ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ: ಮಹಾರಥೋತ್ಸವ ಸಂಪನ್ನ
Team Udayavani, Dec 10, 2021, 3:30 AM IST
ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಗುರುವಾರ ಬೆಳಗ್ಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಚಂಪಾಷಷ್ಠಿ ಮಹಾರಥೋತ್ಸವ ನೆರವೇರುವ ಮೂಲಕ ಚಂಪಾಷಷ್ಠಿ ಮಹಾರಥೋತ್ಸವ ಸಂಪನ್ನಗೊಂಡಿತು. ಬುಧವಾರ ರಾತ್ರಿ ಪಂಚಮಿ ರಥೋತ್ಸವ ನೆರವೇರಿತು. ಗುರುವಾರ ಬೆಳಗ್ಗೆ ಸುಬ್ರಹ್ಮಣ್ಯ ದೇವರ ಬ್ರಹ್ಮರಥಾರೋಹಣ ನೆರವೇರಿ, ಬ್ರಹ್ಮರಥೋತ್ಸವ ಜರಗಿತು.
ಪಂಚಮಿ ರಥೋತ್ಸವ:
ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರಾ ಪ್ರಯುಕ್ತ ಡಿ. 8ರಂದು ಪಂಚಮಿ ರಥೋತ್ಸವ ನೆರವೇರಿತು. ದೇಗುಲದ ಅರ್ಚಕ ವೇ| ಮೂ| ರಾಜೇಶ್ ನಡ್ಯಂತಿಲ್ಲಾಯ ವೈದಿಕ ವಿದಿ ವಿಧಾನಗಳನ್ನು ಪೂರೈಸಿದರು. ಪ್ರಾತಃಕಾಲ 2.15ಕ್ಕೆ ಪಂಚಮಿ ರಥೋತ್ಸವ ನಡೆಯಿತು. ಬಳಿಕ ಸವಾರಿ ಕಟ್ಟೆಯಲ್ಲಿ ಕಟ್ಟೆ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಕುಕ್ಕೆಬೆಡಿ ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿತು. ಡಿ. 9ರಂದು ತೈಲಾಭ್ಯಂಜನ ಮತ್ತು ಪಂಚಮಿ ರಥೋತ್ಸವ ಜರಗಿತು. ಮದ್ಯಾಹ್ನ ದೇಗುಲದಲ್ಲಿ ಪಲ್ಲಪೂಜೆ ನೆರವೇರಿಸಲಾಯಿತು.
ಸುಬ್ರಹ್ಮಣ್ಯ ದೇವರ ಬ್ರಹ್ಮರಥಾ ರೋಹ ಣದ ಬಳಿಕ ಚಿಕ್ಕ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾದರು. ಅನಂತರ ಸುವರ್ಣ ವೃಷ್ಠಿಯಾಗಿ, ಚಿಕ್ಕ ರಥೋತ್ಸವ ನೆರವೇರಿತು. ಅನಂತರ ಚಂಪಾಷಷ್ಠಿ ಮಹಾರಥೋತ್ಸವ ಜರುಗಿತು. 87 ಭಕ್ತರು ಬ್ರಹ್ಮರಥ ಸೇವೆ ನೆರವೇರಿಸಿದರು.
ದೇವಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ, ಕಾರ್ಯನಿರ್ವಹಣ ಅಧಿಕಾರಿ ಡಾ| ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ಧಾರ್ಮಿಕ ಪರಿಷತ್ ಸದಸ್ಯ ಸಿದ್ದಲಿಂಗಸ್ವಾಮಿ, ಅವಧೂತ ವಿನಯ್ ಗುರೂಜಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪಿಜಿಎಸ್‌ಎನ್ ಪ್ರಸಾದ್, ಪ್ರಸನ್ನ ದರ್ಬೆ, ಲೋಕೇಶ್, ಶ್ರೀವತ್ಸ ವಿ., ಮನೋಹರ ರೈ, ವನಜಾ ವಿ.ಭಟ್, ಶೋಭಾ ಗಿರಿಧರ್, ಮಾಸ್ಟರ್ ಪ್ಲ್ರಾನ್ ಮೇಲ್ವಿಚಾರಣ ಸಮಿತಿ ಸದಸ್ಯರಾದ ಕಿಶೋರ್ ಕುಮಾರ್ ಕೂಜುಗೋಡು, ಡಾ| ಚಂದ್ರಶೇಖರ್ ನಲ್ಲೂರಾಯ, ಚಂದ್ರಶೇಖರ್ ಮರ್ದಾಳ, ಮನೋಜ್ ಎಸ್.ಸುಬ್ರಹ್ಮಣ್ಯ, ಉದ್ಯಮಿ ಅಜಿತ್ ಶೆಟ್ಟಿ, ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ, ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ, ಉಪನಿರೀಕ್ಷಕ ಜಂಬೂರಾಜ್‌ಮಹಾಜನ್ ಉಪಸ್ಥಿತರಿದ್ದರು.
ಡಿ. 9ರ ಮಧ್ಯಾಹ್ನ ಹಾಗೂ ರಾತ್ರಿ ದೇಗುಲದ ಸಮೀಪದ ಷಣ್ಮುಖ ಭೋಜನ ಶಾಲೆ ಮಾತ್ರವಲ್ಲದೆ ಆದಿ ಸುಬ್ರಹ್ಮಣ್ಯದ ಭೋಜನ ಶಾಲೆಯಲ್ಲೂ ಭೋಜನ ಪ್ರಸಾದ ವಿತರಣೆ ನಡೆಸಲಾಯಿತು. ಅಲ್ಲಲ್ಲಿ ಎಲ್‌ಇಡಿ ಪರದೆ ಹಾಗೂ ಉತ್ಸವಗಳ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಸಕಲ ವ್ಯವಸ್ಥೆ:
ಚಂಪಾಷಷ್ಠಿ ಮಹೋತ್ಸವವನ್ನು ಕೋವಿಡ್ ನಿಯಮದಂತೆ ನಡೆಸಲು ದೇಗು ಲದ ವತಿಯಿಂದ ಸಕಲ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿತ್ತು. ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ಕುಡಿಯುವ ನೀರು, ಅನ್ನಪ್ರಸಾದ ವಿತರಣೆ, ಸೂಚನೆ ಫಲಕ, ಮಾಹಿತಿ ಕೇಂದ್ರ, ಧ್ವನಿವರ್ಧಕದ ಮೂಲಕ ಪ್ರತಿಕ್ಷಣದ ಮಾಹಿತಿ-ಸೂಚನೆ, ಪೊಲೀಸರು, ಗೃಹ ರಕ್ಷಕ ಸಿಬಂದಿಯಿಂದ ಭದ್ರತಾ ವ್ಯವಸ್ಥೆ, ಆರೋಗ್ಯ ಕಾರ್ಯಕರ್ತರ ಉಪಸ್ಥಿತಿಯಲ್ಲೂ ವ್ಯವಸ್ಥೆ ಮಾಡಲಾಗಿತ್ತು.
ಕೈಜೋಡಿಸಿದ ಸ್ವಯಂ ಸೇವಕರು :
ಮಾಹಿತಿ ನೀಡಲು ಸ್ವಯಂ ಸೇವಕರನ್ನು ನೇಮಿಸಿಕೊಳ್ಳಲಾಗಿತ್ತು. ಭೋಜನ ಪ್ರಸಾದ ವಿತರಣೆ, ಭಕ್ತರಿಗೆ ಮಾರ್ಗದರ್ಶನ, ಪೊಲೀಸರೊಂದಿಗೆ ಸಹಕಾರಕ್ಕೆ ಸ್ವಯಂ ಸೇವಕರು ಕೈಜೋಡಿಸಿದರು. ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಯುವಕ ಮಂಡಲ, ಸಂಘ ಸಂಸ್ಥೆಗಳ ಸದಸ್ಯರು ಪದಾಧಿಕಾರಿಗಳು ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಕುಮಾರಧಾರಾ ತೀರ್ಥ ಸ್ನಾನದಿಂದ ದೇಗುಲದ ತನಕ ಸುಮಾರು 2 ಕಿ.ಮೀ. ದೂರದವರೆಗೆ ಊರುಳುತ್ತಾ ಸಾಗುವ ಬೀದಿ ಉರುಳು ಸೇವೆಯು ಮಹಾರಥೋತ್ಸವದೊಂದಿಗೆ ಸಂಪನ್ನಗೊಂಡಿತು.
ಇಂದು ನೌಕವಿಹಾರ :
ಡಿ.10ರಂದು ಬೆಳಗ್ಗೆ ದೇವಸ್ಥಾನದಿಂದ ಬಂಡಿರಥದಲ್ಲಿ ಉತ್ಸವ ಮೂರ್ತಿಯ ಅವಭೃಥೋತ್ಸವ ಸವಾರಿ ಹೊರಟು, ಬಿಲದ್ವಾರದ ಕಟ್ಟೆಯಲ್ಲಿ ಪೂಜೆ ನಡೆದು, ಕುಮಾರಧಾರಾ ನದಿಯಲ್ಲಿ ದೇವರಿಗೆ ನೌಕವಿಹಾರ ಹಾಗೂ ಅವಭೃಥೋತ್ಸವ ಜರಗಲಿದೆ.