ಸಂಚಾರ ಸಂದಿಗ್ಧದಲ್ಲಿ ಚಾರ್ಮಾಡಿ ಬಸ್ ಪ್ರಯಾಣಿಕರು
ಮಿನಿ ಬಸ್ ವೇಳಾಪಟ್ಟಿ ವ್ಯತ್ಯಯ; ಘಾಟಿ ರಸ್ತೆಗೆ ಇನ್ನೂ ಇಲ್ಲ ವಿಸ್ತರಣೆ ಭಾಗ್ಯ
Team Udayavani, Mar 14, 2020, 5:34 AM IST
ಬೆಳ್ತಂಗಡಿ/ಮುಂಡಾಜೆ: ಕಳೆದ ಮಳೆಗಾಲದಲ್ಲಿ ಪ್ರವಾಹದ ಹೊಡೆತಕ್ಕೆ ನಲುಗಿದ ಚಾರ್ಮಾಡಿ ಘಾಟಿ ರಸ್ತೆ ವಿಸ್ತರಣೆಯ ಕನಸು ಮರೀಚಿಕೆಯಾಗಿಯೇ ಉಳಿದಿದೆ. ಈ ನಡುವೆ ಅಲ್ಲಿನ ಜನರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಮಿನಿ ಬಸ್‌ಗಳನ್ನು ಆರಂಭಿಸಿದ್ದರೂ ಅವು ವೇಳಾ ಪಟ್ಟಿಯಂತೆ ಸಂಚರಿಸದ
ಕಾರಣ ಚಾರ್ಮಾಡಿಯ ಪ್ರಯಾಣಿಕರ ಸಂಕಷ್ಟ ಕೊನೆಯಾಗಿಲ್ಲ.
ಆಗಸ್ಟ್ ಮಳೆಗೆ ಘಾಟಿ ರಸ್ತೆಯ ಹಲವು ಕಡೆ ಭೂ ಕುಸಿತ ಸಂಭವಿಸಿದ್ದರಿಂದ ರಸ್ತೆ ಏಕಪಥವಾಗಿದೆ. ರಸ್ತೆ
ವಿಸ್ತರಣೆಗಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸರ್ವೇ ನಡೆಸಿದ್ದು, ಶಾಶ್ವತ ರಸ್ತೆಗಾಗಿ 500 ಕೋ.ರೂ. ಅಂದಾಜು ಪಟ್ಟಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿದೆ. ಆದರೆ ಅರಣ್ಯ ಇಲಾಖೆ ಅನುಮತಿಸದಿರುವುದು ಅಡ್ಡಿಯಾಗಿದೆ. ಮಳೆಗಾಲ ಹತ್ತಿರವಾಗುತ್ತಿದ್ದರೂ ಜನ ಪ್ರತಿನಿಧಿಗಳಾಗಲೀ ಅಧಿಕಾರಿ
ಗಳಾಗಲೀ ಗಂಭೀರವಾಗಿ ಪರಿಗಣಿಸಿಲ್ಲ. ಈ ಬಾರಿಯೂ ಮಳೆ ಜೋರಾಗಿದ್ದರೆ ಘಾಟಿ ಮತ್ತೆ ಕುಸಿದು ಮಂಗಳೂರು- ಚಿಕ್ಕಮಗಳೂರು ಸಂಪರ್ಕ ಕಡಿತ ಗೊಳ್ಳುವ ಭೀತಿ ಇದೆ.
ಪ್ರಯಾಣಿಕರ ಅಸಹಾಯಕತೆ
ಪ್ರಯಾಣಿಕರ ಹಿತದೃಷ್ಟಿಯಿಂದ ಮಂಗಳೂರು ಕೆಎಸ್ಸಾರ್ಟಿಸಿ ಡಿಪೋದ ಆದೇಶದ ಮೇರೆಗೆ ಉಡುಪಿ ಡಿಪೋದಿಂದ ಡಿ.28ರಿಂದ ಒಟ್ಟು 6 ಮಿನಿಬಸ್‌ಗಳ ಸೇವೆಯನ್ನು ಆರಂಭಿಸಲಾಗಿತ್ತು. ಆರಂಭದಲ್ಲಿ ಸಾಕಷ್ಟು ಅನುಕೂಲವಾಗಿತ್ತಾದರೂ ಬಸ್‌ಗಳು ನಿಗದಿತ ವೇಳಾಪಟ್ಟಿಯಂತೆ ಸಂಚರಿಸದೆ ಪ್ರಯಾಣಿಕರು ಪರದಾಡುವಂತಾಗಿದೆ. ಮಂಗಳೂರು, ಉಡುಪಿ ಮತ್ತು ಧರ್ಮಸ್ಥಳ ಡಿಪೋಗಳಿಂದ ಬೆಳಗ್ಗೆ ಹೊರಡುವ ಬಸ್‌ಗಳು ಏಕಕಾಲದಲ್ಲಿ ಉಜಿರೆಯಲ್ಲಿ ಸಾಲುಸಾಲಾಗಿ ನಿಲ್ಲುತ್ತಿವೆ. ಉಳಿದ ಸಮಯದಲ್ಲಿ ಬಸ್ ಲಭ್ಯವಿಲ್ಲದೆ ತಾಸುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬಂದೊದಗಿದೆ.
ಅಸಮರ್ಪಕ ಮಾರ್ಗಸೂಚಿ
ಮಂಗಳೂರು ಮೂರನೇ ಡಿಪೋದ ಬಸ್‌ಗಳು ಮೂಡಿಗೆರೆಯಿಂದ ಹೊರಡುವಾಗ ಮಂಗಳೂರು ಅಥವಾ ಧರ್ಮಸ್ಥಳ ಮಾರ್ಗಸೂಚಿಯನ್ನು ಹೊತ್ತು ಉಜಿರೆ ವರೆಗೆ ಮಾತ್ರ ಸಂಚರಿಸಿ, ಅಲ್ಲಿ ಪ್ರಯಾಣಿಕರನ್ನು ಇಳಿಸಿ, ತಿರುಗಿ ಮೂಡಿಗೆರೆ ಕಡೆಗೆ ಚಲಿಸುತ್ತವೆ. ಈ ಬಗ್ಗೆ ನಿರ್ವಾಹಕರಲ್ಲಿ ವಿಚಾರಿಸಿದರೆ ಉಜಿರೆ ಮಾರ್ಗಸೂಚಿಯ ಫಲಕ ಇಲ್ಲದ್ದರಿಂದ ಮಂಗಳೂರು ಅಥವಾ ಧರ್ಮಸ್ಥಳ ಫಲಕ ಹಾಕುತ್ತಿದ್ದೇವೆ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ.
ಕೆಎಸ್ಸಾರ್ಟಿಸಿಗೆ ಉತ್ತಮ ಆದಾಯ ತರುತ್ತಿದ್ದರೂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ
ಸಮಸ್ಯೆ ತಲೆದೋರಿದೆ. ಮತ್ತೂಂದೆಡೆ ಮಿತಿ ಮೀರಿ ಪ್ರಯಾಣಿಕರನ್ನು ತುಂಬುತ್ತಿರುವುದೂ ಸಮಸ್ಯೆಯಾಗಿದೆ.
ನಾನು ಮಿನಿಬಸ್‌ನ ನಿತ್ಯ ಪ್ರಯಾಣಿಕ. ಬೆಳಗ್ಗೆ ಉಜಿರೆಯಿಂದ ಹೋಗುವಾಗಲೂ ಸಂಜೆ ಮೂಡಿಗೆರೆಯಿಂದ ಮರಳುವಾಗಲೂ ನಿಗದಿತ ವೇಳಾಪಟ್ಟಿ ಇಲ್ಲದ ಕಾರಣ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ.
– ಅಮರನಾಥ, ವ್ಯಾಪಾರಸ್ಥರು
ಸಹಕಾರ ಸಾರಿಗೆ ಬಸ್‌ಗಳು ಆಗುಂಬೆ ಕಡೆ ಸಂಚಾರವನ್ನು ಮೊಟಕುಗೊಳಿಸುವುದರಿಂದ ಆಗುಂಬೆ ಮಾರ್ಗದಲ್ಲೂ ನಮ್ಮ ಡಿಪೋದ ಮಿನಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ಹೀಗಾಗಿ ಮಿನಿ ಬಸ್‌ಗಳ ಕೊರತೆಯಾಗಿದ್ದರಿಂದ ನಿಗದಿತ ವೇಳಾಪಟ್ಟಿಯಲ್ಲಿ ವ್ಯತ್ಯಯವಾಗುತ್ತಿದೆ.
– ಉಮೇಶ್, ಸಂಚಾರ ನಿಯಂತ್ರಕ, ಕೆಎಸ್ಸಾರ್ಟಿಸಿ ಮಂಗಳೂರು 3ನೇ ಡಿಪೋ
ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.