ಅವಕಾಶ ನೀಡಿದ್ದಾರೆ, ಉತ್ತಮ ಕೆಲಸ ಮಾಡುವೆ: ಅಣ್ಣಾಮಲೈ
Team Udayavani, Mar 28, 2023, 7:52 AM IST
![ಅವಕಾಶ ನೀಡಿದ್ದಾರೆ, ಉತ್ತಮ ಕೆಲಸ ಮಾಡುವೆ: ಅಣ್ಣಾಮಲೈ](https://www.udayavani.com/wp-content/uploads/2023/03/annamalai-1-620x408.jpg)
![ಅವಕಾಶ ನೀಡಿದ್ದಾರೆ, ಉತ್ತಮ ಕೆಲಸ ಮಾಡುವೆ: ಅಣ್ಣಾಮಲೈ](https://www.udayavani.com/wp-content/uploads/2023/03/annamalai-1-620x408.jpg)
ಸುಳ್ಯ: ಬಿಜೆಪಿಯಲ್ಲಿ ಅವಕಾಶ ನೀಡಿದ್ದಾರೆ. ನೀಡಿದ ಅವಕಾಶದಲ್ಲಿ ಜನರಿಗೆ ಒಳ್ಳೆಯದಾಗಬೇಕೆಂಬ ಗುರಿ ಇರಿಸಿಕೊಂಡು ಕೆಲಸ ಮಾಡುವೆ ಎಂದು ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಹೇಳಿದರು.
ಅವರು ಸೋಮವಾರ ಸುಳ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿ ಆಗುವ ಅವಕಾಶ ಲಭಿಸಿದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿ, ನಾನೊಬ್ಬ ಸಾಮಾನ್ಯ ಕೃಷಿಕ. ಈಗ ರಾಜಕೀಯದಲ್ಲೂ ಬೆಳೆಯುತ್ತಿದ್ದೇನೆ. ಒಳ್ಳೆಯ ದೇಶ ನಿರ್ಮಾಣ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಜತೆ ಕೈ ಜೋಡಿಸಬೇಕು ಎಂಬುದೇ ನನ್ನ ಚಿಂತನೆ ಎಂದರು.
ಸತತ ಪ್ರಯತ್ನದಿಂದ ಯಾವುದೇ ವಿದ್ಯಾರ್ಥಿ ಉನ್ನತ ಹುದ್ದೆಗೇರಬಹುದು. ಆತನಲ್ಲಿ ಸ್ಪಷ್ಟ ಗುರಿ, ಪ್ರಯತ್ನ ಮುಖ್ಯ. ಯಾವುದೇ ಕ್ಷೇತ್ರವಾದರೂ ಸಾಧಿಸುವ ಛಲ ನಮ್ಮಲ್ಲಿರಬೇಕು ಎಂದರು.
ವಿಧಾನಸಭೆ ಚುನಾವಣೆ ಅಭಿವೃದ್ಧಿ ಕೆಲಸದ ಆಧಾರದಲ್ಲಿಯೇ ನಡೆಯಲಿದೆ. ಈ ಹಿಂದೆ ಜಾತಿ ರಾಜಕಾರಣ ಮತ್ತಿತರ ವಿಚಾರಗಳು ಇಲ್ಲಿನ ಚುನಾವಣೆಯಲ್ಲಿ ಪರಿಣಾಮ ಬೀರುತ್ತಿದ್ದವು. ಆದರೆ ಈಗ ರಾಜಕೀಯ ಚಿತ್ರಣ ಬದಲಾಗಿದ್ದು, ಅಭಿವೃದ್ಧಿಯೇ ಮಾನದಂಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.