- 200, ಲಾೖಲ ಕರ್ನೋಡಿ-400 ನೆರಿಯಾ ಪೆರ್ಲ-500, ಕೂವೆಟ್ಟು 400, ಮುಂಗೇಲು- ಕರ್ನಂತೋಡಿ ಸಮೀಪ ಗೇರು ನೆಡುತೋಪುಗಳ ಖಾಲಿ ಸ್ಥಳಗಳಲ್ಲಿ 2,000 ಇಂಗುಗುಂಡಿ ನಿರ್ಮಿಸಲಾಗಿದೆ. 2018-19ರಲ್ಲಿ ಕೊಯ್ಯೂರು ಗೇರು ಅಭಿವೃದ್ಧಿ ನಿಗಮದ ಖಾಲಿ 20 ಹೆಕ್ಟೇರ್ ಪ್ರದೇಶದಲ್ಲಿ 1,400 ಇಂಗುಗುಂಡಿ ನಿರ್ಮಿಸುವ ಮೂಲಕ ಉದ್ಯೋಗ ಖಾತ್ರಿ ಯೋಜನೆ ಶ್ರಮ ಬಳಸಿ ಜಲ ಸಾಕ್ಷರತೆಗೂ ಆದ್ಯತೆ ನೀಡಿದೆ.
ಪಂ. ವ್ಯಾಪ್ತಿಯ ಖಾಲಿ ಸ್ಥಳಗಳಲ್ಲಿ ಉ. ಖಾತರಿ ಯೋಜನೆ ಮುಖೇನ ಕೆಲಸಗಾರರನ್ನು ನಿಯೋಜಿಸಿದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದಲೇ ಸಂಪೂರ್ಣ ವೆಚ್ಚ ಭರಿಸುತ್ತದೆ. ಕೂಲಿ ಆಳುಗಳ ಹೊಂದಾಣಿಕೆ ನಡುವೆಯೂ ಉ. ಖಾತರಿ ಯೋಜನೆ ಸದ್ಬಳಕೆ ಮಾಡಿ ತಾಲೂಕನ್ನು ಹಸುರಾಗಿಸುವ ಯತ್ನದ ಜತೆಗೆ ಜಲ ಸಂರಕ್ಷಣೆ ಮತ್ತು ಪ್ರಾಣಿಗಳಿಗೆ ಆಹಾರ ಒದಗಿಸುವ ಯತ್ನದಲ್ಲಿ ಗಿಡ ನೆಡುವ ಯೋಜನೆ ಮೂಲಕ ಇಲಾಖೆ ಕಳೆದ ಹಲವು ವರ್ಷಗಳಿಂದ ಯಶಸ್ಸು ಕಂಡಿದೆ.
ಸ್ವಚ್ಛಮೇವ ಜಯತೇ ಯಶಸ್ವಿ
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ 48 ಗ್ರಾ.ಪಂ., ಶಾಲೆ, ಕಾಲೇಜು ಆವರಣ ಸಹಿತ ಖಾಲಿ ಸ್ಥಳಗಳಲ್ಲಿ ಗಿಡ ನೆಡಲು 33 ಸಾವಿರ ಗಿಡ ವಿತರಿಸಲಾಗಿದ್ದು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ 2,500 ಬೀಜದುಂಡೆ ಎಸೆಯುವ ಕಾರ್ಯಕ್ರಮವೂ ಸಾಗಲಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಗಣೇಶ್ ಶಾಸ್ತ್ರಿ ತಿಳಿಸಿದ್ದಾರೆ.
ರಸ್ತೆ ಬದಿ ನೆಡುತೋಪು
ರಸ್ತೆ ಬದಿ ನೆಡುತೋಪು ರಚಿಸಿ 3 ಕಿ. ಮೀ ವ್ಯಾಪ್ತಿಯಲ್ಲಿ ಕಿ.ಮೀ.ಗೆ 200 ಗಿಡದಂತೆ ನೆಡಲಾಗಿದೆ. ವಿವಿಧ ಜಾತಿಗಳ 14×20 ಗಾತ್ರದ ಚೀಲದಲ್ಲಿ ಪುನರ್ಪುಳಿ-100, ಹಲಸು-250, ಮಾವು-150, ಬೇಂಗ-25, ನೇರಳೆ-25 ಗಿಡಗಳನ್ನು ನೆಡಲಾಗಿದೆ.
ಜಲ ಸಂರಕ್ಷಣೆಗೆ ಮಹತ್ವ
ಸಾಮಾಜಿಕ ಅರಣ್ಯ ಯೋಜನೆ ಹಾಗೂ ಉದ್ಯೋಗ ಖಾತರಿ ಮೂಲಕ ಪಣೆಜಾಲು, ಮಡಂತ್ಯಾರು, ಕಣಿಯೂರು ಸಹಿತ ಗೇರು ನಡುತೋಪು ಖಾಲಿ ಪ್ರದೇಶಗಳಲ್ಲಿ 5 ಸಾವಿರ ಇಂಗುಗುಂಡಿ ಮಾಡಲಾಗುವುದು. ಈಗಾಗಲೇ 400 ಇಂಗುಗುಂಡಿ ರಚನೆಯಾಗಿದ್ದು, ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಈ ಮೂಲಕ ಜಲ ಸಂರಕ್ಷಣೆಗೆ ಮಹತ್ವ ನೀಡಲಾಗಿದೆ.
– ಗಣೇಶ್ ತಂತ್ರಿ, ವಲಯ ಅರಣ್ಯಾಧಿಕಾರಿ, ಸಾಮಾಜಿಕ ಅರಣ್ಯ ವಿಭಾಗ, ಬೆಳ್ತಂಗಡಿ
••ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.