ಕ್ಯಾನ್‌ವಾಸ್ ಚಿತ್ರಕಲೆಯಲ್ಲಿ ಸುಳ್ಯದ ಕುವರಿ ಚಂದನಾ ಎತ್ತಿದ ಕೈ
ಕನಸಿನಲ್ಲಿ ಮೂಡಿಬರುವ ಆಕೃತಿಗಳಿಗೆ ಕುಂಚದಲ್ಲಿ ಸುಂದರ ರೂಪ
Team Udayavani, Dec 14, 2019, 4:27 AM IST
ವೃತ್ತಿಯಲ್ಲಿ ಎಂಜಿನಿಯರಿಂಗ್ ಪದವೀಧರೆ ಚಂದನಾ ಅವರು ತನ್ನ ಕಣ ಕಣದಲ್ಲಿ ಚಿತ್ರಕಲೆಯನ್ನು ಮೈಗೂಡಿಸಿಕೊಂಡಿದ್ದಾರೆ. ಅವರು ತನ್ನ 4ನೇ ವಯಸ್ಸಿನಲ್ಲೇ ಚಿತ್ರಕಲೆಯಲ್ಲಿ ತೊಡಗಿಸಿಕೊಂಡು ಇಂದು ಹೊಸ ಹೊಸ ಆಯಾಮಗಳಲ್ಲಿ ಚಿತ್ರವನ್ನು ಬಿಡುಸುತ್ತಾ ರಾಜ್ಯದೆಲ್ಲೆಡೆ ಗುರುತಿಸಿಕೊಂಡು ತನ್ನ ಹುಟ್ಟೂರಾದ ಸುಳ್ಯಕ್ಕೆ ಕೀರ್ತಿ ತರುತ್ತಿದ್ದಾರೆ.
ಅವರು ಸುಳ್ಯ ಸಮೀಪದ ಕನಕಮಜಲು ಮೂರ್ಜೆ ನಿವಾಸಿಗಳಾದ ಶ್ರೀಧರ್ ಮತ್ತು ಸುಧಾ ದಂಪತಿ ಪುತ್ರಿ. ತನಗೆ ಚಿತ್ರಕಲೆಯಲ್ಲಿ ಆಸಕ್ತಿ ಮೂಡಲು ಪ್ರೇರಣೆ ನನ್ನ ತಂದೆ ಎಂದು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ತನ್ನ ಕನಸಿನಲ್ಲಿ ಮೂಡಿಬರುವ ಆಕೃತಿಗಳಿಗೆ ಹೊಸದಾದ ರೂಪ ನೀಡುವ ಅವರು ತನ್ನ ಶಾಲಾ ದಿನಗಳಲ್ಲಿ ಚಿತ್ರಕಲಾ ಅಧ್ಯಾಪಕ ಪದ್ಮನಾಭ ಕೊಯನಾಡು ಮತ್ತು ಶ್ರೀಹರಿ ಪೈಂದೋಡಿಯವರ ಮಾರ್ಗದರ್ಶನದಿಂದ ಇಂದು ತನ್ನ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ.
ವರ್ಲಿ ಚಿತ್ರಕಲೆಗೂ ಸೈ
ಅವರಿಗೆ ಖ್ಯಾತ ಚಿತ್ರಕಲಾ ಮಾಂತ್ರಿಕ ವಿಲಾಸ್ ನಾಯಕ್ ಸ್ಫೂರ್ತಿಯಾಗಿದ್ದಾರೆ. ತನ್ನ ಪ್ರತಿ ಕಲೆಗೆ ಜೀವ ನೀಡುವಲ್ಲಿ ಪರೋಕ್ಷವಾಗಿ ಅವರ ಅತ್ಯದ್ಭುತ ಚಿತ್ರಕಲೆಗಳು ಪ್ರೇರಣೆ ನೀಡುತ್ತವೆ ಎಂದು ಅವರ ಮೇಲಿನ ಅಭಿಮಾನವನ್ನು ತೋರಿಸಿಕೊಳ್ಳುತ್ತಾರೆ. ಅವರು ಕ್ಯಾನ್‌ವಾಸ್ ಪೈಂಟಿಂಗ್ ಮತ್ತು ಚಿತ್ರಕಲೆಯ ಜತೆಗೆ ವರ್ಲಿ ಕಲೆಯಲ್ಲೂ ಆಸಕ್ತಿ ಹೊಂದಿದ್ದಾರೆ. ಇಂದು ಸುಳ್ಯದ ಆಸುಪಾಸಿನ ಹಲವಾರು ಮನೆಗಳ ಗೋಡೆಗಳಲ್ಲಿ ಇವರ ವರ್ಲಿಕಲೆಯು ರಾರಾಜಿಸುತ್ತಿದೆ. ಹಾಗೇ ಸುಳ್ಯದ ರಂಗ ಮಯೂರಿ ಕಲಾ ಕೇಂದ್ರದ ಗೋಡೆಯಲ್ಲಿ ಇವರ ವರ್ಲಿ ಕಲೆ ಕಲಾರಸಿಕರ ಮನವನ್ನು ಗೆಲ್ಲುತ್ತಿದೆ.
ಸಹೋದರಿಯ ಪ್ರೋತ್ಸಾಹ
ಚಿತ್ರಕಲೆಗೆ ಸದಾ ಪ್ರೋತ್ಸಾಹವನ್ನು ಹಾಗೂ ಅದಕ್ಕೆ ಬೇಕಾಗುವ ವಸ್ತುಗಳನ್ನು ನನಗೆ ಸಹೋದರಿ ಮೃದುಲಾ ಅವರು ಪೂರೈಸುತ್ತಾ ಬಂದಿದ್ದಾರೆ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ. ಚಿತ್ರಕಲೆಯೊಂದಿಗೆ ಅವರು ಕ್ರೀಡೆ ಮತ್ತು ನೃತ್ಯ ಕಲೆಯಲ್ಲೂ ಪಳಗಿದ್ದಾರೆ. ಅವರ ನೃತ್ಯ ತಂಡವು ಅಂತಾರಾಷ್ಟ್ರೀಯ ಕಾನ್ಫರೆನ್ಸ್ ಅನ್ನು ಪ್ರತಿನಿಧಿಸಿದೆ. ಇತ್ತೀಚೆಗೆ ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನಲ್ಲಿ ಚಿತ್ರಕಲಾ ಕಾರ್ಯಾಗಾರವನ್ನು ನಡೆಸಿಕೊಟ್ಟು ಅಲ್ಲಿನ ವಿದ್ಯಾರ್ಥಿಗಳಿಗೆ ಚಿತ್ರಕಲೆಯಲ್ಲಿ ಆಸಕ್ತಿ ಮೂಡಿಸಿದ್ದಾರೆ.
ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸುಳ್ಯದ ರೋಟರಿ ವಿದ್ಯಾ ಸಂಸ್ಥೆಯಲ್ಲಿ ಪೂರೈಸಿ ಪದವಿ ಪೂರ್ವ ಶಿಕ್ಷಣವನ್ನು ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಉನ್ನತ ಶಿಕ್ಷಣವನ್ನು ಸುಳ್ಯದ ಕುರುಂಜಿ ವೆಂಕಟರಮಣ ಗೌಡ ತಾಂತ್ರಿಕ ಕಾಲೇಜನಲ್ಲಿ ಪೂರೈಸಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ಇಂಟೀರಿಯರ್ ಡಿಸೈನಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಸಾಧಿಸುವ ಛಲವಿದ್ದರೆ ಯಾವುದೇ ಕೆಲಸವು ಕಠಿನವಲ್ಲ. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದರೆ ಮನದಲ್ಲಿ ಎಂದೂ ಶಾಂತಿ ನೆಲೆಸಿರುತ್ತದೆ ಹಾಗೂ ಶ್ರದ್ಧೆಯ ಮಟ್ಟವೂ ಹೆಚ್ಚುತ್ತದೆ ಎಂದು ಅನುಭವವನ್ನು ಅವರು ಹಂಚಿಕೊಳ್ಳುತ್ತಾರೆ.
ನೂರಾರು ಚಿತ್ರಗಳ ರಚನೆ
ಅವರದ್ದು ಕ್ಯಾನ್‌ವಾಸ್ ಚಿತ್ರ ರಚನೆಯಲ್ಲಿ ಎತ್ತಿದ ಕೈ. ನೂರಾರು ಕ್ಯಾನ್‌ವಾಸ್ ಚಿತ್ರಗಳನ್ನು ರಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತನಗೆ ದೊರಕುವ ಎಲ್ಲ ಬಿಡುವಿನ ವೇಳೆಯನ್ನು ಕಲಾ ಸೌಧದಲ್ಲಿ ಕಳೆಯಲು ಇಚ್ಛಿಸುವ ಅವರು ತನ್ನ ಕನಸಿನಲ್ಲಿ ಮೂಡಿಬರುವ ಆಕೃತಿಗಳಿಗೆ ಅಲ್ಲಿಂದ ಹೊಸ ಸ್ಫೂರ್ತಿಯನ್ನು ಪಡೆಯುತ್ತಾರೆ. ತನ್ನ ಹುಟ್ಟೂರು ಸುಳ್ಯದಲ್ಲಿ ಮುಂದೊಂದು ದಿನ ತನ್ನ ಮೊದಲ ಕಲಾಕೃತಿಗಳ ಸಂಗ್ರಹವನ್ನು ಪ್ರದರ್ಶಿಸಿಸಬೇಕೆಂದು ದೊಡ್ಡ ಕನಸನ್ನು ಹೊತ್ತುಕೊಂಡು ಅದನ್ನು ನನಸಾಗಿಸುವ ಎಲ್ಲ ಪ್ರಯತ್ನಗಳನ್ನು ಸ್ವತಃ ಅವರೇ ಮಾಡಿಕೊಂಡು ಬರುತ್ತಿದ್ದಾರೆ.
ಸ್ವಾತಿ ನಾಯಕ್ ಪೆರ್ಲ, ಎಸ್‌ಡಿಎಂ ಕಾಲೇಜು ಉಜಿರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.