Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
ಕೃಷಿಯಲ್ಲಿ ಅಪಾರ ಆಸಕ್ತಿ ಹೊಂದಿರುವ 12 ವರ್ಷದ ಆಧ್ಯಾ ಶರ್ಮ; ಕಸಿ ಕಟಾ¤ನೆ, ಸಸ್ಯಗಳ ಕಥೆಯೂ ಹೇಳ್ತಾನೆ!
Team Udayavani, Nov 26, 2024, 12:56 PM IST
ಬೆಳ್ತಂಗಡಿ: ಯುವ ಸಮೂಹ ಶಿಕ್ಷಿತರಾಗಿ ದೊಡ್ಡ ಕಂಪೆನಿ ಸೇರುವ, ವಿದೇಶಕ್ಕೆ ತೆರಳುವ ಕನಸು ಕಾಣುವುದೇ ಹೆಚ್ಚು. ಆದರೆ ಬಳಂಜದ ಪುಟ್ಟ ಪೋರ ತನ್ನ ಎಳೆ ವಯಸ್ಸಿನಲ್ಲೇ ದೇಶ, ವಿದೇಶಗಳ ಹಣ್ಣುಗಳ ಸಂಪೂರ್ಣ ಜ್ಞಾನ ಪಡೆಯುವ ಜತೆಗೆ ಔಷಧಯುಕ್ತ ಸಸ್ಯಾಭಿವೃದ್ಧಿಯಲ್ಲಿ ಪರಿಣತನಾಗುತ್ತಿದ್ದಾನೆ.
ಈ ಬಾಲಕನೇ ಬಳಂಜ ಗ್ರಾ.ಪಂ. ವ್ಯಾಪ್ತಿಯ ಐತನಡ್ಕ ನಿವಾಸಿ, ಉಜಿರೆ ಎಸ್‌ಡಿಎಂಇಎಸ್‌ನಲ್ಲಿ 6ನೇ ತರಗತಿ ಕಲಿಯುತ್ತಿರುವ 12 ವರ್ಷದ ಆಧ್ಯಾ ಶರ್ಮ. ದೇಶದ ಉದ್ದಗಲ ಮಾತ್ರವಲ್ಲ, ಥೈಲ್ಯಾಂಡ್, ಚೀನಾ ಸೇರಿದಂತೆ ನಾನಾ ದೇಶಗಳಲ್ಲಿ ಬೆಳೆಯುವ ಹಣ್ಣಿನ ಗಿಡಗಳ ಬಗ್ಗೆ ಮಾಹಿತಿ ಹೊಂದಿರುವ ಈತ ಶಿಕ್ಷಣದ ಜತೆಗೆ ಸಸ್ಯಾಭಿವೃದ್ಧಿಯ ಬಗ್ಗೆ ಬಹಳಷ್ಟು ಆಸಕ್ತಿ ಹೊಂದಿದ್ದಾನೆ. 300ರಷ್ಟು ವಿದೇಶಿ ಹಣ್ಣುಗಳು, ಗಿಡಗಳ ಬಗ್ಗೆ ತಿಳಿದುಕೊಂಡಿದ್ದಾನೆ.
ತಂದೆಯಂತೆ ಪುತ್ರನಿಗೂ ಕೃಷಿ ಆಸಕ್ತಿ
ಬಳಂಜ ಫಾರ್ಮ್ನ ಅನಿಲ್ ಬಳಂಜ ಅವರ ಪುತ್ರನಾಗಿರುವ ಆಧ್ಯಾ ಶರ್ಮ ತಂದೆಯಂತೆ ಬಾಲ್ಯದಲ್ಲೇ ಕೃಷಿ ಕ್ಷೇತ್ರದತ್ತ ಒಲವು ತೋರಿದ್ದಾನೆ. ಅನಿಲ್ ಬಳಂಜ ಅವರು ಈಗಾಗಲೇ ಸಸ್ಯಾಭಿವೃದ್ಧಿಯಲ್ಲಿ ಪ್ರಖ್ಯಾತಿ ಪಡೆದಿದ್ದು, ಆಧ್ಯಾ ಶರ್ಮ 3ನೇ ತರಗತಿಯಿಂದಲೇ ಗಿಡ ಕಸಿ ಕಟ್ಟುವ ವಿಧಾನ ಕಲಿತು ಪ್ರಯೋಗ ನಡೆಸುತ್ತಿದ್ದಾನೆ. ರಜೆ ಸಮಯದಲ್ಲಿ ಕಸಿ ಕಟ್ಟುವುದು, ಗಿಡಗಳ ಆರೈಕೆ, ಗಿಡಗಳಿಗೆ ಹೆಸರು ಟ್ಯಾಗ್ ಮಾಡುವ ಕಾರ್ಯದಲ್ಲಿ ಸಕ್ರಿಯ. ತಮ್ಮ ತೋಟದಲ್ಲಿರುವ ಎಲ್ಲ ಸಸ್ಯಗಳ ವಿವರಣೆ ನೀಡಬಲ್ಲವನಾಗಿದ್ದಾನೆ.
ವಿದೇಶಿ ಹಣ್ಣುಗಳ ಸಂಗ್ರಹ, ಮಾರಾಟಕ್ಕಿಲ್ಲ
ಇವರ ತೋಟದಲ್ಲಿ ಬೆಳೆವ ಯಾವ ಹಣ್ಣುಗಳು ಮಾರಾಟಕ್ಕಿಲ್ಲ, ಕೇವಲ ಮನೆ ಬಳಕೆ ಹಾಗೂ ಪ್ರಾಣಿ, ಪಕ್ಷಿಗಳಿಗಾಗಿಯೇ ಮೀಸಲಾಗಿವೆ ಎನ್ನುತ್ತಾನೆ ಆಧ್ಯಾ ಶರ್ಮ. ಬ್ರೆಜಿಲ್‌ನ ಮರ ದ್ರಾಕ್ಷಿ (ಜಬೋಟಿಕಾಬ), ಜಮೈಕಾದ ಸಪೋಟಾ, ಮಿಲ್ಕ್ ಫ್ರುಟ್, ಸರಾಸರಿ 7 ಕೆ.ಜಿ. ತೂಗುವ ಒಂದು ಗಿಡಕ್ಕೆ 10 ಸಾವಿರ ಬೆಲೆ ಇರುವ, ಕೈಯಲ್ಲಿ ಬಿಡಿಸಿ ತಿನ್ನಬಹುದಾದ ಥೈವಾನ್ ಅನಾನಸು ಬಗ್ಗೆ ಆಧ್ಯಾನಿಗೆ ವಿಶೇಷ ಆಸಕ್ತಿ.
ನರ್ಸರಿಯಲ್ಲಿವೆ 5 -7 ಕೋ.ರೂ. ಸಸ್ಯಗಳು
ಇವರ ನರ್ಸರಿಯಲ್ಲಿ ಸುಮಾರು 5 ರಿಂದ 7 ಕೋ.ರೂ. ಬೆಳೆ ಬಾಳುವ ಎಲ್ಲ ವಿಧದ ಸಸ್ಯಗಳಿವೆ. ಇಷ್ಟು ಸಂಗ್ರಹವಿರುವ ದೇಶದ ಏಕಮೇವ ನರ್ಸರಿಯಾಗಿದೆ. ಹಾಗಾಗಿ ಆಧ್ಯಾ ಶರ್ಮ ಓರ್ವನೇ ಪುತ್ರನಾಗಿರುವುದರಿಂದ ತಂದೆಯಂತೆ ಇವೆಲ್ಲದರ ಜ್ಞಾನ ಸಿದ್ಧಿಸಿಕೊಂಡಿದ್ದಾನೆ. ಕೆಲವೊಮ್ಮೆ ತಂದೆಗೆ ಹಣ್ಣುಗಳ ಹೆಸರುಗಳು ಮರೆತು ಹೋದರೆ ಈತನೇ ನೆನಪಿಸಬಲ್ಲ!
ವಿವಿಧ ದೇಶದ ನೂರಾರು ತಳಿಗಳ ಪರಿಚಯ
ತಮ್ಮ 35 ಎಕ್ರೆ ಜಮೀನಿನಲ್ಲಿ ವಾಣಿಜ್ಯ ಬೆಳೆಗಳ ಜತೆಗೆ ಹವ್ಯಾಸ ಮತ್ತು ಸ್ವಂತಕ್ಕಾಗಿ ತಳಿ ಅಭಿವೃದ್ಧಿ ಮಾಡುತ್ತಿರುವ ತಂದೆಯ ಆಸಕ್ತಿ ಕಂಡು ತಾನೂ ಕೂಡ ದೇಶ ವಿದೇಶದ 40 ವಿಧದ ಬಾಳೆ, 150 ವಿಧದ ಮಾವು, 35 ವಿಧದ ಸಪೋಟ (ಚಿಕ್ಕು), 70 ವಿಧದ ಹಲಸು, 30 ವಿಧದ ಸೀತಾಫಲ, 50 ತಳಿ, ಪ್ರಭೇದದ ಅನನಾಸು, 60-70 ಬಗೆಯ ಕಿತ್ತಳೆ ವರ್ಗ, 50-100 ಚೆರಿ-ಬೆರಿ, 20 ರಿಂದ 30 ವಿಧದ ತೆಂಗು ತಳಿಗಳ ಕುರಿತು ಜ್ಞಾನ ಹೊಂದಿದ್ದಾನೆ.
ರಾಂಬೂಟಾನ್, ಮ್ಯಾಂಗೋಸ್ಟಿನ್, ಡ್ರ್ಯಾಗನ್ ಫ್ರುಟ್ ಸೇರಿ 300ರಷ್ಟು ವಿದೇಶಿ ಹಣ್ಣುಗಳ ಗಿಡಗಳ ಸಂಗ್ರಹ ಇವರಲ್ಲಿದೆ. ಇವೆಲ್ಲವನ್ನು ಗುರುತಿಸುವ ಆಧ್ಯಾ ಇದಕ್ಕೆ ಬೇಕಾದ ಎಲ್ಲ ಅಗತ್ಯಗಳನ್ನು ನೀಗಿಸುತ್ತಾನೆ.
-ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.